ಇಂಡಿಯಾ ಕೂಟಕ್ಕೆ ರಾಹುಲ್, ತೇಜಸ್ವಿ ಜನಪ್ರಿಯತೆಯೇ ಕುತ್ತಾಯಿತೇ?

0
10966

ಸನ್ಮಾರ್ಗ ವಾರ್ತೆ

✍️ಅರಫಾ ಮಂಚಿ

ಪ್ರಧಾನಿ ರಾಮ ಮಂದಿರ ಉದ್ಘಾಟಿಸಿದ್ದಾರೆ. ಸಂವಿಧಾನಕ್ಕೆ ಇನ್ನು ಮುಂದೆ ಹೆಚ್ಚು ಅಪಾಯ ಇದೆ ಎಂಬ ಚರ್ಚೆಗಳು ಎದ್ದು ಬಂದಿವೆ. ಪ್ರಧಾನಿ ರಾಮ ಮಂದಿರ ಉದ್ಘಾಟಿಸಿದ್ದಕ್ಕೂ ಸಂವಿಧಾನಕ್ಕೂ ಸಂಬಂಧ ಏನು? ಅದನ್ನು ನೀವು ಪ್ರತಿಪಕ್ಷಗಳ ಕೆಲವು ನಡೆಗಳಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ನೋಡಿ, ಕೆಲವು ತಿಂಗಳ ಹಿಂದೆ ಇಂಡಿಯ ಕೂಟ ಅಸ್ತಿತ್ವಕ್ಕೆ ಬಂದಾಗ ದೇಶದಲ್ಲಿರುವ ಬಿಜೆಪಿಯೇತರ ಶೇ. 63 ಪರ್ಸೆಂಟ್ ಮತದಾರರಲ್ಲಿ ಸಂವಿಧಾನ ಸಂರಕ್ಷಿಸಲ್ಪಡಬಹುದು ಎಂಬ ಆಶಾವಾದವು ಹುಟ್ಟಿತು.

ಆದರೆ, ಬಿಹಾರ ಮತ್ತು ಆಮ್ ಆದ್ಮಿ ಪಾರ್ಟಿ ನಡೆಗಳು ಸಂವಿಧಾನದ ಮೇಲೆ ಗೌರವ ಇಟ್ಟವರನ್ನೆಲ್ಲ ಅನಾಥವಾಗಿಸಿದ್ದು ಹೌದು. ಇದರಲ್ಲಿ ಮುಖ್ಯವಾಗಿ ಈಗ ನಿತೀಶ್ ಕುಮಾರ್ ಎನ್‌ಡಿಎಯ ಬಾಲವನ್ನು ಮತ್ತೆ ಹಿಡಿಯುತ್ತಿರುವುದು ಬಹುದೊಡ್ಡ ಸುದ್ದಿಯಾಗಿದೆ.

ಇಂಡಿಯಾ ಕೂಟ ಹುಟ್ಟಿದಷ್ಟೇ ರಭಸದಲ್ಲಿ ಪತನಗೊಳ್ಳುವ ಹಂತಕ್ಕೆ ತಲುಪಿದೆ. ಅದನ್ನು ಹುಟ್ಟಿಸಿದ್ದ ನಿತೀಶ್ ಕುಮಾರ್ ಗಂಟಲ ಮುಳ್ಳಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಸಿರುಗಟ್ಟಿಸುತ್ತಿದ್ದಾರೆ. ಇದು ಅಕ್ಷಮ್ಯ.

