ಗಾಂಧೀ ಮುಸ್ಲಿಮ್ ವಿರೋಧಿಯಾಗಿದ್ದರೇ? ಭಾಗ-2

0
569

ಸನ್ಮಾರ್ಗ ವಾರ್ತೆ

ಕೆ.ಟಿ. ಹುಸೈನ್

(ಕಳೆದ ಸಂಚಿಕೆಯಿಂದ)
ಗಾಂಧೀಜಿಯವರು ರೂಪಿಸಿದ ಈ ಹಿಂದೂ-ಮುಸ್ಲಿಮ್ ಐಕ್ಯತೆಗೆ ಸ್ವಲ್ಪವೇ ಆಯುಷ್ಯವಿತ್ತು. ಉತ್ತರ ಪ್ರದೇಶದ ಚೌರಿಚೌರಾದಲ್ಲಿ ಹೋರಾಟಗಾರರು ಪೊಲೀಸ್ ಸ್ಟೇಶನ್ ಆಕ್ರಮಿಸಿದ್ದರಿಂದ 1922ರಲ್ಲಿ ಯಾರೊಂದಿಗೂ ಸಮಾಲೋಚಿಸದೆ ಖಿಲಾಫತ್-ಅಸಹಕಾರ ಚಳವಳಿಯನ್ನು ನಿಲ್ಲಿಸಿದರು. ಇದರಿಂದ ಮುಸ್ಲಿಮರಲ್ಲಿ ಬಹುಸಂಖ್ಯೆಯ ಜನರು ಕಾಂಗ್ರೆಸ್‌ನಿಂದ ದೂರವಾದರಲ್ಲದೇ, ಗಾಂಧೀಜಿಯ ಕುರಿತು ತಮಗೆ ಖಿಲಾಫತ್ ಚಳವಳಿಯ ಬಗ್ಗೆ ಇದ್ದ ಸಂಶಯದ ಕಡೆಗೆ ಮರಳಿದರು. ಗಾಂಧೀಜಿಯವರು ವಂಚಿಸಿದರು ಎಂದು ಕೂಡಾ ಕೆಲವು ಮುಸ್ಲಿಮ್ ನಾಯಕರು ಹೇಳಿದರು.

ಗಾಂಧೀಜಿಯವರ ಉತ್ತಮ ಸ್ನೇಹಿತರಾಗಿದ್ದ ಮೌಲಾನಾ ಮುಹಮ್ಮದಲಿ 1924ರಲ್ಲಿ ಟೈಮ್ಸ್ ಪತ್ರಿಕೆಯಲ್ಲಿ ಹೀಗೆ ಬರೆದರು, ಖಿಲಾಫತ್ ಚಳವಳಿಯ ಭಾಗವಾಗಿರುವ ಅಸಹಕಾರ ಚಳವಳಿಯನ್ನು ನಿಲ್ಲಿಸಿದ ಗಾಂಧಿಯವರನ್ನು ಭಾರತೀಯ ಮುಸ್ಲಿಮರು ಕ್ಷಮಿಸುವುದಿಲ್ಲ. ಬೇರೆ ಯಾವುದೇ ಮುಸ್ಲಿಮ್ ಸಮೂಹಕ್ಕೆ ಇಲ್ಲದ ಗೌರವ ಭಾರತೀಯ ಮುಸ್ಲಿಮರಿಗೆ ಈ ವಿಷಯದಲ್ಲಿದೆ.

ಮೌಲಾನಾ ಮುಹಮ್ಮದಲಿ ಬಳಿಕ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿ ನಿಲ್ಲಲಿಲ್ಲ. ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಮುಸ್ಲಿಮ್‌ ಲೀಗ್ ಸೇರಿಕೊಂಡರು. ಈ ವಿಷಯದಲ್ಲಿ ಮುಸ್ಲಿಮರು ನನ್ನ ವಿರುದ್ಧ ತಿರುಗಿದರೆಂದು ಗಾಂಧೀಜಿಯವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಅವರು ಹೀಗೆ ಬರೆದರು, “ಖಿಲಾಫತ್ ಚಳವಳಿಯ ಕಾಲದಲ್ಲಿ ಮುಸ್ಲಿಮರು ನನ್ನನ್ನು ಗೆಳೆಯರಾಗಿ ಸ್ವೀಕರಿಸಿದರು. ಈಗ ಅವರು ನನ್ನನ್ನು ರಕ್ತದಾಹಿಯಾದ ರಾಕ್ಷಸನಂತೆ ನೋಡುತ್ತಿದ್ದಾರೆ.”

