ತರಗೆಲೆಗೆ ಬೆಂಕಿ ಕೊಡುತ್ತಿದ್ದ ಉಸ್ತಾದರೂ, ನಾಲ್ಕು ನಾಲ್ಕು ಪ್ಯಾಂಟು ಧರಿಸಿ ಬರುತ್ತಿದ್ದ ಹುಡುಗರೂ ಮತ್ತು ಲಬೀದ್ ಶಾಫಿಯೂ…

0
874

ಸ್ವಾಲಿಹಾ ಸಾದಿ

ಡಿಸೆಂಬರ್ ನ ಮೈಕೊರೆಯುವ ಚಳಿ ಎನ್ನುವುದು  ಸರ್ವ ಸಾಧಾರಣ ನುಡಿ .  ಅದನ್ನು ನಿಜವಾಗಿ ಅನುಭವಿಸಿದ್ದು   ಈ ಗಲ್ಫ್ ನಾಡಿಗೆ ಕಾಲಿಟ್ಟ ನಂತರವೇ ಎಂದು ಹೇಳಬಹುದು. ಹೌದು, ಸನ್ ಗ್ಲಾಸ್ ಹಾಕದೆ ಹೊರಗೆ ಕಾಲಿಡಲು  ಸಾಧ್ಯವಾಗದಂತಹ ಉರಿ ಬಿಸಿಲನ್ನೇ ನುಂಗಿದ ಚಳಿ,   ಐದೇ  ನಿಮಿಷದಲ್ಲಿ ಬಟ್ಟೆ ಒಣಗಿ ಬಿಡುವ ಸುಡು ಬಿಸಿಲನ್ನೇ ಮರೆತು ಬಿಡುವಂತಹ ಚಳಿ ಶುರುವಾಗಿದೆ.  ಸುಡುಬಿಸಿಲಿಗೆ ವರವಾದ ಖರ್ಜೂರವನ್ನು   ಪ್ರೀತಿಸುತ್ತಾ, ನಡುಗುವ ಚಳಿಗೆ ಬೆಂಕಿಯ ಮುಂದೆ ನಿಂತು ಕೋಳಿ ಸುಡುವ ಕೆಲಸದಲ್ಲಿ ತನ್ಮಯ ರಾಗುವ ಈ ನಾಡಿನ ಜನರು ಯಾವುದನ್ನೂ ದೂಷಿಸದೆ, ಎಲ್ಲಾ ಕಾಲವನ್ನು ಎಲ್ಲವನ್ನೂ ಎಲ್ಲರನ್ನೂ  ಪ್ರೀತಿಸುವವರು ಎನ್ನುವುದರಲ್ಲಿ ಸಂದೇಹವಿಲ್ಲ.

