ಲಂಡನ್,ಜೂ.7: ಹವಮಾನ ಬದಲಾವಣೆಯ ಕುರಿತು ಭಾರತ, ಚೀನಾ, ರಷ್ಯಗಳ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಡ ಕಾರಿದ್ದಾರೆ. ಚೀನ,ರಷ್ಯಾ, ಭಾರತ ಮತ್ತು ಅಂತಹ ಇತರ ಕೆಲವು ದೇಶಗಳಲ್ಲಿ ಶುದ್ಧ ಗಾಳಿ,ನೀರಿಲ್ಲ. ಅವರಿಗೆ ಮಲಿನೀಕರಣದ ಕುರಿತು, ಸ್ವಚ್ಛತೆಯ ಕುರಿತು ಯಾವ ಜ್ಞಾನವೂ ಇಲ್ಲ, ಯಾವ ಜವಾಬ್ದಾರಿಯೂ ಇಲ್ಲ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಆದರೆ ಅಮೆರಿಕದಲ್ಲಿ ಅತ್ಯಂತ ಶುದ್ಧವಾದ ವಾತಾವರಣ ಇದೆ ಎಂದು ಟ್ರಂಪ್ ಹೇಳಿದರು.
ಟ್ರಂಪ್ ಮೂರು ದಿನಗಳ ಸಂದರ್ಶನಕ್ಕಾಗಿ ಬ್ರಿಟನ್ಗೆ ಆಗಮಿಸಿದ್ದು ಅಲ್ಲಿನ ಒಂದು ಟಿವಿ ಚ್ಯಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹವಮಾನ ಕುರಿತ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವ ಕುರಿತು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಚೀನ, ಭಾರತ, ರಷ್ಯಗಳ ಮಲನೀಕರಣ ಅಮೆರಿಕಕ್ಕಿಂತ ಎಷ್ಟೋ ಹೆಚ್ಚು ಪ್ರಮಾಣದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ವರದಿಯ ಆಧಾರದಲ್ಲಿ ಟ್ರಂಪ್ ಟೀಕೆ ಮಾಡಿದ್ದಾರೆ. ಆದರೆ ಜಗತ್ತಿನಲ್ಲಿ ಅತಿಹೆಚ್ಚು ಕಾರ್ಬೊನ್ ಡೈ ಆಕ್ಸೈಡ್ ಹೊರಬಿಡುವ ದೇಶಗಳಲ್ಲಿ ಅಮೆರಿಕ ಕೂಡ ಒಂದಾಗಿದ್ದರೂ ಟ್ರಂಪ್ ತನ್ನ ದೇಶವನ್ನು ಶುದ್ಧ ಪರಿಸರ ಇರುವ ದೇಶವೆಂದು ಹೊಗಳಿದ್ದಾರೆ.
ಬ್ರಿಟನ್ನ ರಾಣಿ ಎಲಿಝಬೆತ್, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮಕ್ರೋನ್, ಜರ್ಮನ್ ಚಾನ್ಸಲರ್ ಆಂಜೆಲ ಮೆರ್ಕಲ್, ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊರನ್ನು ಟ್ರಂಪ್ ಭೇಟಿಯಾಗಿದ್ದಾರೆ.












