ನಿಮಗೆ ಗೊತ್ತಿಲ್ಲದ ಪುಟಿನ್ ಇನ್ನೊಂದು ಮುಖ: ರಷ್ಯಾದ ಈ ಅಧ್ಯಕ್ಷ ಕಮ್ಯುನಿಸ್ಟೋ, ಪ್ರಜಾತಂತ್ರವಾದಿಯೋ ಅಲ್ಲ, ಸರ್ವಾಧಿಕಾರಿಯೋ? ಒಂದು ಕುತೂಹಲಕಾರೀ ವಿವರ

0
1625

ಸನ್ಮಾರ್ಗ ವಾರ್ತೆ

ದಿನೇಶ್ ಕುಮಾರ್ ದಿನೂ

ನಾವು ಪ್ರತಿನಿತ್ಯ ಫೇಕ್ ನ್ಯೂಸ್ ಗಳ ಜತೆ ಬಡಿದಾಡುತ್ತಿದ್ದೇವೆ. ವಡ್ನಾಗರ್ ರೈಲ್ವೆ ಸ್ಟೇಷನ್, ಚಿನ್ನದ ರಸ್ತೆಯಿಂದ‌‌ ಹಿಡಿದು ನಿನ್ನೆ ಮೊನ್ನೆ ಶುರುವಾದ ರಾಹುಲ್ ಗಾಂಧಿ-ಚೀನಾ ಒಪ್ಪಂದದವರೆಗೆ ಪ್ರತಿನಿತ್ಯ ಒಂದಲ್ಲ ಒಂದು ಫೇಕ್ ನ್ಯೂಸನ್ನು ಸುಳ್ಳು ಎಂದು ಹೇಳಲು ಪರದಾಡುತ್ತಿರುತ್ತೇವೆ. ಐಟಿ‌‌ ಸೆಲ್ಲು ಹರಡಿದ್ದು ಫೇಕು ಅನ್ನೋದು ಸಾವಿರದಲ್ಲಿ ಒಬ್ಬರಿಗೆ ಗೊತ್ತಾದರೆ ಮಿಕ್ಕ 999 ಜನರು ಅದನ್ನು ನಂಬಿರುತ್ತಾರೆ. ಅಂದಹಾಗೆ ಇಡೀ ಜಗತ್ತಿನಲ್ಲಿ ಫೇಕ್ ನ್ಯೂಸ್ ಗಳ ಜನಕ ಯಾರು ಗೊತ್ತಾ? ವ್ಲಾದಿಮಿರ್ ಪುಟಿನ್! ರಷ್ಯಾದ ಅಧ್ಯಕ್ಷ.‌ ಅಮೆರಿಕದ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲ್ಲಲು ಕಾರಣ ಇದೇ ವ್ಲಾದಿಮಿರ್ ಪುಟಿನ್. ಸರ್ವಾಧಿಕಾರ, ಭ್ರಷ್ಟಾಚಾರ, ವಿರೋಧಿಗಳ ಮೇಲೆ ದೌರ್ಜನ್ಯ, ಅಧಿಕಾರ ದಾಹ, ಸುಳ್ಳು-ಕಪಟ ಎಲ್ಲ ಹೊದ್ದ ಜಾಗತಿಕ ನಾಯಕರಲ್ಲಿ ಪುಟಿನ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾನೆ.

