✍️ ಏ.ಕೆ. ಕುಕ್ಕಿಲ
ಘಟನೆ-1: ಎಪ್ರಿಲ್ 23
ಸ್ಥಳ ಬೆಂಗಳೂರು. ನಿವೃತ್ತ ಸೇನಾಧಿಕಾರಿ ಮತ್ತು ಅವರ ಪತ್ನಿ ಓರ್ವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ನಿಂದಿಸಿದರು. ನೀನು ಮುಸ್ಲಿಮ್, ನೀನು ಪಾಕಿಸ್ತಾನಿ ಎಂದೂ ಜರೆದರು. ಇದಕ್ಕಿಂತ ಮೊದಲು ಇವರ ನಡುವೆ ವಾಗ್ವಾದವೂ ನಡೆದಿತ್ತು. ಈ ನಿಂದನೆಯಿಂದ ಅಸಮಾಧಾನಗೊಂಡ ವ್ಯಕ್ತಿ ಅಲ್ಲಿಂದ ಹೊರಟರೂ ಸ್ಥಳೀಯರು ಇದನ್ನು ಗಮನಿಸಿದರು ಮತ್ತು ನಿವೃತ್ತ ಸೇನಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಇದು ಎಲ್ಲರ ದೇಶ’ ಎಂದು ಸೇನಾಧಿಕಾರಿಗೆ ತಿಳಿ ಹೇಳಿದರು. ‘ಇದು ಉತ್ತರ ಭಾರತ ಅಲ್ಲ’ ಎಂದು ಹೇಳಿದರು. ‘ಕರ್ನಾಟಕದಲ್ಲಿ ಹಿಂದೂ ಮುಸ್ಲಿಮ್ ಕ್ರೈಸ್ತ ಎಲ್ಲರೂ ಸಮಾನರಾಗಿದ್ದಾರೆ, ಉತ್ತರ ಭಾರತದ ಕೊಳಕು ಆಲೋಚನೆಯನ್ನು ಇಲ್ಲಿ ಹರಡ ಬೇಡಿ..’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನಿಮ್ಮ ಪತ್ನಿಗೆ ಬುದ್ಧಿ ಹೇಳಿ’ ಎಂದೂ ಹೇಳಿದರು. ಈ ಕುರಿತಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತು.
ಘಟನೆ-2: ಎಪ್ರಿಲ್ 23
ಮುಂಬೈಯ ವರ್ಲಿ ಪ್ರದೇಶದಲ್ಲಿ ರಸ್ತೆಯನ್ನು ಬ್ಲಾಕ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಓರ್ವ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಮೀಸಲಾತಿ ಮಸೂದೆಯು ಪಾರ್ಲಿಮೆಂಟ್ನಲ್ಲಿ ವಿಫಲವಾದುದನ್ನು ಖಂಡಿಸಿ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದರಿಂದಾಗಿ ಗಂಟೆಗಟ್ಟಲೆ ರಸ್ತೆ ಬ್ಲಾಕ್ ಆಗಿತ್ತು. ತನ್ನ ಮಗುವನ್ನು ಶಾಲೆಯಿಂದ ಕಾರಲ್ಲಿ ಮರಳಿ ಕರೆ ತರುತ್ತಿದ್ದ ಆ ಮಹಿಳೆ ಒಂದು ಗಂಟೆಗಿಂತಲೂ ಅಧಿಕ ಸಮಯ ರಸ್ತೆಯಲ್ಲಿ ಸಿಲುಕಿಕೊಂಡರು. ಕೊನೆಗೆ ಕಾರಿನಿಂದ ಇಳಿದು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ತಡೆದ ಪೊಲೀಸರನ್ನೂ ಪ್ರಶ್ನಿಸಿದರು. ‘ಪಕ್ಕದಲ್ಲಿ ಖಾಲಿ ಮೈದಾನ ಇದೆ, ಅಲ್ಲಿ ಹೋಗಿ ಪ್ರತಿಭಟಿಸಿ’ ಎಂದು ಆರ್ಭಟಿಸಿದರು. ಇದರಿಂದ ವಿಚಲಿತರಾದ ಸಚಿವರು ಅಲ್ಲಿಂದ ಕಾಲ್ಕಿತ್ತರು.
