ಆ ಎಲ್ಲ ಸವಾಲನ್ನೂ ದಾಟಿದ್ದೇವೆ, ಇನ್‌ಶಾ ಅಲ್ಲಾಹ್ ದಾಟಲಿದ್ದೇವೆ…

0
183

✍️ಜಮಾಲ್ ಕೆ.

ಸನ್ಮಾರ್ಗ ವಾರ್ತೆ

ಬೇಸಿಗೆ ಕಾಲವದು. ಸುಡುಬಿಸಿಲು ಝಳ ತೀವ್ರವಾಗಿತ್ತು. ಇಂತಹ ಸನ್ನಿವೇಶದಲ್ಲಿ ಒಂದು ದೊಡ್ಡ ಬೆಟ್ಟದ ಮೇಲೆ ಪ್ರವಾದಿ ನೂಹ್(ಅ) ಹಡಗು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ನೋಡಿ ಅಲ್ಲಿನ ಜನರು ಅವಹೇಳಿಸುತ್ತಾ ಈ ಮುದುಕನಿಗೆ ಮತಿಭ್ರಮಣೆಯಾಗಿದೆಯೇ? ಎಂದು ಹೇಳುತ್ತಿದ್ದರು.

ನಂತರ ನಾಲ್ಕೂ ದಿಕ್ಕುಗಳಿಂದ ಹರಿದು ಬಂದ ಜಲ ಪ್ರಳಯ ಕಂಡು ಭಯಭೀತರಾಗಿ ಅದೇ ಜನಸಮೂಹ ಪ್ರವಾದಿ ನೂಹರತ್ತ ದೃಷ್ಟಿ ಹಾಯಿಸಿ ಅಲವತ್ತುಕೊಳ್ಳ ತೊಡಗಿದರು. ಹಾಗೆಯೇ ಬಹಳ ಗೌರವ ದಿಂದ ಇಸ್ಲಾಮ್ ನೂಹರ ಹಡಗಿನಲ್ಲಿ ದಡ ಸೇರಿತು.  

ಕಾಲ ಚಕ್ರ ಉರುಳಿತು. ನಮ್ರೂದ್ ಎಂಬ ಸರ್ವಾಧಿಕಾರಿ ಮತ್ತು ಆಝರ್ ಎಂಬ ಪುರೋಹಿತರ ಅಂಧವಿಶ್ವಾಸ ಮೂಢನಂಬಿಕೆ ಅನಾಚಾರ, ಭೃಷ್ಟಾಚಾರ, ರಾಜಕೀಯ ಕಾಪಟ್ಯಗಳನ್ನು ಪ್ರಶ್ನಿಸಿ ಓರ್ವ ಯುವಕನ ಪ್ರವೇಶವಾಯಿತು. ಪ್ರವಾದಿ ಇಬ್ರಾಹೀಮ್(ಅ)ರ ಪ್ರವೇಶವದು. ಅವರಿಗೂ ಟೈಗ್ರೀಸ್ ನದಿ ತೀರದಲ್ಲಿ ಬಾನೆತ್ತರದಷ್ಟು  ಅಗ್ನಿ ಜ್ವಾಲೆಯನ್ನು ಉಗುಳುವ ಕುಂಡ ತಯಾರಿಸಿದರು. ಕೊನೆಗೆ ಆ ಅಗ್ನಿ ಜ್ವಾಲೆಗಳ ನಡುವಿನಿಂದ ಮುಗುಳ್ನಗುತ್ತಾ ಎದ್ದು ಬಂದ ಇಸ್ಲಾಮ್ ವಿಶ್ವದ ಮೂಲೆ ಮೂಲೆಗೂ ಹರಡಿತು.

ಇತಿಹಾಸ ಮುಂದುವರಿಯುತ್ತಿತ್ತು. ಹರಿಯುವ ನೈಲ್ ನದಿಯಲ್ಲಿ ಪೆಟ್ಟಿಗೆಯಲ್ಲಿ ಒಂದು ಪುಟ್ಟ ಹಸುಳೆಯನ್ನು ತೇಲಿ ಬಿಡಲಾಯಿತು. ಪೆಟ್ಟಿಗೆಯಲ್ಲಿ ಆಡಿ ನಲಿದ ಮಗು ಪ್ರವಾದಿ ಮೂಸಾ(ಅ) ಬಹಳ ಅಚ್ಚರಿ ಕುತೂಹಲಕಾರಿಯಾಗಿ ಫರೋವನ ಪತ್ನಿಯ ಮೂಲಕ ಅರಮನೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಹಾಕಿತು. ಕೊನೆಗೆ ಹಲವು ಘಟನೆಗಳಿಗೆ ಸಾಕ್ಷಿಯಾಗಿ ಹಲವು ಹೋರಾಟ ನಡೆದು ಫರೋವ ಮತ್ತು  ಆತನ ಮಾಂತ್ರಿಕ ಜಾಲದವರನ್ನು ಸೋಲಿಸಿ ನದಿಯನ್ನು ಬೇಧಿಸಿ ಇಸ್ಲಾಮ್ ಜಯಬೇರಿ ಬಾರಿಸಿತು.

