✍️ ಖಾಸಿಂ ಸಾಬ್, ಎ. ಬೆಂಗಳೂರು
ಉರ್ದು ಒಂದು ಸುಂದರವಾದ, ಇಂಡೋ-ಆರ್ಯನ್ ಭಾಷೆಯಾಗಿದ್ದು, ಪ್ರಮುಖವಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಪರ್ಷಿಯನ್, ಅರೇಬಿಕ್ ಮತ್ತು ಟರ್ಕಿಶ್ ಭಾಷೆಗಳ ಪ್ರಭಾವದೊಂದಿಗೆ, ದೆಹಲಿ ಸುಲ್ತಾನರು ಮತ್ತು ಮೊಘಲರ ಆಳ್ವಿಕೆಯಲ್ಲಿ ಖರಿಬೋಲಿ ಉಪಭಾಷೆಯಿಂದ ಇದು ವಿಕಸನಗೊಂಡಿತು. ಪಾಕಿಸ್ತಾನದ ರಾಷ್ಟ್ರೀಯ ಭಾಷೆಯಾದ ಇದು, ಭಾರತದ ಸಂವಿಧಾನದ 8ನೇ ಅನುಸೂಚಿಯಲ್ಲಿ ಮಾನ್ಯತೆ ಪಡೆದ ಭಾಷೆಯಾಗಿದೆ. ನಸ್ತಾಲಿಕ್ ಲಿಪಿಯಲ್ಲಿ ಇದನ್ನು ಬರೆಯಲಾಗುತ್ತದೆ. ಉರ್ದು ಭಾಷೆಯ ಮೂಲ ಮತ್ತು ಇತಿಹಾಸವನ್ನು ನೋಡುವುದಾದರೆ. 12-13ನೇ ಶತಮಾನದಲ್ಲಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉರ್ದುವಿನ ಬೇರುಗಳು (ರೇಖ್ತಾ ಉಪಭಾಷೆ) ಸೃಷ್ಟಿಯಾದವು. ಅಮೀರ್ ಖುಸ್ರು ಅವರನ್ನು ಇದರ ಆರಂಭಿಕ ರೂವಾರಿ ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಉರ್ದುವು ಸಂವಿಧಾನಬದ್ಧವಾಗಿ ಮಾನ್ಯತೆ ಪಡೆದ ಭಾಷೆಯಾಗಿದ್ದು, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಅಂದ್ರ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಹೆಚ್ಚಿನ ಬಳಕೆಯಲ್ಲಿದೆ. ಪ್ರಪಂಚದಾದ್ಯಂತ ಕೋಟ್ಯಂತರ ಜನರು ಉರ್ದು ಮಾತನಾಡುತ್ತಾರೆ. ಉರ್ದು ಕೇವಲ ಸಂವಹನ ಮಾಧ್ಯಮವಲ್ಲದೆ, ಸಾಂಸ್ಕೃತಿಕ ಪರಂಪರೆ ಮತ್ತು ಕಲೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಭಾಷೆಯಾಗಿದ್ದು, ಪರ್ಶಿಯನ್–ಅರಬಿಕ್ ಲಿಪಿಯ ಆಧಾರದಲ್ಲಿದೆ. ವಿಶೇಷವಾಗಿ ಇದು ನಸ್ತಾಲಿಕ್ ಶೈಲಿಯನ್ನು ಅನುಸರಿಸುತ್ತದೆ. ಅರಬಿಕ್ ಮತ್ತು ಪರ್ಶಿಯನ್ ಲಿಪಿಗಳಲ್ಲಿ ಬರೆಯುವ ಪದ್ಧತಿ ಪ್ರಾಚೀನ ಕಾಲದಿಂದಲೇ ಬಲದಿಂದ ಎಡಕ್ಕೆ ಇತ್ತು. ಉರ್ದು ಭಾಷೆ ಪರ್ಶಿಯನ್ ಮತ್ತು ಅರಬಿಕ್ ಪ್ರಭಾವದಿಂದ ರೂಪುಗೊಂಡದ್ದರಿಂದ ಅದೇ ಬರವಣಿಗೆ ಕ್ರಮವನ್ನು ಸ್ವೀಕರಿಸಿತು. ಲಿಪಿಯ ಅಕ್ಷರಗಳ ಆಕಾರಗಳು ಪರಸ್ಪರ ಸಂಪರ್ಕ ಹೊಂದಿರುವುದರಿಂದ (joined script), ಬಲದಿಂದ ಎಡಕ್ಕೆ ಬರೆಯುವುದು ಸ್ವಾಭಾವಿಕ ಮತ್ತು ಸೌಕರ್ಯಕರವಾಗಿದೆ. ಅದರಿಂದ ಉರ್ದು ಭಾಷೆಯನ್ನು ಇಂದಿಗೂ ಬಲದಿಂದ ಎಡಕ್ಕೆ ಬರೆಯಲಾಗುತ್ತದೆ.
ಭಾರತದಲ್ಲಿ ಉರ್ದು ಕೆಲ ರಾಜ್ಯಗಳಲ್ಲಿ ದ್ವಿತೀಯ ಅಧಿಕೃತ ಭಾಷೆ (Second Official Language) ಆಗಿದೆ. ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬೆಂಗಾಲ, ದೆಹಲಿಯಂತಹ ರಾಜ್ಯಗಳಲ್ಲಿ ಉರ್ದು ಜಿಲ್ಲಾ ಮಟ್ಟದಲ್ಲಿ ಅಥವಾ ನಿರ್ದಿಷ್ಟ ಪ್ರದೇಶಗಳಲ್ಲಿ ಅಧಿಕೃತ ಮಾನ್ಯತೆ ಪಡೆದಿದೆ. ಉರ್ದು ಭಾಷೆ ಭಾರತದ ಸಂವಿಧಾನದ ಎಂಟನೇ ಅನುಬಂಧದಲ್ಲಿರುವ ಮಾನ್ಯತೆ ಪಡೆದ ಭಾಷೆಗಳಲ್ಲೊಂದಾಗಿದೆ.