ರಷ್ಯಾದ ಸೀಕ್ರೆಟ್ ಪೊಲೀಸ್ ಏಜೆನ್ಸಿ ಕೆಜಿಬಿಯಲ್ಲಿ ಅಧಿಕಾರಿಯಾಗಿದ್ದ ಪುಟಿನ್ ಯಶೋಗಾಥೆ ಆತನ ಮೂಲಸ್ಥಾನ ಲೆನಿನ್ ಗ್ರಾದ್ ನಗರದಿಂದಲೇ ಶುರುವಾಗುತ್ತದೆ. ಕೆಜಿಬಿಯಲ್ಲಿ ಇದ್ದಾಗಲೂ ಪುಟಿನ್ ಅಂಥ ರೆಪ್ಯುಟೇಷನ್ ಹೊಂದಿರಲಿಲ್ಲ. ಅಂಡರ್ ಕವರ್ ಏಜೆಂಟನಾಗಿ ಜರ್ಮನಿಯಲ್ಲಿ ಕೆಲಕಾಲ ಕೆಲಸ ಮಾಡಿದ ಪುಟಿನ್ ಬರೀ ಪೇಪರ್ ಕಟ್ಟಿಂಗ್ ಕಳಿಸಿದ್ದೇ ಸಾಧನೆ ಎಂದು ಆತನ‌ ಸಹೋದ್ಯೋಗಿಗಳು ಹೇಳುತ್ತಾರೆ. ಪುಟಿನ್ ಕೆಜಿಬಿಯಿಂದ ಹೊರಬಂದು ಶಾರ್ಟ್ ಕಟ್ ಗಳನ್ನು ಹುಡುಕಿಕೊಂಡು ರಾಜಕೀಯವಾಗಿ ಮೇಲೆ ಬರುತ್ತಾನೆ.

ಸೋವಿಯತ್ ಯೂನಿಯನ್ ಪತನದ ನಂತರ ರಷ್ಯಾವನ್ನು ಮುನ್ನಡೆಸಿದ್ದ ಬೋರಿಸ್ ಎಲ್ಸ್ಟಿನ್ ಗೆ ನಿಕಟನಾಗುತ್ತಾನೆ. ಎಲ್ಸ್ಟಿನ್ ಪ್ರಧಾನಮಂತ್ರಿ‌ ಹುದ್ದೆಗೆ ಪುಟಿನ್ ನನ್ನು ತಂದು ನಿಲ್ಲಿಸಿದಾಗ ಇಡೀ‌ ದೇಶವೇ ಬೆರಗಾಗಿತ್ತು. ಯಾಕೆಂದರೆ ಬಹುಪಾಲು ಜನರು ಈತನ ಹೆಸರು ಕೇಳಿಯೇ ಇರಲಿಲ್ಲ. ಎಲ್ಸ್ಟಿನ್ ಅಲ್ಲಿಗೆ ನಿಲ್ಲದೆ, ಪುಟಿನ್ ನನ್ನು ತನ್ನ ಉತ್ತರಾಧಿಕಾರಿಯೆಂದು ಘೋಷಿಸಿದರು. ಪುಟಿನ್ ರಷ್ಯಾ ಅಧ್ಯಕ್ಷನಾದ ಕೂಡಲೇ ಮಾಡಿದ ಮೊದಲ ಕೆಲಸ ಎಲ್ಸ್ಟಿನ್ ಕಾಲದ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಿದ್ದು.

ಪುಟಿನ್ ಎರಡು ಸತತ ಅವಧಿಗೆ ಅಧ್ಯಕ್ಷನಾಗುತ್ತಾನೆ. ರಷ್ಯಾದ ಸಂವಿಧಾನದ ಪ್ರಕಾರ ಮೂರನೇ ಅವಧಿಗೆ ಅಧ್ಯಕ್ಷ‌ ಸ್ಥಾನ ಏರುವಂತಿರಲಿಲ್ಲ. ಪುಟಿನ್ ತನ್ನ ನಿಷ್ಠಾವಂತ ಡಿಮಿಟ್ರಿ ಮೆಡ್ವೆಡೆವ್ ಎಂಬಾತನನ್ನು ಅಧ್ಯಕ್ಷ ಗಾದಿಗೆ ಏರಿಸಿ,‌ ತಾನು ಪ್ರಧಾನಿಯಾಗಿಬಿಡುತ್ತಾನೆ! ನರೇಂದ್ರ ಮೋದಿ ಮುಂದೊಂದು ದಿನ ಅಮಿತ್ ಶಾ ಕ್ಯಾಬಿನೆಟ್ ನಲ್ಲಿ ಮಂತ್ರಿಯಾದರೆ ಹೇಗಿರುತ್ತೆ ಹೇಳಿ? ಪುಟಿನ್ ಮಾಡಿದ್ದು ಅದನ್ನೆ. ನಂತರ ಮೆಡ್ವೆಡೆವ್ ತನ್ನ ನಂತರದ ಅಧ್ಯಕ್ಷ ಪಟ್ಟಕ್ಕೆ ಮತ್ತೆ ಪುಟಿನ್ ಹೆಸರನ್ನೇ ತರುತ್ತಾನೆ. ಪುಟಿನ್ ಮತ್ತೆ ಅಧ್ಯಕ್ಷನಾಗುತ್ತಾನೆ. ಈ ರೀತಿ ಅಧಿಕಾರ ಹಸ್ತಾಂತರಿಸುವ ಒಪ್ಪಂದ ಮೊದಲೇ ನಮ್ಮ ನಡುವೆ ಆಗಿತ್ತು ಎಂದು ಬಹಿರಂಗವಾಗಿಯೇ ಹೇಳಿದ ಈ ರಷ್ಯಾದ ಪನ್ನೀರ್ ಸೆಲ್ವಂ!

