✍️ ಅಬ್ದುಲ್ಲತೀಫ್ ಆಲಿಯಾ
(ಧಾರ್ಮಿಕ ವಿದ್ವಾಂಸರು ಮತ್ತು ಅಧ್ಯಾಪಕರು)
2012ರಲ್ಲಿ ಸ್ಪೇನ್ನ ಬರ್ಗೋಸ್ ನಗರದಲ್ಲಿ ನಡೆದ ಒಂದು ಕ್ರಾಸ್-ಕಂಟ್ರಿ ರೇಸ್ ಇಡೀ ಜಗತ್ತಿಗೆ ಮಾನವೀಯತೆಯ ಪಾಠವೊಂದನ್ನು ಕಲಿಸಿತು. ಆ ದಿನ ನಡೆದ ಸಣ್ಣ ಘಟನೆಯೊಂದು “ಗೆಲುವಿಗಿಂತ ನೈತಿಕತೆ ದೊಡ್ಡದು” ಎಂಬ ಸಂದೇಶವನ್ನು ಜಗತ್ತಿಗೆ ಸಾರಿತು.
ಆ ರೇಸ್ನಲ್ಲಿ ಕೀನ್ಯಾದ ಓಟಗಾರ ಅಬೆಲ್ ಮುತಾಯ್ ಅವರು ಮೊದಲ ಸ್ಥಾನದಲ್ಲಿದ್ದರು. ಫಿನಿಷಿಂಗ್ ಲೈನ್ ಹತ್ತಿರ ಬಂದಾಗ ಅವರು ತಪ್ಪಾಗಿ 10 ಮೀಟರ್ ಮೊದಲೇ ನಿಂತುಬಿಟ್ಟರು. ತಮಗೆ ಚಿನ್ನ ಸಿಕ್ಕಿದೆ ಎಂದು ಭಾವಿಸಿದರು. ಅವರ ಹಿಂದೆ ಸ್ಪೇನ್ನ ಇವಾನ್ ಫರ್ನಾಂಡಿಸ್ ದ್ವಿತೀಯ ಸ್ಥಾನದಲ್ಲಿದ್ದರು. ಇವಾನ್ ಬಯಸಿದ್ದರೆ ಒಂದು ಕ್ಷಣದಲ್ಲಿ ಅವರನ್ನು ದಾಟಿ ಸುಲಭವಾಗಿ ಪ್ರಥಮ ಸ್ಥಾನ ಗೆಲ್ಲಬಹುದಿತ್ತು. ಆದರೆ ಇವಾನ್ ಹಾಗೆ ಮಾಡಲಿಲ್ಲ. ಬದಲಿಗೆ “ಮುಂದೆ ಓಡಿ, ಲೈನ್ ಇನ್ನೂ ಮುಂದಿದೆ” ಎಂದು ಕೂಗಿ ಹೇಳಿದರು. ಆದರೆ ಕೀನ್ಯಾದ ಮುತಾಯ್ ಅವರಿಗೆ ಅರ್ಥವಾಗದಿದ್ದಾಗ ಹಿಂದಿನಿಂದ ನಿಧಾನವಾಗಿ ತಳ್ಳಿ ಅವರನ್ನು ಫಿನಿಷ್ ಮಾಡಿಸಿದರು. ಹೀಗೆ ಮುತಾಯಿಗೆ ಅರ್ಹವಾದ ಚಿನ್ನದ ಪದಕ ಸಂದಿತು.
ನಂತರ ಪತ್ರಕರ್ತರು ಇವಾನ್ ಅವರನ್ನು ಕೇಳಿದರು, “ನೀವು ಯಾಕೆ ಹೀಗೆ ಮಾಡಿದಿರಿ? ನಿಮಗೆ ಪ್ರಥಮ ಸ್ಥಾನ ಪಡೆಯಬಹುದಿತ್ತಲ್ಲಾ?” ಅದಕ್ಕೆ ಅವರು ಕೊಟ್ಟ ಉತ್ತರ ನಮ್ಮೆಲ್ಲರ ಮನಸ್ಸಿಗೆ ತಟ್ಟುತ್ತದೆ. “ಅದು ಅವನ ಗೆಲುವು. ನಾನು ಅವನನ್ನು ದಾಟಿದ್ದರೆ ಅದು ಹೇಗೆ ನನ್ನ ಪದಕವಾಗುತ್ತಿತ್ತು? ನಾನು ಮನೆಗೆ ಹೋದರೆ ನನ್ನ ತಾಯಿ ಏನು ಹೇಳುತ್ತಿದ್ದರು?” ಎಂದು ಮರುಪ್ರಶ್ನೆ ಹಾಕುತ್ತಾ ಅಂತಹ ಸಾಧನೆ ನನಗೆ ಬೇಕಾಗಿಲ್ಲ ಎಂದು ಹೇಳಿದರು.
