ಸನ್ಮಾರ್ಗ ವಾರ್ತೆ
ಬೆಲ್ಗ್ರೇಡ್: ಸೆರ್ಬಿಯಾದ ಸಂಸತ್ ಚುನಾವಣೆಯಲ್ಲಿ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅವರ ಸೆರ್ಬಿಯನ್ ಪ್ರೋಗ್ರೆಸಿವ್ ಪಾರ್ಟಿ ಸೋಲು ಕಂಡ ನಂತರ ಸೆರ್ಬಿಯಾದ ಟಿವಿ ಚಾನೆಲ್ ‘ಆರ್ಟಿವಿ ವೊಜ್ವೊಡಿನಾ’ (RTV Vojvodina) ಕ್ಷಮೆಯಾಚಿಸಿದೆ. ತಾವು ಇಷ್ಟು ದಿನ ಆಡಳಿತಾರೂಢ ಪಕ್ಷದ ಪರವಾಗಿ ಏಕಪಕ್ಷೀಯವಾಗಿ ಕಾರ್ಯಾಚರಿಸುತ್ತಿದ್ದೆವು ಎಂದು ಹೇಳಿರುವ ಚಾನೆಲ್, ತನ್ನ ವೀಕ್ಷಕರಲ್ಲಿ ಕ್ಷಮೆ ಕೇಳಿದೆ. ಮಾಧ್ಯಮಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿದ್ದಕ್ಕಾಗಿ ಅಲೆಕ್ಸಾಂಡರ್ ವುಸಿಕ್ ಅವರ ಸರ್ಕಾರವು ತೀವ್ರ ಟೀಕೆಗೆ ಗುರಿಯಾಗಿತ್ತು.
“ನಾವು ವರ್ಷಗಳಿಂದ ನಮ್ಮ ಕರ್ತವ್ಯವನ್ನು ಪೂರೈಸಲು ವಿಫಲರಾಗಿದ್ದೇವೆ. ಇಷ್ಟು ದಿನ ನಾವು ಮೌನವಾಗಿದ್ದೆವು, ಹಲವು ವಿಷಯಗಳನ್ನು ನೋಡದಂತೆ ನಟಿಸಿದೆವು, ಘಟನೆಗಳನ್ನು ಏಕಪಕ್ಷೀಯವಾಗಿ ವರದಿ ಮಾಡಿದೆವು ಮತ್ತು ಕೇಳಬೇಕಾದ ಪ್ರಶ್ನೆಗಳನ್ನು ಕೇಳಲು ವಿಫಲರಾದೆವು. ಅದಕ್ಕಾಗಿ ನಾವು ವೀಕ್ಷಕರಲ್ಲಿ ಕ್ಷಮೆಯಾಚಿಸುತ್ತೇವೆ,” ಎಂದು ಸುದ್ದಿ ವಾಚಕ ಗೊರಾನ್ ಎರರ್ ಹೇಳಿದ್ದಾರೆ. ಈ ವಿವಾದದ ಬೆನ್ನಲ್ಲೇ ಆರ್ಟಿವಿಯ ಹಂಗಾಮಿ ಮುಖ್ಯ ಸಂಪಾದಕ ನೆನಾಡ್ ಸಾಸಿಕ್ ರಾಜೀನಾಮೆ ನೀಡಿದ್ದಾರೆ.
ಚುನಾವಣಾ ಫಲಿತಾಂಶಗಳ ನಂತರ ಅಧ್ಯಕ್ಷರಿಗೆ ನಿಷ್ಠವಾಗಿದ್ದ ಮತ್ತೊಂದು ಟಿವಿ ಚಾನೆಲ್ ‘ಇನ್ಫಾರ್ಮರ್ ಟಿವಿ’ಯ ಕಚೇರಿಯ ಮೇಲೆ ದಾಳಿ ನಡೆದಿದೆ. ದಾಳಿಕೋರರು ಕಚೇರಿಗೆ ನುಗ್ಗಿ ಪತ್ರಕರ್ತರು ಸೇರಿದಂತೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. “ಸೆರ್ಬಿಯಾ ಸ್ವಾತಂತ್ರ್ಯ ಗಳಿಸಿದೆ, ವುಸಿಕ್ ಈಗ ಎಲ್ಲಿದ್ದಾರೆ?” ಎಂದು ಅವರು ಕೇಳುತ್ತಿದ್ದರು.
ಸೆರ್ಬಿಯಾದ ಈ ಚುನಾವಣಾ ಫಲಿತಾಂಶಗಳನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಎರಡು ವರ್ಷಗಳಿಂದ ನಡೆಯುತ್ತಿದ್ದ ಸಾರ್ವಜನಿಕ ಪ್ರತಿಭಟನೆಗಳ ಮುಂದುವರಿದ ಭಾಗವಾಗಿ ನೋಡಲಾಗುತ್ತಿದೆ. 250 ಸದಸ್ಯರ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ, ವುಸಿಕ್ ಅವರ ಸೆರ್ಬಿಯನ್ ಪ್ರೋಗ್ರೆಸಿವ್ ಪಾರ್ಟಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಸುಮಾರು 17 ಲಕ್ಷ ಮತಗಳನ್ನು ಮಾತ್ರ ಗೆಲ್ಲಲು ಶಕ್ತವಾಯಿತು. ವಿದ್ಯಾರ್ಥಿಗಳು ರೂಪಿಸಿದ ವಿರೋಧ ಪಕ್ಷಗಳ ಒಕ್ಕೂಟವಾದ ‘ಸ್ಟೂಡೆಂಟ್ ಲಿಸ್ಟ್’ 22 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿತು. ಸ್ಟೂಡೆಂಟ್ ಲಿಸ್ಟ್ 140 ಸ್ಥಾನಗಳನ್ನು ಮತ್ತು ವುಸಿಕ್ ಅವರ ಪಕ್ಷವು 103 ಸ್ಥಾನಗಳನ್ನು ಗೆದ್ದುಕೊಂಡಿದೆ.
ಮಾಧ್ಯಮ ಕ್ಷೇತ್ರದಲ್ಲಿನ ಅಸಮತೋಲನವನ್ನು ಸರಿಪಡಿಸುವುದು ಮತ್ತು ಸಾರ್ವಜನಿಕ ರಂಗದ ಪ್ರಸಾರಕರನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸುವುದು ‘ಸ್ಟೂಡೆಂಟ್ ಲಿಸ್ಟ್’ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು. ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಆಡಳಿತದಲ್ಲಿ ಬದಲಾವಣೆ ತರುವುದಾಗಿ ಸ್ಟೂಡೆಂಟ್ ಲಿಸ್ಟ್ ಭರವಸೆ ನೀಡಿತ್ತು.
https://x.com/nexta_tv/status/2114994949145952265/video/1?t=6












