ಇತ್ತ ಉದ್ಯಮಗಳು ಬಾಗಿಲು ಮುಚ್ಚುತ್ತಿರುವಾಗ ಅತ್ತ ಕಾಶ್ಮೀರ ಬ್ರೇಕಿಂಗ್ ನ್ಯೂಸ್ ಆಗುತ್ತಿದೆ: ಝಾರ್ಖಂಡ್ ನಲ್ಲಿ ಬಾಗಿಲು ಮುಚ್ಚಿದ 30 ಉಕ್ಕು ನಿರ್ಮಾಣ ಕಂಪೆನಿಗಳು; ಟಾಟಾ ಮೋಟಾರ್ಸ್ ಸ್ಥಿತಿ ಏನು ಗೊತ್ತೇ?

0
2012

ರಾಂಚಿ, ಆ. 5: ಮಾರುಕಟ್ಟೆಯಲ್ಲಿ ಆರ್ಥಿಕ ಕುಸಿತ ಮುಂದುವರಿಯುತ್ತಿದ್ದು ಉಕ್ಕಿನ ಕಂಪೆನಿಗಳು- ವಾಹನ- ಸ್ಪೇರ್ ಪಾರ್ಟ್ಸ್ ತಯಾರಕರು ಗಂಭೀರ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಝಾರ್ಖಂಡಿನ ಉದ್ಯಮ ವಲಯವಾದ ಜೆಮ್ಸೇಡ್‍ಪುರ ಮತ್ತು ಪರಿಸರದಲ್ಲಿ 30 ಉಕ್ಕು ಕಂಪೆನಿಗಳು ಮುಚ್ಚಿ ಹೋಗಿವೆ. ಇಲ್ಲಿರುವ ದೇಶದ ಬೃಹತ್ ಖಾಸಗಿ ವಾಹನ ನಿರ್ಮಾಪಕ ಕಂಪೆನಿ ಟಾಟಾ ಮೋಟಾರ್ಸ್‍ನ ಪ್ಲಾಂಟ್ ಮುಚ್ಚಿ ತೆರೆದು ಕಾರ್ಯ ನಿರ್ವಹಿಸುತ್ತಿದೆ.

ತಿಂಗಳಲ್ಲಿ ಹದಿನೈದು ದಿವಸ ಪ್ಲಾಂಟ್ ಕೆಲಸ ಮಾಡುತ್ತಿದೆ. ಕಳೆದವಾರ ಗುರುವಾರದಿಂದ ಶನಿವಾರದವರೆಗೆ ಇಲ್ಲಿ ಕೆಲಸ ಆಗಿಲ್ಲ. ರವಿವಾರ ರಜೆ. ತಾತ್ಕಾಲಿಕ ಸಿಬ್ಬಂದಿಗಳನ್ನು ಕೆಲಸಕ್ಕೆ ಕರೆಯುತ್ತಿಲ್ಲ. ಖಾಯಂ ನೌಕರರಿಗೆ ಮಾತ್ರ ಕೆಲಸಕ್ಕೆ ಬರಲು ಅನುಮತಿ ನೀಡುತ್ತಿದೆ. ಹೀಗೆ ನಾಲ್ಕನೇ ಬಾರಿ ತಯಾರಿಕೆ ಕೆಲಸವನ್ನು ಮಧ್ಯದಲ್ಲಿಯೇ ನಿಲ್ಲಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಒಂದು ವಾರ ಕೆಲಸ ಮಾಡಿದರೆ ಟಾಟಾದ ಕೈಯಲ್ಲಿರುವ ಆರ್ಡರ್ ಗಳು ಮುಗಿದು ಹೋಗುತ್ತದೆ. ಈ ರೀತಿ ಟಾಟಾ ಮತ್ತು ಅದರೊಂದಿಗೆ ಕಾರ್ಯ ನಿರ್ವಹಿಸುತ್ತಿರುವ 1000ದಷ್ಟು ಸಣ್ಣದೊಡ್ಡ ಕಂಪೆನಿಗಳು ಮುಚ್ಚುಗಡೆ ಭೀತಿ ಎದುರಿಸುತ್ತಿವೆ. ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿರುವುದು ಉಕ್ಕು ಕಂಪೆನಿಗಳಿಗೆ ಸಂಕಟವೊಡ್ಡಿದೆ ಎಂದು ಆದಿತ್ಯಪುರ ವಾಣಿಜ್ಯ ವಲಯದ ಅಸೋಸಿಯೇಶನ್ ಅಧ್ಯಕ್ಷ ಇಂದರ್ ಅಗರ್‍ವಾಲ್ ಹೇಳಿದರು. 30 ಕಂಪೆನಿಗಳು ಇದರಿಂದಾಗಿ ಮುಚ್ಚಿಹೋಯಿತು. ಕಳೆದ ಗುರುವಾರ 12 ಕಂಪೆನಿಗಳು ಶಟರ್ ಎಳೆದವು. ಕಳೆದ ಎಪ್ರಿಲ್‍ನ ನಂತರ ವಿದ್ಯುತ್ ದರದಲ್ಲಿ ಶೇ. 38ರಷ್ಟು ಹೆಚ್ಚಳವನ್ನು ರಾಜ್ಯ ಸರಕಾರ ಘೋಷಿಸಿತ್ತು.

ಜಮ್ಶೆಡ್‍ಪುರ, ಆದಿತ್ಯಪುರ, ಧಲ್‍ಭುಂಗರ್ ಗಳಲ್ಲಿ ಸಾವಿರದಷ್ಟು ಕಂಪೆನಿಗಳು ಆರ್ಥಿಕ ಮಾಂದ್ಯದಿಂದ ಮತ್ತು ವಿದ್ಯುತ್ ದರ ಹೆಚ್ಚಳದಿಂದ ಕಷ್ಟ ಅನುಭವಿಸುತ್ತಿವೆ ಎಂದು ಸಣ್ಣ ಉದ್ಯಮಿಗಳ ಸಂಘಟನೆಯ ಅಧ್ಯಕ್ಷ ರೂಪೇಶ್ ಕಟಿಯಾರ್ ಹೇಳಿದರು. ನೇರ ಮತ್ತು ಪರೋಕ್ಷವಾಗಿ 30,000 ಮಂದಿ ಉದ್ಯೋಗ ಕಳಕೊಂಡಿದ್ದಾರೆ ಎಂದು ಅವರು ತಿಳಿಸಿದರು.