ಇಂತಹ ಹಲವಾರು ನೈಜ ಘಟನೆಗಳು ಇಸ್ಲಾಮೀ ಚರಿತ್ರೆಯ ಪುಟಗಳಲ್ಲಿ ಕಾಣ ಬಹುದು. ಇವಾನ್ ಮುಸ್ಲಿಮರಲ್ಲದಿದ್ದರೂ ಅವರ ಈ ನಡೆ ಇಸ್ಲಾಮ್ 1400 ವರ್ಷಗಳಿಂದ ಕಲಿಸುವ 5 ಮಹಾನ್ ನೈತಿಕತೆಗೆ ಹೋಲುತ್ತದೆ.
ನ್ಯಾಯ ಬದ್ಧತೆ: ಕುರ್ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ, “ನಿಶ್ಚಯವಾಗಿಯೂ ಅಲ್ಲಾಹ್ ನಿಮಗೆ ಅಮಾನತುಗಳನ್ನು ಅದರ ಅರ್ಹರಿಗೆ ಹಿಂದಿರುಗಿಸಲು ಆಜ್ಞಾಪಿಸುತ್ತಾನೆ.” ಆ ರೇಸ್ನಲ್ಲಿ ಮೊದಲ ಸ್ಥಾನ ಮುತಾಯ್ ಅವರ ಅರ್ಹತೆ ಆಗಿತ್ತು. ಇವಾನ್ ಅದನ್ನು ಕಸಿದುಕೊಳ್ಳಲಿಲ್ಲ. ನಮ್ಮ ಜೀವನದಲ್ಲೂ ಇಂತಹ ಹಲವು ಪರೀಕ್ಷೆಗಳು ಎದುರಾಗಬಹುದು. ಇನ್ನೊಬ್ಬರ ಕಾಲೆಳೆದು ಅವರ ಪರಿಶ್ರಮದ ಕ್ರೆಡಿಟನ್ನು ನಾವು ತೆಗೆದುಕೊಳ್ಳುವುದು, ಮೋಸದ ಮೂಲಕ ನಾವು ಗೆಲುವು ಸಾಧಿಸುವುದು, ಲಂಚ ಹಾಗೂ ದ್ರೋಹದ ಮೂಲಕ ಇನ್ನೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುವುದು. ಇವೆಲ್ಲವೂ ಅಮಾನತ್ಗೆ ಹಾಗೂ ಆತ್ಮಸಾಕ್ಷಿಗೆ ಮಾಡುವ ದ್ರೋಹವಾಗಿದೆ.
ತ್ಯಾಗ ಮನೋಭಾವ: ಕುರ್ಆನ್ ಸತ್ಯವಿಶ್ವಾಸಿಗಳ ಗುಣವನ್ನು ಹೀಗೆ ವರ್ಣಿಸುತ್ತದೆ, “ಇವರು ತಮ್ಮ ಬಳಿಗೆ ಬಂದವರನ್ನು ಪ್ರೀತಿಸುತ್ತಾರೆ. ಅವರಿಗೆ ನೀಡಲ್ಪಟ್ಟುದರ ಕುರಿತು ಇವರು ಯಾವುದೇ ಆಶೆಯನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಸ್ವತಃ ತಮಗೆ ಅಗತ್ಯವಿದ್ದರೂ ಇತರರಿಗೆ ತಮ್ಮ ಮೇಲೆ ಪ್ರಾಶಸ್ತ್ಯ ನೀಡುತ್ತಾರೆ. ವಾಸ್ತವದಲ್ಲಿ ಯಾರು ತಮ್ಮ ಮನಸ್ಸಿನ ಸಂಕುಚಿತತೆಯಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು.” (ಹಶ್ರ್: 9) ಇವಾನ್ಗೆ ಆ ಪದಕ, ಖ್ಯಾತಿ ಎಲ್ಲವೂ ಬೇಕಿತ್ತು. ಆದರೂ ಅವರು ಮುತಾಯಿ ಯಿಂದ ಅನ್ಯಾಯವಾಗಿ ಕಸಿದುಕೊಳ್ಳಲಿಲ್ಲ. ಇಂದು ನಾವು ಪ್ರಮೋಶನ್ಗಾಗಿ, ಅನರ್ಹ ವಾದ ಸ್ಥಾನಮಾನಗಳಿಗಾಗಿ ಜಗಳವಾಡುತ್ತೇವೆ. ಆದರೆ ನಿಜವಾದ ದೊಡ್ಡ ಮನಸ್ಸು, ಇನ್ನೊಬ್ಬರ ಯಶಸ್ಸಿನಲ್ಲಿ ತನ್ನ ಯಶಸ್ಸನ್ನು ಕಾಣುತ್ತದೆ.
