ಜಗತ್ತಿನ ಇಸ್ಲಾಮೀ ಸಂಘಟನೆಗಳಲ್ಲಿ ನಡೆದ ತಜ್ದೀದ್

0
412

ಸನ್ಮಾರ್ಗ ವಾರ್ತೆ

ಅಬ್ದುಸ್ಸಲಾಮ್ ವಾಣಿಯಂಬಲಮ್

ಅಲ್ ಇಖ್ವಾನುಲ್ ಮುಸ್ಲಿಮೂನ್ ಇಪ್ಪತ್ತನೆಯ ಶತಮಾನದ ವಿಶ್ವದ ಅತೀ ದೊಡ್ಡ ತಜ್ದೀದೀ ಸಂಘಟನೆಯಾಗಿದೆ. ಸುಮಾರು ಎಪ್ಪತ್ತಕ್ಕಿಂತಲೂ ಅಧಿಕ ರಾಷ್ಟ್ರಗಳಲ್ಲಿ ಆ ಸಂಘಟನೆ ಹರಡಿಕೊಂಡಿದೆ. ವಿಶ್ವದ ಎಲ್ಲಾ ದೇಶಗಳಲ್ಲಿ ಇಂದು ಇಖ್ವಾನ್ ಅಥವಾ ಅದೇ ಸಿದ್ಧಾಂತ ಹೊಂದಿ ಬೇರೆ ಬೇರೆ ಹೆಸರಲ್ಲಿ ಅದು ಚಟುವಟಿಕೆಯಲ್ಲಿದೆ. ಆ ಸಂಘಟನೆಯ ಕುರಿತು ಅಧ್ಯಯನ ಮಾಡಿದಾಗ ಸ್ವತಃ ನವೀಕರಣದ, ತಜ್ದೀದ್‌ನ ವಿಷಯದಲ್ಲಿ ಅದು ವಿಭಿನ್ನ ನಿಲುವು ತಳೆದಿದೆ ಎಂಬುದನ್ನು ಕಾಣಬಹುದು.

ಕಾಲಕ್ಕನುಗುಣವಾಗಿ ಹೊಂದಿಕೊಂಡು ತ್ವರಿತಗತಿಯಲ್ಲಿ ಸ್ವಯಂ ಹೊಸ ಬದಲಾವಣೆಗೆ ಧೈರ್ಯ ತೋರಿದ ಸಂಘಟನೆಗಳಿವೆ. ಅದೇ ರೀತಿ ಕಾಲದ ಮುಂದೆ ಮಂಡಿಯೂರಿದ ಸಂಘಟನೆಗಳೂ ಇವೆ.

ನಜ್ಮುದ್ದೀನ್ ಅರ್ಬಕಾನ್‌ರ ಇಸ್ಲಾಮೀ ಸಂಘಟನೆಯು ಕಾಲದ ಬದಲಾವಣೆಗೆ ಅನುಗುಣವಾಗಿ ಸ್ವಯಂ ಅಪ್ಡೇಶನ್ ಮಾಡಿಕೊಂಡು ಬದಲಾವಣೆ ತಂದುಕೊಂಡ ಸಂಘಟನೆಯಾಗಿದೆ. ಜಾಹಿಲಿಯ್ಯಾ ವ್ಯವಸ್ಥೆಯಲ್ಲಿ ಕೇವಲ ಸಂದೇಶ ಪ್ರಚಾರ ಕಾರ್ಯಕ್ಕೆ ಮಾತ್ರ ಸೀಮಿತವಾಗಿ ಹೋಗಬೇಕೇ ಹೊರತು ಅನ್ಯ ಮಾರ್ಗವಿಲ್ಲ, ಸಾಮಾಜಿಕ ಜೀವನದಲ್ಲಿ ಬೆರೆಯುವಿಕೆಯ ಯಾವುದೇ ಸಾಧ್ಯತೆ ಇಲ್ಲ ಎಂದು ತೀರ್ಮಾನ ಕೈಗೊಂಡ (1960) ಅರುವತ್ತರ ದಶಕದಲ್ಲಿ ಜಾಹಿಲಿಯ್ಯತ್‌ನ ಪ್ರತಿರೂಪವಾಗಿದ್ದ ಅಲ್ಟ್ರಾ ಸೆಕ್ಯುಲರಿಸ್ಟ್ ವ್ಯವಸ್ಥೆ ನೆಲೆ ನಿಂತಿದ್ದ ಟರ್ಕಿಯಲ್ಲಿ ರಾಜಕೀಯ ರಂಗದ ಚಟುವಟಿಕೆಯೇ ಪ್ರಧಾನವಾದ ಇಸ್ಲಾಮೀ ಕಾರ್ಯ ಚಟುವಟಿಕೆಯಾಗಿದೆ ಎಂಬ ಸಿದ್ಧಾಂತದಲ್ಲಿ ದೃಢವಾಗಿದ್ದುಕೊಂಡು ರಂಗಕ್ಕಿಳಿದ ಸಂಘಟನೆಯಾಗಿತ್ತು ನಜ್ಮುದ್ದೀನ್ ಅರ್ಬಕಾನ್‌ರವರದ್ದು.

