ತಬ್ರೇಝ್ ಅನ್ಸಾರಿ ಕೊಲೆ: ಪೊಲೀಸರ ವಾದವನ್ನು ನಿರಾಕರಿಸಿದ ಸಾಕ್ಷಿಗಳು ಮತ್ತು ಕೇಸ್ ಡೈರಿ

0
757

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.13: ಝಾರ್ಕಂಡಿನಲ್ಲಿ ಜೈ ಶ್ರೀ ರಾಮ್ ಹೇಳಲು ಒತ್ತಾಯಿಸಿ ಹೊಡೆದು ಕೊಲ್ಲಲ್ಪಟ್ಟ ಯುವಕ ತಬ್ರೇಝ್ ಅನ್ಸಾರಿ ಪ್ರಕರಣದಲ್ಲಿ ಪೊಲೀಸ್ ವಾದಗಳನ್ನು ಸಾಕ್ಷಿಗಳು ಹಾಗೂ ಕೇಸ್ ಡೈರಿ ನಿರಾಕರಿಸಿವೆ. ಸಾಯುವವರೆಗೆ ಹೊಡೆಯಿರಿ ಎಂದು ದಾಳಿಕೋರರಲ್ಲಿ ಒಬ್ಬ ಹೇಳುತ್ತಿರುವುದು ಘಟನಾ ಸ್ಥಳಕ್ಕೆ ಬಂದ ತಬ್ರೇಝ್‍ನ ಮಾವ ಮಸ್ರೂರ್ ಆಲಂ ಕೇಳಿಸಿಕೊಂಡಿದ್ದಾರೆ ಎಂದು ಕೇಸು ಡೈರಿಯಲ್ಲಿದೆ. ಪ್ರಕರಣದಲ್ಲಿ 24 ಸಾಕ್ಷಿಗಳಿದ್ದು ಇವರೂ ಒಬ್ಬರು. ಪೋಸ್ಟ್‌ಮಾರ್ಟಂ ವರದಿಯಲ್ಲಿ ತಲೆಗೆ ಏಟು ಬಿದ್ದು ತಬ್ರೇಝ್ ಮೃತಪಟ್ಟಿದ್ದಾನೆ ಎಂದು ದಾಖಲಿಸಲಾಗಿದೆ.

ಆದರೆ, ಸಂಚು ನಡೆಸಿ ಮಾಡಿದ ಕೃತ್ಯವಲ್ಲದ್ದರಿಂದ ಆರೋಪಿಗಳ ವಿರುದ್ಧ ಕೊಲೆ ಕೃತ್ಯ ಆರೋಪ ಹೊರಿಸಿಲ್ಲ ಎಂದು ಝಾರ್ಕಂಡ್ ಪೊಲೀಸ್ ಹೇಳುತ್ತಿದೆ. ತಲೆಗೆ ಪೆಟ್ಟು ಬಿದ್ದುದು ಸಾವಿಗೆ ಕಾರಣವಲ್ಲ, ಹೃದಯಾಘಾತ ಸಾವಿಗೆ ಕಾರಣವೆಂದು ಪೊಲೀಸರು ಶಂಕಿಸಿದ್ದನ್ನು ಕೇಸ್ ಡೈರಿ ಪ್ರಶ್ನಿಸುತ್ತಿದೆ. ಹದಿಮೂರು ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಜುಲೈ 29ಕ್ಕೆ ಪೊಲೀಸರು ಕೋರ್ಟಿಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಕೊಲೆ ಆರೋಪವನ್ನು ಹೊರಿಸಿಲ್ಲ ಎಂಬ ವಿವರ ಬಹಿರಂಗವಾಗಿತ್ತು.

ಇದೇ ವೇಳೆ, ಸರಿಯಾದ ವೇಳೆಗೆ ಚಿಕಿತ್ಸೆ ಸಿಕ್ಕಿದ್ದರೆ ತಬ್ರೇಝ್ ಬದುಕು ಉಳಿಯುವ ಸಾಧ್ಯತೆ ಇತ್ತು ಎಂದು ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರಲ್ಲೊಬ್ಬರಾದ ಬಿ.ಬರ್ತಿ ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡ ತಬ್ರೇಝ್‌ರನ್ನು ಜೈಲಿಗೆ ಕೊಂಡು ಹೋಗುವಾಗ ಜೈಲು ವೈದ್ಯರು ಇರಲಿಲ್ಲ ಎಂದು ಸದರ್ ಆಸ್ಪತ್ರೆಯ ಡೆಪ್ಯೂಟಿ ಸೂಪರಿಡೆಂಟ್ ಡಾ.ಬರ್ದಿ ಹೇಳಿದರು. ಜೂನ್ ಹದಿನೆಂಟರಂದು ಜೈಶ್ರೀರಾಮ್, ಜೈ ಹನುಮಾನ್ ಎಂದು ಕೂಗಲು ಹೇಳಿ ತಬ್ರೇಝ್‌ರನ್ನು ಏಳು ಗಂಟೆಗಳ ಕಾಲ ಕಟ್ಟಿಹಾಕಿ ಹೊಡೆಯಲಾಗಿತ್ತು. ಪ್ರಜ್ಞೆ ಕಳಕೊಂಡ ನಂತರ ತಬ್ರೇಝ್‌ನನ್ನು ದುಷ್ಕರ್ಮಿಗಳು ಪೊಲೀಸರಿಗೆ ಒಪ್ಪಿಸಿದ್ದರು. ಆರೋಗ್ಯ ಬಿಗಡಾಯಿಸಿ ಆಸ್ಪತ್ರೆಗೆ ದಾಖಲಿಸಿದರೂ ಜೂನ್ 24ರಂದು ತಬ್ರೇಝ್ ಮೃತಪಟ್ಟಿದ್ದನು. ತಲೆ ಸಂಪೂರ್ಣ ಜಜ್ಜಿಹೋಗಿತ್ತು ಎಂದು ಆಸ್ಪತ್ರೆಗೆ ದಾಖಲಿಸಿದ ಕುಟುಂಬದವರು ಹೇಳಿದ್ದರು.