ಚಳಿ ಆರಂಭವಾದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು  ಸ್ಪರ್ಧೆಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.  ಗ್ಲೋಬಲ್  ವಿಲೇಜ್ ನ ದುಬೈ ಫೆಸ್ಟಿವಲ್ ಆರಂಭವಾಗುವುದು ಈ ಚಳಿಯಲ್ಲೇ.  ಜಗತ್ತಿನ ಅತಿ ಅಪಾಯಕಾರಿ ರಸ್ತೆಗಳಲ್ಲಿ ಒಂದಾದ ಅಲ್  ಐನ್ ನ  ಜಬಲ್   ಹಫೀತ್  ಪರ್ವತಕ್ಕೇರುವ ರಸ್ತೆಯಲ್ಲಿ ನಡೆಸಲ್ಪಡುವ ಅಂತರ್ರಾಷ್ಟ್ರೀಯ ಸೈಕಲ್ ರೇಸ್ ಸ್ಪರ್ಧೆ ಯು ನಡೆಯುವುದು ಕೂಡ ಈ ಡಿಸೆಂಬರ್ ನಲ್ಲಿ.   ಇಲ್ಲಿನ ಅರಬರ ಜೊತೆಗೂಡಿ ಮಿಕ್ಕ ಇನ್ನೂರಕ್ಕೂ ಹೆಚ್ಚು ರಾಷ್ಟ್ರದ ಜನರು ಒಟ್ಟಾಗಿ ಆಚರಿಸುವ ಇಲ್ಲಿನ ರಾಷ್ಟ್ರೀಯ ದಿನವನ್ನು ಮೊನ್ನೆ ಡಿಸೆಂಬರ್ 2 ರಂದು ಆಚರಿಸಲಾಯಿತು. ರಾಷ್ಟ್ರೀಯ ದಿನದ ಒಂದು ತಿಂಗಳ ಮುನ್ನವೇ ಇಡೀ ನಗರವನ್ನೇ ದೀಪಗಳಿಂದ ಅಲಂಕೃತ ಗೊಳಿಸಲು ನಡೆಸುವ ತಯಾರಿ, ಅಂಗಡಿಗಳಲ್ಲೂ ಮಾಲ್ ಗಳಲ್ಲೂ ಕೆಂಪು ಕಪ್ಪು ಬಿಳಿ ಹಸಿರು ಬಣ್ಣಗಳಲ್ಲಿ ಕಂಗೊಳಿಸುವ  ನಾನಾಕಾರದ ಯು. ಎ. ಇ. ಯ ಧ್ವಜಗಳು, ಅದರದ್ದೇ ದಿರಿಸುಗಳು, ಹೆಣ್ಣುಮಕ್ಕಳ ಪ್ರಿಯ  ಬಳೆ, ಮಾಲೆ, ತಲೆಯ ರಿಬ್ಬನ್, ಟೋಪಿಗಳು, ಅರಬರು ತಮ್ಮ ಸಾಂಪ್ರದಾಯಿಕ ನೃತ್ಯ ದಲ್ಲಿ ಬಳಸುವ ಕೋಲು ಗಳು ಕೂಡ  ನಾಲಕ್ಕು ಬಣ್ಣದ್ದಾಗಿರುತ್ತವೆ.

ಡಿಸೆಂಬರ್ 2 ರಂದು ನನ್ನ ಮೊಬೈಲ್ ಒಳಗೊಂಡಂತೆ ಇಲ್ಲಿ ನೆಲೆಸಿರುವ ನನ್ನ ಕುಟುಂಬಿಕರ, ಸ್ನೇಹಿತರ ಮೊಬೈಲ್ ನ  ವಾಟ್ಸಾಪ್ ಪ್ರೊಫೈಲ್ ಗಳಲ್ಲೂ ಸ್ಟೇಟಸ್ ಗಳಲ್ಲೂ    ಅಂದು  ನಾಲಕ್ಕು ಬಣ್ಣಗಳು ತುಂಬಿದ್ದು, ರಾಷ್ಟ್ರೀಯ ದಿನದ ಶುಭಹಾರೈಕೆ ಗಳಿದ್ದವು. “ನಿಜವಾಗಿಯೂ ದೇಶಪ್ರೇಮವೇ? ನನ್ನೂರಿನ ಗೆಳತಿಯ ಮೆಸೇಜ್ ಓದಿದೆ. ಹೌದು, ನನಗೆ ಮಾತ್ರವಲ್ಲ ಇನ್ನೂರಕ್ಕೂ ಹೆಚ್ಚು ಮಿಕ್ಕ ದೇಶದ ಜನರು ಕೂಡಿ ಪ್ರೀತಿಸುವ ನಿಜವಾದ ದೇಶಪ್ರೇಮ. ಹೇಗೆ ತಾನೇ ಪ್ರೀತಿಸದೇ ಇರಲು ಸಾಧ್ಯ? ದಂಗೆ ಗಳಿಲ್ಲ, ಪಕ್ಷಪಾತ ಭೇದವಿಲ್ಲ, ಕೋಮು ಗಲಭೆಗಳಿಲ್ಲ, ಒಬ್ಬಂಟಿ ಮಹಿಳೆಗೆ ಮಧ್ಯರಾತ್ರಿಯಲ್ಲೂ ಭೀತಿ ಇಲ್ಲದ ಯಾವುದಾದರು ಕಾರ್ಯನಿಮಿತ್ತ ಕಚೇರಿಗಳಲ್ಲಿ ಮಗುವನ್ನು ಹಿಡಿದು ನಿಲ್ಲುವ ನನ್ನಂತಹ ಹಲವಾರು ಮಹಿಳೆಯರಿಗೆ ಸರತಿಯ ಸಾಲಿನಲ್ಲಿ ನಿಲ್ಲಲು ಅವಕಾಶವನ್ನೇ ನೀಡದ, ಮಹಿಳೆಯನ್ನು ಅತ್ಯಂತ ಗೌರವಿಸುವ ಈ ದೇಶವನ್ನು ಹೇಗೆ ತಾನೆ ಪ್ರೀತಿಸದೇ ಇರಲು ಸಾಧ್ಯ.