ಸತ್ಯಸಂಧತೆ: ಪ್ರವಾದಿ ಮುಹಮ್ಮದ್(ಸ) ಹೇಳಿದರು, “ಸತ್ಯವು ಸತ್ಕಾರ್ಯದ ಕಡೆಗೆ ಕರೆದೊಯ್ಯುತ್ತದೆ, ಸತ್ಕಾರ್ಯವು ಸ್ವರ್ಗದ ಕಡೆಗೆ ಕರೆದೊಯ್ಯುತ್ತದೆ.” ಇವಾನ್ ಸುಳ್ಳು ಗೆಲುವನ್ನು ಒಪ್ಪಿಕೊಳ್ಳಲಿಲ್ಲ. ಇಸ್ಲಾಮಿನಲ್ಲಿ ಫಲಿತಾಂಶಕ್ಕಿAತ ವಿಧಾನಕ್ಕೆ ಮಹತ್ವ ನೀಡಲಾಗಿದೆ. ಪ್ರಾಮಾಣಿಕವಾಗಿ ಪಡೆದ 50 ಅಂಕಗಳು ಅಥವಾ ಹಣ ಅಲ್ಲಾಹನ ಬಳಿ ಮೌಲ್ಯಯುತ ಹಾಗೂ ಸ್ವೀಕೃತವಾಗುವಂತದ್ದು.
ಅತ್ಯುತ್ತಮ ನಡತೆ: ಕುರ್ಆನ್ ಕೇಳುತ್ತದೆ, “ಉಪಕಾರಕ್ಕೆ ಪ್ರತಿಫಲ ಉಪಕಾರವಲ್ಲದೆ ಬೇರೇನಿದೆ?” ಇದಕ್ಕೆ ಇಹ್ಸಾನ್ ಎಂದು ಹೆಸರು. ಅಂದರೆ ಯಾರೂ ನೋಡದಿದ್ದರೂ ಅಲ್ಲಾಹ್ ನನ್ನನ್ನು ನೋಡುತ್ತಿದ್ದಾನೆ ಎಂಬ ಅರಿವಿನಿಂದ ನಡೆದುಕೊಳ್ಳುವುದು. ಸ್ಟೇಡಿಯಂನಲ್ಲಿ ಯಾರೂ ಇವಾನ್ ಅವರನ್ನು ಒತ್ತಾಯಿಸಲಿಲ್ಲ. ಆದರೂ ಅವರು ಸರಿಯಾದದ್ದನ್ನು ಮಾಡಿದರು. ಅಂಗಡಿಯಲ್ಲಿ ಜಾಸ್ತಿ ಚಿಲ್ಲರೆ ಬಂದಾಗ ವಾಪಸ್ ಕೊಡುವುದು, ತಪ್ಪು ಬಿಲ್ ಬಂದಾಗ ಸರಿಪಡಿಸುವುದು – ಇವೆಲ್ಲವೂ ಇಹ್ಸಾನ್.
