“ಆರ್‌ಎಸ್‌ಎಸ್‌ ಒಡ್ಡುವ ಬೆದರಿಕೆಗಳು ನಿಜವಾದುದು, ಸಕ್ರಿಯವಾದುದು ಮತ್ತು ಚಾಲ್ತಿಯಲ್ಲಿರುವಂತಹದ್ದು”: ಮೋಹನ್ ಭಾಗವತ್ ಭೇಟಿಯನ್ನು ಬ್ರಿಟನ್ ಬಹಿಷ್ಕರಿಸುವಂತೆ ವಲಸಿಗ ಗುಂಪುಗಳ ಒತ್ತಾಯ

0
172

ಸನ್ಮಾರ್ಗ ವಾರ್ತೆ

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬ್ರಿಟನ್ ಪ್ರವಾಸವು ವಿವಾದಕ್ಕೆ ಗ್ರಾಸವಾಗಿದ್ದು, ಬ್ರಿಟಿಷ್ ನೆಲದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಬಹುಸಂಸ್ಕೃತಿಯ ಮೌಲ್ಯಗಳನ್ನು ರಕ್ಷಿಸುವಂತೆ ಆಗ್ರಹಿಸಿ ಭಾರತೀಯ ವಲಸಿಗ ಸಂಘಟನೆಗಳು ಯುಕೆ ಧಾರ್ಮಿಕ ಸ್ವಾತಂತ್ರ್ಯ ಮಂಡಳಿ ಹಾಗೂ ಸರ್ವಪಕ್ಷ ಸಂಸದೀಯ ಗುಂಪನ್ನು (APPG) ಸಂಪರ್ಕಿಸಿವೆ. ಭಾಗವತ್ ಅವರ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ಕೋರಿರುವ ಈ ಸಂಘಟನೆಗಳು, ವಿದೇಶಾಂಗ ಕಚೇರಿಯ ವಿಶೇಷ ರಾಯಭಾರಿ ಡೇವಿಡ್ ಸ್ಮಿತ್ ಮತ್ತು ಎಪಿಪಿಜಿ ಅಧ್ಯಕ್ಷ ಜಿಮ್ ಶಾನನ್ ಅವರು ಆರ್‌ಎಸ್‌ಎಸ್‌ನ ಹಿಂಸಾತ್ಮಕ ಧೋರಣೆಯನ್ನು ಅಧಿಕೃತವಾಗಿ ಖಂಡಿಸಬೇಕು ಹಾಗೂ ಸಂಘದ ಪ್ರಮುಖರ ಮೇಲೆ ನಿರ್ಬಂಧಗಳನ್ನು ಪ್ರಯೋಗಿಸಬೇಕು ಎಂದು ಬಲವಾಗಿ ಒತ್ತಾಯಿಸಿವೆ.

ಯುಕೆ ವಿದೇಶಾಂಗ ಕಚೇರಿಗೆ ಪತ್ರ ಸಲ್ಲಿಸಿರುವ 20ಕ್ಕೂ ಅಧಿಕ ಸಂಘಟನೆಗಳು, “ಭಾಗವತ್ ಅವರ ಪ್ರಸ್ತಾವಿತ ಬ್ರಿಟನ್ ಭೇಟಿಯು, ಯುಕೆ ಯಲ್ಲಿನ ಅವರ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸಾರ್ವಜನಿಕರ ವಿಶ್ವಾಸ ಗಳಿಸುವ ಪ್ರಚಾರ ತಂತ್ರದ ಭಾಗವಾಗಿದೆ” ಎಂದು ಆರೋಪಿಸಿವೆ.

ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಅಮೆರಿಕದ ಸಂಸ್ಥೆಯು ಮಾಡಿರುವ ಇದೇ ರೀತಿಯ ಕ್ರಮವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕುರಿತ ಆಯೋಗವು (USCIRF) ತನ್ನ ವಾರ್ಷಿಕ ವರದಿಗಳಲ್ಲಿ ಕಳೆದ ಏಳು ವರ್ಷಗಳಿಂದ ನಿರಂತರವಾಗಿ, ಯುಎಸ್ ಸರ್ಕಾರವು ಆರ್‌ಎಸ್‌ಎಸ್ ವಿರುದ್ಧ ನಿರ್ದಿಷ್ಟ ನಿರ್ಬಂಧಗಳನ್ನು ವಿಧಿಸಬೇಕೆಂದು ಒತ್ತಾಯಿಸುತ್ತಾ ಬಂದಿದೆ.

ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಈ ವರ್ಷ ಪ್ರಕಟಿಸಿರುವ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ, ಭಾರತದಲ್ಲಿ “ವ್ಯವಸ್ಥಿತ, ಮುಂದುವರಿದ ಮತ್ತು ಗಂಭೀರವಾದ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗಳನ್ನು ನಡೆಸುತ್ತಿರುವುದಕ್ಕೆ ಮತ್ತು ಅವುಗಳನ್ನು ಸಹಿಸುತ್ತಿರುವುದಕ್ಕೆ” ಭಾರತವನ್ನು ‘ವಿಶೇಷ ಕಾಳಜಿಯ ದೇಶ’ (CPC) ಎಂದು ಘೋಷಿಸಿದೆ. ಅಲ್ಲದೆ, ಕಳೆದ ವಾರ ಮೋಹನ್‌ ಭಾಗವತ್ ಅಮೆರಿಕಕ್ಕೆ ಭೇಟಿ ನೀಡುವ ಮುನ್ನ, ಅವರಿಗೆ ನೀಡಲಾಗಿರುವ ವೀಸಾವನ್ನು ರದ್ದುಗೊಳಿಸಬೇಕು ಹಾಗೂ ಭವಿಷ್ಯದಲ್ಲಿ ಅವರು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಬೇಕೆಂದು ಅದು ಆಗ್ರಹಿಸಿತ್ತು.