ಖಿಲಾಫತ್ ಚಳವಳಿಯು ಮಲಬಾರಿನಲ್ಲಿ ರಕ್ತದೋಕುಳಿಯಾದಾಗ ಗಾಂಧೀಜಿಯವರು ಅದನ್ನು ಖಂಡಿಸಿದರು. ಮಾತ್ರವಲ್ಲ, ಯಂಗ್ ಇಂಡಿಯಾದಲ್ಲಿ ಬರೆದ ಲೇಖನದಲ್ಲಿ ಮಾಪಿಳ್ಳೆಯರ ಕೋಮುಭ್ರಾಂತಿಯೆಂದು ಮಲಬಾರ್ ಸಮರವನ್ನು ಆಕ್ಷೇಪಿಸಿದರು. ಈ ನಿಲುವಿನ ಸಾಮಾಜಿಕ ಪ್ರತ್ಯಾಘಾತ ಎಷ್ಟೇ ದೊಡ್ಡದಾಗಿದ್ದರೂ ಖಿಲಾಫತ್ ಅಸಹಕಾರ ಚಳವಳಿಯನ್ನು ನಿಲ್ಲಿಸಿದ್ದರಲ್ಲಿಯೂ ಮಲಬಾರ್ ಸಂಘರ್ಷವನ್ನು ಖಂಡಿಸಿದ್ದರಲ್ಲೂ ಗಾಂಧೀಜಿಯವರ ಸ್ಥಾನದಲ್ಲಿ ನಿಂತುಕೊಂಡು ಆಲೋಚಿಸಿದರೆ ನ್ಯಾಯವಿದೆ.

ಕಾರಣವೇನೆಂದರೆ, ಅಹಿಂಸೆಯು ಅವರ ಕಾರ್ಯತಂತ್ರ ಮಾತ್ರವಾಗಿರಲಿಲ್ಲ. ಅವರ ಆದರ್ಶವಾಗಿತ್ತು. ಆ ಆದರ್ಶದಲ್ಲಿ ರಾಜಿ ಮಾಡಿದರೆ ತನ್ನ ಸತ್ಯನಿಷ್ಠೆಯು ಪ್ರಶ್ನಿಸಲ್ಪಡುವುದು ಎಂದು ಗಾಂಧೀಜಿಯವರು ಅರ್ಥ ಮಾಡಿಕೊಂಡರು. ಗುರಿಯಂತೆಯೇ ಮಾರ್ಗವೂ ಕೂಡಾ ಸರಿಯಾಗಿರಬೇಕು ಎಂದು ದೃಢವಾಗಿ ನಂಬಿದ್ದರು. ತನ್ನ ಪ್ರಮುಖ ಸ್ಫೂರ್ತಿ ಮತ್ತು ಆಧಾರವಾಗಿ ಕಂಡಿದ್ದ ಗೀತೆಯನ್ನು ಕೂಡಾ ಅಹಿಂಸೆಯ ಮಾರ್ಗ ಎಂಬ ನೆಲೆಯಲ್ಲಿಯೇ ಗಾಂಧಿಯವರು ಓದಿದ್ದರು. ತಿಲಕ್ ಅಥವಾ ಸಂಘ ಪರಿವಾರಿಗಳ ಪಾರಾಯಣದಂತೆ ಗಾಂಧೀಜಿಯವರ ಗೀತಾ ಪಾರಾಯಣವಿರಲಿಲ್ಲ. ಗಾಂಧಿಯವರ ಗೀತೆಯ ಓದುವಿಕೆಯು ಮಾನವನ ಮನಸ್ಸಿನಲ್ಲಿ ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಸಂಘರ್ಷವನ್ನು ಸಾಂಕೇತಿಕವಾಗಿ ಪ್ರಸ್ತುತ ಪಡಿಸುತ್ತದೆ.