ಪ್ರತಿಪಕ್ಷಗಳು ಇಂಡಿಯ ಕೂಟ ಮಾಡಿದ್ದು ಯಾರ ಉದ್ಧಾರಕ್ಕೆ? ನಿಜಕ್ಕೂ ಜನಸಾಮಾನ್ಯರ ಸಮಸ್ಯೆ, ಬವಣೆ, ನಿರುದ್ಯೋಗ, ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಕಳಕಳಿ ಇಂಡಿಯ ಕೂಟ ಮಾಡುವಾಗ ಇತ್ತೇ? ಆದರೆ ಜನರನ್ನು ವಂಚಿಸುವ, ಅಧಿಕಾರ, ವೋಟು ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಮತ್ತು ಮೋದಿ ಶಾರ ದಾಳಿಯಿಂದ ತಪ್ಪಿಸಿಕೊಳ್ಳುವುದು ಇಂಡಿಯ ಕೂಟ ಮಾಡಿದುದರ ಹಿಂದಿದ್ದ ರಹಸ್ಯ ಆಗಿತ್ತು ಎಂದು ಈಗ ದೇಶದ ಮುಂದೆ ಜಗಜ್ಜಾಹೀರು ಆಗಿದೆ. ಇಂತಹ ಕೆಳಮಟ್ಟದ ರಾಜಕೀಯಕ್ಕಿಳಿದ ಇವರನ್ನು ದೇಶ ಕ್ಷಮಿಸೀತಾ?

ಈ ಪ್ರತಿಪಕ್ಷಗಳು ದೇಶದಲ್ಲಿ ನ್ಯಾಯ, ಸಂವಿಧಾನ, ತುಳಿತಕ್ಕೊಳಗಾದ ಜನರ ಹಕ್ಕು, ಉದ್ಯೋಗದ ಮಾತಾಡುವುದೆಲ್ಲ ಬರೇ ಬೋಗಸ್. ರಾಹುಲ್ ಒಂದುವೇಳೆ ರಾಹುಲ್‌ರ ನೀತಿ ದೇಶದಲ್ಲಿ ಜಾರಿಗೆ ಬಂದರೆ ಜಾತಿ ಜನಗಣತಿ ಆಧಾರದಲ್ಲಿ ಉದ್ಯೋಗ ಹಂಚಲ್ಪಟ್ಟರೆ ಇಡೀ ದೇಶವನ್ನು ಈಗ ನಿಯಂತ್ರಿಸುವ ಮೇಲ್ವರ್ಗದವರಲ್ಲಿ ಬಹುತೇಕರು ಮನೆಗೆ ತೆರಳಬೇಕಾದೀತು. ಮಮತಾ ಬ್ಯಾನರ್ಜಿಯಂತಹ ಮೇಲ್ಜಾತಿಯವರ ರಾಜಕೀಯವೂ ಇತಿಶ್ರಿಯಾಗುವ ಹೆದರಿಕೆ ಇದೆ. ಈಗ ಕೇಂದ್ರದ 93 ಮುಖ್ಯ ಕಾರ್ಯದರ್ಶಿಗಳಲ್ಲಿ ಎಲ್ಲರೂ ಮೇಲ್ವರ್ಗಿಗಳು. ಇವರ ಕೈಯಲ್ಲಿ ದೇಶ ನಡೆಯುತ್ತಿದೆ.

ವಿಷಯ ಬದಲಿಸೋಣ:
ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಮುಂಬೈಯಲ್ಲಿ ನಡೆದಿದ್ದ ರ‍್ಯಾಲಿಯಲ್ಲಿ ಘರ್ಷಣೆ ನಡೆದ ವಿಚಾರವನ್ನು ಎತ್ತಿಕೊಳ್ಳುವುದಾದರೆ ಸಂವಿಧಾನ ಇಲ್ಲಿ ಅಸಿಂಧುವಾಗಿದೆಯಾ ಎಂಬ ಆತಂಕ ಯಾರಿಗೂ ಹುಟ್ಟಬಹುದು. ಮೀರಾ ರೋಡ್, ನಯಾ ನಗರದಲ್ಲಿ ಘರ್ಷಣೆ ನಡೆದಿತ್ತು. ಶಿಂಧೆ ಸರಕಾರ ಅಲ್ಪಸಂಖ್ಯಾತರ ಅಂಗಡಿ ಮುಂಗಟ್ಟುಗಳಿಗೆ ಬುಲ್ಡೋಝರ್ ಹರಿಸಿದೆ. ಇದು ಯಾವ ನ್ಯಾಯ ಎಂದು ಪ್ರಶ್ನೆ ಎತ್ತುವವರೆ ಇಲ್ಲ. ನಮ್ಮ ಧರ್ಮ ನಿರಪೇಕ್ಷ ಸಂವಿಧಾನಕ್ಕೆ ಪೂರಕವಾಗಿ ಇಲ್ಲಿನ ಆಡಳಿತ ಇಲ್ಲ. ನ್ಯಾಯ ಕೇಳಿ ಯಾತ್ರೆ ಹೊರಟ ರಾಹುಲ್ ಗಾಂಧಿಯವರನ್ನು ಅಸ್ಸಾಮಿನಲ್ಲಿ ಬಿಜೆಪಿಯವರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ತಡೆಯುತ್ತಿದ್ದಾರೆ.