ಅದೇನೇ ಇರಲಿ, ರಾಷ್ಟ್ರೀಯ ದಿನಾಚರಣೆಯು ಭರ್ಜರಿಯಾಗಿತ್ತು. ಮಾಲ್ ಗಳಲ್ಲೂ ಪಾರ್ಕ್ ಗಳಲ್ಲೂ ಮೈದಾನ ಗಳಲ್ಲೂ ಇಲ್ಲಿನ ಅರಬರ ಸಾಂಪ್ರದಾಯಿಕ ತಾತ್ಕಾಲಿಕ ಟೆಂಟ್ ಗಳನ್ನು ನಿರ್ಮಿಸಲಾಗಿತ್ತು. ಅದರೊಳಗೆ ಅರಬ್ ಸಂಪ್ರದಾಯವನ್ನು ಬಿಂಬಿಸುವ ಹಲವಾರು ಸಾಮಗ್ರಿಗಳು, ಮದರಂಗಿ ಇಡುವ ಮಹಿಳೆಯರು, ಅರಬರ ಸಾಂಪ್ರದಾಯಿಕ ನೃತ್ಯ ಎಲ್ಲವೂ ಬಹಳ ಮನೋರಂಜನೆಯನ್ನು ನೀಡಿದವು.

ಡಿಸೆಂಬರ್ ಪ್ರಾರಂಭವಾಗುತ್ತಲೇ ಚಳಿಯೂ ಜಾಸ್ತಿ ಆಗುತ್ತಾ ಹೋಗುವುದರಿಂದ ಇಲ್ಲಿನ ಶಾಲಾ ಮಕ್ಕಳಿಗೆ ಡಿಸೆಂಬರ್ ಹಾಗೂ ಜನವರಿಯ ಮಧ್ಯದ ದಿನಗಳಲ್ಲಿ 20 ದಿನಗಳ ಕಾಲ ರಜೆಯನ್ನು ನೀಡಲಾಗುತ್ತದೆ. ಆಹಾ! ರಜೆಯಲ್ಲಿ ಚಳಿಗೆ ಹೊದಿಕೆ ಹೊದ್ದು ಮಲಗಬಹುದು ಎಂದು ಮಗಳು ಖುಷಿಯಲ್ಲಿದ್ದಳು. ನನ್ನ ಬಾಲ್ಯದ ಡಿಸೆಂಬರ್ ನ ದಿನಗಳಲ್ಲಿ ಶುಕ್ರವಾರ ಮಾತ್ರ ಮದರಸಾಕ್ಕೆ ರಜೆ ಇದ್ದ ದಿನ ನಮಗೂ ಖುಷಿಯಾಗುತ್ತಿತ್ತು. ಬಾಕಿ ದಿನಗಳಲ್ಲಿ ಬೆಳಗ್ಗೆ ಆರು ಮೂವತ್ತಕ್ಕೆ ಮದ್ರಸಕ್ಕೆ ಹೊರಡುವಾಗ ಅಮ್ಮ ಚಹಾ ಮತ್ತು ಖಾರ ಕಡ್ಡಿ ಅಥವಾ ರವೆಯ ಬಿಸಿಯಾದ  ಸೀರ ಮಾಡಿಕೊಡುತ್ತಿದ್ದರು. ಇನ್ನು ಏನು ಮಾಡಿರದಿದ್ದರೆ ಬರೆ ಚಹಾ ಕೊಟ್ಟು ಮದರಸಾಕ್ಕೆ ಕಳುಹಿಸುತ್ತಿರಲಿಲ್ಲ. ಎರಡೂವರೆ ರೂಪಾಯಿ ಕೊಟ್ಟು ಮನೆಯ ಎದುರಲ್ಲೇ ಇದ್ದ ಗಣೇಶ್ ಹೋಟೆಲ್ ನಿಂದ ಸಿಗುವ ಕಡ್ಲೆ ಬಜಿಲ್ ( ಕಡಲೆ ಅವಲಕ್ಕಿ) ಅಥವಾ ಬನ್ಸ್ ನ ಜೊತೆ ಚಹಾ ಕುಡಿದು ಹೋಗುತ್ತಿದ್ದೆವು.  2 ಬನ್ಸ್ ನಿಂದ ನಾಲ್ಕು ತುಂಡು, ಮದರಸಕ್ಕೆ ಜೊತೆಯಲ್ಲಿ ಹೋಗಲು ಅತ್ತೆ ಮಗಳು ಬಂದು ಕಾಯುತ್ತಾ ನಿಂತರೆ ಒಂದು ತುಂಡು ಅವಳ ಹೊಟ್ಟೆಗೂ ಸೇರುತ್ತಿತ್ತು. ಸಣ್ಣ ತುಂಡು ಬನ್ಸ್ ಮತ್ತು ಅಮ್ಮನ ತುಂಬಿದ ಪ್ರೀತಿ ನಮ್ಮೆಲ್ಲರ ಸಣ್ಣ ಹೊಟ್ಟೆಯನ್ನು ತುಂಬಿಸುತ್ತಿತ್ತು.