ಉರ್ದು ಒಂದು ಧರ್ಮದ ಭಾಷೆಯಲ್ಲ; ಭಾರತದ ಸಂಸ್ಕೃತಿ ಸಂವಾದದ ಜೀವಂತ ಸೇತುವೆಯಾಗಿದೆ. ಭಾಷೆಗಳು ಸಮಾಜದ ಆತ್ಮವನ್ನು ಪ್ರತಿಬಿಂಬಿಸುತ್ತವೆ. ಅವು ಧರ್ಮ, ಜಾತಿ ಅಥವಾ ಸಮುದಾಯಗಳ ಗೋಡೆಗಳಲ್ಲಿ ಸೆರೆಯಾಗುವುದಿಲ್ಲ. ಬದಲಾಗಿ ಮಾನವ ಸಂವಹನ, ಸಂಸ್ಕೃತಿ ಮತ್ತು ಇತಿಹಾಸದ ಸಹಯಾತ್ರಿಗಳಾಗಿರುತ್ತವೆ. ಆದರೆ ಇತ್ತೀಚಿನ ದಶಕಗಳಲ್ಲಿ “ಉರ್ದು ಮುಸ್ಲಿಮರ ಭಾಷೆ” ಎಂಬ ತಪ್ಪು ಕಲ್ಪನೆ ಸಾರ್ವಜನಿಕ ಚರ್ಚೆಯಲ್ಲಿ ಬಲವಾಗಿ ನೆಲೆಗೊಳ್ಳುತ್ತಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಈ ಅಭಿಪ್ರಾಯ ಕೆಲವರ ಮನಸ್ಸಿನಲ್ಲಿ ಗಾಢವಾಗಿ ಬಿತ್ತಲ್ಪಟ್ಟಿದೆ. ಇತಿಹಾಸ ಮತ್ತು ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ ಈ ಕಲ್ಪನೆಗೆ ಯಾವುದೇ ಗಂಭೀರ ಆಧಾರವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಮೂಲತಹ ಉರ್ದು ಈ ನೆಲದ ಸಂಸ್ಕೃತಿಗಳ ಸಂವಾದದಿಂದ ಹುಟ್ಟಿದ ಭಾಷೆಯಾಗಿದೆ. ಇತಿಹಾಸಕಾರರು ಉರ್ದು ಭಾಷೆಯ ಹುಟ್ಟನ್ನು ಒಂದು ಧಾರ್ಮಿಕ ಘಟನೆಯಾಗಿ ಅಲ್ಲ, ಬದಲಾಗಿ ಸಾಂಸ್ಕೃತಿಕ ಸಂವಹನದ ಫಲಿತಾಂಶ ಎಂದು ವಿವರಿಸುತ್ತಾರೆ. ದಕ್ಷಿಣ ಭಾರತದ ವಿಜಯಪುರ, ಬೀದರ್, ಕಲಬುರಗಿ ಹಾಗೂ ದಕ್ಕನ್ ಪ್ರದೇಶಗಳಲ್ಲಿ ವಿವಿಧ ಭಾಷಾ ಸಮುದಾಯಗಳು ಪರಸ್ಪರ ಸಂಪರ್ಕಕ್ಕೆ ಬಂದಾಗ ಈ ಭಾಷೆ ರೂಪುಗೊಂಡಿತು. ಭಾಷಾಶಾಸ್ತ್ರಜ್ಞ ಸುನೇತಿ ಕುಮಾರ್ ಚಟರ್ಜಿ ಅವರ ಅಭಿಪ್ರಾಯದಲ್ಲಿ, ಉರ್ದು “ಉತ್ತರ ಭಾರತದ ಸ್ಥಳೀಯ ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳ ಮೇಲೆ ಪರ್ಷಿಯನ್-ತುರ್ಕಿ ಪ್ರಭಾವದಿಂದ ಬೆಳೆದ ಸಂಯುಕ್ತ ಭಾಷೆ” ಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಇದೇ ಮಾತನ್ನು ಇತಿಹಾಸಕಾರರಾದ ಇರ್ಫಾನ್ ಹಬೀಬ್ ರವರು ಸಹ ಸಮರ್ಥಿಸುತ್ತಾರೆ. ಮಧ್ಯಯುಗೀಯ ನಗರ ಜೀವನದಲ್ಲಿ ವ್ಯಾಪಾರ, ಸೇನೆ ಮತ್ತು ಆಡಳಿತದ ಸಂವಹನ ಭಾಷೆಯಾಗಿ ಉರ್ದು ಬೆಳೆಯಿತು ಎಂದು ಅವರು ಹೇಳುತ್ತಾರೆ. “ಉರ್ದು” ಎಂಬ ಪದಕ್ಕೇ “ಸೈನಿಕ ಶಿಬಿರ” ಅಥವಾ “ಲಷ್ಕರ್” ಎಂಬ ಅರ್ಥವಿರುವುದು ಗಮನಾರ್ಹ. ಅಂದರೆ ವಿಭಿನ್ನ ಭಾಷಿಕರು ಸೇರಿದ್ದ ಸ್ಥಳದಲ್ಲೇ ಈ ಭಾಷೆ ಹುಟ್ಟಿತು ಎಂಬುದು ಇದರ ಅರ್ಥ.
ಕರ್ನಾಟಕದ ವಿಜಯಪುರದ ಆದಿಲ್ಶಾಹಿ ಅರಮನೆಗಳು, ಬೀದರ್ನ ಬಹಮನಿ ಆಡಳಿತ ಮತ್ತು ದಕ್ಕನ್ ಸಂಸ್ಕೃತಿ ಉರ್ದು ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. ಇತಿಹಾಸಕಾರ ರಿಚರ್ಡ್ ಈಟನ್ ಅವರ ಪ್ರಕಾರ ದಕ್ಕನ್ ಪ್ರದೇಶವು ಭಾರತೀಯ-ಪರ್ಷಿಯನ್ ಸಂಸ್ಕೃತಿಯ ಅತ್ಯಂತ ಸೃಜನಶೀಲ ಪ್ರಯೋಗಾಲಯವಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದರು. ಇಲ್ಲೇ ಹುಟ್ಟಿದ ದಖನಿ ಉರ್ದು ಸ್ಥಳೀಯ ಕನ್ನಡ, ಮರಾಠಿ, ತೆಲುಗು ಪದಗಳನ್ನು ಒಳಗೊಂಡು ವಿಶಿಷ್ಟ ರೂಪ ಪಡೆದುಕೊಂಡಿತು. ಆದ್ದರಿಂದ ಉರ್ದು ಕೇವಲ ಉತ್ತರ ಭಾರತದ ಭಾಷೆಯಲ್ಲದೆ ದಕ್ಷಿಣ ಭಾರತದ ಸಂಸ್ಕೃತಿಯೂ ಅದರೊಳಗೆ ಜೀವಂತವಾಗಿದೆ.
