ಸನ್ಮಾರ್ಗ ವಾರ್ತೆ
ಪುರುಷ ಸಹೋದ್ಯೋಗಿಗಳಿಂದ ಮಹಿಳಾ ನ್ಯಾಯಾಧೀಶರ ಮೇಲಾಗುವ ಲೈಂಗಿಕ ಕಿರುಕುಳವು ಭಾರತೀಯ ನ್ಯಾಯಾಂಗದ ಒಂದು “ಕೊಳಕು ರಹಸ್ಯ” ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಅಧಿಕಾರ ಶ್ರೇಣಿಯು ಅಂತಹ ಕಿರುಕುಳಗಳು ಹೊರಬಾರದಂತೆ ತಡೆಯುತ್ತದೆ ಎಂದು ಆರೋಪಿಸಿದ್ದಾರೆ.
ಹಿರಿಯ ವಕೀಲೆ ಜೈಸಿಂಗ್ ಅವರು ಪುರುಷ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿ ತಮ್ಮ ಬಳಿಗೆ ಬಂದಿದ್ದ ಹಲವಾರು ಮಹಿಳಾ ನ್ಯಾಯಾಧೀಶರನ್ನು ಪ್ರತಿನಿಧಿಸಿರುವುದಾಗಿ ತಿಳಿಸಿದ್ದಾರೆ.
‘ನನ್ನ ಕನಸಿನ ಭಾರತ: 2047ʼ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಡಿ.ಎಸ್. ಬೋರ್ಕರ್ ಸ್ಮರಣಾರ್ಥ 29ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ಅವಧಿಯಲ್ಲಿ, ನಾನು ಮಹಿಳಾ ನ್ಯಾಯಾಧೀಶರೊಂದಿಗೆ ವ್ಯವಹರಿಸಬೇಕಾಗಿ ಬಂದಿದೆ. ನಾನು ಸಾಕಷ್ಟು ಮಹಿಳಾ ನ್ಯಾಯಾಧೀಶರನ್ನು ಪ್ರತಿನಿಧಿಸಿದ್ದೇನೆ. ಈ ಮಹಿಳಾ ನ್ಯಾಯಾಧೀಶರು ಪುರುಷ ನ್ಯಾಯಾಧೀಶರಿಂದ ಆಗುವ ಲೈಂಗಿಕ ಕಿರುಕುಳದ ಕುರಿತು ದೂರುಗಳೊಂದಿಗೆ ನನ್ನ ಬಳಿಗೆ ಬಂದಿದ್ದಾರೆ, ಅದಕ್ಕಾಗಿಯೇ ನಾನು ನನ್ನ ಪುಸ್ತಕದಲ್ಲಿ ಲೈಂಗಿಕ ಕಿರುಕುಳವು ಭಾರತದ ನ್ಯಾಯಾಂಗದ ಕೊಳಕು ರಹಸ್ಯ ಎಂದು ಬರೆದಿದ್ದೇನೆ. ಇದರ ಬಗ್ಗೆ ಯಾರೂ ಮಾತನಾಡಲು ಬಯಸುವುದಿಲ್ಲ.” ಎಂದು ಹೇಳಿದ್ದಾರೆ.
ಜೂನಿಯರ್ ನ್ಯಾಯಾಧೀಶರು, ವಿಶೇಷವಾಗಿ ಮಹಿಳೆಯರು, ಹಿರಿಯ ಪುರುಷ ನ್ಯಾಯಾಧೀಶರಿಗೆ ಗೌರವ ತೋರಬೇಕೆಂದು ನಿರೀಕ್ಷಿಸುವ ನ್ಯಾಯಾಂಗದ ಶ್ರೇಣೀಕೃತ ಮತ್ತು ಪ್ರಭುತ್ವ ಸಂಸ್ಕೃತಿಯಲ್ಲಿ ಈ ಸಮಸ್ಯೆಯು ಬೇರೂರಿದೆ ಎಂದು ಜೈಸಿಂಗ್ ಹೇಳಿದರು.
