ಝಿಯೋನಿಝಂ ಎಂಬ ಅಜೇಯ ಶಕ್ತಿ

0
324

ಸನ್ಮಾರ್ಗ ವಾರ್ತೆ

✍️ ಸಯ್ಯದ್ ಸಆದತುಲ್ಲಾ ಹುಸೈನಿ
ಜ.ಇ. ಹಿಂದ್ ರಾಷ್ಟ್ರೀಯ ಅಧ್ಯಕ್ಷರು

(ಕಳೆದ ಸಂಚಿಕೆಯಿಂದ)

ಫೆಲೆಸ್ತೀನ್‌ನ ಪ್ರತಿರೋಧವು ಇಸ್ರೇ ಲ್‌ನ ದೌರ್ಬಲ್ಯವನ್ನು ದಯನೀಯವಾಗಿ ಬಹಿರಂಗಪಡಿಸಿದ್ದು ಒಂದು ದೊಡ್ಡ ಸಾಧನೆಯಾಗಿದೆ. ಇಸ್ರೇಲ್‌ನ ಕುರಿತು ಇದ್ದ ಪ್ರಚಾರಗಳೆಲ್ಲವೂ ತಳ ಸೇರಿದವು.

ಸೋಲಿಸಲಾಗದ ಅಜೇಯ ಶಕ್ತಿಯಾಗಿದೆ ಇಸ್ರೇಲ್, ಇಡೀ ವಿಶ್ವವೇ ಝಿಯೋನಿಸ್ಟ್ ಗಳ ನಿಯಂತ್ರಣದಲ್ಲಿದೆ ಎಂದು ಮುಂತಾಗಿ ಗಾಳಿ ಹಾಕಿ ಉಬ್ಬಿಸಿದ ಬಲೂನ್‌ಗಳು ತುಂಬಾ ಇದ್ದವು. ತೂಫಾನುಲ್ ಅಕ್ಸಾ ಅವೆಲ್ಲವನ್ನೂ ಟುಸ್ ಮಾಡಿತು. ಈ ಕಾಲ್ಪನಿಕ `ಯಹೂದಿ ಪಿತೂರಿ’ಯ ಕುರಿತು ನಾವು ಈ ಹಿಂದೆ ಬರೆದದ್ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ.

“ಸಕಲ ಗೂಢಾಲೋಚನಾ ಸಿದ್ಧಾಂತಗಳು, ಕೆಡುಕಿನ ವಕ್ತಾರರು ಮತ್ತು ಇಸ್ಲಾಮ್ ವಿರೋಧಿ ಶಕ್ತಿಗಳು ಅತಿ ಪ್ರಬಲರಾಗಿದ್ದಾರೆ ಎಂಬ ವಾದವನ್ನು ಮುಂದಿಡುತ್ತದೆ. ಅವರು ಅಸಾಧಾರಣ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಪ್ರಪಂಚವು ಅವರ ಸಂತೋಷ ಮತ್ತು ಇಚ್ಛೆಗೆ ಅನುಗುಣವಾಗಿ ಚಲಿಸುತ್ತದೆ. ಅವರು ಸರ್ವಶಕ್ತರೂ ಸರ್ವಜ್ಞರು ಆಗಿದ್ದಾರೆ.” ಇಲ್ಯುಮಿನಾಟಿ, ಫ್ರೀ ಮಾಸನ್ಸ್, ಝಿಯೋನಿಝಂನ ಕುರಿತು ಇಂತಹ ಕಲ್ಪನೆಗಳು ಹಲವರಿಗಿದೆ.

ಅಂದರೆ ವಿಶ್ವವನ್ನು ಇವರು ಆಳುತ್ತಿದ್ದಾರೆ. ಇಂತಹ ಗುಂಪುಗಳ ಯೋಜನೆಗಳ ಪ್ರಕಾರ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಘಟನೆಗಳು ನಡೆಯುತ್ತವೆ ಎಂದು ಅವರು ನಂಬುತ್ತಾರೆ. ರಾಜಕೀಯ ಮತ್ತು ಆರ್ಥಿಕ ವಿಷಯಗಳಿಂದ, ವೈಜ್ಞಾನಿಕ ಸಾಧನೆಗಳು ಮತ್ತು ನೈಸರ್ಗಿಕ ವಿಕೋಪಗಳವರೆಗೆ ಕಾರ್ಯಗಳನ್ನು ಅವು ನಿರ್ಧರಿಸುತ್ತವೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಆಂದೋಲನಗಳ ಆಶಯಗಳು ಹೇಗಿರಬೇಕು ಎಂಬುದನ್ನು ಸಹ ಅವರು ತೀರ್ಮಾನಿಸುತ್ತಾರೆ. ಅವರ ಇಚ್ಛೆಗಳು ಹಾಗೂ ಯೋಜನೆಗಳ ವಿರುದ್ಧ ಯಾರಿಗೂ ಕಿರುಬೆರಳು ಎತ್ತಲಾಗುವುದಿಲ್ಲ…

