ನೆರೆಹೊರೆ ಅಭಿಯಾನದ ಅನುಭವಗಳನ್ನು ಹಂಚಿಕೊಂಡ ರಾಷ್ಟ್ರೀಯ ಸಂಚಾಲಕ
✍️ ಮುಹಮ್ಮದ್ ನೌಶಾದ್ ಖಾನ್
ಅನುವಾದ: ಮುಖ್ತಾರ್ ಅಹ್ಮದ್
ಜಮಾಅತೆ ಇಸ್ಲಾಮೀ ಹಿಂದ್ನ ರಾಷ್ಟ್ರೀಯ ಕಾರ್ಯದರ್ಶಿ ಮತ್ತು “ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಅಭಿಯಾನದ ರಾಷ್ಟ್ರೀಯ ಸಂಚಾಲಕ ಮುಹಮ್ಮದ್ ಅಹ್ಮದ್ರ ಸಂದರ್ಶನ.
ಪ್ರಶ್ನೆ: `ನೆರೆಹೊರೆಯವರ ಹಕ್ಕುಗಳು’- ಅಭಿಯಾನದ ಉದ್ದೇಶ ಏನು? ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಅಗತ್ಯ ಎಂದು ನೀವು ಏಕೆ ಭಾವಿಸಿದ್ದೀರಿ?
ಉ: ನೆರೆಹೊರೆಯವರ ಬಗೆಗಿನ ನಮ್ಮ ಮನೋಭಾವವು ಇಂದಿನ ಸಮಾಜದಲ್ಲಿರುವ ಅತೀ ದೊಡ್ಡ ದೌರ್ಬಲ್ಯವಾಗಿದೆ. ಇಸ್ಲಾಮ್ ನೆರೆಹೊರೆಯವರಿಗೆ ಅಪಾರ ಪ್ರಾಮುಖ್ಯತೆಯನ್ನು ನೀಡಿದೆ. ಆದರೆ ನಾವು ಈ ಬೋಧನೆಗಳಿಂದ ದೂರ ಸರಿದಿದ್ದೇವೆ. ಆದುದರಿಂದ ಈ ಅಭಿಯಾನದ ಪ್ರಾಥಮಿಕ ಉದ್ದೇಶ ನೆರಹೊರೆಯವರ ಹಕ್ಕುಗಳನ್ನು ಎತ್ತಿ ತೋರಿಸುವ ಮೂಲಕ ಸಾಮಾಜಿಕ ಸುಧಾರಣೆಯಾಗಿತ್ತು. ಪ್ರತಿಯೊಬ್ಬರೂ ತಮ್ಮ ಸುತ್ತಲೂ ವಾಸಿಸುವವರ ಶಾಂತಿ, ಸೌಕರ್ಯ ಮತ್ತು ಸುರಕ್ಷತೆಗೆ ಜವಾಬ್ದಾರರೆಂದು ಭಾವಿಸಬೇಕು ಎಂದು ನಾವು ಬಯಸುತ್ತೇವೆ.
ಇಂದು, ನೆರೆಹೊರೆಯವರೊಂದಿಗೆ ಜಗಳಗಳು, ತಪ್ಪು ತಿಳುವಳಿಕೆಗಳು ಮತ್ತು ಕಹಿ ಸಾಮಾನ್ಯವಾಗಿದೆ. ಜನರು ತಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ಆದುದರಿಂದ ನಾವು ನಮ್ಮನ್ನೇ ಹೇಳಿಕೊಂಡೆವು- ಸುಧಾರಣೆ ನಮ್ಮ ಮನೆಯಿಂದಲೇ ಪ್ರಾರಂಭವಾಗುತ್ತದೆ ಮತ್ತು ನಮ್ಮ ಮನೆ ಬಾಗಿಲಿನ ಆಚೆಗಿನ ಮೊದಲ ಮನೆ ನಮ್ಮ ನೆರೆಹೊರೆ. ನಾವು ಕುರ್ಆನ್ ವಚನಗಳು ಮತ್ತು ಹದೀಸನ್ನು ಮರುಪರಿಶೀಲಿಸಲು ಪ್ರಾರಂಭಿಸಿದಾಗ, ನೆರೆ ಹೊರೆಯ ಬಗ್ಗೆ ಅಪಾರ ಮಾರ್ಗದರ್ಶನವನ್ನು ನಾವು ನೋಡಿದ್ದೇವೆ. ಅದು ನಮ್ಮ ಅಡಿಪಾಯವಾಯಿತು. ಹೀಗಾಗಿ, ಅಭಿಯಾನವು ಕೇವಲ ಸಾಂಕೇತಿಕವಾಗಿರಲಿಲ್ಲ, ಮಾನವ ಸಂಬಂಧಗಳನ್ನು ಪುನಃ ಸ್ಥಾಪಿಸಲು ಮತ್ತು ಮರೆತು ಹೋದ ಇಸ್ಲಾಮೀ ಮೌಲ್ಯಗಳನ್ನು ಪುನರುಜ್ಜೀವಗೊಳಿಸುವ ಗಂಭೀರ ಚಳವಳಿಯಾಗಿತ್ತು.
