ಆಯಿಷಾಬಿ ಆದ ಹೇಮಾ ಮಾಲಿನಿಯದ್ದು ಯಾವ ಜಿಹಾದ್?

0
449

✍️ ಏ.ಕೆ.ಕುಕ್ಕಿಲ

ಸನ್ಮಾರ್ಗ ವಾರ್ತೆ

ಘಟನೆ-1
ಉಬೈದ್
ಜಿತೇಂದ್ರ ಸಾಹ್ನಿ
23 ವರ್ಷದ ವ್ಯಾಪಾರಿ ಉಬೈದ್ ಮತ್ತು 24 ವರ್ಷದ ಮೋಟಾರ್ ಸೈಕಲ್ ಮೆಕ್ಯಾನಿಕ್ ಜಿತೇಂದ್ರ ಸಾಹ್ನಿಯ ಜೊತೆ ಓರ್ವ ಅಪ್ರಾಪ್ತ ಹಿಂದೂ ಯುವತಿ ಮೇ 26ರಂದು ಕಾಣಿಸಿಕೊಳ್ಳು ತ್ತಾಳೆ. ಸುದ್ದಿ ಕಾಡ್ಗಿಚ್ಚಿನಂತೆ ಹರಡಿಕೊಳ್ಳುತ್ತದೆ. ಅಪಹರಣ ಪ್ರಕರಣ ದಾಖಲಾಗುತ್ತದೆ. ಅವರಿಬ್ಬ ರನ್ನೂ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗು ತ್ತದೆ. ಇದು ನಡೆದಿರುವುದು ಉತ್ತರಾಖಂಡದ ಪುರೋಲ ಎಂಬಲ್ಲಿ.

ಘಟನೆ-2
ಮಾಜಿ ಶಾಸಕ ಮತ್ತು ಹಾಲಿ ಬಿಜೆಪಿ ಮುನ್ಸಿಪಲ್ ಚೆಯರ್‌ಮ್ಯಾನ್ ಯಶ್ಪಾಲ್ ಬೇನಮ್ ಅವರ ಮಗಳ ಮದುವೆ ಮೇ 28ಕ್ಕೆ ನಿಗದಿಯಾಗಿತ್ತು. ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರನ್ನೂ ಪುರಿಯ ಪ್ರಮುಖ ರೆಸಾರ್ಟ್‌ ಗೆ ಆಹ್ವಾನಿಸಲಾಗಿತ್ತು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಈ ಆಹ್ವಾನ ಪತ್ರಿಕೆಯನ್ನು ಯಾರೋ ಹಂಚಿಕೊಳ್ಳುವುದರೊಂದಿಗೆ ತೀವ್ರ ವಾದ-ವಿವಾದಗಳು ನಡೆಯಿತು. ಒಂದು ಕಡೆ ಲವ್ ಜಿಹಾದ್ ಕತೆಯಿರುವ ದ ಕೇರಳ ಸ್ಟೋರಿಗೆ ತೆರಿಗೆ ವಿನಾಯಿತಿ ನೀಡುವ ಬಿಜೆಪಿ ಇನ್ನೊಂದು ಕಡೆ ಅದೇ ಲವ್ ಜಿಹಾದನ್ನು ಪ್ರೋತ್ಸಾಹಿಸುತ್ತದೆ. ಇದು ಡಬಲ್ ಸ್ಟ್ಯಾಂಡರ್ಡ್… ಎಂದು ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಳ್ಳ ಲಾಯಿತು. ಬಲಪಂಥೀಯ ಸಂಘಟನೆಗಳು ಅಖಾಡಕ್ಕೆ ಇಳಿಯಿತು.