ಇಂತಹ ಭಾವನೆಗಳು ತೀರಾ ನಿರಾಶೆ ಹಾಗೂ ನಕಾರಾತ್ಮಕ ಚಿಂತನೆಗಳಿಂದ ರೂಪುಗೊಳ್ಳುತ್ತದೆ. ಇಡೀ ಜಗತ್ತನ್ನು ಕೆಲವು ಶಕ್ತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡು ನಿಯಂತ್ರಿಸುತ್ತಿವೆ ಎಂದು ಭಾವಿಸುವ ಓರ್ವ ವ್ಯಕ್ತಿ ಇಲ್ಲಿ ಏನು ಮಾಡಬಹುದು?

ವಾಸ್ತವವಾಗಿ, ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳು ಸಂಶೋಧನೆಗಳಿಗೂ ಸೃಜನಶೀಲ ಬೆಳವಣಿಗೆಗೂ ಕಾರಣವಾಗುತ್ತದೆ. ಆದರೆ ಇವೆಲ್ಲವೂ ಕೆಲವು ನಿಗೂಢ ಶಕ್ತಿಗಳ ಯೋಜನೆಯಂತೆ ನಡೆಯುತ್ತಿವೆ ಎಂದು ಭಾವಿಸಿದರೆ ಸಂಶೋಧನೆ ಹಾಗೂ ಅನ್ವೇಷಣೆ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು. ಅವರಿಗೆ ಮಾಡಲು ಒಂದು ಕೆಲಸ ಮಾತ್ರ ಉಳಿದಿದೆ. ಅದು ಗೂಢಾಲೋಚನೆ ಎಂದು ಹೇಳುವುದು ಮತ್ತು ಗೂಢಾಲೋಚಕರನ್ನು ಶಪಿಸುವುದು!

ಹೇಡಿತನದಿಂದ ಹುಟ್ಟಿಕೊಂಡ ಇಂತಹ ಸಿದ್ಧಾಂತಗಳನ್ನು ತೂಫಾನುಲ್ ಅಕ್ಸಾ ಕೆಡವಿ ಹಾಕಿತು. ಅಲ್ಲಿ ಪವಿತ್ರ ಕುರ್‌ಆನ್‌ನ ಘೋಷಣೆಯು ನಿಸ್ಸಂದೇಶಹವಾಗಿ ಸತ್ಯವಾಗಿ ಬಿಟ್ಟಿದೆ. “ಶೈತಾನನ ತಂತ್ರಗಳು ತೀರಾ ದುರ್ಬಲವಾಗಿದೆಯಷ್ಟೆ.” (ಅನ್ನಿಸಾ 76)

ಜನರು ಹೇಳುವುದನ್ನು ನಾವು ಕೇಳಿಲ್ಲವೇ? ಇಸ್ರೇಲ್ ಹೊಸದಾಗಿ ಹುಟ್ಟಿದ ದೇಶ. ಆದರೆ ಅದು ತನ್ನ ಅಪಾರ ಶಕ್ತಿಯಿಂದ ಅರಬ್ ಜಗತ್ತಿನ ಮೇಲೆ ಪ್ರಾಬಲ್ಯ ಹೊಂದಿದೆ. ಇಂತಹ ಮನೋಭಾವ ಬಲಗೊಳ್ಳಲು ಅರಬರ ಅಸಾಮರ್ಥ್ಯ ಮತ್ತು ಹೇಡಿತನವು ಮುಖ್ಯ ಪಾತ್ರ ವಹಿಸಿದೆಯೆಂಬುದನ್ನು ಮರೆಯುವಂತಿಲ್ಲ. ಅದೇ ವೇಳೆ ಇಸ್ರೇಲನ್ನು ಒಂದು ಬಲಿಷ್ಠ ಶಕ್ತಿ ಎಂದು ಒಪ್ಪಿಕೊಳ್ಳುವುದು ತಿಳಿಗೇಡಿತನವಾಗಿದೆ. ಇಸ್ರೇಲ್ ಫೆಲೆಸ್ತೀನ್‌ನ ವಿರುದ್ಧ ಒಂಟಿಯಾಗಿ ಯುದ್ಧ ಮಾಡುತ್ತಿಲ್ಲ. ವಿಶ್ವದ ಎಲ್ಲಾ ಪ್ರಬಲ ಶಕ್ತಿಗಳೂ ಇಸ್ರೇಲ್‌ನೊಂದಿಗಿವೆ.

