ಸರಕಾರದ ಅನುಮತಿಯಿಲ್ಲದೆ ಬಿಜೆಪಿಯ ವೇಲ್ ಯಾತ್ರೆ: ತಮಿಳುನಾಡು ಬಿಜೆಪಿ ಅಧ್ಯಕ್ಷನ ಬಂಧನ

0
409

ಸನ್ಮಾರ್ಗ ವಾರ್ತೆ

ಚೆನ್ನೈ: ಅನುಮತಿಯಿಲ್ಲದೆ ‘ವೇಲ್ ಯಾತ್ರೆ’ ನಡೆಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಎನ್.ಮುರುಗನ್‌ರ‌ನ್ನು ಪೋಲೀಸರು ಬಂಧಿಸಿದ್ದಾರೆ. ತಿರುತ್ತಣಿ ಕ್ಷೇತ್ರದ ಸಮೀಪ ಪೋಲೀಸರು ಯಾತ್ರೆ ತಡೆದಿದ್ದಾರೆ. ಬಿಜೆಪಿ ಅಧ್ಯಕ್ಷ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನೂ ಪೋಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿ ಪೋಲಿಸರು ಮತ್ತು ಕಾರ್ಯಕರ್ತರ ನಡುವೆ ಸಣ್ಣ ಸಂಘರ್ಷವೂ ನಡೆದಿದೆ ಎಂಬುದಾಗಿ ವರದಿಯಾಗಿದೆ‌‌.

ಪೂನಮಲ್ಲಿ ಸಮೀಪದಿಂದ ವೇಲ್ ಯಾತ್ರೆ ಆರಂಭಿಸಿದ ಬಿಜೆಪಿ ಅಧ್ಯಕ್ಷನ ವಾಹನವನ್ನು ಪೋಲೀಸರು ತಡೆದಿದ್ದರು. ಪೋಲೀಸರ ವಿರೋಧವನ್ನು ಕಡೆಗಣಿಸಿ ಯಾತ್ರೆ ಮುಂದುವರಿಸಲಾಯಿತು. ಎಲ್ಲಾ ಭಕ್ತರಿಗೂ ಅವರವರ ದೇವರನ್ನು ಆರಾಧಿಸುವ ಅವಕಾಶವಿದೆಯೆಂದೂ, ಭಗವಾನ್ ಮುರುಗನ್ ಯಾತ್ರೆ ನಡೆಸಲು ಅನುಮತಿ ನೀಡಿದೆಯೆಂದೂ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಅಧ್ಯಕ್ಷ ಎನ್. ಮುರುಗನ್ ಸವಾಲೆಸೆದಿದ್ದರು. ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ‘ವೇಲ್ ಯಾತ್ರೆ’ ಗೆ ಅನುಮತಿ ನಿರಾಕರಿಸಿತ್ತು.

ತಮಿಳುನಾಡು ಬಿಜೆಪಿ ಅಧ್ಯಕ್ಷ ಎನ್.ಮುರುಗನ್ ನೇತೃತ್ವದಲ್ಲಿ ಈ ಯಾತ್ರೆ ನಡೆದಿದೆ. ಧರ್ಮದ್ವೇಷ ಮುಂದಿಟ್ಟುಕೊಂಡು ಬಿಜೆಪಿ ವೇಲ್ ಯಾತ್ರೆ ನಡೆಸುತ್ತಿದೆ ಎಂದು ಇತರೆ ಪಕ್ಷದ ನಾಯಕರು ಅಭಿಪ್ರಾಯಪಟ್ಟಿದ್ದಾರೆ.