ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಉತ್ತರ ಪ್ರದೇಶದ ಗಾಝಪುರ ಗಡಿಯಲ್ಲಿ ರೈತರ ಮೇಲೆ ದಾಳಿಗಿಳಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ರೈತರು ನೀಡಿದ ದೂರಿನಲ್ಲಿ ಉತ್ತರ ಪ್ರದೇಶ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ದೂರು ನೀಡಿತ್ತು. ತೊಂದರೆ ನೀಡುವುದು, ಕ್ರಿಮಿನಲ್ ಬೆದರಿಕೆ ಇತ್ಯಾದಿ ಆರೋಪವನ್ನು ಬಿಜೆಪಿ ಕಾರ್ಯಕರ್ತರ ಮೇಲೆ ಹೊರಿಸಲಾಗಿದೆ.
ಬುಧವಾರ ಬೆಳಗ್ಗೆ 10:30ಕ್ಕೆ ಕೋಲು ಮತ್ತು ಆಯುಧಗಳೊಂದಿಗೆ ಬಂದ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ದಾಳಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಬಿಜೆಪಿ ಕಾರ್ಯಕರ್ತರು , ಬೆಂಬಲಿಗರು ಪ್ರತಿಭಟನಾ ಸ್ಥಳದ ಸಮೀಪ ಬಂದು ಗಲಾಟೆ ಮಾಡಿ ರೈತರಿಗೆ ತೊಂದರೆ ಮಾಡಿದ್ದಾರೆ. ನಂತರ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುವ ರೈತರನ್ನು ಪೊಲೀಸರ ಮುಂದೆಯೇ ಹೊಡೆದು ಓಡಿಸಿದರೆಂದು ಅವರು ಹೇಳಿದರು.
ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಜರಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಅಕ್ರಮ ನಡೆದ ಬೆನ್ನಿಗೆ ಪ್ರತಿಭಟನೆ ನಡೆಸುತಿತರುವ 200ರಷ್ಟು ಕಿಸಾನ್ ಯೂನಿಯನ್‍ನ ಕಾರ್ಯಕರ್ತರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ವಾಲ್ಮೀಕಿ ನೀಡಿದ ದೂರಿನಲ್ಲಿ ರೈತರ ವಿರುದ್ಧ ಕೌಶಾಂಬಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.