ನಂತರ ಪ್ರವಾದಿ ಈಸಾ(ಅ)ರ ಪ್ರವೇಶವಾಯಿತು. ಗುಡಿಸಲಿನಿಂದ  ರೋಮ್ ಸಾಮ್ರಾಜ್ಯದ ಅರಮನೆಯವರೆಗೆ “ತುಂಬಿದ್ದ  ಪೌರೋಹಿತ್ಯದ ದಾಷ್ಠ್ರ್ಯಗಳನ್ನು ಮೀರಿ ಇಸ್ಲಾಮ್ ಮುನ್ನಡೆಯಿತು.

ಕೊನೆಗೆ ಅಂತ್ಯ ಪ್ರವಾದಿ ಮುಹಮ್ಮದ್(ಸ)ರ ಆಗಮನವಾಯಿತು. ಬದ್ರ್, ಉಹುದ್, ಅಹ್‌ಝಾಬ್ ..ಶಅಬ್.. ಅಬೂತಾಲಿಬ್.. ತಾಇಫ್, ಹಿಜ್ರಾ, ಹಿಂಸೆ ದೌರ್ಜನ್ಯಗಳ ಪರ್ವಗಳನ್ನೆಲ್ಲಾ  ದಾಟಿದ ಆ ಮಹಾ ಪ್ರವಾದಿ ಲೋಕದಾದ್ಯಂತ ಸುಗಂಧವನ್ನು ಹರಡಿದರು. ಮದೀನಾದಲ್ಲಿ ರಾಷ್ಟ್ರ ಸ್ಥಾಪಿಸಿ  ಇತಿಹಾಸದಲ್ಲಿ ಅಜರಾಮರರಾದರು. ಇಸ್ಲಾಮ್ ಪುನಃ ಗೆಲುವಿನ ಜೈತ್ರಯಾತ್ರೆ ಸಾಧಿಸಿತು.

ಯಹೂದಿ, ಕ್ರೈಸ್ತರ ಸುದೀರ್ಘ ಶಿಲುಬೆ ಯುದ್ಧಗಳ ರಕ್ತದೋಕುಳಿಯನ್ನು ಈಜಿ ಇಸ್ಲಾಮ್ ಪಾರಾಯಿತು. ಈ ಮಧ್ಯೆ ಮೇಲೆದ್ದು ಬಂದ  ತಾರ್ತಾರಿಗಳನ್ನು ಸೋಲಿಸಿತು.
ಈ ತೀಕ್ಷ್ಣ ಸತ್ವ ಪರೀಕ್ಷೆಗಳ ನಡುವೆ ಸ್ಪೆಯಿನ್, ಬಾಗ್ದಾದ್, ಡಮಾಸ್ಕಸ್ ಇಸ್ಲಾಮೀ ಜಗತ್ತನ್ನು ಅಚ್ಚರಿಯಲ್ಲಿ ಕೆಡವಿತು.

ಸುದೀರ್ಘ ಹದಿನಾಲ್ಕು ಶತಮಾನಗಳ ವರೆಗಿನ ಇಸ್ಲಾಮೀ ಖಿಲಾಫತ್ ಎಂಬ ಸುಭದ್ರವಾದ ಇಸ್ಲಾಮೀ ಆಡಳಿತ ವ್ಯವಸ್ಥೆಯಲ್ಲಿ ವಿಶ್ವದ ಮೌಲ್ಯಾಧಾರಿತ  ರಾಜಕೀಯ ಕಲೆ, ವೈಜ್ಞಾನಿಕತೆಯ ಶಿಕ್ಷಣ ನೀಡಲಾಯಿತು. ಧಾರ್ಮಿಕ ವಿಶ್ವಾಸ ದಾರ್ಢ್ಯತೆಯ ಉತ್ತುಂಗದ ಮಹಾಮೆರುಗಳನ್ನು ವಿಶ್ವಕ್ಕೆ  ಅದು ನೀಡಿತು.