ಘಟನೆ-3: ಎಪ್ರಿಲ್ 20
ಬಿಜೆಪಿ ಮೈನಾರಿಟಿ ಮೋರ್ಚಾದ ನಾಯಕಿ ಮತ್ತು ಸುಪ್ರೀಮ್ ಕೋರ್ಟ್ ವಕೀಲರಾಗಿರುವ ನಾಝಿಯಾ ಇಲಾಹಿ ಖಾನ್ ಅವರು ಮುಂಬೈಯ ಲೆನ್ಸ್ ಕಾರ್ಟ್ ಅಂಗಡಿಗೆ ಹೋದರು. ಲೆನ್ಸ್ ಕಾರ್ಟ್ ಕಂಪೆನಿಯಲ್ಲಿ ಉದ್ಯೋಗಿಗಳಿಗೆ ತಿಲಕ, ಬಿಂದಿ, ಸಿಂಧೂರ ಇತ್ಯಾದಿ ಧಾರ್ಮಿಕ ಚಿಹ್ನೆಗಳಿಗೆ ನಿರ್ಬಂಧ ಹೇರಲಾಗಿದೆ ಎಂಬುದನ್ನು ಪ್ರತಿಭಟಿಸುವುದು ಅವರ ಉದ್ದೇಶವಾಗಿತ್ತು. ಇದೇವೇಳೆ,
ಹಿಜಾಬ್ ಮತ್ತು ಟರ್ಬನ್ಗೆ ಅವಕಾಶ ಇರುವುದೂ ಅವರ ಆಕ್ಷೇಪದ ಕೇಂದ್ರ ಬಿಂದುವಾಗಿತ್ತು. ಈ ವಿಷಯದಲ್ಲಿ ಇವರು ಅಂಗಡಿಗೆ ಹೋಗುವುದಕ್ಕಿಂತ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಚರ್ಚೆಗೆ ಒಳಗಾಗಿತ್ತು ಮತ್ತು ಕಂಪೆನಿಯು ಎಲ್ಲಾ ಧಾರ್ಮಿಕ ಸಂಕೇತಗಳನ್ನು ಸ್ವಾಗತಿಸುತ್ತದೆ ಎಂದು ಸಿಇಓ ಪಿಯೂಶ್ ಬನ್ಸಾಲ್ ಹೇಳಿಕೆ ನೀಡಿದ್ದರು. ಇದರ ಬಳಿಕವೂ ನಾಝಿಯ ಲೆನ್ಸ್ ಕಾರ್ಟ್ ಕಂಪೆನಿ ಪ್ರವೇಶಿಸಿದರು ಮತ್ತು ಕಂಪೆನಿಯ ಮ್ಯಾನೇಜರ್ ಮೊಹ್ಸಿನ್ ಖಾನ್ರನ್ನೇ ಗುರಿಯಾಗಿಟ್ಟು ಆಕ್ಷೇಪಿಸತೊಡಗಿದರು.