ನೋಡಿ, ಮುಸ್ಲಿಂ ಬಹುಸಂಖ್ಯಾತರಿರುವ ನಯಾನಗರಕ್ಕೆ ಪ್ರವೇಶಿಸುವಾಗ ಮೆರವಣಿಗೆ ಕೋರರು ಪ್ರಚೋದಕವಾಗಿ ಘೋಷಣೆ ಕೂಗುವುದು, ನಂತರ ಕಲ್ಲೆಸೆತ ಆಗುವುದು ಘರ್ಷಣೆಯ ಹೊಸ ಟ್ರೆಂಡ್ ಆಗುತ್ತಿದೆ. ಮೀರಾ ನಗರ್ ನಯಾನಗರದ ವಿಷಯವೂ ಇದೇ ಆಗಿತ್ತು.

ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಮುಂಚಿತವಾಗಿ `ಪ್ರದೇಶ್ ರಾಮ್ ರಾಜ್ಯ ರಥಯಾತ್ರೆ’ ಎಂಬ ಹೆಸರಿನಲ್ಲಿ ಶಿಂಧೆ ಶಿವಸೇನೆ ಮತ್ತು ರಾಮ ರಥಾ ಯಾತ್ರೆ ಎಂಬ ಹೆಸರಿನಲ್ಲಿ ಬಿಜೆಪಿ ಹದಿನೇಳು ರ‍್ಯಾಲಿಗಳನ್ನು ನಡೆಸಿದೆ ಎಂದು ಸಿಪಿಎಂ ಮೀರಾ ಬಯಂಧರ್ ಸಮಿತಿ ಕಾರ್ಯದರ್ಶಿ ಕಿಶೋರ್ ಸಾಮಂತ್ ಹೇಳುತ್ತಾರೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಸರಕಾರದ ಒತ್ತಾಶೆಯಲ್ಲಿ ಘಟನೆ ನಡೆದಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ನಮ್ಮ ಕರ್ನಾಟಕದ ವಿಚಾರವನ್ನು ಎತ್ತಿಕೊಳ್ಳುವುದಾದರೆ, ಕಳೆದ ಮೇ ತಿಂಗಳಲ್ಲಿ ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಬಿಜೆಪಿಗೆ ಸೇರಿದ್ದಾರೆ. ಆದ್ದರಿಂದ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷಕ್ಕೆ ಸೇರಿಸುವಾಗ ಅವರ ಹಿನ್ನೆಲೆ, ಆದರ್ಶವನ್ನು ನೋಡಿ ಸೇರಿಸಿಕೊಳ್ಳಿ ಎಂದು ಸಲಹೆ ನೀಡುವವರೆಗೂ ಬಂತು.
ಕಳೆದ ಚುನಾವಣೆಯಲ್ಲಿ ಶೆಟ್ಟರ್‌ರನ್ನು ಕಾಂಗ್ರೆಸ್ಸಿಗೆ ಕರೆ ತರುವಲ್ಲಿ ಡಿಕೆ ಶಿವಕುಮಾರ್ ತುಂಬ ಕೆಲಸ ಮಾಡಿದ್ದರು. ಅವರ ಎಲ್ಲ ಪರಿಶ್ರಮ ನೀರಿನಲ್ಲಿಟ್ಟ ಹೋಮದಂತಾಗಿದೆ. ಡಿಕೆಶಿ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಶೆಟ್ಟರ್ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಸುಮ್ಮನಾಗಿದ್ದಾರೆ. ಶೆಟ್ಟರ್ ಚಾರ್ಮ್ ಮುಗಿದಿದೆ. ಹುಬ್ಬಳ್ಳಿ ಕ್ಷೇತ್ರದಲ್ಲಿ ಅವರ ವಿರುದ್ಧ 34 ಸಾವಿರ ವೋಟುಗಳಿಂದ ಬಿಜೆಪಿಯ ಮಹೇಶ್ ಮೆಣಸಿನ ಕಾಯಿ ಗೆದ್ದಿದ್ದರು.