ಚಳಿಯಲ್ಲಿ ಮದ್ರಸಕ್ಕೆ ಹೋಗುವಾಗ ಒಮ್ಮೊಮ್ಮೆ ಉಸ್ತಾದರು ಮಸೀದಿಯ ಹಿಂದಿರುವ ರಾಶಿ ಬಿದ್ದ ತರಗೆಲೆಗಳನ್ನು, ಕಸಕಡ್ಡಿಗಳನ್ನು ಶುಚಿಗೊಳಿಸಿ ಗುಡ್ಡೆ ಹಾಕಿ ಬೆಂಕಿ ಕೊಡುವಾಗ ನಾವು ಮಕ್ಕಳೆಲ್ಲರೂ ಸೇರಿ ಬೆಂಕಿಯ ಸುತ್ತ ನಿಂತು ಚಳಿಗೆ ಮೈ ಕಾಯಿಸುತ್ತಿದೆವು. ಚಳಿಗಾಲದಲ್ಲಿ ಉಸ್ತಾದರ ಬೆತ್ತದ ರುಚಿ ಅಧಿಕವಾದುದರಿಂದ ಹೊತ್ತು ಮಾಡದೆ ಬೇಗನೆ ಮದರಸಾಕ್ಕೆ ಹೊರಟು ಬಿಡುತ್ತಿದ್ದೆವು. ಲೇಟಾಗಿ ಬಂದವರ ಕಾಲಿಗೆ ಹೊಡೆಯುವ ಉಸ್ತಾದರ ಬೆತ್ತದ ಏಟಿನಿಂದ ನೋವು ಕಡಿಮೆ ಗೊಳಿಸಲು ಚಳಿಗಾಲದಲ್ಲಿ ಎರಡು- ಮೂವರು ಪ್ಯಾಂಟ್ ಗಳನ್ನು ಧರಿಸಿಕೊಂಡು ಬರುತ್ತಿದ್ದ  ಹುಡುಗರನ್ನು ನೆನೆಯುವಾಗ ಈಗಲೂ ನಗು ಬರುತ್ತದೆ. ಉಪ್ಪಿನಂಗಡಿಯ ಅಲ್ ಮದರಸ ತುಲ್ ಇಸ್ಲಾಂ ಧಾರ್ಮಿಕ ವಿದ್ಯಾಭ್ಯಾಸದ ನಮ್ಮ ಮೊದಲ ಪಾಠಶಾಲೆಯಾಗಿತ್ತು.

ಮದರಸಾದಲ್ಲಿ ನಮ್ಮೊಂದಿಗೆ ಕಲಿತ, ಇತ್ತೀಚೆಗೆ ಸ್ಟೂಡೆಂಟ್ ಇಸ್ಲಾಮಿಕ್ ಓರ್ಗನೈಸೇಷನ್  ನ ರಾಷ್ಟ್ರಾಧ್ಯಕ್ಷನಾಗಿ ನೇಮಕಗೊಂಡ ಸಹ ಸಹಪಾಠಿ  ಲಬೀದ್ ಶಾಫಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ…………