ಅಮೇರಿಕವು ವಿಶ್ವದ ಅತ್ಯಂತ ದೊಡ್ಡ ಆರ್ಥಿಕ ಮತ್ತು ಸೈನಿಕ ಶಕ್ತಿಯಾಗಿದೆ. ಅಮೇರಿಕದಿಂದ ಇಸ್ರೇಲ್‌ಗೆ ದೊರೆಯುತ್ತಿರುವ ಸಹಾಯ ನಮ್ಮ ಕಲ್ಪನೆಗೂ ಮೀರಿದ್ದು. ಇಸ್ರೇಲ್‌ಗೆ ಅಮೇರಿಕವು ವಾರ್ಷಿಕವಾಗಿ 3.8 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡುತ್ತಿದೆ. ನೆರೆ ರಾಷ್ಟ್ರಗಳಿಗಿಂತ ಇಸ್ರೇಲ್‌ನ ಮಿಲಿಟರಿ ಶಕ್ತಿಯು ಮೇಲ್ಮಟ್ಟದ್ದಾಗಿರಬೇಕೆಂಬುದೇ ಇದರ ಉದ್ದೇಶ. ಹೀಗೆ ಬರೆದಿಟ್ಟು ಆ ಸಹಾಯವನ್ನು ನೀಡಲಾಗುತ್ತಿದೆ. ಇದರ ಹೊರತು ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್, ಸ್ಪೆಯಿನ್ ಮೊದಲಾದ ದೇಶಗಳು ಕಳೆದ 75 ವರ್ಷಗಳಿಂದ ಇಸ್ರೇಲ್‌ಗೆ ಸಹಾಯವನ್ನು ನೀಡುತ್ತಿವೆ.

ಕೇವಲ ಹಣಕಾಸಿನ ನೆರವು ಮಾತ್ರವಲ್ಲ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ಗೆ ನೀಡುತ್ತಿವೆ. ರಕ್ಷಣಾ ತಂತ್ರಜ್ಞಾನ ಮತ್ತು ಸೈನಿಕ ತರಬೇತಿಯನ್ನು ನೀಡುತ್ತಿವೆ. ಜಂಟಿಯಾಗಿ ಸೈನಿಕ ಅಭ್ಯಾಸಗಳನ್ನು ನಡೆಸುತ್ತವೆ. ಇಸ್ರೇಲ್‌ನ ಸುರಕ್ಷಿತಗಾಗಿ ಅಮೇರಿಕ ಪಶ್ಚಿಮ ಏಷ್ಯಾದಲ್ಲಿ ಅನೇಕ ಸೇನಾ ನೆಲೆಗಳನ್ನು ಸ್ಥಾಪಿಸಿದೆ. ಅಮೇರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ಮಧ್ಯಪ್ರಾಚ್ಯ ರಕ್ಷಣೆ ಮತ್ತು ವಿದೇಶಾಂಗ ನೀತಿಯು ಸಂಪೂರ್ಣವಾಗಿ ಇಸ್ರೇಲ್‌ನ ಮೇಲೆ ಕೇಂದ್ರೀಕೃತವಾಗಿದೆ. ಈ ಎಲ್ಲಾ ದೇಶಗಳ ಅತೀ ದೊಡ್ಡ ರಕ್ಷಣಾ ಯೋಜನೆ ಇಸ್ರೇಲನ್ನು ರಕ್ಷಿಸುವುದು ಎಂಬುದಕ್ಕಾಗಿದೆ.