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಾಶ ಪಡಿಸಿ ರಾಮಮಂದಿರ ನಿರ್ಮಿಸಿರುವುದನ್ನು ಉದಯ ನಿಧಿ ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದರು. ರಾಮಮಂದಿರಕ್ಕೆ ನಮ್ಮ ವಿರೋಧ ಇಲ್ಲ, ಬಾಬರಿ ಮಸೀದಿ ಕೆಡವಿ ಕಟ್ಟಿರುವುದಕ್ಕೆ ನಮ್ಮ ಸಹಮತ ಇಲ್ಲ ಎಂದಿದ್ದರು. ಇದು ಬಿಜೆಪಿಗೆ ಕೋಪ ತರಿಸಿತ್ತು. ಹಿಂದಿ ಹೇರಿಕೆ ಸಹಿತ ಹಲವು ವಿಷಯಗಳಲ್ಲಿ ಈ ಹಿಂದೆ ಡಿಎಂಕೆ ಸರಕಾರ ಬಿಜೆಪಿಯೊಂದಿಗೆ ಘರ್ಷಣೆಗಿಳಿದಿತ್ತು. ಇನ್ನು ಎನ್‌ಡಿಎ ಬಿಟ್ಟು ನಿತೀಶ್ ಹೋಗಲಿ, ಎನ್‌ಡಿಎ ಸೇರಲಿ, ಒಂದು ಕಡೆ ದೇಶದಲ್ಲಿ ಇವಿಎಂನಲ್ಲಿ ವೋಟಿಂಗ್ ತಡೆಯಲು ದಿಲ್ಲಿಯಲ್ಲಿ ಹೋರಾಟ ನಡೆಯುತ್ತಿದೆ. ಜೊತೆಗೆ ಫೆಬ್ರುವರಿ ಕಿಸಾನ್ ಮೋರ್ಚಾ ಟ್ರೇಡ್ ಯೂನಿಯನ್‌ಗಳು ಗ್ರಾಮೀಣ ಬಂದ್‌ಗೆ ಕರೆ ನೀಡಿವೆ. ಶೇ. 50ರಷ್ಟು ಲಾಭ ಸೇರಿಸಿ ಮಿನಿಮಂ ಬೆಂಬಲ ಬೆಲೆ ಘೋಷಿಸಿರಿ, ಫಸಲು ಸಂಗ್ರಹ ಖಚಿತ ಪಡಿಸಿರಿ. ಲಖೀಂ ಪುರದಲ್ಲಿ ರೈತರು ಕೊಲ್ಲಲ್ಪಟ್ಟ ಘಟನೆಯ ಹೊಣೆಗಾರ ಕೇಂದ್ರ ಗೃಹ ಸಹ ಸಚಿವ ಅಜಯ್ ಮಿಶ್ರರನ್ನು ಹೊರಗೆ ಹಾಕಿ, ವಿವಾದ ಕಾರ್ಮಿಕ ನಿಯಮಗಳನ್ನು ರದ್ದುಪಡಿಸಿ, ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಮಿನಿಮಂ ವೇತನ 26,000 ರೂಪಾಯಿ ನಿಗದಿಗೊಳಿಸಿರಿ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳನ್ನು ಖಾಸಗಿಗಳಿಗೆ ಕೊಡುವುದು ನಿಲ್ಲಿಸಿ ಮುಂತಾದ ಬೇಡಿಕೆಯನ್ನು ಎತ್ತಿ ಇವರ ಬಂದ್‌ಗೆ ಕರೆ ಕೊಟ್ಟಿದ್ದಾರೆ.

