ಸನ್ಮಾರ್ಗ ವಾರ್ತೆ
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ವಲಯದಲ್ಲಿ ವಾಗ್ವಾದ ಮುಂದುವರಿದಿದೆ. ಈ ಮಧ್ಯೆ ‘ಏಕಪತ್ನಿ ವ್ರತಸ್ಥರು ಯಾರಿದ್ದಾರೆ’ ಎಂದು ಸವಾಲು ಹಾಕಿರುವ ವೈದ್ಯಕೀಯ ಸಚಿವ ಡಾ.ಸುಧಾಕರ್ ವಿರುದ್ದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಬಹುಶಃ ಆರೋಗ್ಯ ಸಚಿವರ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಿರಬಹುದು, ಯಾರೋ ಮಾಡಿದ ತಪ್ಪುನ್ನು ಸಮರ್ಥನೆ ಮಾಡಿಕೊಳ್ಳಲು ಮತ್ಯಾರನ್ನೋ ಎಳೆದು ತರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಸಂಸ್ಕಾರ ಇದ್ದವರು ಈ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ ಎಂದು ಅವರು ಅಸಮಾಧಾನ ತೋರಿದರು.
ಎಲ್ಲವನ್ನೂ ಬೀದಿ ರಂಪ ಮಾಡಿ ಸದನದ ಗೌರವ ಘನತೆ ಹರಾಜು ಹಾಕಿರುವುದಲ್ಲದೆ ಶಾಸಕರಲ್ಲಿ ಮಹಿಳೆಯರು ಇದ್ದಾರೆ ಎಂಬುದನ್ನು ಮರೆತು ಈ ರೀತಿಯ ಹೇಳಿಕೆ ನೀಡುವ ಮೂಲಕ ಮಹಿಳೆಯರಿಗೆ ಅವಮಾನ ಮಾಡುತ್ತಿದ್ದೇನೆ ಎಂಬ ಪರಿಜ್ಞಾನವಿಲ್ಲದೇ ಸಚಿವರು ಸವಾಲು ಹಾಕುವುದು ಖಂಡನೀಯ. ಇವರ ಈ ಬೇಜವಾಬ್ದಾರಿಯುತ ಹೇಳಿಕೆಯಿಂದ ಒಳ್ಳೆಯ ವ್ಯಕ್ತಿತ್ವ ಇರುವ ರಾಜಕಾರಣಿಗಳ ಮೇಲೆ ಜನ ಅನುಮಾನ ಪಡುವಂತಹ ವಾತಾವರಣ ನಿರ್ಮಾಣವಾಗಿದೆ, ಸಚಿವರು ತಮ್ಮ ಈ ಹೇಳಿಕೆಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಗ್ರಹಿಸಿದೆ.
ಸದನದಲ್ಲಿ 224 ಶಾಸಕರಿಗೆ ಚಾಲೆಂಜ್ ಹಾಕಿರುವ ಸುಧಾಕರ್ ಅವರ ಹೇಳಿಕೆ ಆಕ್ಷೇಪಾರ್ಹವಾದದ್ದು. ಇದು ಎಲ್ಲರಿಗಾದ ಅವಮಾನ ಎಂದು ವೆಲ್ಫೇರ್ ಪಾರ್ಟಿ ಹೇಳಿದರು.