ಹಿಂದೂಗಳಿರುವಾಗ ಮುಸ್ಲಿಮನಾಗಿರುವ ಮೊಹ್ಸಿನ್ ಖಾನ್ನನ್ನು ಯಾಕೆ ಮ್ಯಾನೇಜರ್ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ‘ಅರ್ಹತೆ ಇರುವ ಹಿಂದೂ ಉದ್ಯೋಗಿಗಳು ಇದ್ಯಾಗ್ಯೂ ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸ್ ಆದವನನ್ನು ಮ್ಯಾನೇಜರ್ ಮಾಡಿ ಹಿಂದೂಗಳನ್ನು ಆತನ ಅಧೀನದಲ್ಲಿ ದುಡಿಸುತ್ತಿರುವುದನ್ನು’ ಮಾಧ್ಯಮಗಳ ಎದುರು ಪ್ರಸ್ತಾಪಿಸಿದರು. ‘ಮುಸ್ಲಿಮ್ ಉದ್ಯೋಗಿಗಳಿಗೆ ಖಾಸಗಿ ಕಂಪೆನಿಗಳು 5 ವರ್ಷ ಬಹಿಷ್ಕಾರ ಹೇರ ಬೇಕು’ ಎಂದೂ ಹೇಳಿದರು. ಅಲ್ಲದೇ, ಲೆನ್ಸ್ ಕಾರ್ಟ್ ಕಂಪೆನಿಯ ಹಿಂದೂ ಉದ್ಯೋಗಿಗಳ ಹಣೆಗೆ ತಿಲಕ ಮತ್ತು ಸಿಂಧೂರ ಹಚ್ಚಿದರು. ಸ್ವತಃ ತಾನೇ ಸಿಂಧೂರ ಹಚ್ಚಿ ಅಂಗಡಿ ಪ್ರವೇಶಿಸಿದರು. ಅಂದಹಾಗೆ,
ಈ ಮೂರೂ ಘಟನೆಗಳ ಉದ್ದೇಶ ಅನ್ಯಾಯವನ್ನು ಪ್ರಶ್ನಿಸುವುದೇ ಆಗಿದ್ದರೂ ಪ್ರಶ್ನಿಸುವ ವಿಧಾನದಲ್ಲಿ ಈ ಮೂರರಲ್ಲಿ ಒಂದು ಪ್ರಮುಖ ವ್ಯತ್ಯಾಸ ಇದೆ. ಘಟನೆ 1 ಮತ್ತು 2ರಲ್ಲಿ ವ್ಯಕ್ತವಾದ ಆಕ್ರೋಶ ಸಾತ್ವಿಕವಾದದ್ದು. ರಸ್ತೆಯಲ್ಲಿ ಪ್ರತಿಭಟಿಸುತ್ತಿದ್ದವರನ್ನು ಪ್ರಶ್ನಿಸಿದ ಮಹಿ ಳೆಯ ದೇಹಭಾಷೆ ಮತ್ತು ಮಾತಿನಲ್ಲಿ ಅಪಾರ ಆಕ್ರೋಶ ಇತ್ತಾದರೂ ಪ್ರತಿಭಟಿಸು ತ್ತಿದ್ದವರ ಧರ್ಮವನ್ನು ಅವರು ಎಲ್ಲೂ ತರಾಟೆಗೆ ತೆಗೆದುಕೊಳ್ಳಲಿಲ್ಲ. ಹೋಗಿ ಮಂದಿರದಲ್ಲಿ ಪ್ರತಿಭಟಿಸಿ ಎಂದು ಹೇಳ ಲಿಲ್ಲ. ರಸ್ತೆಯನ್ನು ಬ್ಲಾಕ್ ಮಾಡಿ ಪ್ರತಿಭಟಿಸುವುದಕ್ಕೆ ಹಿಂದೂ ಧರ್ಮ ಅನುಮತಿಸುತ್ತದೆಯೇ ಎಂದೂ ಕೇಳಲಿಲ್ಲ. ಅದರ ಬದಲು ಭಾರತದ ಕಾನೂನಿನ ಬಗ್ಗೆ ಉಲ್ಲೇಖಿಸಿದರು. ನಾಗರಿಕರಿಗೆ ಆಗುವ ತೊಂದರೆಯ ಬಗ್ಗೆ ವಿವರಿಸಿದರು.
