ಸನ್ಮಾರ್ಗ ವಾರ್ತೆ
ಕಲಾನೋರ್: ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಶಾಶ್ವತ ಧರಣಿ ಆರಂಭಿಸಿದ್ದಾರೆ. ಪಂಜಾಬಿನ ಕಲಾನೋರ್ ದಾನ ಮಂಡಿಯಲ್ಲಿ ಭತ್ತ ಖರೀದಿಯಲ್ಲಿ ಪ್ರತಿ ಕ್ವಿಂಟಲ್ ಗೆ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ರೊಚ್ಚಿಗೆದ್ದ ರೈತರು ರಸ್ತೆ ತಡೆ ನಡೆಸಿದರು. ನಿಗದಿತ 85 ರೂ. ಕಡಿತದ ಹೊರತಾಗಿಯೂ ಮೂವತ್ತು ರೂಪಾಯಿ ವಸೂಲಿ ಮಾಡುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೃಷಿ ವೆಚ್ಚ ಹೆಚ್ಚುತ್ತಿದೆ. ಡೀಸೆಲ್, ಗೊಬ್ಬರ, ಬೀಜ, ಕ್ರಿಮಿನಾಶಕ ಮತ್ತು ಕೂಲಿ ದುಬಾರಿಯಾಗಿದೆ. ಇದೇವೇಳೆಭತ್ತ ಖರೀದಿ ಮಂಡಿಗಳಲ್ಲಿ ನಡೆಯುತ್ತಿರುವ ಇಂತಹ ಹೆಚ್ಚುವರಿ ವಸೂಲಿಯಿಂದ ರೈತರ ಜೇಬಿನ ಮೇಲೆ ದೊಡ್ಡ ಆರ್ಥಿಕ ಹೊರೆ ಬೀಳುತ್ತಿದೆ. ಆದ್ದರಿಂದ ಈ ಹೆಚ್ಚುವರಿ ಮತ್ತು ಅಕ್ರಮ ವಸೂಲಿಯನ್ನು ಕೂಡಲೇ ನಿಲ್ಲಿಸಬೇಕು, ಈ ಕುರಿತು ಸಮಗ್ರ ತನಿಖೆಯಾಗಬೇಕು ಮತ್ತು ಸಮಸ್ಯೆ ಬಗೆಹರಿಯುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ರೈತರು ಹಟ ಹಿಡಿದಿದ್ದಾರೆ.
ಹೆದ್ದಾರಿ ಬಂದ್ ಆಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಆಡಳಿತ ಯಂತ್ರಕ್ಕೆ ಈ ಸಮಸ್ಯೆಯನ್ನು ಪರಿಹರಿಸುವುದು ಸವಾಲಾಗಿ ಪರಿಣಮಿಸಿದೆ. ಬೆಳೆ ಬೆಳೆಯುವ ವೆಚ್ಚ ಹೆಚ್ಚುತ್ತಿರುವ ಈ ಕಾಲದಲ್ಲಿ ಮಂಡಿಗಳಲ್ಲಿ ಇಂತಹ ಹೆಚ್ಚುವರಿ ವಸೂಲಿಗಳಿಂದ ರೈತರು ಕಂಗಾಲಾಗಿದ್ದಾರೆ.












