ತುಮಕೂರು: ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ವೆಲ್ಫೇರ್ ಪಾರ್ಟಿಯಿಂದ ಡಿಸಿಎಂ‌ ರಿಗೆ ಮನವಿ

0
426

ಸನ್ಮಾರ್ಗ ವಾರ್ತೆ

ತುಮಕೂರು: ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ವೆಲ್ಫೇರ್ ಪಾರ್ಟಿಯಿಂದ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್‌‌ರಿಗೆ ಮನವಿ ಸಲ್ಲಿಸಲಾಯಿತು‌.

ಭಾರತ ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿ ರೈತರನ್ನು ಭಾರತ ದೇಶದ ಬೆನ್ನೆಲುಬು ಅಂತಾ ಕರೆಯುತ್ತಾರೆ. ಆದರೆ, ಇವತ್ತು ರೈತರ ಬೆನ್ನೆಲುಬನ್ನು ಮುರಿಯಲು ನಮ್ಮನಾಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ ಎಂದು ಡಬ್ಯೂಪಿಐ ಆರೋಪಿಸಿತು‌.

ಕೃಷಿಯು ಅನೇಕ ಬಿಕ್ಕಟ್ಟುಗಳನ್ನು ಎದರುಸುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ನಿಗದಿತ ಬೆಲೆ ಮತ್ತು ಮಾರುಕಟ್ಟೆ ಇಲ್ಲ. ನೀರಾವರಿ ಸೌಲಭ್ಯ, ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಪೂರೈಕೆ, ದಾಸ್ತಾನು ಕೊಠಡಿ, ಸಾಲ ಸೌಲಭ್ಯ, ತಂತ್ರಜ್ಞಾನಗಳು ಸರಿಯಾಗಿ ಸಿಗದ ಪರಿಣಾಮ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಅಸಂಖ್ಯಾತ ರೈತ ಮತ್ತು ಕೃಷಿ ಕೂಲಿಕಾರರು ಕೃಷಿಯಿಂದ ದೂರವಾಗಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಗಳಿಗೆ ವಲಸೆ ಬರುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕಾದ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ.

ರೈತ ಮತ್ತು ಜನ ವಿರೋಧಿ ಕಾಯಿದೆಗಳನ್ನು ಜಾರಿ ಮಾಡಲು ಹೊರಟಿವೆ. ಈ ಕಾಯಿದೆಗಳು ಜಾರಿಯಾದರೆ ದೇಶದ ಕೃಷಿ ದಿವಾಳಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ತಿದ್ದುಪಡಿಗೆ ಒಳಗಾದ ಮೂರು ಕಾಯಿದೆಗಳಾದ ಭೂ ಸುಧಾರಣೆ ತಿದ್ದುಪಡಿ ಕಾಯಿದೆ, ಕೃಷಿ ಉತ್ಪನ್ನ (APMC) ಮತ್ತು ಸರಕು ಸೇವೆಗಳ ಮಾರಾಟ ಕಾಯಿದೆ ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯಿದೆಗಳು ರೈತರಿಗೆ ಮಾರಕವಾಗಿ ಕೃಷಿಯನ್ನು ನಾಶಗೊಳಿಸಿ‌ ಅಂಬಾನಿ, ಆದಾನಿ ಸೇರಿದಂತೆ ಇತರ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರಿಗೆ ಕೃಷಿಯನ್ನು ಒಪ್ಪಿಸಲಿವೆ.

ದೆಹಲಿಯಲ್ಲಿ ‌ಪಂಜಾಬ್, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಛತ್ತಿಸ್ಗಢ ಸೇರಿ ದೇಶದ ಇತರೆ ರಾಜ್ಯ ಗಳ ರೈತರು ಮಾಡುತ್ತಿರುವ ಹೋರಾಟವು ದೇಶದ ಉಳಿವಿಗಾಗಿ ಮತ್ತು ಆಹಾರದ ಭದ್ರತೆಗಾಗಿ ಮಾಡುತ್ತಿರುವ ಹೋರಾಟವಾಗಿದೆ.

ಕೂಡಲೇ ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಕೈ ಬಿಟ್ಟು, ಜನಸಾಮಾನ್ಯರ ಒಳಿತಿಗಾಗಿ ಸರಕಾರ ಬದ್ಧತೆಯನ್ನು ತೋರಿಸಬೇಕೆಂದು ವೆಲ್ಫೇರ್ ಪಾರ್ಟಿ ಆಗ್ರಹಿಸಿತು‌.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಶರೀಫ್, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್, ತುಮಕೂರು ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಪಿ .ಏನ್ ರಾಮಯ್ಯ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪರಮೇಶ್ವರಯ್ಯ ಉಪಸ್ಥಿತರಿದ್ದರು.