ಹಿಂಸಾಚಾರದೊಂದಿಗಿನ ಗಾಂಧಿಯ ಈ ಧೋರಣೆಯನ್ನು ಗಮನಿಸಿಕೊಂಡು ಆಲೋಚಿಸಿದರೆ ಅಸಹಕಾರ ಚಳವಳಿಯನ್ನು ನಿಲ್ಲಿಸಿದ ಮತ್ತು ಮಲಬಾರ್ ಹೋರಾಟವನ್ನು ತಿರಸ್ಕರಿಸಿದ್ದಕ್ಕಾಗಿ ನಾವು ಅವರನ್ನು ಧೂಷಿಸಲಿಕ್ಕೆ ಆಗುವುದಿಲ್ಲ. ಗಾಂಧೀಜಿಯವರು ತಮ್ಮ ಆದರ್ಶ ಮತ್ತು ಸತ್ಯನಿಷ್ಠೆಯ ಕುರಿತು ಬಹಳ ಕಟ್ಟು ನಿಟ್ಟಾದ ರಾಜಕಾರಣಿಯಾಗಿದ್ದರು. ಆದರೂ ಗಾಂಧಿ ಮತ್ತು ಭಾರತವು ಇದಕ್ಕಾಗಿ ಭಾರೀ ಬೆಲೆ ತೆರಬೇಕಾಯಿತು ಎಂದು ಹೇಳದಿರಲು ಸಾಧ್ಯವಿಲ್ಲ. ಏಕೆಂದರೆ, ಖಿಲಾಫತ್ ಚಳವಳಿ ಆರಂಭಿಸಿದ್ದು ಮತ್ತು ಅಸಹಕಾರ ಚಳವಳಿಯೆಂಬ ಆಶಯವನ್ನು ಮುಂದಿಟ್ಟವರು ಮುಸ್ಲಿಮರಾಗಿದ್ದರು.

ಕಾಂಗ್ರೆಸ್ ಅದನ್ನು ಬೆಂಬಲಿಸುವ ಮತ್ತು ವಹಿಸಿಕೊಳ್ಳುವ ಕೆಲಸವನ್ನು ಮಾತ್ರ ಮಾಡಿದೆ. ಅಂತಹ ಒಂದು ಹೋರಾಟ ನಿಲ್ಲಿಸಬೇಕಾಗಿದ್ದರೆ ಗಾಂಧೀಜಿಯವರಿಗೆ ಮುಸ್ಲಿಮ್ ನಾಯಕರೊಂದಿಗೆ ಸಮಾಲೋಚಿಸಬಹುದಾಗಿತ್ತು. ಅಲ್ಲಿಯವರೆಗೆ ಪರಸ್ಪರ ಸಂಶಯ ಹೊಂದಿದ್ದ ಎರಡು ಪ್ರಬಲ ವಿಭಾಗಗಳು ಒಂದಾಗಿ ಒಂದು ಆಂದೋಲನವನ್ನು ಮುಂದುವರಿಸಿಕೊಂಡು ಹೋಗುತ್ತಿರುವಾಗ ನಿರ್ಣಾಯಕ ಸಂದರ್ಭಗಳಲ್ಲಿ ಸಮಾಲೋಚನೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಹಾಗೆ ಮಾಡಿರುತ್ತಿದ್ದರೆ ಗಾಂಧೀಜಿಯೇ ಸ್ವತಃ ತಿಳಿದುಕೊಂಡಂತೆ ಮುಸ್ಲಿಮ್ ಸಮುದಾಯದ ಅವಿಶ್ವಾಸ ಗಾಂಧೀಜಿಯವರಿಗೆ ಉಂಟಾಗುತ್ತಿರಲಿಲ್ಲ.