ಪುಟಿನ್ ಮೂರನೇ ಅವಧಿಗೆ ರಷ್ಯಾದ ಅಧ್ಯಕ್ಷನಾದಮೇಲೆ ನಾಲ್ಕನೇ ಅವಧಿಗೂ ಆಯ್ಕೆಯಾಗುತ್ತಾನೆ. ಈಗ ಮತ್ತೆ‌ ಎರಡು ಸತತ ಅವಧಿಗಳಿಗೆ ಅಧ್ಯಕ್ಷನಾಗಿರುವುದರಿಂದ‌ ಮೂರನೇ ಅವಧಿಗೆ 2024ರಲ್ಲಿ ಅಧ್ಯಕ್ಷನಾಗುವಂತಿಲ್ಲ. ಆದರೆ ಈ ದೊರೆ ಅಷ್ಟು ಸುಲಭವಾಗಿ ಅಧಿಕಾರದಿಂದ ದೂರ ಉಳಿಯುತ್ತಾನೆ ಎಂದು ಜಗತ್ತು‌ ನಂಬುವುದೇ ಇಲ್ಲ. ದಯವಿಟ್ಟು ನಂಬಿ, ಪುಟಿನ್ ನಿವೃತ್ತನಾಗೋದಿಲ್ಲ!