ಪ್ರಶ್ನೆ: ಜನರ ಪ್ರತಿಕ್ರಿಯೆ ಹೇಗಿತ್ತು? ಮತ್ತು ನೀವು ಯಾವ ಪ್ರಯೋಜನಗಳನ್ನು ಗಮನಿಸಿದ್ದೀರಿ?
ಉ: ನೆರೆಹೊರೆಯವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನಮಗೆ ಆರಂಭದಲ್ಲಿ ಖಚಿತವಿರಲಿಲ್ಲ. ಆದರೆ ಒಮ್ಮೆ ನಾವು ಜಾಗೃತಿ ಮೂಡಿಸಲು ಪ್ರಾರಂಭಿಸಿದಾಗ, ಬಾಗಿಲುಗಳು ಅಕ್ಷರಶಃ ತೆರೆಯಲು ಪ್ರಾರಂಭಿಸಿದವು. ಪ್ರತಿಕ್ರಿಯೆ ನಿರೀಕ್ಷೆಗಳನ್ನು ಮೀರಿತ್ತು, ಅದು ಜನರ ಹೃದಯಗಳ ಧ್ವನಿಯಂತೆ ಭಾಸವಾಯಿತು.
ಅಭಿಯಾನವು ಅಂತಿಮ ದಿನದಂದು ಕೊನೆಗೊಳ್ಳಬಾರದು, ಬದಲಾಗಿ ಶಾಶ್ವತವಾಗಿ ಮುಂದುವರಿಯಬೇಕು ಎಂದು ಹಲವರು ಹೇಳಿದರು. ಇದು ಮುಂದಿನ ಯೋಜನೆಯನ್ನು ಅಭಿವೃದ್ಧಿಪಡಿಸಲು ನಮಗೆ ಪ್ರೋತ್ಸಾಹ ನೀಡಿತು. “ನಮ್ಮ ನೆರೆಹೊರೆಯವರು ಒಳ್ಳೆಯವರಲ್ಲದಿದ್ದರೆ, ನಾವು ಒಳ್ಳೆಯ ನೆರೆಹೊರೆಯವರಾಗುತ್ತೇವೆ” ಎಂಬುದು ನಮ್ಮ ಘೋಷಣೆಯಾಗಿತ್ತು.
ನಮ್ಮ ತಂಡಗಳು ಹೋದ ಕಡೆಗಳಲ್ಲೆಲ್ಲಾ ಸಾರ್ವಜನಿಕರು ಸಂದೇಶವನ್ನು ಹೃತ್ಫೂರ್ವಕವಾಗಿ ಮೆಚ್ಚಿದರು. ಜಮಾಅತ್ ಕಾರ್ಯಕರ್ತರ ಉತ್ಸಾಹ ಗಮನಾರ್ಹವಾಗಿತ್ತು. ಅವರು ಸೂಚನೆಗಳಿಗಾಗಿ ಕಾಯುತ್ತಿರಲಿಲ್ಲ. ಅವರು ಸ್ವತಃ ಕರಪತ್ರಗಳನ್ನು ಹಂಚುತ್ತಿದ್ದರು. ಮನೆಗಳಿಗೆ ಉತ್ಸಾಹದಿಂದ ಭೇಟಿ ನೀಡುತ್ತಿದ್ದರು ಮತ್ತು ಸಂವಹನಗಳನ್ನು ರಚಿಸುತ್ತಿದ್ದರು. ಇಲ್ಲಿಯವರೆಗಿನ ಕ್ರಿಯಾತ್ಮಕ ಪ್ರತ್ಯುತ್ತರ ಅಸಾಮಾನ್ಯ ಸ್ವಾಗತವನ್ನು ತೋರಿಸುತ್ತದೆ ಮತ್ತು ಸಂಪೂರ್ಣ ವರದಿಯು ಈ ಯಶಸ್ಸನ್ನು ವಿವರವಾಗಿ ಪ್ರತಿಬಿಂಬಿಸುತ್ತದೆ.