“ಬ್ರಿಟನ್‌ನಲ್ಲಿ ಆರ್‌ಎಸ್‌ಎಸ್‌ನಿಂದ ಎದುರಾಗಿರುವ ಬೆದರಿಕೆಗಳು ನಿಜವಾದುದು, ಸಕ್ರಿಯವಾಗಿರುವಂತಹದ್ದು ಮತ್ತು ಚಾಲ್ತಿಯಲ್ಲಿರುವಂತಹದ್ದು. ಭಾಗವತ್ ಅವರ ಭೇಟಿಯು ಯುಕೆ ಯಲ್ಲಿರುವ ಆರ್‌ಎಸ್‌ಎಸ್ ಅಂಗಸಂಸ್ಥೆಗಳಿಗೆ ದ್ವೇಷಪೂರಿತ ಭಾಷಣಗಳನ್ನು ಹರಡಲು, ಭಾರತೀಯ ವಲಸಿಗರ ನಡುವೆ ಮತ್ತಷ್ಟು ಧ್ರುವೀಕರಣ ಉಂಟುಮಾಡಲು ಹಾಗೂ ದೇಶಾದ್ಯಂತ ದುರ್ಬಲ ಸಮುದಾಯಗಳಿಗೆ ಭಯ ಮತ್ತು ಬೆದರಿಕೆಯ ವಾತಾವರಣ ಸೃಷ್ಟಿಸಲು ಧೈರ್ಯ ತುಂಬಲಿದೆ” ಎಂದು ಸಂಘಟನೆಗಳು ಕಳುಹಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.

ಭಾಗವತ್‌ ಅವರ ಯುಕೆ ಭೇಟಿಯ ವಿವರವನ್ನು ಗೌಪ್ಯವಾಗಿಡಲಾಗಿದ್ದರೂ, ಸೆಪ್ಟೆಂಬರ್ 2 ರಿಂದ 7 ರ ನಡುವೆ ಯುಕೆ ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಹಿಂದೆ ಅವರು ಅಮೆರಿಕಕ್ಕೆ ಭೇಟಿ ನೀಡಿ, ಹಲವಾರು ಭಾರತೀಯ ವಲಸಿಗ ಸಮುದಾಯಗಳಿಂದ ತೀವ್ರ ವಿರೋಧದ ನಡುವೆ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮಾತನಾಡಿದ್ದರು.

ಮೋಹನ್ ಭಾಗವತ್ ಅವರಿಗೂ ಮುಂಚಿನ ನಾಯಕ ಹಾಗೂ ಸಿದ್ಧಾಂತಿ ಎಂ.ಎಸ್. ಗೋಳ್ವಾಲ್ಕರ್ ಅವರ ವಿಚಾರಧಾರೆ ಹೇಗಿತ್ತು ಎಂಬುದನ್ನೂ ಪತ್ರದಲ್ಲಿ ಪ್ರಶ್ನಿಸಲಾಗಿದೆ. ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಹಿಟ್ಲರ್ ಯಹೂದಿಗಳಿಗೆ ಮಾಡಿದ ಅನ್ಯಾಯವನ್ನೇ ‘ಜನಾಂಗೀಯ ಹೆಮ್ಮೆ’ಯ ಮಾದರಿಯಾಗಿ ಭಾರತ ಅನುಕರಿಸಬೇಕು ಎಂದು ಅವರು ಸ್ಫೂರ್ತಿ ಪಡೆದಿದ್ದರು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುವ ಹಿಂಸಾಚಾರಗಳ ಹಿಂದೆ ಆರ್‌ಎಸ್‌ಎಸ್ ಪ್ರೇರಣೆಯಿದೆ ಎಂದೂ ಪತ್ರದಲ್ಲಿ ದೂರಲಾಗಿದೆ. ಉದಾಹರಣೆಗೆ, 2011ರಲ್ಲಿ ನಾರ್ವೆಯಲ್ಲಿ ಬೇಸಿಗೆ ಶಿಬಿರದ ಮೇಲಿರುವ ಜನರ ಮೇಲೆ ಗುಂಡು ಹಾರಿಸಿ 77 ಜನರ ಸಾವಿಗೆ ಹಾಗೂ 323ಕ್ಕೂ ಹೆಚ್ಚು ಜನರ ಗಾಯಕ್ಕೆ ಕಾರಣನಾದ ನವ-ನಾಝಿವಾದಿ ಆಂಡರ್ಸ್ ಬ್ರೆವಿಕ್‌ಗೂ ಇದು ಅನ್ವಯಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಹಲವು ಅಧ್ಯಯನಗಳು ಮತ್ತು ಶೈಕ್ಷಣಿಕ ವರದಿಗಳ ಪ್ರಕಾರ, ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ನಡೆಸಲು ವಿದೇಶಗಳಿಂದ ಹಣ ಸಂಗ್ರಹಿಸಿ ಕಳುಹಿಸುವ ಒಂದು ದೊಡ್ಡ ಜಾಲವನ್ನು ಆರ್‌ಎಸ್‌ಎಸ್ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.