ವಿಶೇಷವಾಗಿ, ಭಜರಂಗದಳ, ವಿಶ್ವ ಹಿಂದೂ ಪರಿಷತ್, ಭೈರವ್ ಸೇನಾ ಇತ್ಯಾದಿಗಳು ಯಶ್ಪಾಲ್ ಬೇನಮ್ ಅವರ ಪ್ರತಿಕೃತಿಯನ್ನು ದಹಿಸಿತು. ಬಿಜೆಪಿ ಮುಖಂಡರೇ ಮಾಧ್ಯಮಗಳಿಂದ ತಲೆ ತಪ್ಪಿಸಿಕೊಂಡು ಓಡಾಡಬೇಕಾಯಿತು. ಯಾಕೆಂದರೆ, ಯಶ್ಪಾಲ್ ಬೇನಮ್ ಅವರ ಮಗಳನ್ನು ಮದುವೆಯಾಗಲಿರುವ ಯುವಕ ಓರ್ವ ಮುಸ್ಲಿಮ್. ಆಹ್ವಾನ ಪತ್ರಿಕೆಯಲ್ಲಿ ಆ ಹೆಸರನ್ನು ನಮೂದಿಸಲಾಗಿತ್ತು. ಇವರಿಬ್ಬರೂ ಲಕ್ನೋ ಯುನಿವರ್ಸಿಟಿಯಲ್ಲಿ ಜೊತೆಯಾಗಿ ಕಲಿತವರು. ಅಂತಿಮವಾಗಿ ಮೇ 28ರ ಮದುವೆಯನ್ನೂ ಯಶ್ಪಾಲ್ ಬೇನಮ್ ಮುಂದೂಡುತ್ತಾರೆ. ಆದರೆ ಈ ಮದುವೆ ನಡೆಯುತ್ತದೋ ಇಲ್ಲವೋ ಅನ್ನುವ ಬಗ್ಗೆ ಯಾವ ಮಾಹಿತಿಯನ್ನೂ ನೀಡುವುದಿಲ್ಲ. ಅಷ್ಟಕ್ಕೂ, ಈ ಮದುವೆಯನ್ನು ರದ್ದುಪಡಿಸಿಲ್ಲ, ಮುಂದೂಡಿದ್ದಷ್ಟೇ ಅನ್ನುವುದೂ ಗೊತ್ತಿರಲಿ. ಇದು ನಡೆದಿರುವುದೂ ಇದೇ ಉತ್ತರಾಖಂಡದ ಪುರಿಯಲ್ಲಿ. ಅಂದಹಾಗೆ,

ಉಬೈದ್ ಮತ್ತು ಜಿತೇಂದ್ರ ಸಾಹ್ನಿ ಇಬ್ಬರೂ ಇಲ್ಲಿ ಆರೋಪಿಗಳಾಗಿದ್ದರೂ ಮತ್ತು ಇಬ್ಬರ ಮೇಲೂ ಸಮಾನ ಪ್ರಕರಣ ದಾಖಲಾಗಿದ್ದರೂ ಆ ಬಳಿಕ ನಡೆದದ್ದೇ ಬೇರೆ.