ಬೆಂಗಳೂರಿನ ಪ್ರಕರಣದಲ್ಲೂ ಇದುವೇ ನಡೆಯಿತು. ಮುಸ್ಲಿಮ್ ವ್ಯಕ್ತಿಯನ್ನು ಪಾಕಿಸ್ತಾನಿ, ಭಯೋತ್ಪಾದಕ ಎಂದು ನಿವೃತ್ತ ಸೇನಾಧಿಕಾರಿ ಮತ್ತು ಪತ್ನಿ ನಿಂದಿಸಿದರು. ಅದನ್ನು ಪ್ರಶ್ನಿಸಿದವರು ಸೇನಾಧಿಕಾರಿಯ ಧಾರ್ಮಿಕ ಐಡೆಂಟಿಟಿಯನ್ನು ಗುರಿ ಮಾಡಿ ಆಕ್ಷೇಪಿಸಲಿಲ್ಲ. ನೀನು ಹಿಂದೂ, ನೀನು ಭಯೋತ್ಪಾದಕ ಎಂದೂ ಹೇಳಲಿಲ್ಲ. ಅದರ ಬದಲು ಕರ್ನಾಟಕದ ಸೌಹಾರ್ದ ಪರಂಪರೆಯನ್ನು ನೆನಪಿಸಿದರು. ನಿಮ್ಮದು ಕೊಳಕು ಆಲೋಚನೆ ಎಂದು ಹೇಳಿದರು. ಉತ್ತರ ಭಾರತದ ಮನಸ್ಥಿತಿಯನ್ನು ಇಲ್ಲಿ ಪ್ರದರ್ಶಿಸ ಬೇಡಿ ಎಂದು ತಾಕೀತು ಮಾಡಿದರು. ಆದರೆ,
3ನೇ ಘಟನೆ ಇದಕ್ಕೆ ತೀರಾ ತದ್ವಿರುದ್ಧವಾಗಿದೆ. ಲೆನ್ಸ್ ಕಾರ್ಟ್ ಎಂಬ ಬೃಹತ್ ಕಂಪೆನಿಯ ಸಿಇಓ ಮುಸ್ಲಿಮ್ ಅಲ್ಲ. ಈ ಲೆನ್ಸ್ ಕಾರ್ಟ್ಗೆ ದೇಶದಾದ್ಯಂತ ನೂರಾರು ಶಾಪ್ಗಳಿವೆ. ಅದರಲ್ಲಿ ಮುಂಬೈಯಲ್ಲಿರುವುದೂ ಒಂದು. ಮೊಹ್ಸಿನ್ ಇದರ ಮ್ಯಾನೇಜರ್. ಹಾಗಂತ, ದೇಶದಾದ್ಯಂತ ಇರುವ ಶಾಪ್ಗಳ ಮ್ಯಾನೇಜರ್ಗಳೆಲ್ಲ ಮುಸ್ಲಿಮರು ಎಂದು ಇದರರ್ಥ ಅಲ್ಲ. ಆದರೆ, ನಾಝಿಯಾ ಇಲಾಹಿಯ ಅಷ್ಟೂ ಮಾತುಗಳಲ್ಲಿ ಕಂಪೆನಿ ಸಿಇಓ ಬನ್ಸಲ್ ಅವರ ಬಗ್ಗೆ ಯಾವ ಆಕ್ರೋಶವೂ ಇಲ್ಲ. ಅವರ ಹೆಸರನ್ನೂ ಅವರು ಉಲ್ಲೇಖಿಸುವುದಿಲ್ಲ. ಅದರ ಬದಲು ಉದ್ದಕ್ಕೂ ಮುಹ್ಸಿನ್ನನ್ನು ಮತ್ತು ಅವರ ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಾ ಮಾತಾಡುತ್ತಾರೆ. ಬಿಂದಿ, ತಿಲಕ ಇತ್ಯಾದಿಗಳ ಮೇಲೆ ಕಂಪೆನಿ ನಿರ್ಬಂಧ ಹೇರಿರುವುದಕ್ಕೆ ಮುಂಬೈಯ ಸಾಮಾನ್ಯ ಶಾಪ್ನ ಮ್ಯಾನೇಜರ್ ಕಾರಣ ಎಂದೇ ಹೇಳುತ್ತಾರೆ. ಮುಸ್ಲಿಮರಿಗೆ ಉದ್ಯೋಗ ಕೊಡಬಾರದು ಎಂದೂ ಹೇಳುತ್ತಾರೆ. ತಿಲಕದ ಬಗ್ಗೆ ಮಾತಾಡಲು ಬಂದವರು ಉದ್ದಕ್ಕೂ ತಿಲಕ ಬಿಟ್ಟು ಇಸ್ಲಾಮ್, ಮುಸ್ಲಿಮರ ಬಗ್ಗೆಯೇ ಮಾತಾಡುತ್ತಾರೆ.
