ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜು.19: ಬೆಂಗಳೂರಿನಲ್ಲಿ 26 ಪ್ರತಿಪಕ್ಷ ಪಾರ್ಟಿಗಳ ಜಂಟಿ ಸಭೆಗೆ ಪ್ರತಿಯಾಗಿ ದಿಲ್ಲಿಯಲ್ಲಿ ಎನ್ಡಿಎ 39 ಪಾರ್ಟಿಗಳ ಸಭೆ ಆಯೋಜಿಸಿದ್ದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವ್ಯಂಗ್ಯವಾಡಿದ್ದಾರೆ.
ಎನ್ಡಿಎ ಸೇರಿದ ಹಲವು ಪಾರ್ಟಿಗಳ ಹೆಸರನ್ನೂ ನಾವು ಕೇಳಿಯೇ ಇಲ್ಲ ಎಂದು ಅವರು ಹೇಳಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಸಖ್ಯವನ್ನು ಸೋಲಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 26 ಪ್ರತಿಪಕ್ಷ ಪಾರ್ಟಿಗಳು ಒಟ್ಟು ಸೇರಿ ಇಂಡಿಯನ್ ನ್ಯಾಶನಲ್ ಡೆವಲಪ್ಮೆಂಟ್ ಇಂಕ್ಲೂಸಿವ್ ಅಲಯನ್ಸ್( ಇಂಡಿಯ, ಐಎನ್ಡಿಐಎ) ಮಾಡಿಕೊಂಡಿವೆ. ತದನಂತರ ಖರ್ಗೆ ಎನ್ಡಿಎಯ ಹೊಸ ಪಾರ್ಟಿಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಎನ್ಡಿಎಯಲ್ಲಿ ಸಣ್ಣ ದೊಡ್ಡ ಪಾರ್ಟಿಗಳೆಂಬುದಿಲ್ಲ. ಎನ್ಡಿಎ ನಿರ್ಬಂಧ ಇರುವ ಸಖ್ಯವಲ್ಲ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಇತ್ತು. ಆದರೂ ಸರಕಾರ ರಚಿಸಿದ್ದು ಎನ್ಡಿಎ ನೆಲೆಯಲ್ಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶೇ.50ಕ್ಕಿಂತ ಹೆಚ್ಚು ಮತ ಗಳಿಸಿ ಮೂರನೇ ಬಾರಿಗೆ ಎನ್ಡಿಎ ಗೆಲ್ಲಲಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದು ಇನ್ನೊಂದು ಸಭೆಯಲ್ಲಿ ಮೋದಿ ಪ್ರತಿ ಪಕ್ಷಗಳದ್ದು ಕುಟುಂಬ ಪ್ರಧಾನ ಸಖ್ಯ, ವೈಯಕ್ತಿಕ ಲಾಭಕ್ಕಾಗಿ ಅವರು ಒಟ್ಟು ಸೇರಿದ್ದಾರೆ ಎಂದು ಆರೋಪಿಸಿದ್ದರು. ಇಂಡಿಯ ಸಖ್ಯವನ್ನು ಭ್ರಷ್ಟಾಚಾರಿಗಳ ಕೂಟ ಎಂದು ಮೋದಿ ವ್ಯಂಗ್ಯವಾಡಿದ್ದರು.
ಬೆಂಗಳೂರಿನಲ್ಲಿ ಸೋಮವಾರ ಮತ್ತು ಮಂಗಳವಾರ ಎರಡು ದಿನಗಳಲ್ಲಿ 26 ಪ್ರತಿಪಕ್ಷ ಪಾರ್ಟಿಗಳು ಸಭೆ ಸೇರಿ ಒಂದುಗೂಡಿದ್ದು ಇದು ಪ್ರಧಾನಿಯ ವ್ಯಂಗ್ಯಕ್ಕೆ ಕಾರಣವಾಗಿತ್ತು.
ಪ್ರತಿಪಕ್ಷಗಳ ಸಖ್ಯದ ಕುರಿತು ಮಾತಾಡಿದ ಖರ್ಗೆ ಈ ಹಿಂದೆ ನಾವು ಯುಪಿಎ ಎಂಬ ಸಖ್ಯ ಮಾಡಿಕೊಂಡಿದ್ದೆವು. ಈಗ ಇಂಡಿಯಾ ಎಂಬ ಹೆಸರಿನಲ್ಲಿ ಒಟ್ಟುಗೂಡಿದ್ದೇವೆ. ಇಂಡಿಯಾ ಸಖ್ಯದಲ್ಲಿ ಏಳು ಮುಖ್ಯಮಂತ್ರಿಗಳಿದ್ದಾರೆ. 26 ಪಾರ್ಟಿಗಳ ನಾಯಕರಿದ್ದಾರೆ. ಪಶ್ಚಿಮ ಬಂಗಾಳ, ತಮಿಳ್ನಾಡು, ದಿಲ್ಲಿ, ಪಂಜಾಬ್, ಬಿಹಾರ, ಝಾರ್ಕಂಡ್, ಕರ್ನಾಟಕದ ಮುಖ್ಯಮಂತ್ರಿಗಳು ಸಭೆಯಲ್ಲಿದ್ದರು. ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್, ಅರವಿಂದ್ ಕೇಜ್ರಿವಾಲ್, ಭಗವಂತ್ ಸಿಂಗ್ ಮಾನ್ , ನಿತೀಶ್ ಕುಮಾರ್, ಹೇಮಂತ್ ಸೊರೆನ್, ಸಿದ್ದರಾಮಯ್ಯ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದರು. ವಿವಿಧ ಪಾರ್ಟಿಯಿಂದ 50ಕ್ಕೂ ಹೆಚ್ಚು ನಾಯಕರು ಭಾಗವಹಿಸಿದರು. ಸೋನಿಯ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್, ಶರದ್ ಪವಾರ್, ಎನ್ಸಿಪಿ, ಶಿವಸೇನೆಯ ಉದ್ಧವ್ ಠಾಕರೆ, ಸಿಪಿಎಂನ ಸೀತಾರಾಂ ಯೆಚೂರಿ, ನ್ಯಾಶನಲ್ ಕಾನ್ಫರೆನ್ಸ್ ನ ಉಮರ್ ಅಬ್ದುಲ್ಲ, ಪಿಡಿಪಿಯ ಮೆಹಬೂಬ ಮುಫ್ತಿ ಮುಂತಾದವರು ಪ್ರತಿಪಕ್ಷಗಳ ಇಂಡಿಯಾ ಸಖ್ಯದ ಸಭೆಗೆ ಬಂದಿದ್ದರು.
ಜೂನ್ 23ಕ್ಕೆ ಪ್ರತಿಪಕ್ಷಗಳು ಮೊದಲ ಸಭೆ ಪಟ್ನದಲ್ಲಿ ನಡೆಸಿದ್ದು ಎರಡನೆ ಸಭೆ ಬೆಂಗಳೂರಿನಲ್ಲಿ ನಡೆಯಿತು. ಮುಂದಿನ ಸಭೆ ಮುಂಬಯಿಯಲ್ಲಿ ನಡೆಯಲಿದೆ.












