ಹೊಸದಿಲ್ಲಿ, ಆ. 5: ಆಮ್ ಆದ್ಮಿ ಪಾರ್ಟಿಯ ಪ್ರಾಥಮಿಕ ಸದಸ್ಯತ್ವಕ್ಕೆ ತಾನು ರಾಜೀನಾಮೆ ನೀಡುವೆ ಎಂದು ಅಲ್ಕಾ ಲಾಂಬ ಹೇಳಿದ್ದಾರೆ. ಸದ್ಯ ಆಮ್ ಆದ್ಮಿ ಪಾರ್ಟಿಯಿಂದ ಚಾಂದ್ನಿ ಚೌಕ್ ಶಾಸಕಿಯಾಗಿರುವ ಅವರು, ತನಗಾದ ಕೆಟ್ಟ ಅನುಭವಗಳು ರಾಜೀನಾಮೆಗೆ ಕಾರಣ ಎಂದು ತಿಳಿಸಿದ್ದಾರೆ.
“ಯಾವುದೇ ತೀರ್ಮಾನವನ್ನು ಜನರೊಂದಿಗೆ ಚರ್ಚಿಸಿ ತೆಗೆದುಕೊಳ್ಳಬೇಕೆಂದು ನಾನು ಭಾವಿಸುತ್ತೇನೆ. ಆಮ್ ಆದ್ಮಿ ಪಾರ್ಟಿಯ ಎಲ್ಲ ಸಂಬಂಧವನ್ನು ಕಡಿದುಕೊಳ್ಳಲು ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ. ನಾನು ಕೊಡಲೇ ರಾಜೀನಾಮೆ ಬರೆದು ಕೊಡುವೆ. ಆದರೆ ಶಾಸಕಿಯಾಗಿ ಮುಂದುವರಿಯುವೆ” ಎಂದು ಆಲ್ಕಾ ಹೇಳಿದ್ದಾರೆ.
ಈ ಮೊದಲು ಅವರು ರಾಜೀನಾಮೆ ನೀಡುವುದಾಗಿ ಹೇಳಿದ್ದರೂ ರಾಜೀನಾಮೆ ನೀಡಿರಲಿಲ್ಲ. ಇದೀಗ ಎರಡನೇ ಬಾರಿ ಹೀಗೆ ಹೇಳುತ್ತಿದ್ದಾರೆ. ಹಿರಿಯ ನಾಯಕರಿಂದ ಪದೇ ಪದೇ ಆಗಿರುವ ಅವಮಾನ ಅವರನ್ನು ರೊಚ್ಚಿಗೇಳುವಂತೆ ಮಾಡಿದೆ ಎಂಬ ವರದಿಯಿದೆ. ತನ್ನನ್ನು ಸಭೆಗೆ ಕರೆಯುವುದಿಲ್ಲ. ಹಲವು ಬಾರಿ ಅವಮಾನಿತಳಾಗಿದ್ದೇನೆ. ಇಪ್ಪತ್ತು ವರ್ಷ ಕಾಂಗ್ರೆಸ್ಸಿನಲ್ಲಿ ಮತ್ತು ಆಮ್ ಆದ್ಮಿ ಪಾರ್ಟಿಯಲ್ಲಿದ್ದೂ ಮೂಲಭೂತ ಗೌರವ ಸಿಕ್ಕಿಲ್ಲ ಎಂದು ಅಲ್ಕಾಲಾಂಬ ಹೇಳಿದರು.
ಇದೇವೇಳೆ ಅವರ ರಾಜೀನಾಮೆ ಘೋಷಣೆ ಕೇವಲ ಪಬ್ಲಿಸಿಟಿ ಆಗಿದೆ ಎಂದು ಆಮ್ ಆದ್ಮಿ ಪಾರ್ಟಿ ನಾಯಕರು ಹೇಳಿದ್ದಾರೆ. ರಾಜೀನಾಮೆ ನೀಡುವೆ ಎಂದು ಇದಕ್ಕಿಂತ ಮೊದಲೂ ಅಲ್ಕಾ ಹೇಳಿದ್ದಾರೆ. ಶಾಸಕ ಸೀಟು ಸಿಗದು ಎನ್ನುವ ಭಯವು ಅವರಿಗಿದೆ. ರಾಜೀನಾಮೆ ನೀಡುವುದಾದರೆ ರಾಜೀನಾಮೆ ಪತ್ರ ಪಾರ್ಟಿ ನಾಯಕರಿಗೆ ನೀಡಬೇಕು. ಹಾಗೆ ಅವರು ಮಾಡಿಲ್ಲ. ರಾಜೀನಾಮೆ ವಿಷಯ ಮಾಧ್ಯಮಗಳ ಮುಂದೆ ಹೇಳುವುದು ಕೇವಲ ನಾಟಕ ಆಗಿದೆ ಎಮದು ಸೌರಭ್ ಭಾರದ್ವಾಜ್ ಹೇಳಿದರು.