ರಷ್ಯಾದಲ್ಲಿ ಪುಟಿನ್ ತಾನು ಅಧಿಕಾರಕ್ಕೆ ಬಂದ ನಂತರ ಮಾಡಿದ್ದು, ಇಡೀ ರಷ್ಯಾ ರಾಜಕಾರಣವನ್ನು ತನ್ನ ಹತೋಟಿಗೆ ತಂದುಕೊಂಡಿದ್ದು. ಭಿನ್ನ ಧ್ವನಿಗಳನ್ನು ಆತ ಸಹಿಸಿಕೊಳ್ಳಲೇ ಇಲ್ಲ. ಪುಟಿನ್ ಭ್ರಷ್ಟಾಚಾರ ಮತ್ತು ಸರ್ವಾಧಿಕಾರದ ವಿರುದ್ಧ ಧ್ವನಿಗಳನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು.‌ ಪುಟಿನ್ ವಿರುದ್ಧ ಮಾಸ್ಕೋದಲ್ಲಿ ಒಂದು ದೊಡ್ಡ ರ‌್ಯಾಲಿ ನಡೆಯಿತೆಂದುಕೊಳ್ಳಿ, ಮಾರನೇ ದಿನ ಅದಕ್ಕಿಂತ ದೊಡ್ಡ ರ‌್ಯಾಲಿ ಪುಟಿನ್ ಪರವಾಗಿಯೂ ನಡೆಯುತ್ತಿತ್ತು. ರ‌್ಯಾಲಿಗೆ ಬಂದವರಿಗೆ ಒಂದೇ ದುಡ್ಡು ಕೊಟ್ಟು ಕರೆಸಲಾಗುತ್ತಿತ್ತು ಅಥವಾ ಯಾವುದೋ ಸಾಂಸ್ಕೃತಿಕ ಮೇಳದ ಹೆಸರಲ್ಲಿ ಸೇರಿಸಲಾಗುತ್ತಿತ್ತು. ಪುಟಿನ್ ಅವಧಿಯಲ್ಲಿ ಪತ್ರಕರ್ತರ ಮೇಲೆ ನಡೆದ ದೌರ್ಜನ್ಯಗಳಿಗೆ ಲೆಕ್ಕವಿಲ್ಲ. ಪುಟಿನ್ ಜನ್ಮದಿನದಂದೇ ಪತ್ರಕರ್ತೆಯೊಬ್ಬರನ್ನು ದಾರುಣವಾಗಿ ಕೊಲ್ಲಲಾಯಿತು. ಪತ್ರಕರ್ತರು, ಜನಸಾಮಾನ್ಯರು ಪ್ರತಿಭಟಿಸಿದರು. ಏನೂ ಪ್ರಯೋಜನವಾಗಲಿಲ್ಲ. ಪುಟಿನ್ ತನ್ನ‌ ಪರವಾದ ಮಾಧ್ಯಮಗಳನ್ನು ಸಾಕಿಕೊಂಡಿದ್ದಲ್ಲದೆ ವಿರೋಧಿ ಮಾಧ್ಯಮಗಳನ್ನು ಹತ್ತಿಕ್ಕಿದ. ಪುಟಿನ್ ವಿರೋಧಿಸುವವರನ್ನು ಅಮೆರಿಕ ಪರವಾದ ಏಜೆಂಟರು ಎಂದು ನಿಂದಿಸಲಾಯಿತು. ಮೋದಿ ವಿರೋಧಿಗಳನ್ನು ಪಾಕಿಸ್ತಾನಕ್ಕೆ ಕಳಿಸಿ ಎಂದು ನಮ್ಮಲ್ಲಿ ಹೇಳುವುದಿಲ್ಲವೇ, ಥೇಟ್ ಹಾಗೆಯೇ.

ಮೊನ್ನ ಗ್ಯಾಲ್ವಾನ್ ಕಣಿವೆಯಲ್ಲಿ 20 ಭಾರತೀಯ ಸೈನಿಕರು ದಾರುಣವಾಗಿ ಚೀನಾ ಯೋಧರಿಂದ ಹತ್ಯೆಗೀಡಾದರಲ್ಲ, ಆ ನಂತರ ಸಿ ಓಟರ್ ಒಂದು ಸಮೀಕ್ಷೆ ನಡೆಸಿತು. ಮೋದಿ ಸರ್ಕಾರ ಚೀನಾ ಸಂಘರ್ಷವನ್ನು ಸಮರ್ಥವಾಗಿ ಎದುರಿಸಿದೆ ಎಂದು ಶೇ. 73ಕ್ಕೂ ಹೆಚ್ಚು ಭಾರತೀಯರು ಅಭಿಪ್ರಾಯಪಡುತ್ತಾರೆ ಎಂದು ಹೇಳುತ್ತದೆ ಸಮೀಕ್ಷೆ! ಒಂದು ತಮಾಶೆಯ ಕಥೆ ಕೇಳಿ. 2002ರ ಅಕ್ಟೋಬರ್ ನಲ್ಲಿ ಮಾಸ್ಕೋದ ಥಿಯೇಟರ್ ಒಂದರಲ್ಲಿ ನೂರಾ ಮೂವತ್ತು ಒತ್ತೆಯಾಳುಗಳು ದುಷ್ಕರ್ಮಿಗಳಿಂದ ಹತರಾದರು. ರಷ್ಯಾದ ಇತಿಹಾಸದಲ್ಲಿ ನಡೆದ ಭೀಕರ ದುಷ್ಕೃತ್ಯಗಳಲ್ಲಿ ಇದೂ ಕೂಡ ಒಂದು. ವ್ಲಾದಿಮಿರ್ ಪುಟಿನ್ ಜನಪ್ರಿಯತೆಯನ್ನು ಇದು ಸರ್ವನಾಶ ಮಾಡಲಿದೆ ಎಂದು ರಷ್ಯಾ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಬಣ್ಣಿಸಿದವು. ಆದರೆ ಸಮೀಕ್ಷೆಯೊಂದರ ಪ್ರಕಾರ ಶೇ. 83 ರಷ್ಟು ಮಂದಿ‌ ರಷ್ಯನ್ನರು ಈ ಘಟನೆಯನ್ನು ಪುಟಿನ್ ಸಮರ್ಥವಾಗಿ ನಿಭಾಯಿಸಿದ್ದಾರೆಂದು ಷರಾ ಬರೆದಿದ್ದರು. ನಿಮಗೆ ಈಗ ಪುಲ್ವಾಮಾ ಕೂಡ ನೆನಪಾಗಿರಬೇಕಲ್ಲವೇ? ಆಲ್ ರೈಟ್ ಮುಂದಕ್ಕೋಗೋಣ.