ಪ್ರಶ್ನೆ: ಈ ಅಭಿಯಾನದ ಅಲ್ಪಾವಧಿ ಮತ್ತು ದೀರ್ಘಾವಧಿಯ ಪರಿಣಾಮಗಳೇನು ಎಂದು ನೀವು ನಿರೀಕ್ಷಿಸುತ್ತೀರಿ?
ಉ: ಅಲ್ಪಾವಧಿಯಲ್ಲಿ, ನಾವು ದೈನಂದಿನ ಮೌಲ್ಯಗನ್ನು ಪುನರುಜ್ಜೀವಗೊಳಿಸುವತ್ತ ಗಮನಹರಿಸಿದ್ದೇವೆ. ಪರಸ್ಪರ ಆತ್ಮೀಯತೆಯಿಂದ ಸ್ವಾಗತಿಸುವುದು, ಪರಸ್ಪರರ ಮನೋ ಧರ್ಮವನ್ನು ಗೌರವಿಸುವುದು ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು. ಉಡುಗೊರೆಗಳು ಹೃದಯವನ್ನು ಬಲಪಡಿಸುತ್ತವೆ ಎಂದು ಕುರ್ಆನ್ ಕಲಿಸುತ್ತದೆ ಮತ್ತು ಇನ್ನೊಂದು ಪ್ರಮುಖ ಅಂಶವೆಂದರೆ ಅಗತ್ಯ ಬಿದ್ದಾಗ ಜನರು ಕ್ಷಮೆಯಾಚಿಸಲು ಪ್ರೋತ್ಸಾಹಿಸುವುದು ಹೆಚ್ಚಿನ ಜನರು ಕ್ಷಮೆಯಾಚನೆಯನ್ನು ಅವಮಾನವೆಂದು ಪರಿಗಣಿಸುತ್ತಾರೆ, ಆದರೆ ಇಸ್ಲಾಮ್ ನಮಗೆ ಹೇಳುತ್ತದೆ, “ಕ್ಷಮೆಯಾಚಿಸುವವನು ಉನ್ನತ ಸ್ಥಾನವನ್ನು ಹೊಂದುತ್ತಾನೆ”. ಈ ತಿಳುವಳಿಕೆ ಪಸರಿಸಿದಾಗ, ಸಂಬಂಧಗಳು ನಾಟಕೀಯವಾಗಿ ಸುಧಾರಿಸಿದವು.
ದೀರ್ಘಾವಧಿಯಲ್ಲಿ, ಸಂತೋಷದ, ಶಾಂತಿಯುತ ಸಮಾಜವನ್ನು ನಿರ್ಮಿಸುವುದು ಗುರಿಯಾಗಿದೆ. ನೆರೆಹೊರೆಯವರು ಜಗಳವಾಡಿದಾಗ, ಒಬ್ಬ ವ್ಯಕ್ತಿಯ ಶಾಂತಿ ಅವನ ಮನೆಯೊಳಗೆಯೂ ನಾಶವಾಗುತ್ತದೆ, ಆದರೆ ಪ್ರೀತಿ ಮತ್ತು ಗೌರವ ಇದ್ದಾಗ, ಅದೇ ಸುತ್ತಮುತ್ತಲಿನ ಪ್ರದೇಶಗಳು ಸಂತೋಷದ ಮೂಲವಾಗುತ್ತದೆ. ಆದ್ದರಿಂದ ನಾವು ಬಯಸುವ ನಿಜವಾದ ದೀರ್ಘಾಕಾಲೀನ ಪರಿಣಾಮವೆಂದರೆ ಸಮಾಜದಾದ್ಯಂತ ಭಾವನಾತ್ಮಕ ಯೋಗಕ್ಷೇಮ ಮತ್ತು ಸಾಮೂಹಿಕ ಸಾಮರಸ್ಯ.
