ಸನ್ಮಾರ್ಗ ವಾರ್ತೆ
ಉಳ್ಳಾಲದ ಬಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ರಜತ ಮಹೋತ್ಸವ ಸಮಾರೋಪ ಕಾರ್ಯಕ್ರಮವು ಕಾಲೇಜಿನ ಮುಹಮ್ಮದ್ ಸಿರಾಜುಲ್ ಹಸನ್ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಹಿರಾ ಮಹಿಳಾ ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ ಪ್ರಕಟಿಸಲಾದ ಸ್ಮರಣ ಸಂಚಿಕೆ ‘ದಿ ಹಿರಾ ಒಡೆಸ್ಸಿ’ಯನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಯು.ಟಿ. ಇಫ್ತಿಖಾರ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, 25 ವರ್ಷಗಳ ಹಿಂದೆ ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಿಕ್ಷಣ ಸಂಸ್ಥೆ ಇಂದು ಹೆಣ್ಮಕ್ಕಳ ಶಿಕ್ಷಣಕ್ಕೆ ನೀಡುತ್ತಿರುವ ಸೇವೆ ಅವಿಸ್ಮರಣೀಯವಾಗಿದೆ ಎಂದು ಹೇಳಿದರು. ಇನ್ನು ಮುಂದೆಯೂ ಹೆಣ್ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಸೇವೆಯನ್ನು ಮುಂದುವರಿಸಬೇಕು ಎಂದು ಶುಭ ಹಾರೈಸಿದರು.

ಔರಾ ಮಹಿಳಾ ಮಾಸಿಕ ಪತ್ರಿಕೆಯ ಸಂಪಾದಕಿ ಸಮೀನಾ ಅಫ್ಶಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಾ ಮಹಿಳಾ ಕಾಲೇಜು ಆರಂಭದಿಂದ ಇಂದಿನವರೆಗೆ ಸಾಗಿಬಂದ ಯಶಸ್ವೀ ಪಯಣದ ಬಗ್ಗೆ ವಿವರಿಸಿದರು. ಮಹಿಳೆಯರ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕಾಲೇಜು ಆರಂಭಗೊಂಡಿದ್ದು, ಹಲವು ಸವಾಲುಗಳನ್ನು ಎದುರಿಸಿ ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿನಿಯರ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಕಾಲೇಜು ನೀಡುತ್ತಿರುವ ಕೊಡುಗೆಯನ್ನು ಅವರು ಸ್ಮರಿಸಿದರು.

ಇನ್ನೋರ್ವ ಮುಖ್ಯಅತಿಥಿ ತುಳು ಅಕಾಡೆಮಿಯ ಮಾಜಿ ಸದಸ್ಯೆ ವಿಜಯಲಕ್ಷ್ಮಿ ಪ್ರಸಾದ್ ರೈ ಕಲ್ಲಿಮಾರ್, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದು ಸುಲಭವಾದ ಕೆಲಸವಾಗಿರಬಹುದು. ಆದರೆ ಅದನ್ನು ದೀರ್ಘಕಾಲ ಯಶಸ್ವಿಯಾಗಿ ಮುನ್ನಡೆಸುವುದು ಅತ್ಯಂತ ಸವಾಲಿನ ಸಂಗತಿಯಾಗಿದೆ ಎಂದು ಹೇಳಿದರು. ಹಿರಾ ಸಮೂಹ ಶಿಕ್ಷಣ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಾ ಯಶಸ್ವಿಯಾಗಿ ತನ್ನ ಪಯಣವನ್ನು ಮುಂದುವರಿಸಿರುವುದು ಅಭಿನಂದನೀಯ ಸಾಧನೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಉತ್ತರ ವಲಯ ಅಧ್ಯಕ್ಷ CA ಇಸ್ಹಾಕ್ ಪುತ್ತೂರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು. ಶಿಕ್ಷಣವು ಕಾಲಕ್ಕೆ ತಕ್ಕಂತೆ ನವೀಕರಣಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳನ್ನು ಆಧುನಿಕ ಜಗತ್ತಿನ ಅಗತ್ಯಗಳಿಗೆ ಸಜ್ಜುಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು. ಆದರೆ ತಂತ್ರಜ್ಞಾನ ಮತ್ತು ಆಧುನಿಕತೆಯ ನಡುವೆ ಅಧ್ಯಯನದ ಮೂಲ ಉದ್ದೇಶ ಹಾಗೂ ಮೌಲ್ಯಗಳನ್ನು ಮರೆಯಬಾರದು ಎಂದು ಹಿತವಚನ ನೀಡಿದರು.

ರಾಯಚೂರಿನ ಏ.ಜೆ. ವಿಜ್ಞಾನ ಮತ್ತು ಸಂಶೋಧನಾ ಅಕಾಡೆಮಿಯ ಅಬ್ದುಲ್ಲಾ ಜಾವೀದ್, ಕಳೆದ 25 ವರ್ಷಗಳಿಂದ ಈ ಶಿಕ್ಷಣ ಸಂಸ್ಥೆಯೊಂದಿಗಿನ ತನ್ನ ಒಡನಾಟವನ್ನು ಸ್ಮರಿಸಿದರು. ಹಿರಾ ಶಿಕ್ಷಣ ಸಂಸ್ಥೆಯು ಗುಣಮಟ್ಟದ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ಶಿಕ್ಷಣವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು. ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ನೈತಿಕ ತರಬೇತಿಯನ್ನೂ ನೀಡುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾಸಂಸ್ಥೆಯ ಅರೆಬಿಕ್ ವಿಭಾಗದ ಮುಖ್ಯಸ್ಥ ಮೌಲಾನಾ ಶುಐಬ್ ಹುಸೈನಿ ನದ್ವಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶಾಂತಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಏ. ಹೆಚ್. ಮಹ್ಮೂದ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಹಿರಾ ಶಿಕ್ಷಣ ಸಂಸ್ಥೆಯ ಪಯಣ ಹಾಗೂ ರಜತ ಮಹೋತ್ಸವ ವರ್ಷದಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ. ಅಶ್ರಫ್ ಸ್ವಾಗತಿಸಿದರು. ವಿದ್ಯಾರ್ಥಿ ಅದ್ನಾನ್ ಕಿರಾಅತ್ ಪಠಿಸಿದರು. ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಕರೀಮ್ ಉಳ್ಳಾಲ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಆಯಿಶಾ ಶೈಮಾ ಮತ್ತು ಹನಾ ಝೈನಬ್ ನಿರೂಪಿಸಿದರು. ಉದ್ಯಮಿ ಮೊಹಿದೀನ್ ಡೆಲ್ಟಾ, ಶರೀಫ್ ಸುರಲ್ಪಾಡಿ, ಮೆಹಫೂಝ್ ರಹ್ಮಾನ್ ಹಾಗೂ ಶಾಂತಿ ಎಜುಕೇಷನಲ್ ಟ್ರಸ್ಟ್ನ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.