ತಾನು ಮಹಿಳಾ ನ್ಯಾಯಾಧೀಶರೊಬ್ಬರನ್ನು ಪ್ರತಿನಿಧಿಸಿದ್ದ ಪ್ರಕರಣವನ್ನು ನೆನಪಿಸಿಕೊಂಡ ಜೈಸಿಂಗ್, ಹೈಕೋರ್ಟ್ ನ್ಯಾಯಾಧೀಶರು ನಿವೃತ್ತರಾದಾಗ ಜಿಲ್ಲಾ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರನ್ನು ಒಳಗೊಂಡಿರುವ ಒಂದು ಪದ್ಧತಿಯ ಬಗ್ಗೆ ಆ ನ್ಯಾಯಾಧೀಶರು ತಮಗೆ ತಿಳಿಸಿದ್ದಾಗಿ ಹೇಳಿದರು.
ಜೈಸಿಂಗ್ ಅವರ ಪ್ರಕಾರ, ಜಿಲ್ಲಾ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರನ್ನು ಒಂದೇ ಬಣ್ಣದ ಸೀರೆಗಳನ್ನು ಧರಿಸಿ ಸಾಲಾಗಿ ನಿಲ್ಲುವಂತೆ ಮಾಡಲಾಗುತ್ತದೆ, ಮತ್ತು ಪುರುಷ ನ್ಯಾಯಾಧೀಶರು ಡೈನಿಂಗ್ ಹಾಲ್ಗೆ ಪ್ರವೇಶಿಸುವಾಗ ಅವರ ಮೇಲೆ ಹೂವುಗಳನ್ನು ಎಸೆಯಲು ಹೇಳಲಾಗುತ್ತದೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇಂತಹ ಪದ್ಧತಿಗಳನ್ನು ನಿರೀಕ್ಷಿಸುತ್ತಾರೆ ಮತ್ತು ಇದು ವಿಶೇಷವಾಗಿ ಮಹಿಳಾ ನ್ಯಾಯಾಧೀಶರ ಮೇಲೆ “ಪ್ರತಿಕೂಲ ಪರಿಣಾಮಗಳನ್ನು” ಬೀರುತ್ತದೆ ಎಂದು ಅವರು ಹೇಳಿದರು.
ಪುರುಷ ನ್ಯಾಯಾಧೀಶರೊಬ್ಬರ ಲೈಂಗಿಕ ಬೇಡಿಕೆಯನ್ನು ವಿರೋಧಿಸಿದ ನಂತರ ಓರ್ವೆ ಮಹಿಳಾ ನ್ಯಾಯಾಧೀಶರಿಗೆ ಏನಾಯಿತು ಎಂದು ಜೈಸಿಂಗ್ ತಿಳಿಸಿದರು.
ಜೈಸಿಂಗ್ ಅವರ ಪ್ರಕಾರ, ಪುರುಷ ನ್ಯಾಯಾಧೀಶರೊಬ್ಬರು ಮಹಿಳಾ ನ್ಯಾಯಾಧೀಶೆಗೆ ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ಭಾಗವಹಿಸುವಂತೆ ಮತ್ತು “ಐಟಂ ನಂಬರ್” ಗೆ ನೃತ್ಯ ಮಾಡುವಂತೆ ಕೇಳಿಕೊಂಡರು. ನಿರಾಕರಿಸಿದಾಗ, ಆ ಮಹಿಳಾ ನ್ಯಾಯಾಧೀಶರು ತಮ್ಮ ಕೆಲಸವನ್ನು ಕಳೆದುಕೊಂಡರು ಎಂದು ಹೇಳಿದರು.