ಮಿಲಿಟರಿ ಮತ್ತು ಆರ್ಥಿಕ ರಂಗಗಳಲ್ಲಿ ಮಾತ್ರವಲ್ಲ, ರಾಜಕೀಯ ಮತ್ತು ರಾಜತಾಂತ್ರಿಕ ಕ್ಷೇತ್ರಗಳಲ್ಲಿಯೂ ಸರ್ವ ಬೆಂಬಲವನ್ನು ನೀಡುತ್ತಿವೆ. ಫೆಲೆಸ್ತೀನ್‌ನಲ್ಲಿ ಅತಿಕ್ರಮಗಳು ಕೊನೆಗೊಳ್ಳಬೇಕು ಎಂದು ವಿಶ್ವವೇ ಒಟ್ಟಾಗಿ ಹೇಳುವಾಗ ಈ ಬೃಹತ್ ಶಕ್ತಿಗಳು `ವೀಟೋ’ದೊಂದಿಗೆ ಬರುತ್ತವೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಇತಿಹಾಸದಲ್ಲಿ ಅಮೇರಿಕ 82 ಬಾರಿ ವೀಟೋ ಚಲಾಯಿಸಿದೆ. ಅದರಲ್ಲಿ 46 ಬಾರಿ (ಅರ್ಧಕ್ಕಿಂತ ಹೆಚ್ಚು) ಇಸ್ರೇಲನ್ನು ರಕ್ಷಿಸಲು ಪ್ರಯೋಗಿಸಿದೆ. ಬ್ರಿಟನ್ 29 ಬಾರಿ ವೀಟೋ ಬಳಸಿರುವಾಗ ಅದರಲ್ಲಿ 13 ಬಾರಿ ಇಸ್ರೇಲ್‌ಗಾಗಿ ಬಳಸಿದೆ. ಫ್ರಾನ್ಸ್ 18 ಬಾರಿ ವೀಟೋ ಪ್ರಯೋಗಿಸಿದ್ದು, ಅದರಲ್ಲಿ 11 ಇಸ್ರೇಲ್‌ಗಾಗಿ. ಸಂಪೂರ್ಣ ಮಾನವ ವಿರೋಧಿ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ, ನಾಗರಿಕ ಸಂಸ್ಕೃತಿಗೆ ಅನರ್ಹವಾದ ವೀಟೋ ಎಂಬ ಅನ್ಯಾಯವನ್ನು ಬೃಹತ್ ಶಕ್ತಿಗಳು ಇಸ್ರೇಲನ್ನು ಸಂರಕ್ಷಿಸಲು ಮಾತ್ರ ಬಳಸಿವೆ ಎಂಬುದು ಸ್ಪಷ್ಟವಾಗುತ್ತದೆ.

ವಾಸ್ತವಿಕತೆಗಳು ಹೀಗಿರುವಾಗ ಫೆಲೆಸ್ತೀನಿಯನ್ ಹೋರಾಟಗಾರರು ಇಸ್ರೇಲ್‌ನೊಂದಿಗೆ ಮಾತ್ರ ಹೋರಾಡುತ್ತಿದ್ದಾರೆ ಎಂದು ಹೇಗೆ ಹೇಳಲು ಸಾಧ್ಯ? ಫೆಲೆಸ್ತೀನಿಯನ್ನರು ವಿಶ್ವದ ಬೃಹತ್ ಶಕ್ತಿಗಳ ಆಕ್ರಮಣದ ವಿರುದ್ಧ ಹೋರಾಡುತ್ತಿದ್ದಾರೆ. ವಿಶೇಷತಃ ವಿಶ್ವದ ಇತಿಹಾಸದಲ್ಲೇ ಅತ್ಯಂತ ಸಶಕ್ತವಾದ ಮಿಲಿಟರಿ ಮೈತ್ರಿ ಪಡೆಯ ವಿರುದ್ಧ ಎಂಬುದನ್ನು ಯಾರೂ ಮರೆಯಬಾರದು.