ಮೇ 27ರಿಂದ ಪುರೋಲಾದಲ್ಲಿ ಪ್ರತಿಭಟನೆ ಆರಂಭವಾಗಿದೆ. ಉಬೈದ್ ಮತ್ತು ಜಿತೇಂದ್ರ ಸಾಹ್ನಿ ಇಬ್ಬರೂ ಇಲ್ಲಿ ಆರೋಪಿಗಳಾಗಿದ್ದರೂ ಮತ್ತು ಇಬ್ಬರ ಮೇಲೂ ಸಮಾನ ಪ್ರಕರಣ ದಾಖಲಾಗಿದ್ದರೂ ಆ ಬಳಿಕ ನಡೆದದ್ದೇ ಬೇರೆ.ಇದನ್ನು ಲವ್ ಜಿಹಾದ್ ಪ್ರಕರಣ ಎಂದು ವ್ಯಾಖ್ಯಾನಿಸಿರುವ ಬಲಪಂಥೀಯ ಸಂಘಟನೆಗಳು ಪುರೋಲಾದಿಂದ ಮುಸ್ಲಿಮ್ ವ್ಯಾಪಾರಿಗಳು ಹೊರಟು ಹೋಗಬೇಕು ಎಂದು ಕರೆ ನೀಡಿವೆ. ಜೂನ್ 15ರ ಒಳಗೆ ಮುಸ್ಲಿಮ್ ವ್ಯಾಪಾರಿಗಳು ಊರು ತೊರೆಯದಿದ್ದರೆ ದಾಳಿ ನಡೆಸುತ್ತೇವೆ ಎಂಬ ಬೆದರಿಕೆಯ ಪೋಸ್ಟರ್‌ಗಳನ್ನು ಅಲ್ಲಲ್ಲಿ ಅಂಟಿಸಲಾಗಿದೆ. ಮುಸ್ಲಿಮ್ ಅಂಗಡಿಗಳಿಗೆ ಕ್ರಾಸ್ ಮಾರ್ಕನ್ನು ಹಾಕಲಾಗಿದೆ. ‘ಕಾರ್ಪೆಂಟರ್, ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಪ್ಲಂಬರ್ ಇತ್ಯಾದಿ ಇತ್ಯಾದಿ ವೇಷದಲ್ಲಿ ಮುಸ್ಲಿಮ್ ಜಿಹಾದಿಗಳು ಆಗಮಿಸುತ್ತಿದ್ದಾರೆ, ಅವರಿಗೆ ಹಿಂದೂಗಳು ಅಂಗಡಿ ಕೊಡಬೇಡಿ, ಈಗಾಗಲೇ ಕೊಟ್ಟಿರುವವರು ಒಪ್ಪಂದ ರದ್ದು ಮಾಡಿಕೊಳ್ಳಿ’ ಎಂಬ ಎಚ್ಚರಿಕೆಯ ಅಭಿಯಾನ ನಡೆಸಲಾಗಿದೆ. ಅನೇಕ ಮುಸ್ಲಿಮ್ ವ್ಯಾಪಾರಿಗಳು ಈಗಾಗಲೇ ಪುರೋಲಾದಿಂದ ಬೇರೆಡೆಗೆ ಪಲಾಯನ ಮಾಡಿದ್ದಾರೆ. ಕಳೆದ 25 ವರ್ಷಗಳಿಂದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿದ್ದ ಮುಸ್ಲಿಮ್ ವ್ಯಕ್ತಿಯೇ ಪುರೋಲಾದಿಂದ ಪಲಾಯನ ಮಾಡಿದ್ದಾರೆ. ಪುರೋಲಾದ ಮಾರ್ಕೆಟ್ ಯೂನಿಯನ್ ಕೂಡ ಈ ಅಭಿಯಾನಕ್ಕೆ ಬೆಂಬಲವಾಗಿ ಬಂದ್ ಆಚರಿಸಿದೆ. ದೇವ್‌ಭೂಮಿ ರಕ್ಷಾ ಅಭಿಯಾನ ಸಂಘಟನೆಯ ಅಧ್ಯಕ್ಷ ಸ್ವಾಮಿ ದರ್ಶನ್ ಭಾರತಿ ಅವರ ಪ್ರಚೋದನಕಾರಿ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಹಂಚಿಕೆಯಾಗುತ್ತಿವೆ. ‘2015ರಿಂದ ಪುರೋಲಾದಲ್ಲಿ ಮಸೀದಿ ಅಥವಾ ಮದ್ರಸಾಗಳ ನಿರ್ಮಾಣಕ್ಕೆ ಅವಕಾಶ ಕೊಟ್ಟಿಲ್ಲ’ ಎಂದು ಅವರು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿರುವುದೂ ವರದಿಯಾಗಿದೆ. ಇವರು 2019 ಡಿಸೆಂಬರ್ 17ರಿಂದ 19ರ ವರೆಗೆ ಇದೇ ಉತ್ತರಾಖಂಡದಲ್ಲಿ ನಡೆದ ವಿವಾದಾಸ್ಪದ ಧರ್ಮಸಂಸದ್‌ನಲ್ಲಿ ದ್ವೇಷ ಭಾಷಣ ಮಾಡಿದವರಲ್ಲಿ ಒಬ್ಬರೆಂದು ಹೇಳಲಾಗುತ್ತಿದೆ. ಈ ಧರ್ಮ ಸಂಸದ್‌ನಲ್ಲಿ ಮುಸ್ಲಿಮ್ ಹತ್ಯಾಕಾಂಡಕ್ಕೆ ಕರೆ ಕೊಡಲಾಗಿತ್ತು. ಆ ಬಳಿಕ ಒಂದಿಷ್ಟು ಮಂದಿಯ ವಿರುದ್ಧ ಪ್ರಕರಣವೂ ದಾಖಲಾಗಿದೆ. ಇದೇ ದರ್ಶನ್ ಭಾರತಿ ಅವರ ಗುಂಪು 2019ರಲ್ಲಿ 1.54 ಲಕ್ಷ ಕಿರು ಹೊತ್ತಗೆಗಳನ್ನು ಹಂಚಿರುವುದು ಚರ್ಚೆಯಲ್ಲಿದೆ. ‘ಮುಸ್ಲಿಮರನ್ನು ಉತ್ತರಾ ಖಂಡದಿಂದ ಓಡಿಸಬೇಕು ಮತ್ತು ಉತ್ತರಾಖಂಡ ದೇವರ ಭೂಮಿ’ ಎಂಬಂತಹ ಕರೆಗಳು ಅದರಲ್ಲಿದ್ದುವು. ಪರಿಸ್ಥಿತಿ ಎಲ್ಲಿಯವರೆಗೆ ಮುಟ್ಟಿದೆಯೆಂದರೆ, 52 ನಿವೃತ್ತ ಹಿರಿಯ ಸರಕಾರಿ ಅಧಿಕಾರಿಗಳು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ‘ಮುಸ್ಲಿಮರ ವಿರುದ್ಧ ಕ್ರಿಮಿನಲ್ ಅಭಿಯಾನ ನಡೀತಾ ಇದೆ, ರಾಜ್ಯ ಅಪಾಯದಲ್ಲಿದೆ’ ಎಂಬ ಭೀತಿಯನ್ನು ತೋಡಿಕೊಂಡಿದ್ದಾರೆ.