ಪ್ರಶ್ನೆ: ಈ ಅಭಿಯಾನದ ಸಮಯದಲ್ಲಿ ನೀವು ಹಲವು ಸ್ಥಳಗಳಿಗೆ ಪ್ರಯಾಣಿಸಿದ್ದೀರಿ. ನೀವು ಯಾವ ಸವಾಲುಗಳನ್ನು ಗಮನಿಸದ್ದೀರಿ ಮತ್ತು ಅವುಗಳನ್ನು ಹೇಗೆ ಪರಹರಿಸಲು ಯೋಚಿಸುತ್ತೀರಿ?
ಉ: ಆರಂಭದಲ್ಲಿ, ನಮ್ಮ ನೆರೆಹೊರೆಯವರನ್ನು ಸಂಪರ್ಕಿಸುವಾಗ ನಾವು ಏನು ಹೇಳಬೇಕು ಎಂಬುದು ಅತೀ ದೊಡ್ಡ ಹಿಂಜರಿಕೆಯಾಗಿತ್ತು. ಆದರೆ ನಾವು ಮೊದಲ ಹೆಜ್ಜೆಯಿಟ್ಟಾಗ ಮತ್ತು ಅತಿಯಾದ ಸಕಾರಾತ್ಮಕತೆಯನ್ನು ಪಡೆದ ನಂತರ, ಆ ಹಿಂಜರಿಕೆ ಮಾಯವಾಯಿತು. ಒಂದು ಘಟನೆಯನ್ನು ಹಂಚಿಕೊಳ್ಳುತ್ತೇನೆ, ರಾಯ್ಪುರದಲ್ಲಿ, ನಾವು ನೈರ್ಮಲ್ಯ ಕಾರ್ಯಕರ್ತರನ್ನು ಆಹ್ವಾನಿಸಿದೆವು. ನಾವು ಅವರನ್ನು ತಬ್ಬಿಕೊಂಡೆವು, ಅವರೊಂದಿಗೆ ಕುಳಿತು ಅವರಿಗೆ ಊಟ ಹಾಕಿದೆವು. ಅವರಲ್ಲಿ ಹಲವರು ಅಳುತ್ತಾ, “ದೊಡ್ಡ ಕಾರ್ಯಕ್ರಮಗಳ ಬಳಿಕ ನಮ್ಮನ್ನು ಶುಚಿಗೊಳಿಸಲು ಮಾತ್ರ ಕರೆಯಲಾಗುತ್ತದೆ. ನಮ್ಮನ್ನು ಎಂದಿಗೂ ಘನತೆಯಿಂದ ನಡೆಸಿಕೊಳ್ಳುವುದಿಲ್ಲ” ಎಂದರು. ಮೊದಲ ಬಾರಿಗೆ ಅವರಲ್ಲಿ ಗೌರವದ ಭಾವನೆ ಮೂಡಿತು.
ಅದೇರೀತಿ, ನಾವು ದಿನಪತ್ರಿಕೆ ಮಾರಾಟಗಾರರೊಂದಿಗೆ ಸಂಪರ್ಕ ಸಾಧಿಸಿದೆವು, ಅವರು ಪ್ರತಿದಿನ ಬೆಳಗ್ಗೆ ನಮ್ಮ ಮನೆಗಳಿಗೆ ಬರುತ್ತಾರೆ, ಆದರೆ ವಿರಳವಾಗಿ ನಗುವನ್ನು ಪಡೆಯುತ್ತಾರೆ. ಈ ಅನುಭವಗಳನ್ನು ಭಾರತದಾದ್ಯಂತ ಪುನರಾವರ್ತಿಸಲಾಯಿತು. ಆದ್ದರಿಂದ ಮೊದಲ ಹೆಜ್ಜೆ ಇಟ್ಟ ಬಳಿಕ ಸವಾಲುಗಳು ಅವಕಾಶಗಳಾದವು.