ವಿಷಯಕ್ಕೆ ಬರೋಣ:
ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರರಿಗೆ ಮೋದಿ ಸರಕಾರ ಭಾರತ್ ರತ್ನ ಪ್ರಶಸ್ತಿ ಘೋಷಿಸಿದ್ದು ನಿತೀಶ್‌ರನ್ನು ಎನ್‌ಡಿಎಗೆ ಸೆಳೆಯುವುದಕ್ಕಾಗಿತ್ತು.
ಕರ್ಪೂರಿ ಠಾಕೂರ್‌ಗೆ ಸರಿಯಾದ ಉಡುಪು, ಮನೆ ಇರಲಿಲ್ಲ. ಬಿಹಾರಿಗಳಿಗೆ ಇವೆಲ್ಲ ಸಿಕ್ಕ ಮೇಲೆ ತನಗಿದ್ದರೆ ಸಾಕು ಎಂದು ಘೋಷಿಸಿದವರು. ಒಮ್ಮೆ ಪ್ರಧಾನಿ ಚಂದ್ರಶೇಖರ್ ಅವರು ಕರ್ಪೂರಿ ಠಾಕೂರ್‌ಗೆ ಒಳ್ಳೆಯ ಉಡುಪಿಗೆ ತಮ್ಮದೇ ಮಿತ್ರರಿಂದ ಚಂದ ಸಂಗ್ರಹಿಸುತ್ತಾರೆ. ಅದನ್ನು ತೆಗೆದುಕೊಂಡ ಠಾಕೂರ್ ಮುಖ್ಯಮಂತ್ರಿ ನಿಧಿಗೆ ಕೊಡುತ್ತಾರೆ.

ಇಲ್ಲಿ ಇನ್ನೊಂದು ವಿಚಾರವೂ ಇದೆ. ನಿತೀಶ್‌ರ ಉಲ್ಟಾ ಪಲ್ಟಿಯಿಂದ ಬೇಸತ್ತಿರುವ ಜೆಡಿಯುನ ಹಿಂದುಳಿದ ವರ್ಗದ ಶಾಸಕರು ಲಾಲೂರ ಜೊತೆ ಸೇರಲು ಮತ್ತು ತೇಜಸ್ವಿಯನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ ಎಂಬ ಲೆಕ್ಕಾಚಾರವೂ ಕೇಳಿ ಬರುತ್ತಿದೆ. ಸರಿ ಸುಮಾರು 1994ರಲ್ಲಿ ನಿತೀಶ್‌ರ ಉಲ್ಟಾ ಪಲ್ಟಾ ಶುರುವಾಯಿತು. ಜಾರ್ಜ್ ಪೆರ್ನಾಂಡಿಸ್, ಲಾಲು ಪ್ರಸಾದ್ ಯಾದವ್‌ರಿಗೆ ಕೈಕೊಟ್ಟು ನಿತೀಶ್‌ಕುಮಾರ್ ಅಂದು ಸಮತಾ ಪಾರ್ಟಿ ಕಟ್ಟಿದರು. 1996ರಲ್ಲಿ ಸಮತಾ ಪಾರ್ಟಿ ಬಿಜೆಪಿಯೊಂದಿಗೆ ಸಖ್ಯ ಮಾಡಿಕೊಂಡು ಸರಕಾರ ರಚಿಸಿದರು. 2003ರಲ್ಲಿ ಸಮತಾ ಪಾರ್ಟಿ ಜೆಡಿಯು ಆಯಿತು. 2005-2013ರಲ್ಲಿ ಬಿಜೆಪಿ ಸಖ್ಯದಲ್ಲಿ ಸರಕಾರ ರಚಿಸಿದರು. 2015ರಲ್ಲಿ ಬಿಜೆಪಿಗೆ ಕೈಕೊಟ್ಟು ಲಾಲು ಜೊತೆ ಸೇರಿ ಮುಖ್ಯಮಂತ್ರಿಯಾದರು. 2017ರಲ್ಲಿ ಪುನಃ ಬಿಜೆಪಿಯ ಜೊತೆ ಹೋಗಿ ಮುಖ್ಯಮಂತ್ರಿಯಾದರು. 2022ರಲ್ಲಿ ಪುನಃ ಲಾಲು ಜೊತೆ ಸೇರಿ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲಿ ಈಗ ಒಂದೂವರೆ ವರ್ಷ ಕೂತು ಮತ್ತೆ ಬಿಜೆಪಿ ಕೃಪೆ ಹುಡುಕಿ ಹೊರಟಿದ್ದಾರೆ. ಹೀಗೆ ಈವರೆಗೆ 17 ವರ್ಷಗಳಿಂದ ಬಿಹಾರಕ್ಕೆ ವಕ್ಕರಿಸಿಕೊಂಡ ಮುಖ್ಯಮಂತ್ರಿಯಾಗಿದ್ದಾರೆ.