ಅಲ್ಲಾಹನ ಭಯ: ಪ್ರವಾದಿ(ಸ) ಎಚ್ಚರಿಸಿದರು, “ಕಿಯಾಮತ್ ದಿನ ಮನುಷ್ಯನ ಪಾದಗಳು 5 ಪ್ರಶ್ನೆಗಳಿಗೆ ಉತ್ತರಿಸದೆ ಮುಂದೆ ಸಾಗುವುದಿಲ್ಲ. ಅದರಲ್ಲಿ ಒಂದು: ನಿನ್ನ ಜ್ಞಾನ ಮತ್ತು ಶಕ್ತಿಯನ್ನು ಯಾವ ದಾರಿಯಲ್ಲಿ ಬಳಸಿದೆ?” ಇವಾನ್ ಹೇಳಿದರು “ನನ್ನ ತಾಯಿ ಏನು ಹೇಳುತ್ತಿದ್ದರು?” ನಾವು ಕೇಳಿಕೊಳ್ಳಬೇಕಾದದ್ದು “ಅಲ್ಲಾಹನ ಮುಂದೆ ಇದರ ಬಗ್ಗೆ ಪ್ರಶ್ನಿಸಿದರೆ ಏನೆಂದು ಉತ್ತರ ಕೊಡಲಿ” ಒಂದು ಪದಕ/ಖ್ಯಾತಿ ಪಡೆಯಲು ಶಾಶ್ವತವಾದ ಪರಲೋಕವನ್ನು ಮಾರಾಟ ಮಾಡುವುದು ಬುದ್ಧಿವಂತಿಕೆಯಲ್ಲ.
ಈ ಪಾಠಗಳನ್ನು ನಾವು ಶಾಲೆಯಲ್ಲಿ, ಕಾಲೇಜಿನಲ್ಲಿ, ವ್ಯಾಪಾರದಲ್ಲಿ, ಉದ್ಯೋಗದಲ್ಲಿ ಮತ್ತು ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ಸ್ನೇಹಿತನ ವಸ್ತು ಬಿದ್ದರೆ ವಾಪಸ್ ಕೊಡುವುದು, ಸಂಘಟನಾ ಕೆಲಸದಲ್ಲಿ ಎಲ್ಲರ ಶ್ರಮ ಒಪ್ಪಿಕೊಳ್ಳುವುದು, ದೋಷಪೂರಿತ ಸರಕು ಮಾರದಿರುವುದು, ಹಿರಿಯರಿಗೆ ಗೌರವ ಕೊಡುವುದು – ಇವೆಲ್ಲವೂ ಇಸ್ಲಾಮಿನ ನೈತಿಕತೆ. ಪ್ರವಾದಿ(ಸ) ಹೇಳಿದರು, “ನಾನು ಉನ್ನತ ನೈತಿಕ ಗುಣಗಳನ್ನು ಪೂರ್ಣ ಗೊಳಿಸಲು ಮಾತ್ರ ಕಳುಹಿಸಲ್ಪಟ್ಟಿದ್ದೇನೆ.”
ಆ ದಿನ ಅಬೆಲ್ ಮುತಾಯ್ ಓಟದಲ್ಲಿ ಗೆದ್ದರು. ಆದರೆ ಇವಾನ್ ಫರ್ನಾಂಡಿಸ್ ಮಾನವೀಯತೆಯಲ್ಲಿ ಗೆದ್ದರು. ಇತಿಹಾಸ ಪದಕ ವಿಜೇತರನ್ನು ಮರೆತರೂ, ನೈತಿಕತೆಯ ವಿಜೇತರನ್ನು ನೆನಪಿಟ್ಟುಕೊಳ್ಳುತ್ತದೆ. ಕಿಯಾಮತ್ ದಿನ ಅಲ್ಲಾಹನ ತಕ್ಕಡಿಯಲ್ಲಿ ಯಾರ “ಪದಕ” ಭಾರವಾಗಿರುತ್ತದೆ? ಮೋಸದಿಂದ ಗೆದ್ದವರದ್ದೇ, ಅಥವಾ ಸತ್ಯಕ್ಕಾಗಿ ತ್ಯಾಗ ಮಾಡಿದವರದ್ದೇ? ಅಲ್ಲಾಹ್ ನಮಗೆಲ್ಲರಿಗೂ ಪ್ರಾಮಾಣಿಕ ಹೃದಯ ಮತ್ತು ತಕ್ವಾದ ಜೀವನವನ್ನು ದಯಪಾಲಿಸಲಿ.