ನಿಜವಾಗಿ,
ನಾಗರಿಕ ಪ್ರತಿಭಟನೆಗೂ ಬಿಜೆಪಿ ಪ್ರತಿಭಟನೆಗೂ ನಡುವೆ ಇರುವ ವ್ಯತ್ಯಾಸ ಇದು. ಬಿಜೆಪಿಯ ಸಮಸ್ಯೆ ಏನೆಂದರೆ, ಅದಕ್ಕೆ ಅದರದ್ದೇ ಆದ ಕಾರ್ಯಕರ್ತರಿಲ್ಲ. ಅದರ ಕಾರ್ಯಕರ್ತರೆಲ್ಲ ಸಂಘಪರಿ ವಾರದ ಕಾರ್ಯಕರ್ತರು. ಸಂಘಪರಿವಾರ ಹುಟ್ಟಿಕೊಂಡಿರುವುದೇ ಧರ್ಮ ರಕ್ಷಣೆಯ ಹೆಸರಲ್ಲಿ. ಈ ಪರಿವಾರದ ಅತಿದೊಡ್ಡ ಶಕ್ತಿ ಏನೆಂದರೆ, ಮುಸ್ಲಿಮರು ಮತ್ತು ಕ್ರೈಸ್ತರು. ಈ ಎರಡೂ ಧರ್ಮೀಯರನ್ನು ಗುರಿ ಮಾಡಿಕೊಂಡೇ
ಈ ಪರಿವಾರ ಚಟುವಟಿಕೆ ನಡೆಸುತ್ತಾ ಇದೆ. ‘ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕುವುದು, ಮುಸ್ಲಿಮರನ್ನು ಗುರಿ ಮಾಡಿ ದಾಳಿ ಮಾಡುವುದು, ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವುದು..’ ಇತ್ಯಾದಿ ಹತ್ತು-ಹಲವು ಘೋಷಣೆ ಮತ್ತು ಬೆದರಿಕೆಗಳೊಂದಿಗೆ ಇವು ಸದಾ ಚಟುವಟಿಕೆಯಲ್ಲಿರುತ್ತವೆ.
ಇಂಥ ಹಿನ್ನೆಲೆಯಲ್ಲಿರುವ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ಎಂಬ ರಾಜಕೀಯ ಪಕ್ಷದ ಕಾರ್ಯಕರ್ತರೂ ಆದಾಗ ಏನಾಗಬಹುದೋ ಅದುವೇ ಈಗ ಸಂಭವಿಸುತ್ತಾ ಇದೆ. ನಾಝಿಯಾ ಇಲಾಹಿ ಜೊತೆ ಲೆನ್ಸ್ ಕಾರ್ಟ್ ಶೋರೂಮ್ ಪ್ರವೇಶಿಸಿದವರು ಏಕ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರೂ ಹೌದು, ಸಂಘಪರಿವಾರದ ಕಾರ್ಯಕರ್ತರೂ ಹೌದು. ಇಂಥ ಸ್ಥಿತಿಯಲ್ಲಿ ಬಿಜೆಪಿಯು ತನ್ನನ್ನು ಧರ್ಮದ್ವೇಷಿಯಲ್ಲ ಮತ್ತು ಸಬ್ಕಾ ಸಾಥ್ ಎಂದು ಬಿಂಬಿಸುವುದಕ್ಕೆ ಏನರ್ಥ ಇದೆ?
ಸಬ್ಕಾ ಸಾಥ್ ಅನ್ನು ಸಮಾಜದಲ್ಲಿ ನಿಜ ಮಾಡಿ ತೋರಿಸಬೇಕಾದ ವರು ಅದರ ಕಾರ್ಯಕರ್ತರು. ಆದರೆ, ಸಬ್ ಕಾ ಸಾಥ್ನಲ್ಲಿ ನಂಬಿಕೆ ಇಟ್ಟಿರುವ ಕಾರ್ಯಕರ್ತರು ಬಿಜೆಪಿಗೆ ಇಲ್ಲವೇ ಇಲ್ಲ. ತನ್ನ ಪಕ್ಷದ ಪ್ರಣಾಳಿಕೆಗೆ ಪೂರಕವಾದ ಕಾರ್ಯಕರ್ತರ ಪಡೆಯನ್ನು ಬಿಜೆಪಿ ರಚಿಸಿಯೇ ಇಲ್ಲ. ಒಂದುವೇಳೆ, ಸಂಘಪರಿವಾರ ಬಿಜೆಪಿಯಿಂದ ದೂರ ಸರಿದರೆ ಕಾರ್ಯಕರ್ತರು ಶೂನ್ಯವಾಗಿರುವ ಮತ್ತು ನಾಯಕರು ಮಾತ್ರ ಇರುವ ಪಕ್ಷವಾಗಿ ಬಿಜೆಪಿ ಮಾರ್ಪಡಬಹುದು. ಆದರೆ,
