ಟಿಪ್ಪುವನ್ನು ಪ್ರೀತಿಸುವವರು ಇಲ್ಲಿ ಉಳಿಯಬಾರದು: ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

0
153

ಸನ್ಮಾರ್ಗ ವಾರ್ತೆ

ಕೊಪ್ಪಳ : ರಾಜ್ಯದ ಅಭಿವೃದ್ಧಿ ಬಿಟ್ಟು ಸದಾ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಬ್ಯುಸಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ನಾಯಕರು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ, ವಿವಾದಕ್ಕೆ ಈಡಾಗುವ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.

ಮಂಗಳವಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ರಾಮ ಮತ್ತು ಟಿಪ್ಪುವನ್ನು ಎಳೆದು ತಂದಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ನಳೀನ್ ಕುಮಾರ್ ಕಟೀಲ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ‘ಈ ಚುನಾವಣೆಯಲ್ಲಿ ಟಿಪ್ಪು ಸುಲ್ತಾನ್ ವಂಶಸ್ಥರು ಮತ್ತು ರಾಮ-ಹನುಮಂತನ ಭಕ್ತರ ನಡುವೆ ಸ್ಪರ್ಧೆ. ಟಿಪ್ಪುವನ್ನು ಪ್ರೀತಿಸುವವರು ಇಲ್ಲಿ ಉಳಿಯಬಾರದು’ ಎಂದು ಹೇಳಿದ್ದಾರೆ

‘ನಾನು ಯಲಬುರ್ಗಾದ ಜನರನ್ನು ಕೇಳುತ್ತೇನೆ, ನೀವು ಹನುಮಂತನನ್ನು ಪೂಜಿಸುತ್ತೀರಾ ಅಥವಾ ಟಿಪ್ಪು ಭಜನೆ ಮಾಡುತ್ತೀರಾ? ಹಾಗಾದರೆ ನೀವು ಟಿಪ್ಪು ಭಜನೆ ಮಾಡುವವರನ್ನು ಓಡಿಸುತ್ತೀರಾ’ ಎಂದು ಪ್ರಶ್ನಿಸಿದ್ದಾರೆ. ಈ ರಾಜ್ಯಕ್ಕೆ ರಾಮ ಭಕ್ತರು ಮತ್ತು ಹನುಮ ಭಕ್ತರು ಬೇಕಾದರೆ ಇಂದೇ ಸಂಕಲ್ಪ ಮಾಡಿ’ ಎಂದೂ ಕಟೀಲ್ ಹೇಳಿದ್ದಾರೆ.

ಭಗವಾನ್ ರಾಮ ಮತ್ತು ಹನುಮಂತನನ್ನು ಅನುಸರಿಸುವ ಜನರಿಗೆ ಈ ಭೂಮಿ ಮೀಸಲಾಗಿದೆ. ಹನುಮಂತನ ನಾಡಿನಲ್ಲಿ ನಾನು ಸವಾಲು ಹಾಕುತ್ತೇನೆ, ಟಿಪ್ಪುವನ್ನು ಪ್ರೀತಿಸುವವರು ಇಲ್ಲಿ ಉಳಿಯಬಾರದು, ರಾಮ ಭಜನೆ ಮಾಡುವವರು, ಹನುಮಂತೋತ್ಸವ ಮಾಡುವವರು ಇಲ್ಲೇ ಉಳಿಯಬೇಕು’ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.