ಅಕ್ಟೋಬರ್ 15 ರಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸದಸ್ಯತ್ವ ನೋಂದಣಿ ಅಭಿಯಾನ ಆರಂಭ

0
601

ಸನ್ಮಾರ್ಗ ವಾರ್ತೆ

ಬೆಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸದಸ್ಯತ್ವ ನೋಂದಣಿ ಅಭಿಯಾನ ಅಕ್ಟೋಬರ್ 15 ರಿಂದ ಆರಂಭವಾಗಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹಿರ್ ಹುಸೇನ್ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸದಸ್ಯತ್ವ ನೋಂದಣಿ ಅಭಿಯಾನ ಅಕ್ಟೋಬರ್ 15 ರಿಂದ 31 ಅಕ್ಟೋಬರ್ ರವರೆಗೆ ನಡೆಯಲಿದೆ. ಸದಸ್ಯತ್ವ ನೋಂದಣಿ ಅಭಿಯಾನ ಪ್ರಕ್ರಿಯೆ ಮೇಲುಸ್ತುವಾರಿ ಸಮಿತಿಯ ಸಂಚಾಲಕ ಹೊಣೆಯನ್ನೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ನಿಭಾಯಿಸಲಿದ್ದಾರೆ.

ಇಂದು ಭಾರತದಲ್ಲಿ ಸುಮಾರು 2300 ನೋಂದಾಯಿತ ರಾಜಕೀಯ ಪಕ್ಷಗಳಿವೆ. ಕೆಲವು ಪಕ್ಷಗಳು ಜಾತಿ ಆಧಾರಿತವಾದರೆ, ಕೆಲವು ಕೋಮು ಆಧಾರಿತ ಪಕ್ಷಗಳಾಗಿವೆ. ಕೆಲವು ಕುಟುಂಬ ಆಧಾರಿತವಾದರೆ ಇನ್ನು ಕೆಲವು ಸ್ವಪ್ರತಿಷ್ಠೆಗಾಗಿ ಹುಟ್ಟಿಕೊಂಡ ಪಕ್ಷಗಳಾಗಿವೆ.
ಹೀಗೆ ಹಲವು ಕಾರಣಗಳಿಗಾಗಿ ಹುಟ್ಟಿಕೊಂಡ ಪಕ್ಷಗಳಿಗೆ ದೇಶದ ಅಭಿವೃದ್ಧಿ, ಜನಸಾಮಾನ್ಯರ ಸಮಸ್ಯೆಗಳು ಮುಖ್ಯವಾಗಿರಲಿಲ್ಲ. ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ಬಡತನ,ನಿರುದ್ಯೋಗ, ಕೆಳ ವರ್ಗದವರ ಮೇಲೆ ದೌರ್ಜನ್ಯ, ಹೀಗೆ ಹಲವಾರು ಸಮಸ್ಯೆಗಳು ಇನ್ನೂ ಕಾಡುತ್ತಿವೆ. ಕೇವಲ ಕೈ ಬದಲಾವಣೆ ಆಗಿದೆ ಹೊರತು ಆಡಳಿತ ಶೈಲಿಯಲ್ಲಿ ಬದಲಾವಣೆಯಾಗಿಲ್ಲ . ಇವೆಲ್ಲವುಗಳಿಂದ ಜನರಿಗೆ ಬೇಸರ ಹುಟ್ಟಿದೆ ಎಂದು ಹೇಳಿದರು.

ಜನಸಾಮಾನ್ಯರಿಗೆ ರಾಜಕೀಯ ಪಕ್ಷಗಳೆಂದರೆ ಒಂದು ತರಹ ಅಲರ್ಜಿಯಾಗ ತೊಡಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯದಲ್ಲಿ ಮೂಲ್ಯದೊಂದಿಗೆ, ಭಾರತದ ಆರು ಸಾವಿರ ಗ್ರಾಮಗಳನ್ನು ಕಲ್ಯಾಣ ಗ್ರಾಮ ಮಾಡುವ ಕನಸಿನೊಂದಿಗೆ ಹುಟ್ಟಿಕೊಂಡ ಪಕ್ಷವಾಗಿದೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ. ಈಗಾಗಲೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೆಲ್ಫೇರ್ ಪಕ್ಷದಿಂದ ಆರಿಸಿ ಬಂದಿರುವ ಸದಸ್ಯರು ತಮ್ಮ ವಾರ್ಡ್ ಗಳನ್ನು ಮಾದರಿ ವಾರ್ಡನ್ನಾಗಿ ಮಾಡಿದ್ದಾರೆ ಎನ್ನುವುದು ವಾಸ್ತವವಾಗಿದೆ.

ಈ ಸದಸ್ಯತ್ವ ಮಿಸ್ಡ್‌ ಕಾಲ್‌ (9482874767) ಮೂಲಕ ನೋಂದಾಯಿಸಬಹುದು ಹಾಗೂ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯ ವಹಿಸಲಿದ್ದಾರೆ.
ಆದ್ದರಿಂದ ವೆಲ್ಫೇರ್ ಪಕ್ಷದ ಕಲ್ಯಾಣ ಭಾರತದ(Welfare state) ಕನಸನ್ನು ನನಸಾಗಿಲು ಈ ಪಕ್ಷವನ್ನು ಬೆಂಬಲಿಸಿ ಇದರ ಸದಸ್ಯರಾಗಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, WPI ಮಹಿಳಾ‌ ವಿಭಾಗದ ರಾಜ್ಯಾಧ್ಯಕ್ಷೆ ತಲತ್ ಯಾಸ್ಮೀನ್ ಉಪಸ್ಥಿತರಿದ್ದರು.