ಸನ್ಮಾರ್ಗ ವಾರ್ತೆ
ಕೋಲ್ಕತ್ತಾ: ನಿವೃತ್ತಿಗೆ ಮುನ್ನ ಕೊನೆಯ ಪಯಣವನ್ನೇ ಜೀವನದ ಕೊನೆಯ ಪ್ರಯಾಣವಾಗಿಸಿಕೊಳ್ಳಬೇಕಾಗಿ ಬಂದ ಎನ್‌ಟಿಪಿಸಿ ಲೋಕೋ ಪೈಲಟ್ ಗಂಗೇಶ್ವರ್ ಮಾಲ್, ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯ ರೈಲು ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್ ನಿವಾಸಿಯಾದ ಅವರು, ಏಪ್ರಿಲ್ 1ರಂದು ನಿವೃತ್ತಿ ಹೊಂದಬೇಕಿತ್ತು. ಆದರೆ, ನಿವೃತ್ತಿಗೆ ಒಂದು ದಿನ ಮೊದಲು ಅಪಘಾತ ಸಂಭವಿಸಿತು.
ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬರ್ಹೈತ್ ಪೊಲೀಸ್ ಠಾಣೆ ವ್ಯಾಪ್ತಿಯ ಭೋಗ್ನದಿಹ್ ಬಳಿ ಎರಡು ಸರಕು ರೈಲುಗಳ ಮಧ್ಯೆ ಭೀಕರ ಡಿಕ್ಕಿ ಸಂಭವಿಸಿತು. ಈ ದುರಂತದಲ್ಲಿ ಗಂಗೇಶ್ವರ್ ಮಾಲ್ ಹಾಗೂ ಮತ್ತೊಬ್ಬ ಲೋಕೋ ಪೈಲಟ್ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಫರಕ್ಕಾದ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಈ ಸರಕು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಎಂಜಿನ್ ಹಾಗೂ ಬೋಗಿಗಳಿಗೆ ಬೆಂಕಿ ಆವರಿಸಿತು.
ಗಂಗೇಶ್ವರ್ ಮಾಲ್ ಕುಟುಂಬದವರೊಂದಿಗೆ ನಿವೃತ್ತಿ ಬಳಿಕ ಸಮಯ ಕಳೆಯಲು ನಿರ್ಧರಿಸಿದ್ದರು. ಆದರೆ, ಅವರ ಕೊನೆಯ ಪ್ರಯಾಣವೇ ಬದುಕಿನ ಅಂತ್ಯವಾಗಿಬಿಟ್ಟಿತು. ಅಪಘಾತ ಸಂಭವಿಸುವ ಮುನ್ನ, ಅವರು ತಮ್ಮ ಕುಟುಂಬಕ್ಕೆ ಹಿಂದಿರುಗಿ ಊಟ ಮಾಡುವ ಭರವಸೆ ನೀಡಿದ್ದರು. ಈ ಭೀಕರ ಘಟನೆಯಲ್ಲಿ ಎನ್‌ಟಿಪಿಸಿ ರೈಲುಗಳು ಮತ್ತು ಹಳಿಗಳು ಮಾತ್ರಕ್ಕೆ ಸಂಬಂಧಿಸಿದ್ದೇ ಹೊರತು, ಭಾರತೀಯ ರೈಲ್ವೆಗೆ ಯಾವುದೇ ನಂಟಿಲ್ಲ ಎಂದು ಪೂರ್ವ ರೈಲ್ವೆ ವಕ್ತಾರ ಕೌಶಿಕ್ ಮಿತ್ರ ಸ್ಪಷ್ಟಪಡಿಸಿದ್ದಾರೆ.












