ವರ್ಣ ತಾರತಮ್ಯಕ್ಕೆ ಬಲಿಯಾದ ಜಾರ್ಜ್ ಫ್ಲಾಯಿಡ್‍ರ ಕುಟುಂಬಕ್ಕೆ 27 ಮಿಲಿಯನ್ ಡಾಲರ್ ನಷ್ಟ ಪರಿಹಾರ

0
551

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್ : ವರ್ಣ ತಾರತಮ್ಯ ಕ್ರೋಧದಲ್ಲಿ ಪೊಲೀಸರು ಮೊಣ ಕಾಲಿನಿಂದ ಕೊರಳು ಹಿಸುಕಿದ ಹಿನ್ನೆಲೆಯಲ್ಲಿ ಮೃತಪಟ್ಟ ಜಾರ್ಜ್ ಫ್ಲಾಯಿಡ್ ಕುಟುಂಬಕ್ಕೆ 27 ಮಿಲಿಯನ್ ಡಾಲರ್ ( ಭಾರತದ ಸುಮಾರು 300 ಕೋ. ರೂಪಾಯಿಗೂ ಹೆಚ್ಚು) ನಷ್ಟ ಪರಿಹಾರ ದೊರಕಲಿದೆ. ಮಿನಿಯಪೊಲಿಸ್ ಸರಕಾರ, ಪೊಲೀಸ್ ಇಲಾಖೆ ವಿರುದ್ಧ ಜಾರ್ಜ್ ಫ್ಲಾಯಿಡ್ ಕುಟುಂಬ ನೀಡಿದ ಸಿವಿಲ್ ಪ್ರಕರಣ ರಾಜಿಯಲ್ಲಿ ಮುಗಿದಿದ್ದು, ಈ ಮೊತ್ತವು ನಷ್ಟ ಪರಿಹಾರವಾಗಿ ಸಿಗಲಿದೆ ಎಂದು ವರದಿಯಾಗಿದೆ.

ಈ ವಿಷಯವನ್ನು ತಿಳಿಸುವುದಕ್ಕಾಗಿ ಪತ್ರಿಕಾಗೋಷ್ಠಿ ನಡೆಸಲಾಗಿದ್ದು, ಕಪ್ಪು ವರ್ಗದವರ ಜೀವಕ್ಕೂ ಬೆಲೆಯಿದೆ ಎಂದು ಅಟಾರ್ನಿಗಳು ಹೇಳಿದರು. ಸಹೋದರನನ್ನು ಪುನಃ ನೋಡಲು ಸಾಧ್ಯವಾಗಿರುತ್ತಿದ್ದರೆ ನಷ್ಟಪರಿಹಾರ ಮೊತ್ತವನ್ನು ವಾಪಸು ಕೊಡುತ್ತೇವೆ ಎಂದು ಫ್ಲಾಯಿಡ್ ಸಹೋದರ ಹೇಳಿದ್ದಾರೆ. ಜಾಜ್‍ಫ್ಲಾಯಿಡ್‍ರ ಹೆಸರಿನಲ್ಲಿ ಫೌಂಡೇಶನ್ ಆರಂಭಿಸುತ್ತೇವೆ ಎಂದು ಅವರ ಸಹೋದರಿ ಇದೇ ವೇಳೆ ಹೇಳಿದ್ದಾರೆ. ಅಮೇರಿಕಾದ ಇತಿಹಾಸದಲ್ಲಿ ತಪ್ಪು ಸಂಭವಿಸಿದ ಸಾವಿನ ಸಿವಿಲ್ ಪ್ರಕರಣದಲ್ಲಿ ಅತಿದೊಡ್ಡ ಮೊತ್ತದ ರಾಜಿ ಪ್ರಕರಣ ಇದಾಗಿದೆ ಎಂದು ವಕೀಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇ 25, 2020 ರಂದು ಮಿನ್ನಿಯಾಪೋಲಿಸ್ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಅವರು ಮೊಣ ಕಾಲಿನಿಂದ ಕೊರಳು ಹಿಸುಕಿದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದರು. ಇದನ್ನು ಸಾರ್ವಜನಿಕರು ವೀಡಿಯೊದಲ್ಲಿ ಸೆರೆಹಿಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ನಂತರ ಆ ವಿಡಿಯೋ ಜಗತ್ತಿನಾದ್ಯಂತ ಇದು ವೈರಲ್ ಆಗಿತ್ತಲ್ಲದೆ, ಅಮೇರಿಕಾದಲ್ಲಿ ವರ್ಣ ತಾರತಮ್ಯದ ವಿರುದ್ದದ ಬೃಹತ್ ಹೋರಾಟಕ್ಕೂ ಕಾರಣವಾಗಿತ್ತು.

ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಅವರೊಂದಿಗೆ ಇತರ ಮೂವರು ಪೊಲೀಸ್ ಅಧಿಕಾರಿಗಳು ಸಹ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣದ ಸಂಬಂಧ ತನಿಖೆ ಮುಂದುವರೆಯುತ್ತಿದೆ.