ಆರು ತಿಂಗಳ ಹಿಂದೆಯೇ ಭಯೋತ್ಪಾದಕ ನಾಯಕರಿಗೆ ಬಲೆ ಬೀಸಿದ್ದ ಸೇನೆ: ಕಾಶ್ಮೀರದಲ್ಲಿ ಭಾರತೀಯ ಪಡೆಗಳಿಂದ ಉಗ್ರ ಕಮಾಂಡರ್ ಹತ್ಯೆ

0
581

ಸನ್ಮಾರ್ಗ ವಾರ್ತೆ

ಶ್ರೀನಗರ, ಮೇ,7: ಕಳೆದ ಆರು ತಿಂಗಳಿನಿಂದ ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಹಿಜ್ಬುಲ್ ಮುಜಾಹಿದ್ದೀನ್ ರಿಯಾಝ್ ಅವರ ಹಿಂದೆ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಿಸುತ್ತಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಐಜಿ ವಿಜಯ್ ಕುಮಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಲ್ಲಾ ಮಾಹಿತಿಯನ್ನು ಪಡೆದ ನಂತರ ಸಂಪೂರ್ಣ ಯೋಜನೆಯೊಂದಿಗೆ ಆತನ ಮೇಲೆ ಗುಂಡು ಹಾರಿಸಲಾಯಿತು. ನಾಯಕನು ಅಡಗಿರುವ ಎಲ್ಲಾ ಸ್ಥಳಗಳನ್ನು ಕಂಡು ಹಿಡಿದ ನಂತರ, ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು ಎಂದವರು ಹೇಳಿದರು.

ಮೊದಲು ಅವನ ಸಹಚರರು ಸಿಕ್ಕಿಬಿದ್ದರು. ನಂತರ ಬೇಗ್‌ಪೊರಾದಲ್ಲಿ ಅವನ ಅಡಗುದಾಣವನ್ನು ದೃಢ ಪಡಿಸಲಾಯಿತು. ಇದು ಅವರ 7 ನೇ ಬೇಸ್ ಆಗಿದ್ದು, ಇದು ನಾಲ್ಕು ಬದಿಗಳಿಂದ ಆವೃತವಾಗಿತ್ತು. ಅವರ ಕಡೆಯಿಂದ ಮೊದಲು ಗುಂಡಿನ ದಾಳಿ ಪ್ರಾರಂಭವಾಯಿತು. ಪ್ರತೀಕಾರವಾಗಿ ಭದ್ರತಾ ಪಡೆಗಳು ದಾಳಿಕೋರರನ್ನು ಗುಂಡಿಕ್ಕಿ ಹತ್ಯೆಗೈದರು.

ಕಳೆದ 4 ತಿಂಗಳಲ್ಲಿ ಭಯೋತ್ಪಾದಕರ ವಿರುದ್ಧ ಸೇನೆಯು 27 ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಐಜಿ ಕುಮಾರ್ ಹೇಳಿದ್ದಾರೆ.

ಭಯೋತ್ಪಾದಕ ಸಂಘಟನೆಗಳ ಎಲ್ಲ ನಾಯಕರನ್ನು ನಿರ್ಮೂಲನೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು ಎಂದಿದ್ದಾರೆ.

ಭಯೋತ್ಪಾದಕರನ್ನು ಹೆಕ್ಕಿ ಹೆಕ್ಕಿ ನಿರ್ಮೂಲನೆ ಮಾಡುತ್ತೇವೆ. ಅವರ ಚಿತ್ರವನ್ನು ನೋಡುವ ಮೂಲಕ ಇತರರು ಭಯೋತ್ಪಾದನೆಯ ಹಾದಿಯನ್ನು ಹಿಡಿಯಲಾರರು. ಇಂತಹ ಕಾರ್ಯಾಚರಣೆಗಳು ಭಯೋತ್ಪಾದಕ ಸಂಘಟನೆಗಳನ್ನು ಕಡಿಮೆ ಮಾಡುತ್ತದೆ ಎಂದರು.

ಬುಧವಾರ ಕಾಶ್ಮೀರದ ಭದ್ರತಾ ಪಡೆಗಳು ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಹಿಜ್ಬುಲ್ ಮುಜಾಹಿದ್ದೀನ್ ರಿಯಾಝ್ ನಾಯಕ್‌ನನ್ನು ಕಾರ್ಯಾಚರಣೆ ನಡೆಸುವ ಮೂಲಕ ಕೊಂದಿತ್ತು. ಈತನನ್ನು ಎರಡು ವರ್ಷಗಳ ಹಿಂದೆ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಗ್ರಾಮದಲ್ಲಿ ನಾಯಕ್ ಉಪಸ್ಥಿತಿಯ ಕುರಿತು ಆತನ ಕೆಲವು ಸಹಚರರಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದರು.

ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿಯಾಗಲು ಆತ ಪುಲ್ವಾಮಾದ ಬೆಗ್ಪೊರಾ ಗ್ರಾಮಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ನಾಯಕ್ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯು ಸಫಲವಾಗಿದೆ.

ಉಗ್ರರ ಶವಗಳನ್ನು ಹೂಳಲಾಗಿರುವ ಸೋನ್‌ಮಾರ್ಗ್‌ನ ಸ್ಮಶಾನದಲ್ಲಿ ಭದ್ರತಾ ಪಡೆಯು ನಾಯಕ್ ಶವವನ್ನು ಆತನ ಕುಟುಂಬದ ಐವರು ಸದಸ್ಯರ ಸಮ್ಮುಖದಲ್ಲಿ ಸಮಾಧಿ ಮಾಡಿದೆ. ನಾಯಕ್ ಸಾವಿನ ಸುದ್ದಿ ಹರಡುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ದುಷ್ಕರ್ಮಿಗಳು ಬೀದಿಗಿಳಿದು ಗುಂಡು ಹಾರಿಸಲಾರಂಭಿಸಿದರು. ಆದರೆ, ಅನಿಯಂತ್ರಿತ ಜನಸಮೂಹವನ್ನು ಪೊಲೀಸರು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.