ಕೇವಲ ಕಳೆದ ಮೂರೇ ತಿಂಗಳೊಳಗೆ ಮುಸ್ಲಿಮರ 330 ದರ್ಗಾಗಳನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ. ಅಲ್ಲದೇ ಇನ್ನೂ 1000 ಇಂಥ ಕಾನೂನು ಬಾಹಿರ ಮುಸ್ಲಿಮ್ ರಚನೆಗಳನ್ನು ಗುರುತಿಸಲಾಗಿದೆ
ಎಂದೂ ಸರಕಾರ ಹೇಳಿದೆ. ನಿಜವಾಗಿ,

ಇಲ್ಲಿ ಎರಡು ಅಂಶಗಳಿವೆ.
1. ವ್ಯಕ್ತಿಯ ಅಪರಾಧ
2. ಸಮುದಾಯದ ಅಪರಾಧ
ಜಿತೇಂದ್ರ ಸಾಹ್ನಿಯ ತಪ್ಪನ್ನು ವೈಯಕ್ತಿಕ ಅಪರಾಧವೆಂದು ಪರಿಗಣಿಸಿರುವ ಅದೇ ಬಲಪಂಥೀಯರು ಉಬೈದ್‌ನ ತಪ್ಪನ್ನು ಮಾತ್ರ ಸಮುದಾಯದ ಅಪರಾಧವಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಇಬ್ಬರ ಮೇಲೂ ಸಮಾನ ಆರೋಪಗಳಿರುವಾಗ ಮತ್ತು ಕಾನೂನು ಪ್ರಕಾರವೂ ಸಮಾನ ಪ್ರಕರಣವನ್ನೇ ದಾಖಲಿಸಿರುವಾಗ ಜಿತೇಂದ್ರನ ಸಮುದಾಯವನ್ನು ಅಪರಾಧಿ ಸ್ಥಾನದಿಂದ ಹೊರಗಿಟ್ಟು ಉಬೈದ್‌ನ ಸಮುದಾಯವನ್ನು ಮಾತ್ರ ಅಪರಾಧಿಯಾಗಿಸಿರುವುದೇ ಈ ಒಟ್ಟು ಅಭಿಯಾನದ ದುರುದ್ದೇಶವನ್ನು ಹೇಳುತ್ತದೆ.