ಪುಟಿನ್ ನೆರೆಯ ಉಕ್ರೇನ್ ರಾಜಕಾರಣದಲ್ಲಿ ಮೂಗು ತೂರಿಸಿದ. ಉಕ್ರೇನ್ ಒಳಗೆ ರಷ್ಯಾ ಸೈನ್ಯ ನುಗ್ಗಿತು. ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಕಾರ್ಯಾಚರಣೆಯನ್ನು ಅಮೆರಿಕ ಮತ್ತು ಯೂರೋಪಿಯನ್ ರಾಷ್ಟ್ರಗಳು ಖಂಡಿಸಿದ್ದು ಮಾತ್ರವಲ್ಲ, ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ಹೇರಿದವು. ಚೆಚನ್ಯದಲ್ಲಿ ನಡೆಯುತ್ತಿದ್ದ ಆಡಳಿತ ವಿರೋಧಿ ದಂಗೆ ನಿಯಂತ್ರಣಕ್ಕೆ ರಷ್ಯಾ‌ ಸೈನ್ಯ ಮುಂದಾಯಿತು. ಬಂಡುಕೋರರನ್ನು ಬಗ್ಗುಬಡಿದ ರಷ್ಯಾ, ಚೆಚನ್ಯವನ್ನು ರಷ್ಯಾ ದ ಭಾಗ ಎಂದು ಘೋಷಿಸಿಕೊಂಡಿತು. ಸಿರಿಯಾದಲ್ಲೂ ಕಾರ್ಯಾಚರಣೆ ನಡೆಸುತ್ತಿದ್ದ ಭಯೋತ್ಪಾದಕರನ್ನು‌ ಎದುರಿಸಲಾಗದೆ ಅಲ್ಲಿನ ಸರ್ಕಾರ ರಷ್ಯಾ ಮಧ್ಯಪ್ರವೇಶಕ್ಕೆ ಕೋರಿತು. ರಷ್ಯಾ ಸೈನ್ಯ ಸಿರಿಯಾದೊಳಗೆ ನುಗ್ಗಿತು. ಸದ್ಯಕ್ಕೆ ರಷ್ಯಾ ಸೈನ್ಯದ ಕಾರ್ಯಾಚರಣೆ ಮುಗಿದಿದ್ದರೂ ಈಗಲೂ ಸಿರಿಯಾ ರಷ್ಯಾ ಅಂಕೆಯಲ್ಲೇ ಇದೆ.