ಏನಿದ್ದರೂ ಖಿಲಾಫತ್ ಚಳವಳಿಯ ಬಳಿಕ ಕಾಂಗ್ರೆಸ್ ಮತ್ತು ಗಾಂಧೀಜಿಯವರ ಕುರಿತು ಮುಸ್ಲಿಮ್ ಸಮುದಾಯದಲ್ಲಿ ಇಂತಹ ಅವಿಶ್ವಾಸ ಉಂಟಾದರೂ ಅಬುಲ್ ಕಲಾಂ ಆಝಾದ್ ಮತ್ತು ಹುಸೈನ್ ಅಹ್ಮದ್ ಮದನಿಯವರ ನೇತೃತ್ವದಲ್ಲಿ ಜಂಇಯತುಲ್ ಉಲೆಮಾ ಹಿಂದ್‌ನ ಪ್ರಬಲ ವಿಭಾಗವು ಕಾಂಗ್ರೆಸ್‌ನೊಂದಿಗೆ ನಿಂತುಕೊಂಡಿತು. ಹುಸೈನ್ ಅಹ್ಮದ್ ಮದನಿಯೊಂದಿಗೆ ಗಾಂಧೀಜಿಯವರಿಗೆ ಬಹಳ ಗೌರವವಿತ್ತು.

ದೇಶದ ವಿಭಜನೆಯನ್ನು ತಪ್ಪಿಸಲು ಗಾಂಧೀಜಿಯವರು ಕೊನೆಯ ಕ್ಷಣದವರೆಗೂ ಬಯಸಿದರು. ಕೇಂದ್ರದ ಅಧಿಕಾರವನ್ನು ವಿದೇಶಾಂಗ, ರಕ್ಷಣೆ, ವಾರ್ತಾ ವಿನಿಮಯಗಳಿಗೆ ಪರಿಮಿತಗೊಳಿಸಿ ಪ್ರಾಂತ್ಯಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಜಿನ್ನಾ ಕೂಡಾ ಅಂಗೀಕರಿಸಿದ ಕ್ಯಾಬಿನೆಟ್ ವ್ಯವಸ್ಥೆಯನ್ನು ಗಾಂಧಿಯವರು ಬೆಂಬಲಿಸಿದ್ದರು. ಇದನ್ನು ಜವಾಹರಲಾಲ್ ನೆಹರೂರವರು ಬುಡಮೇಲುಗೊಳಿಸಿದರು. ಅವರ ಬಳಿಕ, ‘ಅಮೇರಿಕಾದ ನೀಗ್ರೋಗಳಂತೆ ಆಗಲು ಭಾರತೀಯ ಮುಸ್ಲಿಮರು ಸಿಗುವುದಿಲ್ಲ’ ಎಂದು ಬಹಿರಂಗವಾಗಿ ಹೇಳಿ ಪಾಕಿಸ್ತಾನ ಸಿಗಲೇಬೇಕು ಎಂಬ ಹಠವನ್ನು ಜಿನ್ನಾ ಸ್ವೀಕರಿಸಿದರು.