ಯಾವುದೇ ವ್ಯಕ್ತಿ ಯಾವುದೇ ಸಮುದಾಯದ ಹಿಡಿತದಲ್ಲಿ ರಲು ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರೂ ಅವರವರ ನೆಲೆಯಲ್ಲಿ ಸ್ವತಂತ್ರರು. ಅವರವರ ಕೃತ್ಯಕ್ಕೂ ಅವರವರೇ ಹೊಣೆಗಾರರು. ಜಿತೇಂದ್ರ ಸಾಹ್ನಿಯ ಅಪರಾಧಕ್ಕೆ ಮಂದಿರದ ಸ್ವಾಮಿಗಳನ್ನು, ಅರ್ಚಕರನ್ನು, ಸಮುದಾಯದ ಮುಖಂಡರನ್ನು ಅಥವಾ ಆತನ ತಂದೆ-ತಾಯಿ-ಕುಟುಂಬವನ್ನು ಹೊಣೆ ಮಾಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಉಬೈದ್ ಕೂಡಾ. ಆತನ ಕೃತ್ಯಕ್ಕೆ ಆತನೇ ಹೊಣೆ. ಆತನ ಅಪ್ಪ-ಅಮ್ಮ-ಕುಟುಂಬ-ಮಸೀದಿ, ಮೌಲಾನರು ಅಥವಾ ಸಮುದಾಯ ಅದಕ್ಕೆ ಹೊಣೆ ಆಗುವುದಿಲ್ಲ. ಸಮುದಾಯ ಎಂಬುದು ಸರಕಾರ ಅಲ್ಲದೇ ಇರುವುದರಿಂದ ಅದಕ್ಕೆ ಯಾವುದೇ ಕಾನೂನು ಬಲ ಇಲ್ಲ. ತಪ್ಪು ಮಾಡಿದ ವ್ಯಕ್ತಿಯ ಮೇಲೆ ಮಸೀದಿ ಮೌಲಾನಾರೋ ಅಧ್ಯಕ್ಷರೋ ಅಥವಾ ಮಸೀದಿ ಕಮಿಟಿಗಳೋ ಯಾವುದೇ ಸಣ್ಣ ಬಲವಂತದ ಕ್ರಮ ಕೈಗೊಂಡರೂ ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಆತನನ್ನು ಸಂತ್ರಸ್ತನಾ ಗಿಯೂ ಮಸೀದಿ ಮೌಲಾನಾರನ್ನು ಅಥವಾ ಕಮಿಟಿಯನ್ನು ಅಪರಾಧಿ ಸ್ಥಾನದಲ್ಲೂ ಇಲ್ಲಿಯ ನ್ಯಾಯ ವ್ಯವಸ್ಥೆ ನಿಲ್ಲಿಸುತ್ತದೆ. ದುರಂತ ಏನೆಂದರೆ,

ತಮಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಮ್ಮ ಸಮುದಾಯ ವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದ ಬಲಪಂಥೀಯ ಗುಂಪು ಗಳು ಮುಸ್ಲಿಮರಿಗೆ ಸಂಬಂಧಿಸಿ ಮಾತ್ರ ಸಮುದಾಯವನ್ನೇ ಅಪರಾಧಿ ಎನ್ನುತ್ತದೆ. ಇದರ ಹಿಂದಿರುವುದು ಮುಸ್ಲಿಮ್ ದ್ವೇಷವೇ ಹೊರತು ಇನ್ನಾವುದೂ ಅಲ್ಲ. ಒಂದು ವೇಳೆ,

