ತಾಯಿಯ ಮೃತದೇಹದೊಂದಿಗೆ 9 ತಿಂಗಳು ಕಳೆದ 53 ವರ್ಷದ ಮಗಳು

0
504

ಸನ್ಮಾರ್ಗ ವಾರ್ತೆ

ಮುಂಬೈ,ನ.23: ಮುಂಬೈಯಲ್ಲಿ ತಾಯಿಯ ಮೃತದೇಹದೊಂದಿಗೆ ಒಂಬತ್ತು ತಿಂಗಳು 53 ವರ್ಷದ ಮಹಿಳೆ ಕಾಲಕಳೆದಿದ್ದಾರೆ. ಕಳೆದ ದಿವಸ ಮುಂಬೈಯ ಚುಯಿಂ ಗ್ರಾಮದ ಮನೆಯೊಂದರಿಂದ ಒಂಬತ್ತು ತಿಂಗಳ ಹಿಂದೆ ಮರಣ ಹೊಂದಿದ್ದ 83 ವರ್ಷದ ವೃದ್ಧೆಯ ಮೃತದೇಹವನ್ನು ಹೊರತೆಗೆಯಲಾಯಿತು. ತಾಯಿ ಮೃತಪಟ್ಟಿರುವುದನ್ನು 53 ವರ್ಷದ ಮಹಿಳೆ ಯಾರಿಗೂ ಹೇಳಿರಲಿಲ್ಲ.

53 ವರ್ಷದ ಮಹಿಳೆ ಮನೆಯ ಕಿಟಕಿಯಿಂದ ಮಾಲಿನ್ಯವನ್ನು ಹೊರಗೆ ಎಸೆಯುತ್ತಿದ್ದಾರೆಂದು ನೆರೆಮನೆಯವರು ನೀಡಿದ ದೂರಿನಲ್ಲಿ ಪೊಲೀಸರು ಮನೆಗೆ ಬಂದು ತಪಾಸಣೆ ಮಾಡಿದಾಗ ವೃದ್ಧೆ ಮೃತಪಟ್ಟ ಸಂಗತಿ ಬಹಿರಂಗವಾಗಿದೆ. ಮಹಿಳೆ ತಾಯಿಯ ಮೃತದೇಹದೊಂದಿಗೆ ಒಬ್ಬರೇ ವಾಸವಿದ್ದರು. ಕೊರೋನದ ಲಾಕ್‍ಡೌನ್‍ನ ವೇಳೆ ವೃದ್ಧೆ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ.

ಮಗಳು ಮಾನಸಿಕ ಅಸ್ವಸ್ಥೆ ಎಂದು ನೆರೆಯವರು ಹೇಳಿದ್ದಾರೆ ಎಂದು ಮುಂಬೈ ಮಿರರ್ ವರದಿಮಾಡಿದೆ. ಆದ್ದರಿಂದ, ಅವರು ತಾಯಿ ಮೃತಪಟ್ಟಿರುವುದನ್ನು ಯಾರಿಗೂ ಹೇಳಿರಲಿಲ್ಲ ಎಂದು ತಿಳಿಯಲಾಗಿದೆ. ಕೆಲವು ವರ್ಷಗಳ ಹಿಂದೆ ಇವರ ಸಾಕು ನಾಯಿ ಸತ್ತಾಗಲೂ ಅದನ್ನು ಹೀಗೆ ಇಟ್ಟುಕೊಂಡಿದ್ದರು.

ವೃದ್ಧೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಮಗಳನ್ನು ಆರೋಗ್ಯ ತಪಾಸಣೆಗೆ ಕಳುಹಿಸಲಾಗಿದೆ. ತಾಯಿಯ ನಿಧನದ ಕುರಿತು ಕೇಳಿದಾಗ ಮಹಿಳೆ ಸರಿಯಾಗಿ ಉತ್ತರಿಸಿಲ್ಲ ಎಂದು ಪೊಲೀಸರು ತಿಳಿಸಿದರು.