ಉರ್ದು ಸಾಹಿತ್ಯವನ್ನು ಬೆಳೆಸಿದವರು ಕೇವಲ ಮುಸ್ಲಿಂ ಲೇಖಕರಲ್ಲ. ಪ್ರಸಿದ್ಧ ಸಾಹಿತ್ಯಕಾರರಾದ ರಾಜೇಂದ್ರ ಸಿಂಗ್ ಬೇಡಿ, ಮುನ್ಷಿ ಪ್ರೇಮ್ಚಂದ್ ಮುಂತಾದವರು ಉರ್ದು ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿಯೂ ಕನ್ನಡಿಗರಾದ ಶಾಂತರಸ, ಪಂಚಾಕ್ಷರಿ ಹಿರೇಮಠ, ದೇವೇಂದ್ರಕುಮಾರ್ ಹಕಾರಿ ಮೊದಲಾದವರು ಉರ್ದುವಿನಲ್ಲಿ ಸಾಹಿತ್ಯ ರಚಿಸಿದ್ದಾರೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೂ ಉರ್ದು ಭಾಷೆಗೆ ವಿಶೇಷ ಸ್ಥಾನವಿತ್ತು. ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಮತ್ತು ಧರ್ಮಸಿಂಗ್ ಅವರು ಉರ್ದುವಿನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದುದೇ ಭಾಷೆಯ ಸಾಂಸ್ಕೃತಿಕ ವ್ಯಾಪ್ತಿಗೆ ಸಾಕ್ಷಿ. ಇದನ್ನು ಡಾ.ರಾಮಮನೋಹರ್ ಲೋಹಿಯಾ ಸ್ಪಷ್ಟವಾಗಿ ಹೇಳಿದ್ದರು, “ಭಾರತದ ಭಾಷೆಗಳು ಜಾತ್ಯತೀತ ಸ್ವರೂಪದವು ಅವು ಯಾವುದೇ ಧರ್ಮದ ಸ್ವಂತ ಆಸ್ತಿ ಅಲ್ಲ.” ಭಾಷಾಶಾಸ್ತ್ರದ ದೃಷ್ಟಿಯಲ್ಲಿ ಹಿಂದಿ ಮತ್ತು ಉರ್ದು ಎರಡೂ “ಹಿಂದೂಸ್ತಾನಿ” ಎಂಬ ಸಾಮಾನ್ಯ ಆಡುಭಾಷೆಯಿಂದ ಬೆಳೆದ ಭಾಷೆಗಳಾಗಿವೆ. ಇವಗಳ ನಡುವಿನ ವ್ಯತ್ಯಾಸ ಮುಖ್ಯವಾಗಿ ಲಿಪಿ ಮತ್ತು ಪದಸಂಪತ್ತಿನಲ್ಲಿ ಮಾತ್ರವಾಗಿದೆ. ಇತಿಹಾಸಕಾರ ತಾರಿಕ್ ರಹ್ಮಾನ್ ಅವರ ಪ್ರಕಾರ, ಬ್ರಿಟಿಷ್ ವಸಾಹತು ಕಾಲದ ರಾಜಕೀಯ ಮತ್ತು ಶಿಕ್ಷಣ ನೀತಿಗಳಿಂದ ಈ ಎರಡು ಭಾಷೆಗಳ ನಡುವೆ ಕೃತಕ ವಿಭಜನೆ ಹೆಚ್ಚಾಯಿತು ಎಂದು ಅಭಿಪ್ರಾಯ ಪಡುತ್ತಾರೆ.
1837ರಲ್ಲಿ ಬ್ರಿಟಿಷರು ಇಂಗ್ಲಿಷ್ ಮತ್ತು ಉರ್ದುವನ್ನು ಆಡಳಿತ ಭಾಷೆಗಳಾಗಿ ಘೋಷಿಸಿದರು. ನಂತರ ಆರ್ಯ ಸಮಾಜದ ದೇವನಾಗರಿ ಅಭಿಯಾನ ಹಾಗೂ ಧಾರ್ಮಿಕ ರಾಜಕೀಯಗಳ ಪರಿಣಾಮವಾಗಿ ಭಾಷೆಗಳಿಗೆ ಧಾರ್ಮಿಕ ಗುರುತುಗಳನ್ನು ಜೋಡಿಸುವ ಪ್ರಕ್ರಿಯೆ ಆರಂಭವಾಯಿತು. ಇತಿಹಾಸಕಾರರು ಹೇಳುವಂತೆ ಭಾಷೆಯ ವಿಭಜನೆ ಸ್ವಾಭಾವಿಕವಲ್ಲ, ಅದು ರಾಜಕೀಯ ಪರಿಸ್ಥಿತಿಗಳ ಪರಿಣಾಮಗಳಿಂದ ಸೃಷ್ಟಿಸಲ್ಪಟ್ಟ ರಾಜಕಾರಣದ ಭಾಗ.
ಇಂದು ಉರ್ದು ಇಂಡೋ-ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಪ್ರಮುಖ ಭಾಷೆಯಾಗಿದೆ. ಭಾರತ ಮತ್ತು ಪಾಕಿಸ್ತಾನದಲ್ಲಿ ಕೋಟ್ಯಂತರ ಜನರು ಮಾತನಾಡುವ ಈ ಭಾಷೆ ಅಫ್ಘಾನಿಸ್ತಾನ, ಗಲ್ಫ್ ರಾಷ್ಟ್ರಗಳು, ಯುರೋಪ್ ಮತ್ತು ಅಮೆರಿಕಾದ ವಲಸೆ ಸಮುದಾಯಗಳಲ್ಲಿಯೂ ವ್ಯಾಪಿಸಿದೆ.
