ಸನ್ಮಾರ್ಗ ವಾರ್ತೆ
ಭೋಪಾಲ, ಫೆ. 22: ಮಧ್ಯಪ್ರದೇಶದಲ್ಲಿ 2012ರಿಂದ 2018ರ ನಡುವೆ ದಾಖಲೆಗಳಲ್ಲಿರುವ 4,51,000 ಶೌಚಾಲಯಗಳು ನಾಪತ್ತೆಯಾಗಿವೆ. ಶಿವರಾಜ್ ಸಿಂಗ್ ಚೌಹಾಣ್ ರ ನೇತೃತ್ವದ ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ಇದು ತೋರಿಸಿಕೊಡುತ್ತಿದೆ.
ಹಲವು ಶೌಚಾಲಯಗಳು ಕೇವಲ ದಾಖಲೆಗಳಲ್ಲಿ ಮಾತ್ರ ಇವೆ. ದಾಖಲೆಗಳಲ್ಲಿ ಕಟ್ಟಿಸಲಾಗಿದೆ ಎನ್ನಲಾದ ಶೌಚಾಲಯಗಳಲ್ಲಿ ಹೆಚ್ಚಿನವು ಅಸ್ತಿತ್ವದಲ್ಲಿಲ್ಲ. ಇದಕ್ಕೆ ವ್ಯಯಿಸಿದ ಹಣ ಎಲ್ಲಿ ಹೋಗಿದೆ ಎಂದು ಕೇಂದ್ರ ಸರಕಾರ ಪ್ರಶ್ನಿಸುತ್ತಿದ್ದು ಇದು ಬಿಜೆಪಿಯನ್ನು ಇಬ್ಬಂದಿಗೆ ಸಿಲುಕಿಸಿತು. ದಾಖಲೆ ಪ್ರಕಾರ ನಿರ್ಮಿಸಲಾಗಿದೆ ಎನ್ನಲಾದ ಶೌಚಾಲಯಗಳಿಗಾಗಿ 540 ಕೋಟಿ ವ್ಯಯವಾಗಿದ್ದು ಅದು ಎಲ್ಲಿದೆ? ಯೋಜನೆ ಜಾರಿಗೆ ತರಲಾಗಿದೆ ಎನ್ನಲಾದ ಸ್ಥಳಗಳ ಜಿಪಿಎಸ್ ಟ್ಯಾಗ್ ಸಹಿತ ದಾಖಲೆಗಳು ಈಗ ಕಾಣೆಯಾಗಿವೆ. ಹಿಂದೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ಶೌಚಾಲಯದ ಬಾಗಿಲಿನ ನಿರ್ಮಾಣದಲ್ಲಿ ಹದಿನೈದು ಕೋಟಿ ರೂಪಾಯಿಯ ಭ್ರಷ್ಟಾಚಾರ ಪತ್ತೆಯಾಗಿತ್ತು. ಶೇ.100ರಷ್ಟು ಶೌಚಾಲಯ ಇರುವ ಗ್ರಾಮವೆಂದು ಬಿಜೆಪಿ ಸರಕಾರ ಬಿಂಬಿಸಿದಲ್ಲಿಯೇ ಕಳೆದ ವರ್ಷ ಬಯಲು ಶೌಚ ಮಾಡುವ ಇಬ್ಬರು ಯುವಕರನ್ನು ಹೊಡೆದು ಕೊಲೆ ಮಾಡಲಾಗಿತ್ತು.
ಹೆಚ್ಚಿನ ಶೌಚಾಲಯಗಳಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸದೆ ಗುತ್ತೆದಾರ ನಾಪತ್ತೆಯಾದ್ದರಿಂದ ಅದನ್ನು ಮನೆಯವರು ಅಡಿಗೆ ಕೋಣೆ ಮತ್ತು ಸಣ್ಣಂಗಡಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು.












