ನಿನ್ನನ್ನೇ ಮುಚ್ಚುವೆ: ಟ್ವಿಟರ್‌ಗೆ ಧಮಕಿ ಹಾಕಿದ ಡೊನಾಲ್ಡ್ ಟ್ರಂಪ್!

0
936

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಮೇ.28: ಸಾಮಾಜಿಕ ಮಾಧ್ಯಮಗಳನ್ನೆ ಮುಚ್ಚುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಟ್ರಂಪ್‍ರ ಎರಡು ಟ್ವೀಟ್‍ಗಳು ತಪ್ಪಾಗಿವೆ ಎಂದು ಹಕ್ಕುವಾದಗಳನ್ನು ಬೆಟ್ಟುಮಾಡಿ ಟ್ವಿಟರ್ ಫಾಕ್ಟ್‌ಚೆಕ್ ಲೇಬಲ್‍ಗಳಲ್ಲಿ ಕೊಟ್ಟಿರುವುದಕ್ಕೆ ಕುಪಿತರಾದ ಟ್ರಂಪ್ ಟ್ವಿಟರನ್ನೇ ಮುಚ್ಚುವ ಬೆದರಿಕೆಯೊಡ್ಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುವ ನಕಲಿ ಸಂದೇಶಗಳ ವಿರುದ್ಧ ಕ್ರಮ ಬಲಪಡಿಸುವ ನಿಟ್ಟಿನಲ್ಲಿ ಮೈಕ್ರೋ ಬ್ಲೋಗಿಂಗ್ ಸೈಟ್ ಟ್ವಿಟರ್ ಇತ್ತೀಚೆಗೆ ಅವರ ಪ್ಲಾಟ್‍ಫಾರ್ಮ್‌ನಲ್ಲಿ ಫ್ಯಾಕ್ಟ್ ಚೆಕ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ತಪ್ಪಾದ ವರದಿಗಳನ್ನು ಯಾರೇ ಕೊಟ್ಟರೂ ಅದನ್ನು ಕಂಡು ಹುಡುಕಿ ಅದಕ್ಕೆ ಸಂಬಂಧಿಸಿದ ಸರಿಯಾದ ಸುದ್ದಿಗಳ ಲಿಂಕ್‍ಗಳನ್ನು ನೀಡುವ ಕೆಲಸವನ್ನು ಫ್ಯಾಕ್ಟ್ ಚೆಕ್ಕಿಂಗ್ ವ್ಯವಸ್ಥೆ ಮಾಡಿ ಬಿಡುತ್ತದೆ.

ಈ ರೀತಿಯಲ್ಲಿ ಹಲವು ಟ್ವೀಟ್‍ಗಳಿಗೆ ಟ್ವಿಟರ್ ಫ್ಯಾಕ್ಟ್ ಚೆಕ್ಕಿಂಗ್ ಲೇಬಲ್ ನೀಡತೊಡಗಿದೆ. ಆದರೆ ಪ್ರಮುಖ ನಾಯಕರ ತಪ್ಪಾದ ಸಂದೇಶಗಳ ವಿರುದ್ಧ ಟ್ವಿಟರ್ ಈ ರೀತಿಯಲ್ಲಿ ಕ್ರಮ ಜರಗಿಸುತ್ತಿಲ್ಲ ಎಂಬ ಟೀಕೆಯೂ ಕೇಳಿ ಬಂದಿತ್ತು. ನಕಲಿ ಸುದ್ದಿಗಳು ಮತ್ತು ಸಂದೇಶಗಳನ್ನು ಯಾರೇ ಹಂಚಿದರೂ ಹಿಡಿಯಲು ಹೊರಟ ಟ್ವಿಟರ್ ಟ್ರಂಪ್‍ರ ಕೆಂಗಣ್ಣಿಗೆ ತುತ್ತಾಗಿದೆ.

ಈ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷ ಚುನಾವಣೆಗೆ ಸಂಬಂಧಿಸಿದ ಎರಡು ಟ್ವೀಟ್‍ಗಳನ್ನು ಟ್ವಿಟರ್ ಫ್ಯಾಕ್ಟ್ ಚೆಕ್ ಲೇಬಲ್ ಹಾಕಿತ್ತು. ಅಂಚೆ ಬ್ಯಾಲೆಟ್‍ಗೆ ಸಂಬಂಧಿಸಿದ ಈಗಿನ ಸುಧಾರಣೆಗಳು ಚುನಾವಣೆಯಲ್ಲಿ ಮೋಸ ನಡೆಸುವ ಉದ್ದೇಶದ್ದಾಗಿದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು. ಟಪಾಲು ಬ್ಯಾಲೆಟ್ ವಂಚನೆ ಎಂದು ಹೇಳಿದ ಟ್ರಂಪ್ ಇಂತಹ ಬ್ಯಾಲೆಟ್‍ಗಳು ಕದಿಯಲ್ಪಡಬಹುದು, ವಂಚಿಸಲ್ಪಡಬಹುದು ಎಂದು ಹೇಳಿದ್ದರು. ಆದರೆ, ಅದರ ಕೆಳಗೆ ಮೈಲ್-ಇನ್ ಬ್ಯಾಲೆಟ್‍ನ ವಾಸ್ತವಿಕತೆಗಳನ್ನು ಅರಿಯಿರಿ ಎಂಬ ಸಂದೇಶವನ್ನು ಸೇರಿಸಿ ಟ್ವಿಟರ್ ಸಿಎನ್‍ಎನ್, ವಾಷಿಂಗ್ಟನ್ ಪ್ರೆಸ್ ಪ್ರಕಟಿಸಿದ್ದ ವಾರ್ತೆಗಳನ್ನು ನೀಡಿತ್ತು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.