ಯಾವಾಗ ರಷ್ಯಾ ಮೇಲೆ ಅಮೆರಿಕ ದಿಗ್ಬಂಧನ ಹೂಡಿತೋ, ಪುಟಿನ್ ಅಂದಿನ ಒಬಾಮಾ ಆಡಳಿತದ ಮೇಲೆ ಕೆಂಗಣ್ಣು ಬೀರಿದ. ಹಿಲರಿ ಕ್ಲಿಂಟನ್ ಮೇಲೆ ದ್ವೇಷ ಬೆಳೆಸಿಕೊಂಡ. ಲಿಬಿಯಾದಲ್ಲಿ ಗಡಾಫಿ ಸರ್ವಾಧಿಕಾರ ಅಂತ್ಯಗೊಂಡನಂತರ ಹಿಲರಿ ಕ್ಲಿಂಟನ್ ನಮ್ಮ ಮುಂದಿನ‌ ಗುರಿ ಪುಟಿನ್ ಎಂದು ಹೇಳಿದ್ದರಂತೆ! ಅದು ಪುಟಿನ್ ಇನ್ನಷ್ಟು ಕೆರಳಲು ಕಾರಣವಾಯಿತು. ನಂತರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಂದಾಗ ಹಿಲರಿ‌ ಕ್ಲಿಂಟನ್ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದಾಗ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿತು.

ಒಂದು ಕಡೆ ರಷ್ಯಾ ಮೇಲೆ ಬುಸುಗುಟ್ಟುತ್ತಿದ್ದ ಹಿಲರಿ ಕ್ಲಿಂಟನ್ ಸೋಲಬೇಕು. ಇನ್ನೊಂದೆಡೆ ರಷ್ಯಾ ನಾಯಕತ್ವಕ್ಕೆ ಪೂರಕವಾಗಿ ಕೆಲಸ ಮಾಡಬಲ್ಲ ನಾಯಕನೂ ಅಧ್ಯಕ್ಷನಾಗಬೇಕು. ಡೊನಾಲ್ಡ್ ಟ್ರಂಪ್ ಗಿಂತ ಒಳ್ಳೆಯ ಆಯ್ಕೆ ಇರಲು ಸಾಧ್ಯವಿತ್ತೆ? ಪುಟಿನ್ ಇಡೀ ಚುನಾವಣೆಯಲ್ಲಿ‌ ಟ್ರಂಪ್ ಬೆನ್ನಿಗೆ ನಿಂತುಬಿಟ್ಟ.

ಅಮೆರಿಕದ ಚುನಾವಣೆಯಲ್ಲಿ ರಷ್ಯಾ ಏನು ಮಾಡಲು ಸಾಧ್ಯ ಎಂಬ ಪ್ರಶ್ನೆ‌ ಉದ್ಭವಿಸುವುದು ಸಹಜ. ಆದರೆ ಪುಟಿನ್ ಮೂಗಿನ ನೇರಕ್ಕೆ ರಷ್ಯಾದ ಸೀಕ್ರೆಟ್ ಏಜೆನ್ಸಿಗಳು, ತಂತ್ರಜ್ಞರು, ಸರ್ಕಾರಿ ಅಧಿಕಾರಿಗಳು ಹೆಣೆದ ಜಾಲ ಸಾಮಾನ್ಯದಲ್ಲ. ಅದು ಹತ್ತು ಹಾಲಿವುಡ್ ಸಿನಿಮಾಗಳಿಗೆ ಆಗಬಹುದಾದ ಸರಕು! ಟ್ರಂಪ್ ಮಗನೇ ರಷ್ಯಾ ಅಧಿಕಾರಿಗಳ ಜತೆ ಸಭೆ ನಡೆಸಿದ ವಿಡಿಯೋ ಹೊರಬಂದಾಗ ಏನೇನಾಗಿರಬಹುದೆಂಬ ಸಣ್ಣ ಅಂದಾಜು ಜಗತ್ತಿಗೆ ಸಿಕ್ಕಿತು. ಆದರೆ ಆಳದಲ್ಲಿ ಪುಟಿನ್ ದೊಡ್ಡ ಷಡ್ಯಂತ್ರವನ್ನೇ ಹೂಡಿದ್ದರು. ಹಿಲರಿ ಕ್ಲಿಂಟನ್ ಪರಾಭವಗೊಂಡರು, ಹೆಣ್ಣುಮಕ್ಕಳ ಖಾಸಗಿ ಅಂಗಗಳ ಮೇಲೆ ಕೈಯಿಟ್ಟು ವಿಡಿಯೋಗೆ ಫೋಸು ನೀಡುವ ಲಫಂಗ ಟ್ರಂಪ್ ಗೆದ್ದೇ ಬಿಟ್ಟ. ಇದೆಲ್ಲ ಪುಟಿನ್ ಗೆ ಹೇಗೆ ಸಾಧ್ಯವಾಯಿತು ಅನ್ನೋದು ರೋಚಕ‌ ಕಥೆ. ಅದನ್ನು ಮತ್ತೆಂದಾದರೂ ಬರೆದೇನು.