ಕಾಂಗ್ರೆಸ್ ಹಾಗಲ್ಲ. ಡಿಎಂಕೆ, ತೃಣಮೂಲ, ಜೆಡಿಎಸ್, ಜೆಡಿಯು, ಟಿಡಿಪಿ ಇತ್ಯಾದಿ ಪಕ್ಷಗಳೂ ಹಾಗಲ್ಲ. ಇವುಗಳಿಗೆಲ್ಲ ತಮ್ಮದೇ ಆದ ಕಾರ್ಯಕರ್ತರಿದ್ದಾರೆ. ಪಕ್ಷದ ಸಿದ್ಧಾಂತವನ್ನು ತಿಳಿದಿರುವ ಮತ್ತು ಪ್ರಣಾಳಿಕೆಯನ್ನು ಒಪ್ಪಿರುವ ಕಾರ್ಯಕರ್ತರು ಇವರಾಗಿರುವುದರಿಂದ ಇವರ ವರ್ತನೆಯಲ್ಲೂ ಅದು ಪ್ರತಿಫಲನವಾಗುವುದು ಸಹಜ. ಸಾಮಾನ್ಯವಾಗಿ,
ನಾಯಕ ಮಾತಾಡುವಾಗ ಕಾರ್ಯಕರ್ತರ ಭಾವನೆಯನ್ನು ಗಮನದಲ್ಲಿಡುತ್ತಾನೆ/ಳೆ. ಅವರಲ್ಲಿರುವ ಆವೇಶವನ್ನು ಹಾಗೆಯೇ ಉಳಿಸಿಕೊಳ್ಳುವುದು ಮತ್ತು ಉತ್ಸಾಹ ತಗ್ಗದಂತೆ ನೋಡಿಕೊಳ್ಳುವು ದನ್ನು ನಾಯಕ ಮಾಡುತ್ತಿರುತ್ತಾನೆ. ಸಾಮಾನ್ಯ ಕಾರ್ಯಕರ್ತರನ್ನು ಸದಾ ಬೆಂಬಲಿಗರಾಗಿ ಉಳಿಸಿಕೊಳ್ಳುವುದಕ್ಕೆ ಕೆಲವೊಮ್ಮೆ ಅತಿರೇಕದ ನಡವಳಿಕೆಗೂ ಇಳಿಯುತ್ತಾನೆ. ಕಾರ್ಯಕರ್ತರ ಎದುರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಮತ್ತು ಕಾರ್ಯಕರ್ತರ ಮುಂದೆಯೇ ಅಧಿಕಾರಿಗೆ ಕರೆ ಮಾಡಿ ‘ಬೆವರಿಳಿಸುವುದು’ ಇತ್ಯಾದಿಗಳೆಲ್ಲದರ ಹಿಂದೆ ಇಂಥ ಉದ್ದೇಶವೇ ಇರುತ್ತದೆ. ಇಂಥ ಅತಿರೇಕದ ವರ್ತನೆಯನ್ನು ಎಲ್ಲ ಪಕ್ಷದ ನಾಯಕರೂ ಮಾಡುತ್ತಾರೆ. ಆದರೆ,
ಬಿಜೆಪಿ ಕಾರ್ಯಕರ್ತರಿಗೆ ಇವು ಸಾಕಾಗುವುದಿಲ್ಲ. ಯಾಕೆಂದರೆ, ಅವರು ಬರೇ ಬಿಜೆಪಿ ಕಾರ್ಯಕರ್ತರಲ್ಲ. ಸಂಘಪರಿವಾರದ ಕಾರ್ಯಕರ್ತರು. ಅವರನ್ನು ಸದಾ ಜೋಶ್ ನಲ್ಲಿಡಬೇಕಾದರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಷ್ಟೇ ಸಾಕಾಗುವುದಿಲ್ಲ. ಮುಸ್ಲಿಮರನ್ನು