ಆದರೆ ಈಗ ಈ ಉಲ್ಟಾ ಪಲ್ಟಿಗಳು ಜೆಡಿಯುನಲ್ಲಿ ಅಸಹನೆ ಬೆಳೆಸಿದೆ. ಹೀಗಾಗಿ ಕೆಲವರು ಲಾಲೂ ಯಾದವ್‌ರ ಸಂಪರ್ಕದಲ್ಲಿದ್ದಾರೆ. ಜಿತನ್ ರಾಮ್ ಕೂಡ ಲಾಲು ಮುಖ್ಯಮಂತ್ರಿ ಮಾಡುವ ಶರತ್ತಿನಲ್ಲಿ ಲಾಲು ಪಾಳಯಕ್ಕೆ ಜಿಗಿಯಬಹುದು. ಮತ್ತೆ ತೇಜಸ್ವಿ ಮುಖ್ಯಮಂತ್ರಿಯಾಗುವುದಕ್ಕೆ ನಾಲ್ಕು ಶಾಸಕರ ಕೊರತೆ ಇದೆ. ಉಪೇಂದ್ರ ಕುಶ್ವಾಹ ಮುಖೇಶ್ ಸಹಾನಿಯವರಿಂದ ಇದು ಸರಿ ಪಡಿಸಿಕೊಳ್ಳಬಹುದು. ಮಾತ್ರವಲ್ಲ ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಉತ್ತಮ ಮಿತ್ರರೂ ಆಗಿದ್ದಾರೆ. ಈ ಎಲ್ಲ ಲೆಕ್ಕಗಳು ನಿತೀಶ್‌ರಿಗೆ ಉಲ್ಟಾ ಇದೆ. ಹೀಗಾಗಿ ನಿತೀಶ್‌ಗೆ ಎನ್‌ಡಿಎ ಕೂಟಕ್ಕೆ ಸೇರುವುದು ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ. ಎನ್‌ಡಿಎ ಜೊತೆ ಹೋಗಿ ಮುಖ್ಯಮಂತ್ರಿಯಾಗುವುದಕ್ಕಿಂತ ಬಿಹಾರ ವಿಧಾನಸಭೆ ವಿಸರ್ಜಿಸುವುದು ಅವರಿಗೆ ಬೇಕಾಗಿದೆ. ರಾಮಮಂದಿರದಲ್ಲಿ ಬಿಜೆಪಿಗೆ ಸಿಗಬಹುದಾದ ವೋಟುಗಳನ್ನು ಸೇರಿಸಿಕೊಂಡು ಅಧಿಕಾರಕ್ಕೆ ಬರುವ ಪ್ರಯತ್ನ ಇದು. ಇದರಿಂದ ನಿತೀಶ್‌ರಿಗೆ ಗದ್ದುಗೆ ಸಿಗುತ್ತದೆ? ಜೆಡಿಯು ಶಾಸಕರಿಗೆ ಏನು ಸಿಗುತ್ತದೆ? ಹೀಗೆ ಜೆಡಿಯು ವಿಭಜನೆಯಾಗುವ ಸಾಧ್ಯತೆ ತಲೆದೋರಿದೆ ಎನ್ನಲಾಗುತ್ತದೆ. ತೇಜಸ್ವೀ ಹೇಳಿಕೊಳ್ಳುವಂತೆ ಎಪ್ಪತ್ತು ದಿವಸಗಳಲ್ಲಿ ಅವರು ಉಪಮುಖ್ಯಮಂತ್ರಿಯಾಗಿ 2 ಲಕ್ಷ ಶಿಕ್ಷಕರ ನೇಮಕಾತಿ ಮಾಡಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಮಾತ್ರ ಅಲ್ಲ ರಾಹುಲ್ ಗಾಂಧಿಯಂತೆ ಅವರು ಜನರ ನಡುವೆ ತೆರಳಿ ಕಷ್ಟಗಳನ್ನು ಆಲಿಸಿ ತಮ್ಮಿಂದಾದ ಪರಿಹಾರ ಸೂಚಿಸುತ್ತಿದ್ದಾರೆ. ಇದು ಅವರ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಯಶ್ವಂತ್ ಸಿನ್ಹಾರ ಪ್ರಕಾರ ನಿತೀಶ್ ಬಿಹಾರದ ಇತಿಹಾಸದಲ್ಲಿ ಅಸ್ತಮಿಸುವ ಸೂರ್ಯ ಆಗಲಿದ್ದಾರೆ.

