ನ್ಯಾಯಾಲಯದ ಆವರಣದಲ್ಲೇ ಸಾಹಿತಿ ಕೆ.ಎಸ್. ಭಗವಾನ್ ಮೇಲೆ ಮಸಿ ಬಳಿದ ವಕೀಲೆ..!

0
685

ಘಟನೆಯ ವಿಡಿಯೋ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ವಕೀಲೆ

ಸನ್ಮಾರ್ಗ ವಾರ್ತೆ

ಬೆಂಗಳೂರು : ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ರವರ ಮುಖಕ್ಕೆ ವಕೀಲೆಯೊಬ್ಬರು ಕೋರ್ಟ್ ಆವರಣದಲ್ಲಿಯೇ ಮಸಿ ಬಳಿದ ಘಟನೆ ಬೆಂಗಳೂರಿನ ಎ ಸಿ ಎಂ ಎಂ ಕೋರ್ಟ್ ಆವರಣದಲ್ಲಿ ನಡೆದಿದೆ.

ವಕೀಲೆಯಾಗಿರುವ ಮೀರಾ ರಾಘವೇಂದ್ರ ಎಂಬವರು ಹಿಂದೂ ಧರ್ಮದ ವಿರುದ್ದ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ರವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನು ಪಡೆಯುವ ಸಲುವಾಗಿ ಪ್ರೊ.ಭಗವಾನ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆಯಲ್ಲಿ ದೂರುದಾರೆಯೂ ಆಗಿರುವ ವಕೀಲೆ ಮೀರಾ ರಾಘವೇಂದ್ರ ಅವರು ಮಸಿ ಬಳಿದಿದ್ದಲ್ಲದೆ, ಇಷ್ಟು ವಯಸ್ಸು ಆಗಿದೆ ರಾಮನ ಬಗ್ಗೆ, ಧರ್ಮದ ಬಗ್ಗೆ ಮಾತಾಡ್ತೀರಲ್ಲ ನಿಮಗೆ ನಾಚಿಕೆ ಆಗೋದಿಲ್ವಾ ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೇ ಮಸಿ ಬಳಿದಿರುವ ವಿಡಿಯೋವನ್ನು ತನ್ನದೇ ಟ್ವೀಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ವಕೀಲೆ, ಅದನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಕೀಲೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಸಂವಿಧಾನ ಕಲಿತು ವಕೀಲೆಯಾಗಿರುವ ಈಕೆಗೆ ಕಾನೂನಿಗೆ ಗೌರವ ಕೊಡುವುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಭಗವಾನ್ ಜೊತೆಗಿದ್ದ ಅಂಗರಕ್ಷಕ ಕೂಡಲೇ ನ್ಯಾಯಾಲಯದ ಆವರಣದಿಂದ ಹೊರಗೆ ಕರೆದೊಯ್ದರು. ಘಟನೆಗೆ ಸಂಬಂಧಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವಕೀಲೆಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೌರಿ ಲಂಕೇಶ್ ಕೊಲೆ ಪ್ರಕರಣದ ಬಳಿಕ ಕೊಲೆಗಾರರ ಹಿಟ್ ಲಿಸ್ಟ್ ನಲ್ಲಿ ಭಗವಾನ್ ಅವರ ಹೆಸರು ಇದ್ದ ಹಿನ್ನೆಲೆಯಲ್ಲಿ ಸರ್ಕಾರ ಪೊಲೀಸ್ ಭದ್ರತೆಯನ್ನು ಒದಗಿಸಿತ್ತು.