ದೇಶದ ವಿಭಜನೆ ನಿಲ್ಲುವುದಾದರೆ ಮುಹಮ್ಮದಲಿ ಜಿನ್ನಾರನ್ನು ಪ್ರಧಾನ ಮಂತ್ರಿ ಮಾಡಲು ಕೂಡಾ ಗಾಂಧಿ ಸಿದ್ಧರಿದ್ದರು. ಗಾಂಧೀಜಿಯವರ ಈ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಕಾರಣದಿಂದಲೋ ಏನೋ ಸ್ವತಂತ್ರ ಭಾರತದ ರೂಪೀಕರಣದ ಕೊನೆಯ ಹಂತದಲ್ಲಿ ಗಾಂಧೀಜಿಯವರನ್ನು ಬಿಟ್ಟು ಮೌಂಟ್ ಬ್ಯಾಟನ್, ನೆಹರೂ ಮತ್ತು ಪಟೇಲ್ ವಿಷಯವನ್ನು ತೀರ್ಮಾನಿಸಿರಬಹುದು.
ಆಗ ಗಾಂಧೀಜಿಯವರ ಗಮನವು ಸಂಪೂರ್ಣವಾಗಿ ಹೊಸ ದೇಶದ ನಿರ್ಮಾಣಕ್ಕಿಂತ ವಿಭಜನೆ ಎಂಬ ಪರಿಸ್ಥಿತಿಯು ತಂದೊಡ್ಡುವ ಕೋಮು ಗಲಭೆಯನ್ನು
ತಡೆಯುವುದರಲ್ಲಿತ್ತು. ದೇಶವು ಸ್ವಾತಂತ್ರ‍್ಯವನ್ನು ಆಚರಿಸುತ್ತಿರುವಾಗಲೂ ಅವರು ದೆಹಲಿಯಲ್ಲಿರಲಿಲ್ಲ. ಹಿಂದೂ ಮುಸ್ಲಿಮರ ನಡುವೆ ಐಕ್ಯತೆಯನ್ನು ಸ್ಥಾಪಿಸುವ ಸತ್ಯಾಗ್ರಹವನ್ನು ಆಗ ನಡೆಸುತ್ತಿದ್ದರು. ಆದ್ದರಿಂದ ಸ್ವತಂತ್ರ ಭಾರತದಲ್ಲಿ ಗಾಂಧಿ ಹೆಚ್ಚು ಕಾಲ ಬದುಕಬಾರದೆಂದು ಕೋಮುವಾದಿಗಳು ತೀರ್ಮಾನಿಸಿದ್ದರಲ್ಲಿ ಆಶ್ಚರ್ಯವಿಲ್ಲ.

ಏಕೆಂದರೆ, ಹಿಂದೂ-ಮುಸ್ಲಿಮರನ್ನು ಧ್ರುವೀಕರಿಸುವುದೇ ಕೋಮುವಾದಿಗಳ ಅಜೆಂಡಾ. ದೇಶವು ವಿಭಜನೆಗೊಳ್ಳುವಾಗ ಸೊತ್ತು ಪಾಲು ಮಾಡುವಾಗ ಪಾಕಿಸ್ತಾನಕ್ಕೆ ಅದರ ಅರ್ಹ ಪಾಲು ಕೊಡಬೇಕೆಂದು ಗಾಂಧಿ ನಿರ್ಬಂಧಿಸಿದ್ದು ಗೋಡ್ಸೆಗೆ ಗಾಂಧೀಜಿಯನ್ನು ಕೊಲ್ಲಲು ಪ್ರೇರಣೆಯಾದದ್ದಲ್ಲ. ಅದು ಬಹಿರಂಗವಾಗಿ ಹೇಳಲು ಒಂದು ನೆಪವಾದರೂ ನಿಜವಾಗಿ ಗಾಂಧಿ ಮುಂದಿರಿಸಿದ ಹಿಂದೂ-ಮುಸ್ಲಿಮ್ ಸಮಭಾವ ಎಂಬ ಆದರ್ಶವು ಸ್ವಾತಂತ್ರ‍್ಯ ಹೋರಾಟದ ಆಂದೋಲನಕ್ಕೆ ಅಗತ್ಯವಾಗಿರಬಹುದು, ಆದರೆ ಸ್ವತಂತ್ರ ಭಾರತದಲ್ಲಿ ಈ ಆಶಯ ಬೆಳೆಯಲು ಅನುಮತಿಸಬಾರದು ಎಂಬ ಕೋಮುವಾದಿಗಳ ದೃಢ ನಿರ್ಧಾರವು ಗಾಂಧಿಯ ಕೊಲೆಗೆ ಪ್ರೇರಣೆಯಾಯಿತು. ಕೋಮುವಾದಿಗಳ ಬಯಕೆಯಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್‌ರನ್ನು ಪರಿಗಣಿಸದೆ ಉದಾರವಾದಿಯಾಗಿದ್ದ ಜವಾಹರಲಾಲ್ ನೆಹರೂರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ಗಾಂಧೀಜಿಯವರು ನಿರ್ದೇಶಿಸಿದ್ದು ಕೂಡ ಕೋಮುವಾದಿಗಳನ್ನು ಕೋಪಗೊಳಿಸಿತು ಎಂದೂ ತಿಳಿದುಕೊಳ್ಳಬಹುದು.