ಇನ್ನು ಮಮತಾ ಬ್ಯಾನರ್ಜಿ, ಜೆಡಿಯು, ಆಮ್ ಆದ್ಮಿಪಾರ್ಟಿ ರಾಹುಲ್ ಗಾಂಧಿಯ ತೂಫಾನ್‌ಗೆ ತಮ್ಮ ಮತ ಬ್ಯಾಂಕುಗಳನ್ನು ಕಳಕೊಳ್ಳುವ ಹೆದರಿಕೆ ಸೃಷ್ಟಿಸಿದೆ. ಕಳೆದ ಉಪ ಚುನಾವಣೆಯಲ್ಲಿ ಸಾಗರ್ ದಿಘೆ ಕ್ಷೇತ್ರದಲ್ಲಿ ರಾಹುಲ್‌ರ ಭಾರತ್ ಜೋಡೊ ಯಾತ್ರೆಯ ಪರಿಣಾಮದಿಂದ ಕಾಂಗ್ರೆಸ್ ಅರ್ಧ ಶತಮಾನದ ನಂತರ ಗೆದ್ದಿತ್ತು. ಇಂತಹ ಪ್ರಭಾವ ಇದೆ. ಆಮ್ ಆದ್ಮಿಯ ಬಲಪಂಥೀಯತೆ ಅರ್ಥಮಾಡಿ ಕೊಂಡಿದ್ದರಿಂದ ಜನರು ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ. ಈಗಿನದ್ದು ಬದಲಾದ ಕಾಂಗ್ರೆಸ್ ಎಂದು ರಾಹುಲ್ ಗಾಂಧಿ ಜನರಲ್ಲಿ ಅರ್ಥ ಮಾಡಿಸಿದ್ದಾರೆ. ಮಮತಾ ಬ್ಯಾನರ್ಜಿ ತಮ್ಮ ಅಸ್ತಿತ್ವಕ್ಕೆ ಸಂಚಕಾರವಿದೆ ಎಂದು ರಾಹುಲ್ ಗಾಂಧಿ ನ್ಯಾಯ ಯಾತ್ರೆಗೆ ಅಡಚಣೆ ತರುತ್ತಿದ್ದಾರೆ. ಸಿಲಿಗುರಿಯಲ್ಲಿ ಸಾರ್ವಜನಿಕ ಸಭೆಗೆ ಅನುಮತಿಯನ್ನೂ ನಿರಾಕರಿಸಲಾಗಿದೆ.

ಕೊನೆಯದಾಗಿ ನಿತೀಶ್ ಕುಮಾರ್ ಇಂಡಿಯ ಕೂಟದಲ್ಲಿದ್ದರೆ ಅವರೇ ಮುಂದಿನ ಪ್ರಧಾನಿ ಆಗಲಿದ್ದಾರೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ದಾಳ ಉರುಳಿಸಿದ್ದಾರೆ. ಇದು ನಿತೀಶ್‌ರಲ್ಲಿ ಯಾವ ಪ್ರಭಾವ ಬೀರಬಹುದು ಎಂದು ಕಾದು ನೋಡಬೇಕು.