2011ರಲ್ಲಿ ಈ ಲೇಖಕ ಅವರನ್ನು ಬೇಟಿಯಾಗಿದ್ದಾಗ ಈ ವಿಚಾರವನ್ನು ಹೀಗೆ ಬಹಿರಂಗಪಡಿಸಿದ್ದರು.
“ನಾನು ಆರಂಭದ ದಿನಗಳಿಂದಲೇ ಇಸ್ಲಾಮೀ ಸಂಘಟನೆಗಳು ರಾಜಕೀಯ ರಂಗಕ್ಕಿಳಿಯಬೇಕೆಂಬುದು ನನ್ನ ಉದ್ದೇಶವಾಗಿತ್ತು. ಆದರೆ ಅವರು ಅದನ್ನು ಆಗ ಒಪ್ಪಿರಲಿಲ್ಲ. 1960ರ ಪ್ರಾರಂಭದಿಂದಲೇ ನಾನು ಅದನ್ನು ಅವರಿಗೆ ಹೇಳುತ್ತಿದ್ದೆ. ಆದರೆ ಈಗ ಅವರಲ್ಲಿ ಹೆಚ್ಚಿನವರು ರಾಜಕೀಯ ರಂಗದಲ್ಲಿ ಇಸ್ಲಾಮೀ ಸಂಘಟನೆಗಳಿಗೆ ಮಹತ್ತರವಾದ ಪಾತ್ರವಿದೆ ಎಂಬುದನ್ನು ಅರಿತುಕೊಂಡಿದ್ದಾರೆ.”

ಸೆಕ್ಯುಲರ್ ದೇಶದಲ್ಲಿ ಸೆಕ್ಯುಲರ್ ಉಪಕರಣಗಳನ್ನು ಬಳಸಿಕೊಂಡು ಸೆಕ್ಯುಲರ್ ಪಕ್ಷಗಳ ಜೊತೆಗೂಡಿಕೊಂಡು ಸಹಕರಿಸಿ ಇಸ್ಲಾಮೀ ಸಂಘಟನೆಯನ್ನು ರಾಜಕೀಯದೊಳಗೆ ಪ್ರವೇಶಗೊಳಿಸಿದರು ಎನ್ನುವ ಕಾರಣಕ್ಕೂ ಅರ್ಬಕಾನ್‌ರವರು ವಿಶಿಷ್ಟ ವ್ಯಕ್ತಿಯಾಗುತ್ತಾರೆ. ಅವರ ಸಂಘಟನೆಯ ಘೋಷಣಾ ವಾಕ್ಯಗಳು ಎಂದಿಗೂ ಇಸ್ಲಾಮೀ ಘೋಷಣೆಯಾಗಿರಲಿಲ್ಲ. ಅದು ಟರ್ಕಿ ಎಂಬ ದೇಶದ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿತ್ತು. ಆದರೂ ಕೆಲವೊಮ್ಮೆ ತನ್ನ ಇಸ್ಲಾಮೀ ಅಜೆಂಡಾದ ಚಿಂತನೆಯನ್ನು ಹೊರತರಲು ಶ್ರಮಿಸಿದ್ದಾರೆ.

