ಸನ್ಮಾರ್ಗ ವಾರ್ತೆ
ನವದೆಹಲಿ: ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಭಾರತೀಯ ಆಹಾರ ನಿಗಮ (FCI) ನಿರಾಕರಿಸಿರರುವುದು ರಾಜಕೀಯ ವಿಷಯವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಆ ಕುರಿತು ಸ್ಪಷೀಕರಣ ನೀಡಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳೂ ಸೇರಿದಂತೆ ಹೆಚ್ಚುವರಿ ಅಕ್ಕಿಗೆ ಬೇಡಿಕೆಯಿಟ್ಟ ಇತರ ರಾಜ್ಯಗಳ ಮನವಿಯನ್ನು ತಿರಸ್ಕರಿಸಿದ್ದೇವೆ. ಮುಕ್ತ ಮಾರುಕಟ್ಟೆಯಿಂದ ಅಕ್ಕಿ ಖರೀದಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಕೆ ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಟೀಕಿಸುವ ಬದಲು ಮುಕ್ತ ಮಾರುಕಟ್ಟೆಯಿಂದ ಅಕ್ಕಿ ಖರೀದಿಸಲು ಮತ್ತು ವಿತರಿಸಲು ಕರ್ನಾಟಕ ಮುಕ್ತವಾಗಿದೆ ಎಂದು ಗೋಯಲ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯದ ಬೆಲೆ ಹೆಚ್ಚಾಗದಂತೆ ನೋಡಿಕೊಳ್ಳಲು ಮತ್ತು ಜನರು ಅದನ್ನು ಕೈಗೆಟುಕುವ ದರದಲ್ಲಿ ಪಡೆಯುವುದನ್ನು ಖಾತ್ರಿ ಪಡಿಸಿಕೊಳ್ಳಲು ಭಾರತೀಯ ಆಹಾರ ನಿಗಮ ತನ್ನ ದಾಸ್ತಾನುಗಳಿಂದ ಹಲವಾರು ರಾಜ್ಯಗಳಿಗೆ ಅಕ್ಕಿ ನೀಡಲು ನಿರಾಕರಿಸಿದೆ ಎಂದವರು ಹೇಳಿದ್ದಾರೆ.
ದೇಶದ 140 ಕೋಟಿ ಜನರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕೇಂದ್ರ ಮೀಸಲಿನ ಭಾಗವಾಗಿ ಅಕ್ಕಿ ದಾಸ್ತಾನು ಇರಿಸಿಕೊಳ್ಳಲು ಜೂನ್ 8 ರಂದು ನಡೆದ ಕಾರ್ಯದರ್ಶಿಗಳ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳೂ ಹೆಚ್ಚುವರಿ ಅಕ್ಕಿಗೆ ಬೇಡಿಕೆಗಳನ್ನು ಸಲ್ಲಿಸಿವೆ. ವಿವಿಧ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಗೆ ಬೇಡಿಕೆ ಇಡುತ್ತವೆ. ಆದರೆ ನಾವು ಎಲ್ಲರಿಗೂ ಅಕ್ಕಿ ನೀಡಲು ನಿರಾಕರಿಸಿದ್ದೇವೆ ಎಂದವರು ತಿಳಿಸಿದ್ದಾರೆ.












