ಸನ್ಮಾರ್ಗ ವಾರ್ತೆ
ಉನ್ನತೋನ್ನತ ಪದವಿಗಳಿದ್ದರೂ ಅಶಾಂತಿ ಮತ್ತು ದುಷ್ಟತನ ಸಮಾಜದಲ್ಲಿ ವ್ಯಾಪಕವಾಗುತ್ತಿದೆ. ದೇವರ ಬಗ್ಗೆ, ಧರ್ಮದ ಬಗ್ಗೆ, ಪರಲೋಕದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ನ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹಮದ್ ರೋಣ ಅವರು ಅಭಿಪ್ರಾಯಪಟ್ಟರು. ಅವರು ನಗರದಲ್ಲಿ ಬೋರ್ಡ್ನ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಇಂದು ಅಶಾಂತಿ, ಅನ್ಯಾಯ ಅಕ್ರಮಗಳು ಎಲ್ಲಾ ಸಮೂದಾಯಗಳಲ್ಲೂ ವ್ಯಾಪಕವಾಗುತ್ತಿದೆ. ಸಣ್ಣ ಸಣ್ಣ ಮಕ್ಕಳೂ ಆತ್ಮಹತ್ಯೆಗೈಯುತ್ತಿರುವುದು ಅತ್ಯಂತ ಆತಂಕಕಾರಿ ವಿಷಯ. ಇದಕ್ಕೆಲ್ಲಾ ಮೂಲ ಕಾರಣ ಧರ್ಮ ನೈಜ ತಿಳುವಳಿಕೆಯ ಕೊರತೆ. ಶಿಕ್ಷಣ, ಪದವಿ ಅಂತಸ್ತುಗಳು ನಮ್ಮ ಬಳಿ ಧಾರಾಳವಿದೆ. ಆದರೆ ಧರ್ಮದ ಮೂಲ ಆಶಯ ಅರಿಯದ, ದೇವನೊಂದಿಗೆ ನೈಜ ಸಂಬಂಧವಿಲ್ಲದ, ಪರಿಲೋಕ ಪ್ರಜ್ಞೆಯಿಲ್ಲದ ಡಂಬಾಚಾರದಿಂದ ಕೂಡಿದ ಜೀವನದ ಪರಿಣಾಮ ಇದಾಗಿದೆ.
ಬಾಲ್ಯದಲ್ಲೇ ಮಕ್ಕಳಲ್ಲಿ ಸಾತ್ವಿಕತೆಯ ಉನ್ನತ ಮೌಲ್ಯಗಳನ್ನು ಬಿತ್ತಲು ಪೋಷಕರು ಶ್ರಮಿಸಬೇಕು. ಅದರೊಂದಿಗೆ ವಿವಿಧ ರಂಗಗಳ ಶಿಕ್ಷಣವನ್ನು ಗಳಿಸಲು ಪ್ರೇರೇಪಿಸಬೇಕು. ಕೇವಲ ಲೌಕಿಕ ಉದ್ದೇಶದೊಂದಿಗೆ ಗಳಿಸುವ ಶಿಕ್ಷಣ ಕೊನೆಗೆ ಸಂಪೂರ್ಣ ಸಮಾಜದ ಸ್ವಾಸ್ಥ್ಯಕ್ಕೆ ಕಂಟಕಪ್ರಾಯವಾಗಿ ಮಾರ್ಪಡುತ್ತದೆ. ಅದನ್ನೇ ನಾವಿಂದು ಎಲ್ಲೆಡೆ ನೋಡುತ್ತಿದ್ದೇವೆ ಎಂದರು.
ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ರಾಜ್ಯದಾದ್ಯಂತ 300ಕ್ಕೂ ಮಿಕ್ಕಿದ ಕೇಂದ್ರಗಳನ್ನು ಹೊಂದಿದ್ದು, ದೂರಶಿಕ್ಷಣದ ಮೂಲಕ ಜನರಿಗೆ ಜಾತಿ ಮತ ಬೇಧವಿಲ್ಲದೆ ಧರ್ಮದ ನೈಜ ಮೌಲ್ಯಗಳನ್ನು ಅರಿಯುವ ಅವಕಾಶವನ್ನು ಒದಗಿಸುತ್ತದೆ.

ಸಮಾರಂಭದಲ್ಲಿ ಡಿಪ್ಲೋಮಾ ಇನ್ ಇಸ್ಲಾಮಿಕ್ ಸ್ಟಡೀಸ್ ಕೋರ್ಸ್ನ ಐದು ವರ್ಷ ಸಂಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಥಮ, ದ್ವಿತೀಯ, ತೃತೀಯ, ಚತುರ್ಷ ವರ್ಷಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆೆ ಪ್ರಮಾಣಪತ್ರವನ್ನು ನೀಡಲಾಯಿತು.
ವೇದಿಕೆಯಲ್ಲಿ ಬೋರ್ಡ್ನ ಸಂಚಾಲಕಿ ಶಾಹಿದಾ ರಿಯಾಝ್, ಜೆಐಹೆಚ್ನ ನಗರ ಶಾಖೆಯ ಅಧ್ಯಕ್ಷರಾದ ನಿಸಾರ್ ಅಹಮದ್, ಮಹಿಳಾ ಘಟಕದ ಅಧ್ಯಕ್ಷೆ ವಾಜಿದಾ ತಬಸ್ಸುಮ್ ಮತ್ತು 150 ಮಂದಿ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.













