ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ಪುರುಷರು ಮತ್ತು ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ- ಅಧ್ಯಯನ ವರದಿ

0
424

ಸನ್ಮಾರ್ಗ ವಾರ್ತೆ

ನವದೆಹಲಿ:ವಿಶ್ವಾದ್ಯಂತ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವಯಸ್ಕರ ಸಂಖ್ಯೆಯು ಕಳೆದ 30 ವರ್ಷಗಳಲ್ಲಿ ಇಮ್ಮಡಿಯಾಗಿರುವುದಾಗಿ ವರದಿಯಾಗಿದೆ. 1990ರಲ್ಲಿ ಅಂದಾಜು 331 ಮಿಲಿಯನ್ ಮಹಿಳೆಯರು ಮತ್ತು 317 ಮಿಲಿಯನ್ ಪುರುಷರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆದರೆ, 2019 ರಲ್ಲಿ 626 ಮಿಲಿಯನ್ ಮಹಿಳೆಯರು ಮತ್ತು 652 ಮಿಲಿಯನ್ ಪುರುಷರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದಾಗಿ ಒಂದು ಹೊಸ ಅಧ್ಯಯನವು ಕಂಡು ಹಿಡಿದಿದೆ.

ಭಾರತದ ಮೂರನೇ ಒಂದು ಭಾಗದಷ್ಟು ಪುರುಷರು ಮತ್ತು ಮಹಿಳೆಯರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದರೆ ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಚಿಕಿತ್ಸೆ ಪಡೆಯುತ್ತಾರೆ ಎಂದು ದಿ ಲ್ಯಾನ್ ಸೆಟ್‌ನಲ್ಲಿ ಪ್ರಕಟಿಸಲಾಗಿರುವ ಅಧ್ಯಯನ ವರದಿಯು ಹೇಳಿದೆ.

ಅಧ್ಯಯನದ ಪ್ರಕಾರ ಒಟ್ಟು ಜನಸಂಖ್ಯೆಯ ಶೇಕಡ 30ರಷ್ಟು ಮಹಿಳೆಯರು ಮತ್ತು ಶೇಕಡಾ 32ರಷ್ಟು ಪುರುಷರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಆದರೆ ಶೇಕಡಾ 25ರಷ್ಟು ಪುರುಷರು ಮತ್ತು ಶೇಕಡಾ 35ರಷ್ಟು ಮಹಿಳೆಯರು ಮಾತ್ರ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂರು ದಶಕಗಳಲ್ಲಿ 184 ದೇಶಗಳ ಹತ್ತು ಕೋಟಿಗೂ ಅಧಿಕ ಜನರ ರಕ್ತದೊತ್ತಡ ಪರೀಕ್ಷೆಯ ಫಲಿತಾಂಶಗಳನ್ನು ವಿಶ್ಲೇಷಿಸಲಾಗಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.