ಮಾತನಾಡಲು ಬಿಡುವುದಿಲ್ಲವೆಂದಾದರೆ ಮುಖ್ಯಮಂತ್ರಿಗಳನ್ನು ಸಭೆಗೆ ಯಾಕೆ ಕರೆಯುತ್ತೀರಿ- ಪ್ರಧಾನಿ ಮೋದಿಗೆ ಹೇಮಂತ್ ಸೊರೆನ್ ಪ್ರಶ್ನೆ

0
733

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅವರು ಅಧಿಕಾರಿಗಳೊಂದಿಗೆ ಮಾತ್ರ ಮಾತಾಡುವುದಾದರೆ ಮುಖ್ಯಮಂತ್ರಿಗಳನ್ನು ವೀಡಿಯೊ ಸಭೆಗೆ ಯಾಕೆ ಕರೆಯುತ್ತಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಪ್ರಶ್ನಿಸಿದ್ದಾರೆ. ಸಭೆಯಲ್ಲಿ ಮಾತಾಡಲು ಬಿಡದೆ ಅಪಮಾನಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪದ ಕುರಿತ ಪ್ರಶ್ನೆಗೆ ಹೇಮಂತ್ ಪ್ರತಿಕ್ರಿಯಿಸುತ್ತಿದ್ದರು.

ಪಶ್ಚಿಮ ಬಂಗಾಳ, ಉತ್ತರಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಮುಂತಾದ ಹಲವು ರಾಜ್ಯಗಳ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳು, ಮುಖ್ಯಕಾರ್ಯದರ್ಶಿಗಳ ಸಭೆಯನ್ನು ಕರೆದು ಅಧಿಕಾರಿಗಳ ಮಾತನ್ನು ಮಾತ್ರ ಕೇಳಿಸಿಕೊಂಡಿದ್ದು ಅಪಮಾನಕರ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.

“ಆ ಸಭೆಯಲ್ಲಿ ನಾನೂ ಇದ್ದೆ. ಎಲ್ಲ ಮುಖ್ಯಮಂತ್ರಿಗಳು ಬಾಯಿಮುಚ್ಚಿಕೊಂಡೇ ಇದ್ದರು. ಅಧಿಕಾರಿಗಳೊಂದಿಗೆ ಮಾತಾಡಲು ಮಾತ್ರ ಇದ್ದರೆ ಮುಖ್ಯಮಂತ್ರಿಗಳನ್ನು ಸಭೆಗೆ ಕರೆದದ್ದು ಯಾಕೆ ಎಂದು ಹೇಮಂತ್ ಸೋರೆನ್ ಹೇಳಿದರು.

ಪ್ರಧಾನಿ ಅಧಿಕಾರಿಗಳನ್ನು ಕರೆದು ನೇರವಾಗಿ ಕೇಳಿ ತಿಳಿಯುವುದು ಫೆಡರಲ್ ವ್ಯವಸ್ಥೆ ವಿರುದ್ಧ ಕಾರ್ಯ ಎಂದು ಹೇಮಂತ್ ಹೇಳಿದರು. ಪ್ರಧಾನಿ ಮಾತಾಡುವುದು ಮಾತ್ರ ಅಲ್ಲ ಇತರರ ಮಾತನ್ನು ಕೂಡ ಆಲಿಸಬೇಕು ಎಂದು ಅವರು ತನ್ನ ನಿಲುವು ವ್ಯಕ್ತಪಡಿಸಿದರು.