ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ 290 ಕೋಟಿ ಜಮೆ ಯಾಗಿದ್ದರೂ ನಯಾಪೈಸೆ ಖರ್ಚು ಮಾಡಿಲ್ಲ: ಆರ್‌ಟಿಐ ಮೂಲಕ ಸತ್ಯ ಬಹಿರಂಗಪಡಿಸಿದ ವೆಲ್ಫೇರ್ ಪಾರ್ಟಿ

0
728

ಸನ್ಮಾರ್ಗ ವಾರ್ತೆ

ಇಡೀ ರಾಜ್ಯಾದ್ಯಂತ ಕೊರೊನಾ ಸೋಂಕು ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವುದು ಒಂದೆಡೆಯಾದರೆ, ಸೋಂಕು ಹೆಚ್ಚಳ ದಿಂದ ಮತ್ತೊಮ್ಮೆ ಲಾಕ್‌ಡೌನ್ ವಿಷಯ ಚರ್ಚೆಗೊಳ್ಳುತ್ತಿದೆ. ಆದರೆ, ಮಾರ್ಚ್‌ನಿಂದ ಜೂನ್‌ವರೆಗೆ ಮುಖ್ಯಮಂತ್ರಿಗಳ ಪರಿ ಹಾರ ನಿಧಿ ಕೋವಿಡ್ -19 ಖಾತೆಗೆ ಬರೋಬ್ಬರಿ 290 ಕೋಟಿ ರೂ. ಜಮೆ ಆಗಿದ್ದರೂ ಇದುವರೆಗೆ ಒಂದು ಪೈಸೆಯೂ ಖರ್ಚು ಮಾಡದಿರುವ ವಿಷಯ ಬಯಲಾಗಿದೆ.

ಈ ಕುರಿತು ಆರ್‌ಟಿಐ ಅಡಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್‌ರವರು ಮುಖ್ಯ ಮಂತ್ರಿಗಳ ಪರಿಹಾರ ನಿಧಿ ಕೋವಿಡ್ -19 ಖಾತೆಗೆ ಜಮೆ ಆದ ಅನುದಾನ ಮತ್ತು ಖರ್ಚು ಮಾಡಿದ್ದು ಎಷ್ಟು ಎಂದು ಮಾಹಿತಿ ಕೇಳಿದ್ದರು.

ಅರ್ಜಿಗೆ ಮುಖ್ಯಮಂತ್ರಿ ಸಚಿವಾಲಯದಿಂದ ವಿವರ ನೀಡಿದ್ದು, ‘ಕೊರೊನಾ ಸೋಂಕು ನಿಯಂತ್ರಣಕ್ಕೆ ಸರಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಚಿಕಿತ್ಸೆ ರೋಗ ಹರಡುವುದನ್ನು ತಪ್ಪಿಸಲು ವೆಚ್ಚ ಭರಿಸುತ್ತಿದ್ದು, ಸಿಎಂ ಪರಿಹಾರ ನಿಧಿ ಖಾತೆಯಲ್ಲಿರುವ ಹಣವನ್ನು ಅವಶ್ಯಕ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ ‘ಆಪತ್ ನಿಧಿಯಾಗಿ ಕಾಯ್ದಿರಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದೆ.

ಈಗಾಗಲೇ ಕೊರೋನಾದಿಂದ ರಾಜ್ಯವೇ ತಲ್ಲಣಗೊಂಡಿದೆ. ಆದರೆ, ಪರಿಹಾರ ನಿಧಿಗೆ ಜಮೆ ಆದ ಅನುದಾ ಒಂದು ನಯಾಪೈಸೆಯೂ ಖರ್ಚು ಮಾಡದೆ ಆಕೌಂಟ್‌ನಲ್ಲಿಯೇ ಉಳಿಸಿ ಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರನ್ನೂ ಪ್ರಶ್ನೆ ಕಾಡುತ್ತಿದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19 ಖಾತೆಗೆ ಮಾರ್ಚ್‌ನಿಂದ ಜೂನ್ 18ರವರೆಗೆ ಒಟ್ಟು 290,98,14,057 ರೂ. ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ದೇಣಿಗೆ ನೀಡಿದ್ದು ಈಗಲೂ ಈ ನಿಧಿಗೆ ಹಣ ಜಮಾವಣೆಯಾಗುತ್ತಲೇ ಇದೆ. ಆದರೆ ಇದುವರೆಗೆ ಯಾಕೆ ಈ ನಿಧಿಯನ್ನು ಉಪಯೋಸಲಾಗಿಲ್ಲ ಎಂಬ ಯಕ್ಷಪ್ರಶ್ನೆ ಜನ ಸಾಮಾನ್ಯರನ್ನು ಕಾಡುತ್ತಿದೆ.