ವ್ಯಕ್ತಿಯ ತಪ್ಪನ್ನು ಒಂದು ಸಮುದಾಯ ಬಹಿರಂಗವಾಗಿ ಸಮರ್ಥಿಸಿದರೆ, ಆತನ ಪರ ರ‍್ಯಾಲಿಯನ್ನೋ ಬೆಂಬಲವನ್ನೋ ಸಾರಿದರೆ ಒಂದು ಹಂತಕ್ಕೆ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವುದು ಸರಿ. ಇಲ್ಲೂ ಒಂದು ಪ್ರಶ್ನೆ ಇರುತ್ತದೆ. ಸಮುದಾಯ ಎಂದರೆ ಯಾರು? ಸಂಘಟನೆಯೋ, ಸಂದರ್ಭಾನುಸಾರ ಮಾಡಿಕೊಂಡ ಗುಂಪೋ, ಮಸೀದಿ ಕಮಿಟಿಯೋ ಅಥವಾ ಮಸೀದಿ ಉಸ್ತಾದರೋ? ಇವರಲ್ಲಿ ಯಾರು ಸಮುದಾಯವನ್ನು ಪ್ರತಿನಿಧಿಸುತ್ತಾರೆ? ಯಾರ ಮಾತನ್ನು ಸಮುದಾಯದ ಮಾತು ಎಂದು ಪರಿಗಣಿಸಬೇಕು? ಬಹುಶಃ ಮಸೀದಿ ಅಧ್ಯಕ್ಷರ ನೇತೃತ್ವದಲ್ಲಿ ಕಮಿಟಿ ಸದಸ್ಯರೆಲ್ಲ ಸೇರಿ ಏಕ ಧ್ವನಿಯಲ್ಲಿ ನೀಡುವ ಹೇಳಿಕೆಯನ್ನು ಆಯಾ ಪ್ರದೇಶದ ಮಸೀದಿಗೊಳಪಟ್ಟ ಸಮುದಾಯದ ನಿಲುವು ಎಂದು ಹೇಳಬಹುದೇನೋ? ಅದೂ ಕೂಡಾ ಆಯಾ ಪ್ರದೇಶಕ್ಕೆ ಸಂಬಂಧಿಸಿ ಒಪ್ಪಿಕೊಳ್ಳಬಹುದಾದ ನಿಲುವಾಗ ಬಹುದೇ ಹೊರತು ಸಾರ್ವತ್ರಿಕ ಅಲ್ಲ. ಉತ್ತರ ಪ್ರದೇಶದ ಒಂದು ಮಸೀದಿ ಕಮಿಟಿ ನೀಡುವ ಯಾವುದೋ ಒಂದು ಪ್ರಕರಣದ ಮೇಲಿನ ಹೇಳಿಕೆಯನ್ನು ದಕ್ಷಿಣ ಕನ್ನಡದ ಒಂದು ಮಸೀದಿ ವ್ಯಾಪ್ತಿಗೊಳಪಟ್ಟ ಸಮುದಾಯದ ನಿಲುವಾಗಿ ಪರಿ ಗಣಿಸುವಂತಿಲ್ಲ. ಉತ್ತರ ಪ್ರದೇಶದ ಆ ಮಸೀದಿಯ ಯಾವುದೇ ನಿಲುವಿಗೂ ಸ್ಥಳೀಯವಾದ ಕಾರಣಗಳಿರಬಹುದು ಮತ್ತು ಅಂಥ ಯಾವ ಕಾರಣಗಳೇ ಇಲ್ಲದ ಪ್ರದೇಶಕ್ಕೆ ಆ ನಿಲುವನ್ನು ಅನ್ವಯಿಸುವುದು ತಪ್ಪಾಗಲೂ ಬಹುದು.