ಪ್ರಶ್ನೆ: ಅಭಿಯಾನದ ಸಮಯದಲ್ಲಿ ಜಮಾಅತ್ ಮಹಿಳೆಯರು, ಮಕ್ಕಳು ಮತ್ತು ಯುವಕರಿಂದ ಪ್ರತಿಕ್ರಿಯೆ ಹೇಗಿತ್ತು?
ಉ: ಪ್ರತಿಯೊಂದು ವಿಭಾಗವೂ ಭಾಗಿಯಾಗಿತ್ತು. ಜಮಾಅತ್ ಮಹಿಳಾ ವಿಭಾಗ, ಜಿಐಓ, ಎಸ್ಐಓ ಮಾತ್ರವಲ್ಲಿ ಚಿಲ್ಡ್ರನ್ ಸರ್ಕಲ್ ಸಹ ಸಕ್ರಿಯವಾಗಿ ಭಾಗವಹಿಸಿದ್ದವು. ರಾಯ್ಪುರದಲ್ಲಿ, ನೆರೆಹೊರೆಯವರೊಂದಿಗೆ ಹೇಗೆ ದಯೆಯಿಂದ ವರ್ತಿಸಬೇಕೆಂದು ಅರಿವು ಮೂಡಿಸುವ ಕಿರು ನಾಟಕವನ್ನು ಮಕ್ಕಳು ಪ್ರದರ್ಶಿಸುವುದನ್ನು ನಾನು ನೋಡಿದ್ದೆ. ಅದು ಹೃದಯಸ್ಪರ್ಶಿಯಾಗಿತ್ತು.
ನಾವು ರಾಷ್ಟ್ರೀಯ ಸಹೋದರತ್ವ, ಇತರ ಧರ್ಮಗಳು ಮತ್ತು ಸಂಸ್ಕೃತಿಗಳ ಜನರನ್ನು ಭೇಟಿ ಮಾಡುವ ದಿನವನ್ನು ಸಹ ವಿನ್ಯಾಸ ಗೊಳಿಸಿದ್ದೆವು. ಒಂಟಿಯಾಗಿ ವಾಸಿಸುವವರು, ವೃದ್ಧರು, ವಿಧವೆ ಯರು, ಅವಿವಾಹಿತರು, ಹೆಚ್ಚಾಗಿ ಮಾನವ ಸಂಪರ್ಕವನ್ನು ಬಯಸುವವರಿಂದ ಹೆಚ್ಚಿನ ಪ್ರತಿಕ್ರಿಯೆ ಬಂದಿತ್ತು. ಅವರು ಸಂವಹನವನ್ನು ಸ್ವಾಗತಿಸುವುದಲ್ಲದೆ, ಅದರ ಅಗತ್ಯವನ್ನು ಆಳವಾಗಿ ಅರಿತುಕೊಂಡರು.
ಪ್ರಶ್ನೆ: ಈ ಅಭಿಯಾನದ ಉತ್ಸಾಹವನ್ನು ಉಳಿಸಿಕೊಳ್ಳಲು ದೀರ್ಘಾವಧಿಯ ಯೋಜನೆಗಳು ಯಾವುವು?
ಉ: ನಮಗೆ ಇದು ಒಂದು ಬರೀ ಕಾರ್ಯಕ್ರಮವಲ್ಲ ಬದಲಾಗಿ ಶಾಶ್ವತ ಜವಾಬ್ದಾರಿಕೆಯಾಗಿದೆ. ಇದರ ಮುಂದುವರಿದ ರಚನೆ ಈಗಾಗಲೇ ಪ್ರಗತಿಯಲ್ಲಿದೆ. ನಮ್ಮ ಸಂಘಟನಾ ಘಟಕಗಳು ನೆರೆಯವರ ಹಕ್ಕುಗಳು, ಕುರ್ಆನ್ ಮಾರ್ಗದರ್ಶನ ಮತ್ತು ಸಾಮಾಜಿಕ ಶಿಷ್ಟಾಚಾರದ ಬಗ್ಗೆ ಸಮುದಾಯಗಳಿಗೆ ನಿರಂತರವಾಗಿ ನೆಪಿಸುತ್ತವೆ. ಇದು ಸಮಾಜದ ಸುಧಾರಣೆ ನಡೆಯುತ್ತಿರುವ ಮಿಷನ್ ಆಗಿದ್ದು, ನೆರೆಹೊರೆಯವರು ಆ ಮಿಷನ್ನ ಪ್ರಮುಖ ಆಧಾರಸ್ತಂಭವಾಗಿದ್ದಾರೆ.