ಕುತೂಹಲಕಾರಿ ವಿಚಾರವೆಂದರೆ ವಿಶ್ವದ ನವೀಕೃತ ಇಸ್ಲಾಮೀ ಸಂಘಟನೆ ಎಂದು ಹೆಸರುವಾಸಿಯಾದ ಟರ್ಕಿಯ ಇಸ್ಲಾಮೀ ಸಂಘಟನೆಯು ಎರಡು ಸಾವಿರ ಇಸವಿಯಾಗುವಾಗ ಅದರ ನವೀಕರಣದ ಮುಂದಿನ ಹಂತಕ್ಕೆ ಪ್ರವೇಶಿಸಿತ್ತು ಎಂಬುದಾಗಿದೆ. ಇಬ್ಭಾಗ ಎಂಬ ದೊಡ್ಡ ಬೆಲೆ ತೆತ್ತು ಆ ತಜ್ದೀದ್ ಘಟಿಸಿದೆ. ಅರ್ಬಕಾನ್‌ರ ಸಂಘಟನೆ ಅದರ ಇಸ್ಲಾಮೀ ಗುಣವು ಬಹಿರಂಗಗೊಂಡಾಗ ನಿಷೇಧಕ್ಕೊಳಗಾಗುತ್ತಾ ಅವರು ಅಧಿಕಾರದಿಂದ ನಿರಂತರವಾಗಿ ಹೊರಹಾಕಲ್ಪಡುವುದು ಸಾಮಾನ್ಯವೆಂಬಂತೆ ಆದಾಗ, ಇಸ್ಲಾಮೀ ಸಂಘಟನೆಯು ಒಮ್ಮೆಯೂ ಅದರ ಇಸ್ಲಾಮೀ ಅಜೆಂಡಾಗಳನ್ನು ಮುಂದಿರಿಸಿಕೊಂಡು ಟರ್ಕಿಯಂತಹ ದೇಶದಲ್ಲಿ ಕಾರ್ಯ ರಂಗಕ್ಕಿಳಿಯುವುದು ಸೂಕ್ತವಲ್ಲ ಎಂದು ಸಂವಿಧಾನಕ್ಕನುಗುಣವಾಗಿದ್ದಕೊಂಡು ಸ್ವಚ್ಛವಾದ ಸೆಕ್ಯುಲರ್ ಪಾರ್ಟಿಯಾಗಿ ಕಾರ್ಯರಂಗಕ್ಕಿಳಿಯಬೇಕೆಂಬ ನಿಲುವು ಸ್ವೀಕರಿಸಿ ರಜಬ್ ತಯ್ಯಿಬ್ ಉರ್ದುಗಾನ್ ಮತ್ತಿತರರು ರಂಗಕ್ಕಿಳಿದರು.

ಅವರ ಅಭಿಪ್ರಾಯವನ್ನು ಸಂಘಟನೆಯ ಶೂರಾ ತಳ್ಳಿ ಹಾಕಿದಾಗ ಅವರು ಪಕ್ಷವನ್ನು ತೊರೆದು 2002ರಲ್ಲಿ `ಜಸ್ಟಿಸ್ ಆಂಡ್ ಡೆವಲಪ್ ಮೆಂಟ್ ಪಾರ್ಟಿ’ ಸ್ಥಾಪಿಸಿದರು. 2002ರಲ್ಲಿ ಅದು ಘಟಿಸಿತು. ಸರಿಯಾಗಿ ಒಂದು ವರ್ಷ ಪೂರ್ತಿಗೊಂಡಾಗ ಉರ್ದುಗಾನ್ ರವರ ಇಸ್ಲಾಮೀ ಸಂಘಟನೆಯು ಟರ್ಕಿಯಲ್ಲಿ ಅಧಿಕಾರಕ್ಕೇರಿತು. ನಂತರ ಅರ್ಬಕಾನ್‌ರವರ ಸಂಘಟನೆಯು ದಿನೇ ದಿನೇ ಕ್ಷೀಣಿಸುತ್ತ ಬರುವುದನ್ನು ನಾವು ಕಂಡೆವು.

2003ರ ನಂತರ ಕಳೆದ ಹತ್ತೊಂಬತ್ತು ವರ್ಷಗಳಲ್ಲಿ ನಿರಂತರವಾಗಿ ಆಡಳಿತ ನಡೆಸುತ್ತಿರುವ ಜಸ್ಟಿಸ್ ಆಂಡ್ ಡೆವಲಪ್ ಮೆಂಟ್ ಪಾರ್ಟಿ ದೇಶದಲ್ಲಿಯೂ ವಿಶ್ವಮಟ್ಟದಲ್ಲಿಯೂ ತಳೆದಿರುವ ಕ್ರಾಂತಿಕಾರೀ ನಿಲುವು ಹೊಸ ಕಾಲ ಘಟ್ಟದ ಇಸ್ಲಾಮೀ ಸಂಘಟನೆಗಳ ಕುರಿತು ಇರುವ ನೋಟಗಳನ್ನೇ ಬದಲಿಸುವಂತಿದೆ.