ಮುಸ್ಲಿಮ್ ಎಂಬ ನೆಲೆಯಲ್ಲಿ ಭಾರತದ ಎಲ್ಲ ಮುಸ್ಲಿಮರೂ ಒಬ್ಬನೇ ದೇವ, ಒಂದೇ ಧರ್ಮಗ್ರಂಥ ಮತ್ತು ಪ್ರವಾದಿ ಮುಹಮ್ಮದರನ್ನೇ(ಸ) ಅನುಸರಿಸುತ್ತಿದ್ದರೂ ಇವರೆಲ್ಲರ ಭಾಷೆ ಒಂದೇ ಅಲ್ಲ. ವೇಷ-ಭೂಷಣಗಳಲ್ಲೂ ಸಣ್ಣ ಪ್ರಮಾಣದ ವ್ಯತ್ಯಾಸಗಳಿವೆ. ತಾವು ವಾಸಿಸುವ ಪ್ರದೇಶ, ವೃತ್ತಿ, ಶಿಕ್ಷಣ, ಪರಂಪರೆ ಇತ್ಯಾದಿಗಳಿಗೆ ಹೊಂದಿಕೊಂಡು ನಿಲುವುಗಳಲ್ಲೂ ವರ್ತನೆಯಲ್ಲೂ ಅನೇಕ ರೂಪ ಇರುವುದಕ್ಕೂ ಅವಕಾಶಗಳಿವೆ. ಉತ್ತರ ಪ್ರದೇಶದ ಮುಸ್ಲಿಮರು ಉರ್ದು ಮಾತಾಡುವಾಗ ದಕ್ಷಿಣ ಕನ್ನಡದ ಮುಸ್ಲಿಮರು ಬ್ಯಾರಿ ಮಾತಾಡುತ್ತಾರೆ. ಅಲ್ಲಿನ ಮುಸ್ಲಿಮ್ ಪುರುಷರು ಹೆಚ್ಚಾಗಿ ಕುರ್ತಾ-ಪೈಜಾಮ ಧರಿಸುವಾಗ ದಕ್ಷಿಣ ಕನ್ನಡ ಮುಸ್ಲಿಮರು ಪ್ಯಾಂಟ್-ಶರ್ಟ್ ಅಥವಾ ಲುಂಗಿ-ಶರ್ಟ್ ಧರಿಸುತ್ತಾರೆ. ಅಲ್ಲಿನ ಮೆನುವಿಗೂ ಇಲ್ಲಿನ ಮೆನುವಿಗೂ ವ್ಯತ್ಯಾಸಗಳಿರಬಹುದು. ಅಲ್ಲಿನ ಮದುವೆಯ ರೀತಿ-ರಿವಾಜುಗಳಲ್ಲಿ ಭಿನ್ನತೆಗಳಿರಬಹುದು. ಕುರ್‌ಆನನ್ನು ಕಂಠ ಪಾಠ ಮಾಡುವವರ ಸಂಖ್ಯೆ ಉತ್ತರ ಪ್ರದೇಶ, ಬಿಹಾರ, ಅಸ್ಸಾಮ್‌ಗಳಲ್ಲಿ ಅತ್ಯಧಿಕವಾಗಿದ್ದರೆ ದಕ್ಷಿಣ ಭಾರತದಲ್ಲಿ ಕಡಿಮೆ. ಅಲ್ಲಿನ ದುಡಿಮೆ ಮತ್ತು ಜೀವನ ಮಟ್ಟಕ್ಕೂ ವ್ಯಕ್ತಿಗಳ ವರ್ತನೆಗಳೂ ವ್ಯತ್ಯಾಸಗಳಿರುತ್ತವೆ ಮತ್ತು ಸಮುದಾಯದ ಪ್ರಕ್ರಿಯೆಯೂ ಇವೆರಡರ ಪ್ರತಿಬಿಂಬವಾಗಿರುತ್ತದೆ. ಅಂದಹಾಗೆ,