ಪ್ರಶ್ನೆ: ನಾವು ಕೇಳದೆ ಇರುವ ಬೇರೆ ಯಾವುದನ್ನಾದರೂ ನೀವು ತಿಳಿಸಲು ಬಯಸುತ್ತೀರಾ?
ಉ: ಹೌದು, ಮಾಧ್ಯಮಗಳಿಗೆ ನನ್ನದೊಂದು ವಿನಮ್ರ ವಿನಂತಿ ಇದೆ. ನಾವು ನೆರೆಹೊರೆಯವರ ಹಕ್ಕುಗಳ ಕುರಿತು ಸಾಹಿತ್ಯವನ್ನು ಅಭಿವೃದ್ಧಿಪಡಿಸಿದ್ದೇವೆ. ಪ್ರತಿ 1-3 ತಿಂಗಳಿಗೊಮ್ಮೆ ಮಾಧ್ಯಮಗಳು ಈ ವಿಷಯವನ್ನು ಎತ್ತಿ ತೋರಿಸಿದರೆ, ಸಮಾಜವು ಹೆಚ್ಚಿನ ಪ್ರಯೋಜನನ್ನು ಪಡೆಯುತ್ತದೆ. ಮಾಧ್ಯಮವು ಸಾರ್ವಜನಿಕ ಚಿಂತನೆಯನ್ನು ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅದು ಸಕಾರತ್ಮಕತೆಯನ್ನು ಆರಿಸಿಕೊಂಡರೆ, ಸಮಾಜವು ವೇಗವಾಗಿ ರೂಪಾಂತರಗೊಳ್ಳುತ್ತದೆ.
ಮುಸ್ಲಿಮರು ನೆರೆಹೊರೆಯವರ ಹಕ್ಕುಗಳ ಕುರಿತು ಕುರ್ಆನ್ ಮತ್ತು ಹದೀಸನ್ನು ಅಧ್ಯಯನ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ಪ್ರವಾದಿಯವರು(ಸ) ಹೇಳಿದ್ದಾರೆ: ದೇವದೂತ ಜಿಬ್ರೀಲ್(ಅ) ನೆರೆಹೊರೆಯವರು ಅನುವಂಶೀಯವಾಗಿ ಪಾಲು ಪಡೆಯುತ್ತಾರೆ ಎಂದು ಹೇಳುವಷ್ಟು ಪ್ರಾಮುಖ್ಯತೆ ನೀಡಿದ್ದರು ಎಂದು ಅದು ಅವರ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
ಪ್ರಶ್ನೆ: ಈ ಅಭಿಯಾನವು ಶಾಂತಿಯುತ ಸಮಾಜವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳುವುದು ಸರಿಯೇ?
ಉ: ಖಂಡಿತ, ಜಮಾಅತೆ ಇಸ್ಲಾಮೀ ಹಿಂದ್ ಮೂರು ಪ್ರಮುಖ ಧ್ಯೇಯಗಳನ್ನು ಹೊಂದಿದೆ. ಮೊದಲನೆಯದು ಸುಧಾರಣೆಯ ಮೂಲಕ ಶಾಂತಿಯುತ ಸಮಾಜವನ್ನು ಸ್ಥಾಪಿಸುವುದು. ನೆರೆಹೊರೆಯ ಮಟ್ಟದಲ್ಲಿ ಸಹಾನುಭೂತಿ ಇಲ್ಲದೆ ಶಾಂತಿ ಅಸಾಧ್ಯ. ಆದ್ದರಿಂದ ಈ ಅಭಿಯಾನವು ನಮ್ಮ ಶಾಂತಿಯುತ ಸಹಬಾಳ್ವೆಯ ಧ್ಯೇಯಕ್ಕೆ ಕೇಂದ್ರಿತವಾಗಿದೆ.
ಪ್ರಶ್ನೆ: ಇಂದು ದ್ವೇಷವು ಶಾಲಾ ತರಗತಿ ಕೋಣೆಗಳನ್ನೂ ಪ್ರವೇಶಿಸಿದೆ. ಈ ಅಭಿಯಾನವು ದ್ವೇಷದ ವಾತಾವರಣವನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ನೀವು ಭಾವಿಸುತ್ತೀರಾ?