ಉರ್ದು ಭಾಷೆಯ ಕರ್ನಾಟಕದ ವಾಸ್ತವಿಕತೆಯನ್ನು ನೋಡುವುದಾದರೆ ಕರ್ನಾಟಕದ ಎಲ್ಲಾ ಮುಸ್ಲಿಮರೂ ಉರ್ದು ಭಾಷಿಕರಲ್ಲ ಎಂಬುದನ್ನು ಗಮನಿಸಬೇಕು. ರಾಜ್ಯದಲ್ಲಿ ಕನ್ನಡ ಭಾಷೆಯ ಮುಸ್ಲಿಮರು, ಬ್ಯಾರಿ ಭಾಷೆಯ ಮುಸ್ಲಿಮರು , ಕೊಂಕಣಿ ಭಾಷೆಯ ಮುಸ್ಲಿಮರು, ತುಳು ಭಾಷೆಯ ಮುಸ್ಲಿಮರು, ಮಲಯಾಳಂ ಭಾಷೆಯ ಮುಸ್ಲಿಮರು, ಕೂರ್ಗಿ ಭಾಷೆಯ ಮುಸ್ಲಿಮರು, ತೆಲುಗು ಭಾಷೆಯ ಮುಸ್ಲಿಮರು, ತಮಿಳು ಭಾಷೆಯ ಮುಸ್ಲಿಮರು ಇಂತಹ ಹಲವಾರು ಭಾಷೆಗಳನ್ನು ತಮ್ಮ ಕುಟುಂಬ, ಮಾತೃಭಾಷೆಗಳಾಗಿಸಿ ಕೊಂಡಿರುವ ಬಹುಭಾಷ ಮುಸ್ಲಿಮರು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಮುಸ್ಲಿಮರು ಬಂಗಾಳಿಯನ್ನು ತಮ್ಮ ಹೆಮ್ಮೆಯ ಭಾಷೆ ಎಂದು ಕಾಣುವಂತೆ, ದಕ್ಷಿಣ ಭಾರತದ ಅನೇಕ ಮುಸ್ಲಿಮರು ಸ್ಥಳೀಯ ಭಾಷೆಗಳನ್ನೇ ತಮ್ಮ ಗುರುತಾಗಿ ಸ್ವೀಕರಿಸಿದ್ದಾರೆ. ಇತಿಹಾಸ ನಮಗೆ ಕಲಿಸುವ ದೊಡ್ಡ ಪಾಠವೆಂದರೆ ಭಾಷೆಗಳು ಗೋಡೆಗಳನ್ನು ಕಟ್ಟುವುದಿಲ್ಲ, ಸೇತುವೆಗಳನ್ನು ನಿರ್ಮಿಸುತ್ತವೆ. ಉರ್ದು ಭಾಷೆ ಕನ್ನಡ, ತೆಲುಗು, ಮರಾಠಿ, ಪರ್ಷಿಯನ್, ಅರೇಬಿಕ್ ಹಾಗೂ ಸ್ಥಳೀಯ ಜನಜೀವನದ ಸಂಯೋಗದಿಂದ ಹುಟ್ಟಿದ ಜೀವಂತ ಪರಂಪರೆ. ಅದನ್ನು ಒಂದೇ ಧರ್ಮದ ಆಸ್ತಿಯೆಂದು ಸೀಮಿತಗೊಳಿಸುವುದು ಅದರ ಇತಿಹಾಸಕ್ಕೂ, ಭಾರತದ ಬಹುಸಂಸ್ಕೃತಿಕ ಆತ್ಮಕ್ಕೂ ನ್ಯಾಯಯುತವಲ್ಲ. ಉರ್ದು ಎಂದರೆ ಮುಸ್ಲಿಮರ ಭಾಷೆ ಮಾತ್ರವಲ್ಲ, ಉರ್ದು ಎಂದರೆ ಭಾರತದ ಸಂಸ್ಕೃತಿ ಸಂವಾದದ ಜೀವಂತ ನೆನಪು ಕೂಡ ಆಗಿದೆ.
ಕರ್ನಾಟಕದಲ್ಲಿ ಭಾಷೆ ಕುರಿತು ನಡೆಯುತ್ತಿರುವ ಚರ್ಚೆಗಳು ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಸಾಮಾಜಿಕ ಮತ್ತು ರಾಜಕೀಯ ಗಮನ ಸೆಳೆಯುತ್ತಿವೆ. ರಾಜ್ಯದಲ್ಲಿ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ, ಅಭಿಮಾನ ಮತ್ತು ಬದ್ಧತೆ ಹೊಂದಿರುವ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಇದ್ದರೂ, ಭಾಷೆ ಮತ್ತು ಶಿಕ್ಷಣದ ಆಯ್ಕೆಗಳ ಹಿನ್ನೆಲೆಯಲ್ಲಿ ಒಂದು ವಿಶೇಷ ಸಾಮಾಜಿಕ ವಾಸ್ತವಿಕತೆ ರೂಪುಗೊಂಡಿರುವುದು ಗಮನಾರ್ಹವಾಗಿದೆ. ಈ ವಾಸ್ತವಿಕತೆಯನ್ನು ಭಾವೋದ್ರೆಕದಿಂದ ಮಾತ್ರವಲ್ಲದೆ, ಸಮತೋಲನದ ದೃಷ್ಟಿಯಿಂದ ಪರಿಶೀಲಿಸುವ ಅವಶ್ಯಕತೆ ಇದೆ. ಕರ್ನಾಟಕದ ಮುಸ್ಲಿಮರನ್ನು ಒಂದು ಏಕಮುಖ ಭಾಷ ಸಮುದಾಯವಾಗಿ ಚಿತ್ರಿಸುವುದು ಸರಿಯಲ್ಲ. ರಾಜ್ಯದ ಅನೇಕ ಮುಸ್ಲಿಂ ಕುಟುಂಬಗಳು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಸಾರ್ವಜನಿಕ ಬದುಕಿನೊಂದಿಗೆ ಆಳವಾದ ಸಂಬಂಧ ಹೊಂದಿವೆ.