ನಮ್ಮ ಕಾಲದಲ್ಲಿ ಸಾಟಿಯಿಲ್ಲದ ಫೆಲೆಸ್ತೀನಿಯನ್ ಪ್ರತಿರೋಧವು ಜಗತ್ತನ್ನು ಬದಲಾಯಿಸುತ್ತಿದೆ. ವಿಶ್ವದ ಅಭಿಪ್ರಾಯವು ಇಸ್ರೇಲ್ ವಿರುದ್ಧ ಮತ್ತು ಫೆಲೆಸ್ತೀನ್ ಪರವಾಗಿ ರೂಪುಗೊಳ್ಳುತ್ತಿದೆ. ಲೇಖನದಲ್ಲಿ ಈ ಕ್ರಿಮಿನಲ್‌ಗಳನ್ನು ಸೂಚಿಸುವಾಗ `ಪಾಶ್ಚಾತ್ಯ ಶಕ್ತಿಗಳು’ ಎಂದು ಬಳಸಿರುವುದು ಉದ್ದೇಶಪೂರ್ವಕವಾಗಿದೆ.

ಏಕೆಂದರೆ ಮೇಲೆ ಹೇಳಿದ ಎಲ್ಲಾ ದೇಶಗಳಲ್ಲಿ ಒಳಿತಿನ ವಕ್ತಾರರು ಪ್ರಬಲರಾಗಿದ್ದಾರೆ. ಇದುವರೆಗೆ ಪಾಶ್ಚಾತ್ಯ ಆಡಳಿತ ಕೇಂದ್ರಗಳು ಮತ್ತು ಮಾಧ್ಯಮಗಳು ಹೇಳುತ್ತಿದ್ದ ಸುಳ್ಳುಗಳನ್ನು ನಂಬಿದ್ದ ಜನರಿಗೆ ಈಗ ವಾಸ್ತವಿಕತೆಯ ಅರಿವಾಗಿದೆ. ಆದ್ದರಿಂದ ಪ್ರತಿಭಟನಾ ರ‍್ಯಾಲಿಗಳು ಮುಸ್ಲಿಮ್ ದೇಶಗಳಿಗಿಂತ ಹೆಚ್ಚಾಗಿ ಪಾಶ್ಚಾತ್ಯ ದೇಶಗಳಲ್ಲಿ ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಬ್ರಿಟಿಶ್, ಕೆನಡಾದ ಪ್ರಧಾನ ಮಂತ್ರಿಗಳ ಮೇಲೆ ಪ್ರಜೆಗಳು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಹಲವು ಇಸ್ರೇಲ್ ಜನರಲ್‌ಗಳಿಗೆ ಮತ್ತು ರಾಜಕಾರಿಣಿಗಳಿಗೆ ಬ್ರಿಟನ್‌ನಲ್ಲಿ ಸಂದರ್ಶನ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿನ ನ್ಯಾಯಾಲಯಗಳು ಸರಕಾರದ ಇಚ್ಛೆಗೆ ವಿರುದ್ಧವಾಗಿ ಯುನಿವರ್ಸಲ್ ಜ್ಯೂರಿಸ್‌ಡಿಕ್ಸನ್ ಲಾ ಪ್ರಕಾರ ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿದೆ. ಸಾರ್ವಜನಿಕ ಒತ್ತಡವು ಫ್ರಾನ್ಸ್‌ಗೆ ಇಸ್ರೇಲಿ ವಲಸೆಗಾರರನ್ನು ಟೀಕಿಸಲು ಮತ್ತು ಇಸ್ರೇಲ್‌ನ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತ ಚಲಾಯಿಸಲು ಕಾರಣವಾಯಿತು.

ಜನರೋಷ ತೀವ್ರವಾದಾಗ ಕೆನಡಾ ಪ್ರಧಾನಿಗೆ ಹೀಗೆ ಹೇಳಬೇಕಾಗಿ ಬಂತು, “ವಿಶ್ವವು ಎಲ್ಲವನ್ನೂ ನೋಡುತ್ತಿದೆ; ಟಿವಿಯ ಮೂಲಕ. ನಾವು ವಾರ್ತೆಗಳನ್ನು ಕೇಳುತ್ತಿದ್ದೇವೆ; ವೈದ್ಯರು, ಕುಟುಂಬ ಸದಸ್ಯರು ಹೆತ್ತವರನ್ನು ಕಳಕೊಂಡಿರುವ ಮಕ್ಕಳ, ಬದುಕುಳಿದವರ ಸುದ್ದಿಗಳನ್ನು ಕೇಳುತ್ತಿದ್ದೇವೆ. ಮಹಿಳೆಯರ ಮತ್ತು ಮಕ್ಕಳ ಹತ್ಯೆಗೆ ಜಗತ್ತು ಸಾಕ್ಷಿಯಾಗಿದೆ. ಇದನ್ನು ಕೂಡಲೇ ನಿಲ್ಲಿಸಬೇಕು.”