ತರಾಟೆಗೆ ತೆಗೆದುಕೊಳ್ಳ ಬೇಕು. ಅವರ ಆಚಾರ-ವಿಚಾರಗಳನ್ನು ಪ್ರಶ್ನಿಸಬೇಕು. ಬಹಿಷ್ಕಾರದ ಮಾತಾಡಬೇಕು. ಮುಸ್ಲಿಮರನ್ನು ಅತ್ಯಂತ ತೀವ್ರವಾಗಿ ಮತ್ತು ತೀಕ್ಷ್ಣವಾಗಿ ಯಾರು ನಿಂದಿಸುತ್ತಾರೋ ಅವರನ್ನೇ ಈ ಕಾರ್ಯಕರ್ತರು ಪ್ರಖರ ನಾಯಕನಾಗಿ ಪರಿಗಣಿಸುತ್ತಾರೆ. ಅಂಥವರಿಗೆ ಹೆಚ್ಚು ಬೆಂಬಲ ಮತ್ತು ಚಪ್ಪಾಳೆ ಸಿಗುತ್ತದೆ. ಆದ್ದರಿಂದ, ನಾಝಿಯಾ ಇಲಾಹಿಯಂಥ ನಾಯಕಿ ಕೂಡಾ ಹಣೆಗೆ ತಿಲಕ ಇಟ್ಟುಕೊಂಡೇ ಲೆನ್ಸ್ ಕಾರ್ಟ್ ಪ್ರವೇಶಿಸಬೇಕಾಗುತ್ತದೆ.
ಮುಸ್ಲಿಮ್ ಹೆಸರಿದ್ದೂ ಹಣೆಗೆ ತಿಲಕ ಇಟ್ಟುಕೊಂಡಿದ್ದಾನೆ ಎಂದು ಬಿಂಬಿಸುವುದರಿಂದ ಕಾರ್ಯಕರ್ತರು ರೋಮಾಂಚನಗೊಳ್ಳುತ್ತಾರೆ ಅನ್ನುವುದು ಅವರಿಗೆ ಗೊತ್ತಿದೆ. ಯಾಕೆಂದರೆ, ಅವರ ಜೊತೆಗಿರುವವರು ಅವರ ಪಕ್ಷದ ಕಾರ್ಯಕರ್ತರಲ್ಲ. ಆದರೆ ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳ ನಾಯಕರಿಗೆ ಇಂಥ ಒತ್ತಡ ಇರುವುದಿಲ್ಲ. ಲೆನ್ಸ್ ಕಾರ್ಟ್ ಕಂಪೆನಿಯ ತಾರತಮ್ಯ ನಿಯಮವನ್ನು ಪ್ರಶ್ನಿಸುವುದಕ್ಕೆ ಬಿಜೆಪಿಯೇತರ ಪಕ್ಷಗಳ ಮುಸ್ಲಿಮ್ ನಾಯಕ ಶೋರೂಮ್ ಪ್ರವೇಶಿಸುವಾಗ ತಿಲಕ ಇಟ್ಟು ಪ್ರವೇಶಿಸುವುದಿಲ್ಲ. ಯಾಕೆಂದರೆ, ಅಂಥ ಕ್ರಮದಿಂದ ರೋಮಾಂಚಿತರಾಗುವ ಕಾರ್ಯಕರ್ತರ ಪಡೆ ಅವರಿಗಿರುವುದಿಲ್ಲ. ಅಂದಹಾಗೆ,
ಆರಂಭದಲ್ಲಿ ಉಲ್ಲೇಖಿಸಲಾದ ಮೂರೂ ಘಟನೆಗಳು ಸದ್ಯದ ಭಾರತದ ಚಿತ್ರವನ್ನು ಕಟ್ಟಿಕೊಡುತ್ತದೆ. ಪ್ರತಿಭಟನೆ ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದನ್ನೂ ವಿವರಿಸುತ್ತದೆ. ಮಾತ್ರವಲ್ಲ, ದೇಶವನ್ನಾಳುವ ಬೃಹತ್ ಪಕ್ಷವೊಂದು ತನ್ನದೇ ಆದ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಳ್ಳದ ಕಾರಣ ಎದುರಿಸುತ್ತಿರುವ ಸವಾಲುಗಳಿಗೂ ಕನ್ನಡಿ ಹಿಡಿಯುತ್ತದೆ.