ಭಾರತದಲ್ಲಿ ಅಸ್ತಿತ್ವದಲ್ಲಿರುವುದು ಹೆಣ್ಣು-ಗಂಡನ್ನು ಬೇರ್ಪಡಿಸದ ವ್ಯವಸ್ಥೆ. ಎಲ್‌ಕೆಜಿಯಿಂದ ಆರಂಭವಾಗಿ ಡಿಗ್ರಿವರೆಗೆ ಮತ್ತು ಅಲ್ಲಿಂದ ಮೆಡಿಕಲ್, ಎಂಜಿನಿಯರಿಂಗ್, ಏರೋನಾಟಿಕಲ್ ಸಹಿತ ಎಲ್ಲ ವಿಧದ ಕಲಿಕೆಯಲ್ಲೂ ಹೆಣ್ಣು-ಗಂಡು ಜೊತೆಯಾಗಿಯೇ ಇರುತ್ತಾರೆ. ಬಸ್ಸು, ರೈಲು, ವಿಮಾನ ಪ್ರಯಾಣದಲ್ಲೂ ಹೆಣ್ಣಿಗೊಂದು-ಗಂಡಿಗೊಂದು ಎಂಬ ವಿಭಜನೆ ಇಲ್ಲ. ಉದ್ಯೋಗ ಸ್ಥಳದಲ್ಲೂ ಪಾರ್ಲಿಮೆಂಟಲ್ಲೂ ನ್ಯಾಯಾಲಯದಲ್ಲೂ ಆಸ್ಪತ್ರೆಯಲ್ಲೂ ಕಚೇರಿಗಳಲ್ಲೂ… ಹೀಗೆ ಎಲ್ಲೆಲ್ಲೂ ಹೆಣ್ಣು-ಗಂಡು ಜೊತೆಯಾಗಿಯೇ ಇರುತ್ತಾರೆ. ಇಂಥ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ದೇಶದಲ್ಲಿ ಹಿಂದೂ ಗಂಡು, ಮುಸ್ಲಿಮ್ ಹೆಣ್ಣು ಅಥವಾ ಮುಸ್ಲಿಮ್ ಗಂಡು, ಹಿಂದೂ ಹೆಣ್ಣು ಪರಸ್ಪರ ಮಾತಾಡಬಾರದು ಅಥವಾ ಗೆಳೆಯರಾಗಬಾರದು ಎಂದು ವಾದಿಸುವುದು ಮತ್ತು ಇಂಥವುಗಳನ್ನು ಮತಾಂತರದ ಹುನ್ನಾರ ಎಂದು ಆರೋಪಿಸುವುದಕ್ಕೆ ಏನರ್ಥವಿದೆ? ಇವೆಲ್ಲ ರಾಜಕೀಯ ಪ್ರೇರಿತ ವ್ಯಾಖ್ಯಾನಗಳೇ ಹೊರತು ಧರ್ಮ ರಕ್ಷಣೆಗೂ ಅವಕ್ಕೂ ಖಂಡಿತ ಸಂಬಂಧ ಇಲ್ಲ.

ಹೆಣ್ಣು-ಗಂಡು ಆಕರ್ಷಣೆಗೆ ಒಳಗಾಗುವುದು, ಈ ಆಕರ್ಷಣೆ ಮದುವೆಯ ಹಂತಕ್ಕೆ ಬರುವುದು ಮತ್ತು ಗಂಡಿನ ಧರ್ಮವನ್ನು ಹೆಣ್ಣು ಅನುಸರಿಸುವುದು… ಇವೆಲ್ಲವನ್ನೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳಲ್ಲಿ ನೋಡಬೇಕೇ ಹೊರತು ಧರ್ಮದ ಕನ್ನಡಕದಲ್ಲಲ್ಲ. ಈ ಬಲಪಂಥೀಯ ಗುಂಪುಗಳು ಬೆಂಬಲಿಸುತ್ತಿರುವ ಪಕ್ಷದ ನಾಯಕಿ ಹೇಮಾಮಾಲಿನಿ 1980ರಲ್ಲಿ ಧರ್ಮೇಂದ್ರರನ್ನು ಮದುವೆಯಾಗುವಾಗ ಆಯಿಷಾಬಿ ಎಂದು ಹೆಸರು ಬದಲಾಯಿಸಿ ಕೊಂಡಿದ್ದರು. ಅದು ಆ ಮದುವೆಯ ಅಗತ್ಯವೇ ಹೊರತು ಅದಕ್ಕೂ ಸಂಚಿನ ಮತಾಂತರಕ್ಕೂ ಸಂಬಂಧ ಇಲ್ಲ. ಧಾರ್ಮಿಕವಾಗಿ ಮದುವೆಯ ಕಾನೂನು ಬದ್ಧತೆಗೆ ಅಂಥ ಹೆಸರು ಬದಲಾವಣೆಯ ಅಗತ್ಯವಿರುತ್ತದೆ. ಅದರಾಚೆಗೆ ಅಲ್ಲಿ ಲವ್ ಮಾತ್ರವೇ ಇದೆ, ಜಿಹಾದ್ ಇಲ್ಲ.