ವ್ಯಾಪಾರ, ಆಡಳಿತ, ರಾಜಕೀಯ, ಮಾಧ್ಯಮ ಮತ್ತು ಕಲೆ ಕ್ಷೇತ್ರಗಳಲ್ಲಿ ಕನ್ನಡವನ್ನು ಜೀವಂತವಾಗಿ ಬಳಸುತ್ತಿರುವ ಮುಸ್ಲಿಮರ ಸಂಖ್ಯೆ ಗಮನಾರ್ಹವಾಗಿದೆ. ಆದರೆ ಕೇರಳ ಮತ್ತು ತಮಿಳುನಾಡಿನ ಮುಸ್ಲಿಮರೊಂದಿಗೆ ಹೋಲಿಸಿದಾಗ, ಕರ್ನಾಟಕದಲ್ಲಿ ರಾಜ್ಯಭಾಷೆಯನ್ನು ಸಂಪೂರ್ಣ ಶಿಕ್ಷಣ ಮಾಧ್ಯಮವಾಗಿ ಅಪ್ಪಿಕೊಳ್ಳುವ ಪ್ರಮಾಣ ತುಸು ಕಡಿಮೆ ಎಂಬ ಅಭಿಪ್ರಾಯ ಶಿಕ್ಷಣ ತಜ್ಞರ ನಡುವೆ ಕೇಳಿಬರುತ್ತದೆ. ಇದರ ಪ್ರಮುಖ ಕಾರಣಗಳಲ್ಲಿ ಒಂದಾಗಿ ಉರ್ದು ಮಾಧ್ಯಮ ಶಾಲೆಗಳ ಪ್ರಶ್ನೆ ಮುಂದಿಡಲಾಗುತ್ತಿದೆ. ಉರ್ದು ಶಾಲೆಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಒಂದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ, ವಿವಿಧ ಸಮುದಾಯಗಳ ಮಕ್ಕಳ ನಡುವಿನ ದೈನಂದಿನ ಸಂವಹನ ಕಡಿಮೆಯಾಗುತ್ತದೆ ಎಂಬ ವಾದವಿದೆ. ಶಿಕ್ಷಣ ತಜ್ಞರು ಹೇಳುವಂತೆ, ಶಾಲೆ ಎಂದರೆ ಕೇವಲ ಪಾಠ ಪುಸ್ತಕ ಕಲಿಕೆಯ ಸ್ಥಳವಲ್ಲ ಅದು ಸಾಮಾಜಿಕ ಸಂವಹನದ ಮೊದಲ ವೇದಿಕೆ. ಮಕ್ಕಳ ಸ್ನೇಹ, ಭಾಷಾ ಬಳಕೆ ಮತ್ತು ಸಾಮಾಜಿಕ ಅರಿವು ಬಹುಪಾಲು ಅಲ್ಲಿಯೇ ರೂಪುಗೊಳ್ಳುತ್ತದೆ. ಶಿಕ್ಷಣದಲ್ಲೇ ಆರಂಭವಾದ ಅಂತರ ನಂತರ ಸಾಮಾಜಿಕ ಜೀವನದಲ್ಲಿಯೂ ಮುಂದುವರಿಯುವ ಸಾಧ್ಯತೆ ಇದೆ.
ಇಲ್ಲಿ ಮುಖ್ಯ ಪ್ರಶ್ನೆ ಉರ್ದು ಭಾಷೆಯ ವಿರುದ್ಧವಲ್ಲ. ಪ್ರಶ್ನೆ ಇರುವುದು ಭಾಷೆಯನ್ನು ವಿಷಯವಾಗಿ ಕಲಿಯಬೇಕಾ ಅಥವಾ ಸಂಪೂರ್ಣ ಪ್ರತ್ಯೇಕ ಶಿಕ್ಷಣ ವ್ಯವಸ್ಥೆಯಾಗಿ ರೂಪಿಸಬೇಕಾ ಎಂಬುದು. ಇತ್ತೀಚೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ ಜೊತೆಗೆ ಉರ್ದು ಭಾಷೆಯಲ್ಲಿಯೂ ಪ್ರಕಟಿಸಿತು. ಸಾರ್ವಜನಿಕ ಮಾಹಿತಿ ಎಲ್ಲ ವರ್ಗದ ಜನರಿಗೆ ತಲುಪುವ ಉದ್ದೇಶದಿಂದ ಮಾಡಿದ ಈ ಕ್ರಮ ಸ್ವಾಭಾವಿಕವಾಗಿ ಸ್ವಾಗತಾರ್ಹವಾಗಬೇಕಾಗಿತ್ತು. ಆದರೆ ಕೆಲವು ಕೋಮುವಾದಿ ಗುಂಪುಗಳ ಪ್ರತಿಕ್ರಿಯೆಗಳು ಉರ್ದು ಬಳಕೆಯನ್ನೇ ಪ್ರಶ್ನಿಸುವ ಮೂಲಕ ಅನಗತ್ಯ ವಿವಾದ ಸೃಷ್ಟಿಸಿದವು. ಇದು ಭಾಷೆಯ ಕುರಿತ ಚರ್ಚೆಯನ್ನು ಸಾಮಾಜಿಕ ಸೌಹಾರ್ದದಿಂದ ದೂರ ಸರಿಸುವ ಅಪಾಯಕಾರಿ ಪ್ರವೃತ್ತಿಯಾಗಿದೆ. ಇದರಲ್ಲಿ ಸರ್ಕಾರದ ಉದ್ದೇಶ ಸ್ಪಷ್ಟವಿತ್ತು, ಜನರಿಗೆ ಮಾಹಿತಿ ತಲುಪಬೇಕು. ಜನಸೇವೆಯ ದೃಷ್ಟಿಯಿಂದ ಬಹುಭಾಷಾ ಬಳಕೆ ಪ್ರಜಾಸತ್ತಾತ್ಮಕ ಆಡಳಿತದ ಲಕ್ಷಣವೇ ಹೊರತು ಅಪರಾಧವಲ್ಲವಾಗಿತ್ತು.