ಕಾರಾಗೃಹದಲ್ಲಿ ಜಯಭೇರಿ ಮೊಳಗಿಸಿದ ಮದ್‌ಹಬ್‌ಗಳ ಇಮಾಮರುಗಳು. ಝೀಯೋನಿಸ್ಟ್ ವಸಾಹತುಶಾಹಿಗಳ ಒಕ್ಕೂಟಗಳ ಮದ್ದು ಗುಂಡುಗಳನ್ನು ದೇಹದೊಳಗೆ ನುಗ್ಗಿಸಿಕೊಂಡ ಉಮರ್ ಮುಖ್ತಾರ್, ಹಸನುಲ್ ಬನ್ನಾ, ಸೈಯದ್ ಕುತುಬ್, ಅಲೀ ಶರೀಅತಿ,  ಅಲಿ ಮುಸ್ಲಿಯಾರ್… ಇತ್ಯಾದಿ..

ಇಪ್ಪತ್ತನೇ ಶತಮಾನದಲ್ಲಿ ಇಸ್ಲಾಮನ್ನು ನಾಶಪಡಿಸಲು ಸಾಮ್ರಾಜ್ಯಶಾಹಿಗಳು ಮತ್ತು ಫ್ಯಾಸಿಸ್ಟ್ ಶಕ್ತಿಗಳು ಮಾಡಿದ ಷಡ್ಯಂತ್ರಗಳು  ಒಂದೆರಡಲ್ಲ. ಖಿಲಾಫತ್ ಆಡಳಿತದ ಪತನ, ಗಾಯ ಮಾಸದ ಫೆಲೆಸ್ತೀನ್, ಬೋಸ್ನಿಯನ್ ರಕ್ತದ ಹೊಳೆ, ಉಕ್ಕಿನ ಮುಷ್ಟಿಯ ಚೆಚ್ನಿಯಾ,  ಅಫ್ಘಾನ್, ಇರಾಕ್, ಸಿರಿಯಾದ ವಸಾಹತು ಶಾಹಿಗಳು, ದುರಂತದಲ್ಲಿ ಬದುಕು ಸವೆಸುತ್ತಿರುವ ರೋಹಿಂಗ್ಯ, ಶ್ರೀಲಂಕಾದ ಮುಸ್ಲಿಮರ  ಇಸ್ಲಾಮೀ ವಸಂತದ ಕ್ರಾಂತಿಯನ್ನು ದಮನಿಸಿದ್ದಲ್ಲಿಂದ ಹಿಡಿದು ಹಾಲಿವುಡ್, ಬಾಲಿವುಡ್ ಸಿನಿಮಾಗಳು, ಪ್ರವಾದಿ ನಿಂದನೆಯ ಸರಣಿ, ಮೂಲಭೂತವಾದಿಗಳು, ಭಯೋತ್ಪಾದಕರು, ಮುಂತಾದ ಪದಗಳ ಬಳಕೆ… ಇವೆಲ್ಲವನ್ನೂ ಕೇಳಿದೆವು.

ಭಾರತದಲ್ಲಿ ಭಾಗಲ್ಪುರ, ಜಂಷಡ್ಪುರ, ಮುಂಬೈ, ಗುಜರಾತ್… ಹೀಗೇ ಮಾರಣ ಹೋಮದ ಸರಣಿ ಸಾಗುತ್ತದೆ. ಬಾಬರೀ ಮಸೀದಿ ಧ್ವಂಸ, ನಕಲಿ ಎನ್ ಕೌಂಟರ್, ವಿವಿಧ ಕಾನೂನುಗಳು…

ಆದರೆ ನಾವು ಅದನ್ನೆಲ್ಲಾ ಮೀರಿ ಖಂಡಿತಾ ಯಶಸ್ವಿ ಯಾಗುವೆವು. ಖಂಡಿತವಾಗಿಯೂ ಪವಿತ್ರ ಕುರ್‌ಆನ್ ಹೇಳಿದ ಮಾತುಗಳು  ನಿಜವಾಗಲಿದೆ. “ಭಯಪಡದಿರಿ, ಆತಂಕಿತರಾಗದಿರಿ, ನೀವೇ ವಿಜಯಿಗಳು. ನೀವು ಸತ್ಯವಿಶ್ವಾಸಿಗಳಾಗಿದ್ದರೆ.”