ಉ: ಖಂಡಿತವಾಗಿಯೂ. ದೂರ ಉಳಿದಾಗ ಮಾತ್ರ ದ್ವೇಷ ಉಳಿಯುತ್ತದೆ. ನಾವು ನೆರೆಹೊರೆಯವರನ್ನು ಭೇಟಿಯಾಗಿ ಮಾತನಾಡುವಾಗ, ಅವರು ನಮ್ಮ ಧರ್ಮದವರಾಗಿರಲಿ ಅಥವಾ ಬೇರೆಯವರಾಗಿರಲಿ, ಗೋಡೆಗಳು ಬೀಳಲು ಪ್ರಾರಂಭಿಸುತ್ತವೆ. ಈ ಅಭಿಯಾನವು ಸಂಪರ್ಕ ಮತ್ತು ಸಂಭಾಷಣೆಯನ್ನು ಸೃಷ್ಟಿಸಿತು, ದ್ವೇಷಕ್ಕೆ ಅತ್ಯಂತ ಶಕ್ತಿಶಾಲಿ ಪ್ರತಿರೋಧಕ. ನಮ್ಮ ಘೋಷಣೆ- “ದ್ವೇಷಕ್ಕೆ ಪ್ರೀತಿಯಿಂದ ಉತ್ತರಿಸುತ್ತೇವೆ” ಎಂಬ ತತ್ವಶಾಸ್ತ್ರವನ್ನು ಸಹ ಇದು ಪ್ರತಿಬಿಂಬಿಸುತ್ತದೆ.
ದ್ವೇಷಕ್ಕೆ ಪ್ರೀತಿಯಿಂದ ಪ್ರತಿಕ್ರಿಯಿಸಿದರೆ, ಅವು ವಿಫಲವಾಗುತ್ತದೆ ಮತ್ತು ಸಮಾಜವು ಗುಣಮುಖವಾಗುತ್ತದೆ. ನಿಜವಾದ ನಂಬಿಕೆಯುಳ್ಳವನು ತನ್ನನ್ನು ನಿಂದಿಸುವವರಿಗಾಗಿಯೂ ಪ್ರಾರ್ಥಿಸ ಬಲ್ಲವನು ಎಂದು ಇಸ್ಲಾಮ್ ಕಲಿಸುತ್ತದೆ. ಅದು ಚಾರಿತ್ರ್ಯದ ಉತ್ತುಂಗ ಮತ್ತು ಉತ್ತಮ ಜಗತ್ತನ್ನು ನಿರ್ಮಿಸುವ ಮಾರ್ಗವಾಗಿದೆ.
ಪ್ರತಿಯೊಬ್ಬ ವ್ಯಕ್ತಿ ತನ್ನ ನೆರೆಹೊರೆಯವರ ಹಕ್ಕುಗಳನ್ನು ಪೂರೈಸಲು ನಿರ್ಧರಿಸಿದರೆ, ಪ್ರೀತಿ ದ್ವೇಷವನ್ನು ಬದಲಾಯಿಸುತ್ತದೆ. ಘನತೆಯು ಅವಮಾನವನ್ನು ಬದಲಾಯಿಸುತ್ತದೆ ಮತ್ತು ಶಾಂತಿಯು ಸಂಘರ್ಷವನ್ನು ಬದಲಾಯಿಸುತ್ತದೆ. ಈ ಅಭಿಯಾನವು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ರೂಪಾಂತರ ಚಳುವಳಿಯಾಗಿದೆ ಮತ್ತು ಸಮಾಜವು ಅದನ್ನು ಬೆಂಬಲಿಸಿದರೆ, ಪ್ರತಿಫಲವು ಆಧ್ಯಾತ್ಮಿಕವಾಗಿರುವುದಿಲ್ಲ. ಈ ಜಗತ್ತಿನಲ್ಲಿ ಜೀವನವೂ ಸುಂದರವಾಗಿರುತ್ತದೆ.
ಕೃಪೆ: ರೇಡಿಯನ್ಸ್