ಈ ಉರ್ದು ಭಾಷೆ ಭಾರತೀಯ ಸ್ವಾತಂತ್ರ್ಯ ಚಳವಳಿಯೊಂದಿಗೆ ಆಳವಾಗಿ ಜೋಡಿಸಿ ಕೊಂಡಿದೆ. “ಇಂಕಿಲಾಬ್ ಜಿಂದಾಬಾದ್”, “ಆಂಗ್ರೇಜೋನ್ ಹಿಂದೂಸ್ತಾನ್ ಛೋಡೋ” ಎಂಬ ಘೋಷಣೆಗಳು ಜನಮನಗಳನ್ನು ಜಾಗೃತಗೊಳಿಸಿದವು. ಉರ್ದು ಪತ್ರಿಕೆಗಳು, ಕಾವ್ಯಗಳು ಮತ್ತು ಧಾರ್ಮಿಕ-ಸಾಮಾಜಿಕ ಪ್ರಕಟಣೆಗಳು ಬ್ರಿಟಿಷ್ ಆಡಳಿತದ ವಿರುದ್ಧ ಜನಚೇತನ ಮೂಡಿಸಿದವು. ಅನೇಕ ಉಲೇಮಾ, ಹೋರಾಟಗಾರರು ಮತ್ತು ರಾಷ್ಟ್ರವಾದಿಗಳು ಉರ್ದುವನ್ನು ಜನಜಾಗೃತಿ ಭಾಷೆಯಾಗಿ ಬಳಸಿದರು. ಆದ್ದರಿಂದ ಉರ್ದುವನ್ನು ಕೇವಲ ಧಾರ್ಮಿಕ ಗುರುತಿಗೆ ಸೀಮಿತಗೊಳಿಸುವುದು ಇತಿಹಾಸದ ಅರ್ಥವನ್ನೇ ಸೀಮಿತಗೊಳಿಸುವಂತಾಗಿದೆ.
ಇತ್ತೀಚಿಗೆ ಭಾಷೆ ವಿರುದ್ಧ ರಾಜಕೀಯ ಅಪಾಯಕಾರಿ ಮಿಶ್ರಣವೊಂದು ಹೊಮ್ಮಿದೆ. ಇದು ಅಪಾಯಕಾರಿಯಾದ ‘ಭಾಷ ರಾಜಕೀಕರಣ’; ಇದು ಸಂವಿಧಾನ ವಿರೋಧಿ ಕಾರ್ಯಯೋಜನೆಯಾಗಿದೆ. ಭಾರತದ ಸಂವಿಧಾನವು ಬಹುಭಾಷಾ ಮತ್ತು ಬಹುಸಾಂಸ್ಕೃತಿಕ ರಾಷ್ಟ್ರದ ಆತ್ಮವನ್ನು ಪ್ರತಿಬಿಂಬಿಸುತ್ತದೆ. ಒಂದು ಭಾಷೆಯನ್ನು ವಿರೋಧಿಸುವುದು ಅಂದರೆ ಅದನ್ನು ಮಾತನಾಡುವ ಜನರನ್ನೇ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಭಾಷೆಗಳನ್ನು ರಾಜಕೀಯ ದ್ವೇಷದ ಆಯುಧವನ್ನಾಗಿ ಬಳಸುವ ಪ್ರವೃತ್ತಿ ಸಮಾಜದಲ್ಲಿ ಅನಾವಶ್ಯಕ ಉದ್ವಿಗ್ನತೆ ಉಂಟುಮಾಡುತ್ತದೆ. ಭಾಷೆಯ ಪ್ರಶ್ನೆ ಸಂಸ್ಕೃತಿ ಮತ್ತು ಸಂವಹನದ ಪ್ರಶ್ನೆಯಾಗಬೇಕು ವಿಭಜನೆಯ ಪ್ರಶ್ನೆಯಾಗಬಾರದು.ಈ ನಡುವೆ ಕರ್ನಾಟಕದ ಸಾಮಾಜಿಕ ವಾಸ್ತವಿಕತೆ ನಮಗೆ ಒಂದು ಸಮತೋಲನದ ದಾರಿಯನ್ನು ಸೂಚಿಸುತ್ತದೆ. ಕನ್ನಡವನ್ನು ಸಾರ್ವಜನಿಕ ಮತ್ತು ಶಿಕ್ಷಣ ಜೀವನದ ಕೇಂದ್ರ ಭಾಷೆಯಾಗಿ ಬಲಪಡಿಸುವುದು, ಉರ್ದು ಸೇರಿದಂತೆ ಇತರೆ ಭಾಷೆಗಳನ್ನು ಸಾಂಸ್ಕೃತಿಕ ಸಂಪತ್ತಾಗಿ ಗೌರವಿಸುವುದು ಬಹುಭಾಷಾ ಶಿಕ್ಷಣದ ಮೂಲಕ ಮಕ್ಕಳಲ್ಲಿ ಪರಸ್ಪರ ಸಂಪರ್ಕ ಹೆಚ್ಚಿಸುವುದು. ಭಾಷೆಯ ಹೆಸರಿನಲ್ಲಿ ಭಿನ್ನತೆಗಳನ್ನು ರಾಜಕೀಯವಾಗಿ ಹೆಚ್ಚಿಸದಿರುವುದು. ಭಾಷೆಗಳು ಸ್ಪರ್ಧಿಗಳಲ್ಲ, ಅವು ಸಹಯಾತ್ರಿಗಳು. ಏಕತೆಯಲ್ಲಿ ವೈವಿಧ್ಯತೆ – ಭಾರತದ ಆತ್ಮವಾಗಿದೆ. ಭಾರತ “ಏಕತೆಯಲ್ಲಿ ವೈವಿಧ್ಯತೆ” ಎಂಬ ತತ್ವದ ಮೇಲೆ ನಿಂತ ರಾಷ್ಟ್ರ. ಕನ್ನಡದ ಗೌರವವನ್ನು ಉಳಿಸುವುದೂ, ಉರ್ದು ಸೇರಿದಂತೆ ಇತರೆ ಭಾಷೆಗಳಿಗೆ ಮಾನ್ಯತೆ ನೀಡುವುದೂ ಪರಸ್ಪರ ವಿರೋಧಿಗಳೂ ಅಲ್ಲ. ಅವು ಒಂದೇ ಪ್ರಜಾಸತ್ತಾತ್ಮಕ ಮೌಲ್ಯದ ಎರಡು ಮುಖಗಳು. ಭಾಷೆ ಗೋಡೆಯಾಗುವಾಗ ಸಮಾಜ ವಿಭಜಿತವಾಗುತ್ತದೆ; ಇದು ಪ್ರತಿ ಭಾರತೀಯ ನೆನಪಿನಲ್ಲಿ ಇಡಬೇಕಾದ ಅಂಶ. ಭಾಷೆ ಸೇತುವೆಯಾದರೆ ರಾಷ್ಟ್ರ ಬಲವಾಗುತ್ತದೆ.