ನಾವು ಇಂಡಿಯಾದಲ್ಲಿ ಒಬ್ಬ ರಾಜಕಾರಣಿಯನ್ನು ಚಾಣಕ್ಯ ಎನ್ನುತ್ತೇವಲ್ಲ, ಅವನಂಥ ಹತ್ತು ಜನರನ್ನು ಒಟ್ಟಿಗೆ ಸೇರಿಸಿದರೆ ಉದ್ಭವಿಸುವವನೇ ಈ ಪುಟಿನ್. ಈತ ಕಮ್ಯುನಿಸ್ಟನಲ್ಲ ( ಕಮ್ಯುನಿಸಂ ಪ್ರಸ್ತುತವಲ್ಲ ಎಂಬುದು ಇವನ ಹೇಳಿಕೆ) ಈತ ಪ್ರಜಾಪ್ರಭುತ್ವವಾದಿಯೂ ಅಲ್ಲ. ಇವನ ಪಕ್ಷ ಪ್ರತಿ ಚುನಾವಣೆಯಲ್ಲೂ ರಾಜಾರೋಷವಾಗಿ ರಿಗ್ಗಿಂಗ್ ನಡೆಸುತ್ತದೆ. ಹಾಗಂತ ಇವನು ಘೋಷಿತ ಸರ್ವಾಧಿಕಾರಿಯೂ ಅಲ್ಲ. ತನ್ನ‌ ದೇಶದ ಸಂವಿಧಾನವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವುದು ಇವನಿಗೆ ಗೊತ್ತು. ಯಾವ ಲೇಬಲ್ಲಿಗೂ ಸಿಗದ ಪುಟಿನ್ ಒಬ್ಬ ಪುಟಿನ್ ಅಷ್ಟೆ.‌ ಅವನಿಗೆ ಯಾವ ಹೋಲಿಕೆಯೂ ಇಲ್ಲ.‌

ಹಾಗಾದರೆ ಪುಟಿನ್ ಏನು ಎಂದು ನೀವು ಕೇಳಬಹುದು. ರಷ್ಯನ್ನರ ಪಾಲಿಗೆ ಅವನು ಒಬ್ಬ ರಾಷ್ಟ್ರವಾದಿ! ಪಾಪ್ಯುಲಿಸ್ಟ್ ರಾಜಕಾರಣದ ಬಗ್ಗೆ ಜಗತ್ತಿನಲ್ಲಿ ಯಾರು ಏನೇ ಬರೆದರೂ ಪುಟಿನ್ ಹೆಸರು ಬರೆಯದೇ ಇರಲು ಸಾಧ್ಯವಿಲ್ಲ.

ಕೊನೇದಾಗಿ ನೀವು ನಮ್ಮ ರಣಬೇಟೆಗಾರನ ಬಗ್ಗೆಯೇ ಯೋಚಿಸುತ್ತಿದ್ದೀರಿ ಅನ್ನೋದು ನನಗೆ ಗೊತ್ತು. ಹೋಲಿಸಿಕೊಳ್ಳಿ, ತಪ್ಪೇನಿಲ್ಲ. ಕೆಟ್ಟದ್ದೆಲ್ಲ ನಮ್ಮಲ್ಲಿ ಆರಂಭಗೊಂಡು ಕೆಲವೇ ವರ್ಷಗಳಾದವು ಅಷ್ಟೆ. ಮುಕ್ಕಾಲು ಅಧ್ಯಾಯ ಇನ್ನೂ ಬಾಕಿ ಇದೆ. ಪಿಕ್ಚರ್ ಅಭಿ ಬಾಕಿ ಹೈ ಮೇರೆ ದೋಸ್ಟ್!

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.