ಇಸ್ರೇಲ್‌ನ ವಿರುದ್ಧ ನಿರ್ಬಂಧಗಳನ್ನು ವಿಧಿಸಬೇಕೆಂದು ಸ್ಪೆಯಿನ್‌ನ ಉಪಪ್ರಧಾನಿ ಮತ್ತು ಬೆಲ್ಜಿಯಂ ಮಂತ್ರಿಯೂ ಹೇಳಿದ್ದು ಪ್ರಜೆಗಳ ಒತ್ತಡದಿಂದಲೇ ಆಗಿದೆ. ಅಮೇರಿಕಾದ ಸ್ಟೇಟ್ಸ್ ಇಲಾಖೆಯ ಹಲವಾರು ಅಧಿಕಾರಿಗಳು ಅಧ್ಯಕ್ಷ ಬೈಡನ್‌ರ ಇಸ್ರೇಲ್ ಪರ ನಿಲುವನ್ನು ತೀವ್ರವಾಗಿ ವಿಮರ್ಶಿಸಿದ್ದು ಮಾಧ್ಯಮಗಳಲ್ಲಿ ಚರ್ಚೆಯಾಯಿತು.

ಹೀಗೆ ಒಳಿತನ್ನು ಪ್ರೀತಿಸುವ ಜನರೆಲ್ಲರೂ ತಮ್ಮ ಆಡಳಿತಗಾರರ ಕ್ರೌರ್ಯದ ವಿರುದ್ಧ ರಂಗಕ್ಕಿಳಿಯುವ ದೃಶ್ಯವನ್ನು ನಾವು ಕಾಣುತ್ತಿದ್ದೇವೆ. ದೇವನಿಚ್ಛಿಸಿದರೆ ಈ ಜಾಗೃತಿಯು ಜಾಗತಿಕ ಮಟ್ಟದಲ್ಲಿ ಮಹತ್ತರವಾದ ಬದಲಾವಣೆಯನ್ನು ಉಂಟು ಮಾಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಜಗತ್ತಿನಲ್ಲಿ ಇಂತಹ ಧಾರ್ಮಿಕ, ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ನಮ್ಮ ಸಹಭಾಗಿತ್ವವೂ ಅಗತ್ಯವಾಗಿದೆ. ನಾವು ಸತ್ಯಗಳನ್ನು ಹೊರತರಬೇಕು. ಸಾರ್ವಜನಿಕ ಅಭಿಪ್ರಾಯವನ್ನು ಸರಿಯಾದ ದಿಕ್ಕಿಗೆ ಕರೆದೊಯ್ಯಬೇಕು. ಫೆಲೆಸ್ತೀನಿಯನ್ನರ ತ್ಯಾಗ-ಬಲಿ ದಾನವು ವ್ಯರ್ಥವಾಗಲು ನಾವು ಬಿಡಬಾರದು. ನ್ಯಾಯವು ಉದಯಿಸುವ ಒಂದು ಲೋಕದ ಅಡಿಪಾಯವಾಗಲು ಆ ತ್ಯಾಗ ಸಮರ್ಪಣೆಗೆ ಸಾಧ್ಯವಾಗಬೇಕು.
ನಮ್ಮ ದೇಶದ ಸಾರ್ವಜನಿಕ ಅಭಿಪ್ರಾಯವು ಬಹಳ ಪ್ರಮುಖವಾಗಿದೆ. ಫೆಲೆಸ್ತೀನಿಯನ್ನರಿಗೆ ನಾವು ಮಾಡಬಹುದಾದ ದೊಡ್ಡ ಸೇವೆಯೆಂದರೆ ನಮ್ಮ ದೇಶದ ಜನತೆಗೆ ನೈಜ ಸಂಗತಿಯನ್ನು ಮನವರಿಕೆ ಮಾಡುವುದು.
[ಮುಗಿಯಿತು]