ಭಾರತದ ಬಹುಸಾಂಸ್ಕೃತಿಕ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಕೆಲವೊಮ್ಮೆ ನ್ಯಾಯಾಂಗದ ತೀರ್ಪುಗಳು ಸಮಾಜಕ್ಕೆ ಕನ್ನಡಿಯಂತೆ ಕೆಲಸ ಮಾಡುತ್ತವೆ. ಒಮ್ಮೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾಟುರ್ ಪುರಸಭೆಯ ನಾಮಫಲಕದಲ್ಲಿ ಉರ್ದು ಭಾಷೆಯ ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ನ ಇತ್ತೀಚಿನ ತೀರ್ಪು ಇದೇ ರೀತಿಯ ಮಹತ್ವದ ಸಂದೇಶವನ್ನು ದೇಶದ ಮುಂದೆ ಇಟ್ಟಿದೆ. ಈ ಸಂಧರ್ಭದಲ್ಲಿ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ “ಭಾಷೆ ಧರ್ಮವಲ್ಲ” ಎಂದು. ಇದು ಕೇವಲ ಒಂದು ಪ್ರಕರಣದ ತೀರ್ಪಲ್ಲ, ಭಾಷೆ, ಗುರುತು ಮತ್ತು ಭಾರತೀಯ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ನೀಡಿದ ಗಂಭೀರ ಸಂವಿಧಾನಾತ್ಮಕ ಪಾಠವಾಗಿದೆ. ಮಹಾರಾಷ್ಟ್ರದ ಪಾಟುರ್ ಪುರಸಭೆ ತನ್ನ ನಾಮಫಲಕದಲ್ಲಿ ಮರಾಠಿ ಜೊತೆಗೆ ಉರ್ದು ಭಾಷೆಯನ್ನೂ ಬಳಸಿತ್ತು. ಇದನ್ನು ಪ್ರಶ್ನಿಸಿ ಮಾಜಿ ಕೌನ್ಸಿಲರ್ ವರ್ಷಾತಾಯಿ ಸಂಜಯ್ ಬಗಡೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. “ಪುರಸಭೆಯ ಕಾರ್ಯಗಳು ಮರಾಠಿಯಲ್ಲಿ ಮಾತ್ರ ನಡೆಯಬೇಕು; ಉರ್ದು ಬಳಕೆ ಸರಿಯಲ್ಲ” ಎಂಬುದು ಅವರ ವಾದವಾಗಿತ್ತು. ಆದರೆ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ಪೀಠ ಈ ವಾದವನ್ನು ತಳ್ಳಿ ಹಾಕಿ, ಭಾಷೆಯನ್ನು ಧರ್ಮದೊಂದಿಗೆ ಕಟ್ಟಿ ಹಾಕುವ ಮನೋಭಾವವನ್ನೇ ಪ್ರಶ್ನಿಸಿತು.
ಈ ಕುರಿತು ಸುಪ್ರೀಂಕೋರ್ಟ್ನ ಸ್ಪಷ್ಟ ನಿಲುವು ಇದಾಗಿತ್ತು : ನ್ಯಾಯಾಲಯ ನೀಡಿದ ಕೆಲವು ಪ್ರಮುಖ ಅಭಿಪ್ರಾಯಗಳು ಭಾರತೀಯ ಸಮಾಜದ ಭಾಷಾ ಚರ್ಚೆಗೆ ದಿಕ್ಕು ತೋರಿಸುವಂತಿವೆ “ಭಾಷೆ ಧರ್ಮವಲ್ಲ, ಅಲ್ಲದೆ ಅದು ಧರ್ಮವನ್ನು ಪ್ರತಿನಿಧಿಸುವುದಿಲ್ಲ.”. “ಭಾಷೆ ಒಂದು ಪ್ರದೇಶ ಮತ್ತು ಜನರಿಗೆ ಸೇರಿದ್ದು; ಯಾವುದೇ ಧರ್ಮದ ಸ್ವತ್ತು ಅಲ್ಲ”. ಉರ್ದುವನ್ನು ಕೇವಲ ಮುಸ್ಲಿಮರ ಭಾಷೆ ಎಂದು ಪರಿಗಣಿಸುವುದು ವಾಸ್ತವಕ್ಕೆ ದೂರವಾದದ್ದು. ಉರ್ದು ಗಂಗಾ-ಜಮುನಾ ಸಂಸ್ಕೃತಿಯ ಜೀವಂತ ಉದಾಹರಣೆ. ಈ ನ್ಯಾಯಾಲಯವು ಮತ್ತೊಂದು ಮಹತ್ವದ ವಿಚಾರವನ್ನು ನೆನಪಿಸಿತು, ಸ್ಥಳೀಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ನೀಡುವುದು ಆಡಳಿತದ ಜವಾಬ್ದಾರಿ. ಜನಸಂಪರ್ಕ ಸುಧಾರಿಸಲು ಪುರಸಭೆ ಉರ್ದು ಬಳಸಿರುವುದು ಶ್ಲಾಘನೀಯ ಎಂದು ನ್ಯಾಯಾಲಯ ಹೇಳಿತು.
