ಮಹಿಳಾ ನಿಂದಕ ಮುನಿರತ್ನರವರ ಶಾಸಕತ್ವ ರದ್ದುಗೊಳಿಸಲು ವೆಲ್ಪೇರ್ ಪಾರ್ಟಿ ಆಗ್ರಹ

0
118

ಸನ್ಮಾರ್ಗ ವಾರ್ತೆ

ಬೆಂಗಳೂರು: ಓರ್ವ ಜನಪ್ರತಿನಿಧಿಯಾಗಿ ಮಹಿಳೆಯರ ಬಗ್ಗೆ ಇಷ್ಟೊಂದು ಕೀಳ್ಮಟ್ಟದ ಮಾತುಗಳನ್ನಾಡಿದ ಶಾಸಕ ಮುನಿರತ್ನ ರವರ ನಡೆ ಅತ್ಯಂತ ಖಂಡನೀಯ. ಮಾನ್ಯ ಸಭಾಪತಿಗಳು ಮುನಿರತ್ನ ಅವರ ಶಾಸಕತ್ವವನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಒತ್ತಾಸಿದ್ದಾರೆ.

ಇದು ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರವಲ್ಲ ಮಹಿಳಾ ಸಮೂಹಕ್ಕೆ ಮಾಡಿದ ಅವಮಾನವಾಗಿದೆ. ಮಹಿಳೆಯರ ಬಗ್ಗೆ ಇವರಿಗೆ ಎಷ್ಟು ಗೌರವವಿದೆ ಎಂಬುದು ಇವರ ಈ ಕೃತ್ಯದಿಂದ ಬಹಿರಂಗಗೊಂಡಿದೆ. ಇಂತಹ ಶಾಸಕರಿಗೆ ನೈತಿಕತೆಯ ಪಾಟದ ಅಗತ್ಯವಿದೆ.

ಚಿತ್ರರಂಗದಿಂದ ಬಂದು ರಾಜಕೀಯ ರಂಗದಲ್ಲಿ ಸಭ್ಯತೆ ಮೆರೆದವರಿದ್ದಾರೆ. ಸಾಲದು ಎಂಬಂತೆ ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಚೆಲುವರಾಜು ರವರಿಗೆ ಲಂಚಕ್ಕೆ ಬೇಡಿಕೆಯಿಟ್ಟು ಪತ್ನಿಯನ್ನು ನಿಂದಿಸುವ ಹಂತಕ್ಕೆ ತಲುಪಿದ್ದಾರೆಂದರೆ ಇವರಲ್ಲಿ ಅಹಂಕಾರ ಪೊಗರು ಅವೆಷ್ಟಿವೆ ಎಂದು ಅಂದಾಜಿಸಬಹುದು. ಜನಪ್ರತಿನಿಧಿ ಎನಿಸಿಕೊಳ್ಳಲು ಇವರೆಷ್ಟು ಅರ್ಹರು? ಜನರು ಜನಪ್ರತಿನಿಧಿಗಳನ್ನು ಆರಿಸುವಾಗ ಅವರ ನೈತಿಕತೆಯನ್ನು ಕೂಡಾ ಮಾನದಂಡವನ್ನಾಗಿಸಬೇಕು. ಇಲ್ಲದಿದ್ದಲ್ಲಿ ಇಂತಹದ್ದು ಮರುಕಳಿಸುತ್ತದೆ ಎಂದು ಅವರು ಹೇಳಿದರು.