ನಿರಮತರ ತಜ್ದೀದ್ ನಡೆಸುತ್ತಾ ಬಂದಿರುವ ಮತ್ತೊಂದು ಇಸ್ಲಾಮೀ ಸಂಘಟನೆ ಮೊರೊಕ್ಕೋ ದೇಶದ್ದಾಗಿದೆ. ಇಸ್ಲಾಮೀ ಸಂಘಟನೆಗಳು ಇತರರನ್ನೂ ಒಳಗೊಂಡಂತಹ ರಾಜಕೀಯ ಪಕ್ಷ ಸ್ಥಾಪಿಸಬೇಕೆಂಬ ನಿಲುವು ಮೊದಲು ತಳೆದು ವಿಶ್ವದಲ್ಲಿ ಪರೀಕ್ಷಿಸುವ ಕಾರ್ಯಕ್ಕೆ ಮುಂದಾಗಿರುವುದು ಆ ದೇಶದ ಇಸ್ಲಾಮಿಸ್ಟ್ ಗಳಾಗಿದ್ದರು. ಈ ಇಸ್ಲಾಮಿಸ್ಟ್ ಗಳ ನಿಲುವು ಸ್ವತಃ ಮುತುವರ್ಜಿ ವಹಿಸಿ ಸ್ವತಂತ್ರ ರಾಜಕೀಯ ಇಸ್ಲಾಮೀ ಪಾರ್ಟಿ ಸ್ಥಾಪಿಸಬೇಕೆಂಬುದಾಗಿತ್ತು. ಆ ಪಕ್ಷದ ಮೇಲೆ ಎಂದಿಗೂ ಸಂಘಟನೆಯು ಆಡಳಿತ ನಡೆಸದು. ಅದು ಸ್ವತಂತ್ರ ತೀರ್ಮಾನ ಕೈಗೊಳ್ಳುವಂತಹ ಪಾರ್ಟಿಯಾಗಬೇಕು. ಸಂಘಟನೆಯಲ್ಲಿ ತರಬೇತಿ ಪಡೆದವರನ್ನು ಆ ಪಕ್ಷಕ್ಕೆ ನೀಡಿ, ಆ ಮೂಲಕ ಪಕ್ಷದಲ್ಲಿರುವ ಸಂಘಟನಾ ಕಾರ್ಯಕರ್ತರ ಮೂಲಕ ಇಸ್ಲಾಮಿನ ಸಿದ್ಧಾಂತಗಳನ್ನು ಸಂರಕ್ಷಿಸಬೇಕು ಎಂಬ ನಿರೀಕ್ಷೆಯಲ್ಲಿ ಸಂಘಟನೆ ಇರುತ್ತದೆ. ಸಂಘಟನೆಯು ತರಬೇತಿ, ಸಂದೇಶ ಪ್ರಚಾರ ಮುಂತಾದ ವಲಯಗಳಲ್ಲಿ ಮಾತ್ರ ಗಮನ ಕೇಂದ್ರೀಕರಿಸಿ ಕಾರ್ಯಾಚರಿಸುತ್ತದೆ. ಈ ನಿಲುವನ್ನು ಹೆಚ್ಚು ಕಮ್ಮಿ ಅಲ್ಜೀರಿಯಾ, ಜೋರ್ಡಾನ್, ಈಜಿಪ್ಟ್, ಲಿಬಿಯಾ ಮುಂತಾದ ದೇಶಗಳ ಇಸ್ಲಾಮೀ ಸಂಘಟನೆಗಳು ನಂತರ ಅನುಸರಿಸಿತು. ಟ್ಯುನೀಶಿಯಾದ ಇಸ್ಲಾಮೀ ಸಂಘಟನೆಯಲ್ಲಿ ಸ್ವಯಂ ವಿಮರ್ಶೆಯೊಂದಿಗೆ ಆಂತರಿಕವಾಗಿ ನಡೆದ ತಜ್ದೀದ್‌ನ ಬಗ್ಗೆ ಈ ಹಿಂದೆ ವಿವರಿಸಿದ್ದೆವು.

ಇಸ್ಲಾಮೀ ಸಂಘಟನೆಗಳು ವಿಶ್ವದೆಲ್ಲೆಡೆ ಎದುರಿಸುತ್ತಿರುವ ಶಕ್ತಿಯುತವಾದ ಆಂತರಿಕ ಸಮಸ್ಯೆಗಳು, ಸಂಘರ್ಷಗಳು ಒಂದು ಹಂತದವರೆಗೆ ನವೀಕರಣಕ್ಕೆ ಸಂಬಂಧಿಸಿದ್ದಾಗಿದೆ. ಕಾಲಕ್ಕನುಗುಣವಾದ ಬದಲಾವಣೆಗಳು ಸಂಘಟನೆಯೊಳಗಡೆ ನಡೆಯದೆ ಇರುವ ಅತೃಪ್ತಿಯು ಶಿಥಿಲತೆಯೆಡೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಗಮನಿಸಬೇಕು.
[ಸಶೇಷ]