ಭಾರತದಲ್ಲಿ ಹಲವು ಭಾಷೆಗಳು ಕಾಲಕ್ರಮೇಣ ಧಾರ್ಮಿಕ ಗುರುತುಗಳೊಂದಿಗೆ ತಪ್ಪಾಗಿ ಜೋಡಿಸಲ್ಪಟ್ಟಿವೆ. ಉರ್ದು ಅದರಲ್ಲಿ ಪ್ರಮುಖ ಉದಾಹರಣೆ. ಆದರೆ ಇತಿಹಾಸ ಹೇಳುವುದೇ ಬೇರೆ ಕಥೆ. ಮರಾಠಿ ಮತ್ತು ಹಿಂದಿಯಂತೆ ಉರ್ದುವೂ ಇಂಡೋ-ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಭಾರತೀಯ ಭಾಷೆ. ವಿಭಿನ್ನ ಸಂಸ್ಕೃತಿಗಳ ಜನರು ಪರಸ್ಪರ ಸಂವಹನ ನಡೆಸಿದಾಗ ಹುಟ್ಟಿದ ಸಂಯುಕ್ತ ಪರಂಪರೆಯದು. ಅದನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಭಾಷೆಯ ಇತಿಹಾಸಕ್ಕೂ ಸಮಾಜದ ವಾಸ್ತವಕ್ಕೂ ವಿರುದ್ಧವಾಗಿದೆ.
2022ರ ಮಹಾರಾಷ್ಟ್ರ ಸ್ಥಳೀಯ ಪ್ರಾಧಿಕಾರಗಳ ಅಧಿಕೃತ ಭಾಷೆಗಳ ಕಾಯ್ದೆ ಮರಾಠಿ ಬಳಕೆಯನ್ನು ಕಡ್ಡಾಯಗೊಳಿಸಿದರೂ, ಹೆಚ್ಚುವರಿ ಭಾಷೆಗಳನ್ನು ಬಳಸುವುದನ್ನು ಎಲ್ಲಿಯೂ ನಿರ್ಬಂಧಿಸಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಇದು ಭಾರತದ ಸಂವಿಧಾನದ ಮೂಲಭೂತ ತತ್ವವನ್ನೇ ಪ್ರತಿಬಿಂಬಿಸುತ್ತದೆ. ಸೇರಿಸಿಕೊಳ್ಳುವ ಆಡಳಿತ (lnclusive Governance). ಜನರಿಗೆ ಮಾಹಿತಿ ತಲುಪಿಸುವುದು ಮುಖ್ಯ. ಭಾಷಾ ವೈವಿಧ್ಯತೆಯನ್ನು ನಿರ್ಬಂಧಿಸುವುದಲ್ಲ. ಇದು ನ್ಯಾಯಾಲಯದ ಪ್ರಮುಖ ಸಂದೇಶ ಸಮಾಜದತ್ತದ್ದಾಗಿದೆ. ಈ ಮೂಲಕ ನಾವು ನಮ್ಮ ತಪ್ಪು ಕಲ್ಪನೆಗಳು ಮತ್ತು ಭಾಷೆಯ ಬಗ್ಗೆ ಇರುವ ತಾರತಮ್ಯಗಳನ್ನು ತಿದ್ದಿಕೊಳ್ಳಬೇಕಿದೆ. ಭಾಷೆಗಳನ್ನು ವಿರೋಧಿಸುವುದು ಸಮಾಜವನ್ನು ವಿಭಜಿಸುತ್ತದೆ. ಭಾಷೆಗಳನ್ನು ಗೌರವಿಸುವುದು ರಾಷ್ಟ್ರವನ್ನು ಬಲಪಡಿಸುತ್ತದೆ. ಉರ್ದು, ಕನ್ನಡ, ಮರಾಠಿ, ತಮಿಳು, ಬಂಗಾಳಿ… ಪ್ರತಿಯೊಂದು ಭಾಷೆಯೂ ಭಾರತದ ಆತ್ಮದ ಒಂದು ಅಂಶವಾಗಿದೆ.
ಇಂದಿನ ರಾಜಕೀಯ ವಾತಾವರಣದಲ್ಲಿ ಭಾಷೆಗಳನ್ನು ಗುರುತು ರಾಜಕಾರಣದ ಸಾಧನವಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್ನ ಈ ತೀರ್ಪು ಒಂದು ನೆನಪಿನ ಗಂಟೆ ಎಂದರೆ, ಭಾಷೆ ಗೋಡೆ ಅಲ್ಲ, ಸಂವಾದದ ದಾರಿ. ಭಾಷೆ ವಿಭಜನೆ ಅಲ್ಲದೆ ಸಹಬಾಳ್ವೆಯ ಸಂಕೇತ. “ಉರ್ದು ಕೇವಲ ಮುಸ್ಲಿಮರ ಭಾಷೆ” ಎಂಬ ಕಲ್ಪನೆ ತಪ್ಪು ಎಂದು ನ್ಯಾಯಾಲಯ ಹೇಳಿರುವುದು ಕಾನೂನು ತೀರ್ಪಿನಷ್ಟೇ ಅಲ್ಲ, ಸಾಮಾಜಿಕ ಜಾಗೃತಿಯ ಘೋಷಣೆ. ಭಾರತದ ವೈವಿಧ್ಯತೆಯೇ ಅದರ ಶಕ್ತಿ. ಆ ವೈವಿಧ್ಯತೆಯನ್ನು ಗೌರವಿಸುವುದು ರಾಷ್ಟ್ರಭಕ್ತಿಯ ವಿರುದ್ಧವಲ್ಲ ಅದೇ ನಿಜವಾದ ರಾಷ್ಟ್ರಭಕ್ತಿ. ಭಾಷೆ ಧರ್ಮವಲ್ಲ ಅದು ಮಾನವರನ್ನು ಸಂಪರ್ಕಿಸುವ ಸಂಸ್ಕೃತಿಯ ನಾಡಿ. ಸುಪ್ರೀಂಕೋರ್ಟ್ ನೀಡಿದ ಈ ಸಂದೇಶವನ್ನು ನ್ಯಾಯಾಲಯದ ದಾಖಲೆಗಳಲ್ಲಷ್ಟೇ ಅಲ್ಲ, ನಮ್ಮ ಮನಸ್ಸುಗಳಲ್ಲಿಯೂ ಉಳಿಸಿಕೊಳ್ಳಬೇಕಾದ ಸಮಯ ಬಂದಿದೆ.












