ವಾದ್ರಾಗೆ ಅಮೇಥಿಯ ವ್ಯಾಮೋಹ

0
200

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ.10: ಉತ್ತರಪ್ರದೇಶದ ಅಮೇಠಿಯಿಂದ ಸ್ಪರ್ಧಿಸಲು ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಉತ್ಸುಕರಾಗಿದ್ದಾರೆ. ರಾಹುಲ್ ಗಾಂಧಿ ಅಮೇಠಿಯಿಂದ ಸ್ಪರ್ಧಿಸದಿದ್ದರೆ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ತಾನು ಸ್ಪರ್ಧಿಸಲು ಬಯಸುತ್ತೇನೆ ಎಂದು ವಾದ್ರಾ ಇಚ್ಛೆ ತೋಡಿಕೊಂಡಿದ್ದಾರೆ.

ಜನರು ತನ್ನನ್ನು ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ ಎಂದು ವಾದ್ರಾ ಹೇಳಿಕೊಳ್ಳುತ್ತಿದ್ದಾರೆ. ಅಮೇಠಿಯಲ್ಲಿ ಕೆಲವು ಕಡೆ ಅವರ ಕಟೌಟ್‍ಗಳು ಎದ್ದು ನಿಂತಿವೆ ಎಂದು ಕೂಡ ವರದಿಯಾಗಿತ್ತು.

ನೆಹರೂ ಕುಟುಂಬದ ಏಕಸ್ವಾಮ್ಯ ಕ್ಷೇತ್ರವಾಗಿದ್ದ ಅಮೇಥಿಯಲ್ಲಿ ಕಳೆದ ಬಾರಿ ರಾಹುಲ್ ಗಾಂಧಿ ಸೋತಿದ್ದರು. ಅಮೇಥಿ ಹೊರತುಪಡಿಸಿ, ಸೋನಿಯಾ ಗಾಂಧಿ ಸ್ಪರ್ಧಿಸಿದ್ದ ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.

ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಬಹುದು. ಆದರೆ ವಾದ್ರಾರಿಗೆ ಅಮೇಠಿ ಕೊಡಲು ಕಾಂಗ್ರೆಸ್ ಇಷ್ಟಪಡುವುದಿಲ್ಲ.

1999ರಿಂದ ಅಮೇಠಿಯಲ್ಲಿ ತಾನು ಪ್ರಚಾರ ಮಾಡುತ್ತಿದ್ದೇನೆ. ತನಗಾಗಿ ಜನರು ಪೋಸ್ಟರ್ ಅಂಟಿಸುತ್ತಿದ್ದಾರೆ. ದೇಶದೆಲ್ಲೆಡೆ ಕಾಂಗ್ರೆಸ್ಸಿಗರು ಬೆಂಬಲ ಸೂಚಿಸುತ್ತಿದ್ದಾರೆ. ಕಳೆದ ಬಾರಿ ರಾಹುಲ್ ಗಾಂಧಿ ಸೋಲನ್ನು ಈಗ ಇಲ್ಲಿನ ಜನ ತಿದ್ದಲು ಬಯಸಿದ್ದಾರೆ. ತಾನು ಸ್ಪರ್ಧಿಸಿದರೆ ಅಗಾಧ ಬಹುಮತದಿಂದ ಗೆಲ್ಲುವೆ ಎಂದು ವಾದ್ರಾ ಹೇಳುತ್ತಿದ್ದಾರೆ.

ವಾದ್ರಾ ಅವರನ್ನು ಅಮೇಠಿ ಅಥವಾ ಬೇರೆಡೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡುವುದು ಆತ್ಮಹತ್ಯೆ ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅಭಿಪ್ರಾಯ ಪಟ್ಟಿದ್ದಾರೆ. ವಾದ್ರಾ ಅವರ ಆಸೆಗೆ ಕಾಂಗ್ರೆಸ್ ನಾಯಕತ್ವದಲ್ಲಿ ಯಾರೂ ಸಾರ್ವಜನಿಕವಾಗಿ ಸ್ಪಂದಿಸಿಲ್ಲ.

LEAVE A REPLY

Please enter your comment!
Please enter your name here