ಸೋಂಕು ತಡೆಗಟ್ಟಲು ತುರ್ತು ಅಗತ್ಯಕ್ಕೆ ಸಿಎಂ, ಪರಿಹಾರ ನಿಧಿಗೆ ಸಾರ್ವಜನಿಕರಿಂದ ನೆರವು ಕೋರಿದ್ದು, ಸರಕಾರ ತುರ್ತು ಅವಶ್ಯಕತೆಗೆ ಮೊತ್ತ ಬಳಕೆ ಮಾಡದೆ, ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಅರ್ಥಹೀನ, ಸಂಗ್ರಹಿಸಿರುವ ಅನುದಾನವನ್ನು ಬಳಕೆ ಮಾಡದಿದ್ದರೆ ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯವಾಗಲಿದೆ ಎಂದುವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಹೇಳಿದರು.

ಮುಖ್ಯಮಂತ್ರಿ ಸಚಿವಾಲಯದ ಈ ಮಾಹಿತಿ ನಿಜಕ್ಕೂ ದಂಗು ಬಡಿಸಿದೆ. ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತುರ್ತು ಅಗತ್ಯಗಳಿಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ ಸರಕಾರ ಆ ಮೊತ್ತದಲ್ಲಿ ಒಂದು ನಯಾ ಪೈಸೆಯನ್ನೂ ಘೋಷಿತ ಉದ್ದೇಶಕ್ಕೆ ವೆಚ್ಚ ಮಾಡದೆ ಆಪತ್ ನಿಧಿಯಾಗಿ’ ಕಾಯ್ದಿರಿಸಲಾಗಿದೆ ಎಂದು ಹೇಳಿರುವುದು ಎಷ್ಟರಮಟ್ಟಿಗೆ ಸರಿ ? ಜತೆಗೆ ಕೊರೋನಾಕ್ಕಿಂತ ತುರ್ತು ಸಂದರ್ಭ ಯಾವುದು ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಅನುದಾನದಲ್ಲಿ ಹೆಚ್ಚಿನ ಲ್ಯಾಬ್, ಉಪಕರಣ, ಔಷಧ, ವೆಂಟಿಲೇಟರ್‌ಗಳನ್ನು ಖರೀದಿಸಿ ನಿಯಂತ್ರಣಕ್ಕೆ ಒತ್ತು ಕೊಡಬಹುದಿತ್ತು. ತಾಜ್ಯದಲ್ಲಿ ನಿರುದ್ಯೋಗದಿಂದ ಜನಸಾಮಾನ್ಯರು ಕಂಗಾಲಾಗಿರುವಾಗ ಈ ನಿಧಿಯು ಸದುಪಯೋಗವಾಗದೇ ಉಳಿದಿರುವುದು ವಿಪರ್ಯಾಸಕರ.

ಈ ಹಿಂದೆ ನಗರಗಳಲ್ಲಿ ಸಿಕ್ಕು ಹಾಕಿಕೊಂಡು ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿದಾಗ ಸರಕಾರ ಹಣವಿಲ್ಲದ ನೆಪವನ್ನಿಟ್ಟು ಬಸ್ ದರವನ್ನು ಮೂರು ಪಟ್ಟು ಹೆಚ್ಚಿಸಿ ವಿವಾದಕ್ಕೀಡಾಗಿತ್ತು. ಅಲ್ಲದೇ, ರಾಜ್ಯಕ್ಕೆ ವಿದೇಶದಿಂದ ಆಗಮಿಸಿದ ಅನಿವಾಸಿಗಳ ಕ್ವಾರಂಟೈನ್‌ ಸಮಸ್ಯೆ, ಕೊರೋನಾ ರೋಗಿಗಳ ಚಿಕಿತ್ಸೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ರೋಗಿಗಳ ಚಿಕಿತ್ಸೆಗೆ ಬೆಲೆ ನಿಗದಿ ಪಡಿಸುವಿಕೆಯಂತಹ ಚಟುವಟಿಕೆಗಳು ವಿವಾದಕ್ಕೀಡಾಗಿರುವಾಗ ಸಿಎಂ ಫಂಡ್ ನಿಂದ ಹಣವನ್ನು ಉಪಯೋಗಿಸದೇ ಇರುವುದು ಇದೀಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.