ಜೈಸಿಂಗ್ ವಿವರಿಸಿದಂತೆ ಈ ಘಟನೆಯು, ಹಿರಿಯ ಪುರುಷ ಸಹೋದ್ಯೋಗಿಗಳ ನಿರೀಕ್ಷೆಗಳನ್ನು ವಿರೋಧಿಸಿದಾಗ ಮಹಿಳಾ ನ್ಯಾಯಾಧೀಶರು ಎದುರಿಸಬಹುದಾದ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ. 2047ರ ವೇಳೆಗೆ ಅಂತಹ ಪದ್ಧತಿಗಳು ಮತ್ತು ಅನುಭವಗಳು ಕೊನೆಗೊಳ್ಳುತ್ತವೆ ಎಂದು ಆಶಿಸುವುದಾಗಿ ಜೈಸಿಂಗ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈಸಿಂಗ್ ಅವರಿಗಿಂತ ಮುಂಚಿತವಾಗಿ ಮಾತನಾಡಿದ ಹಿರಿಯ ವಕೀಲ ಮತ್ತು ದೆಹಲಿ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್. ಮುರಳೀಧರ್ ಕೂಡ ನ್ಯಾಯಾಂಗದೊಳಗೆ ಮಹಿಳೆಯರ ನಡೆಸಿಕೊಳ್ಳುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಂಸ್ಥೆಯೊಳಗಿನ ಶ್ರೇಣೀಕೃತ ಮತ್ತು ಪ್ರಭುತ್ವದ ಪದ್ಧತಿಗಳನ್ನು ಮುರಳೀಧರ್ ಟೀಕಿಸಿದರು ಮತ್ತು ಮಹಿಳಾ ನ್ಯಾಯಾಧೀಶರು ಹಿರಿಯ ಪುರುಷ ಸಹೋದ್ಯೋಗಿಗಳಿಂದ ಲೈಂಗಿಕ ಸುಳಿವುಗಳನ್ನು ಮತ್ತು ಕಿರುಕುಳವನ್ನು ಎದುರಿಸುತ್ತಿರುವ ನಿದರ್ಶನಗಳು ಹೆಚ್ಚುತ್ತಿರುವುದರ ಬಗ್ಗೆ ಮಾತನಾಡಿದರು.
ಮಾಜಿ ನ್ಯಾಯಾಧೀಶರು ಮತ್ತು ವಕೀಲರು ಇಬ್ಬರ ಮಾತುಗಳು ಹಿರಿಯ ಮತ್ತು ಕಿರಿಯ ನ್ಯಾಯಾಂಗ ಸದಸ್ಯರ ನಡುವಿನ ಅಧಿಕಾರದ ಅಸಮತೋಲನದ ಬಗ್ಗೆ ವಿಶಾಲವಾದ ಕಳವಳವನ್ನು ತೋರಿಸುತ್ತವೆ.
ಜೈಸಿಂಗ್ ಅವರು ನ್ಯಾಯಾಂಗದ ಸಮಯ ಮತ್ತು ಸಂಪನ್ಮೂಲಗಳನ್ನು ವಿತರಿಸುವ ಬಗ್ಗೆಯೂ ಸವಾಲುಗಳನ್ನು ಎತ್ತಿದರು. ನ್ಯಾಯಾಂಗದ ಬಗ್ಗೆ ಮುರಳೀಧರ್ ಅವರ ಹಲವಾರು ಕಳವಳಗಳನ್ನು ಜೈಸಿಂಗ್ ಒಪ್ಪಿಕೊಂಡರೆ, ನ್ಯಾಯಾಲಯಗಳು ತಮ್ಮ ಸೀಮಿತ ಸಮಯವನ್ನು ಎಲ್ಲಿ ಕಳೆಯುತ್ತವೆ ಎಂಬುದರ ಕುರಿತು ಭಿನ್ನಾಭಿಪ್ರಾಯ ಹೊಂದಿದ್ದರು.
ಸಾಮಾನ್ಯ ದಾವೆದಾರರಿಗೆ ಲಭ್ಯವಿರುವ ಸ್ವಲ್ಪ ಸಮಯವು ಹೆಚ್ಚಾಗಿ “ಶ್ರೀಮಂತರು ಮತ್ತು ಕಾರ್ಪೊರೇಟ್ ಜಗತ್ತಿನಿಂದ” ಸೇವಿಸಲ್ಪಡುತ್ತದೆ ಎಂದು ಅವರು ಹೇಳಿದರು. ನ್ಯಾಯಾಂಗದ ನಿಧಾನಗತಿ, ಸಾಂಸ್ಥಿಕ ಶ್ರೇಣಿ ಮತ್ತು ನ್ಯಾಯ ಲಭ್ಯತೆಯ ಕುರಿತಾದ ವಿಶಾಲ ಚರ್ಚೆಯ ಮಧ್ಯೆ ಅವರ ಅಭಿಪ್ರಾಯಗಳು ಬಂದವು.












