ಯುದ್ಧಗ್ರಸ್ತ ಯೆಮನ್‍ನಲ್ಲಿ ಡೆಂಗ್ಯು ಹಾವಳಿ

0
505

ಸನ್ಮಾರ್ಗ ವಾರ್ತೆ

ಸನ್‍ಆ,ನ.27: ಆಂತರಿಕ ಯುದ್ಧ ಗ್ರಸ್ತ ಯೆಮನ್‍ನ ಮುಂದೆ ಇನ್ನೊಂದು ಸಂಕಟ ಬಂದಪ್ಪಳಿಸಿದ್ದು ಈಗ ದೇಶಾದ್ಯಂತ ಡೆಂಗ್ಯು ಜ್ವರ ಹಾವಳಿಯಿಟ್ಟಿದೆ ಎಂದು ರೆಡ್‍ಕ್ರಾಸ್ ತಿಳಿಸಿದೆ.

ಸಾವಿರಾರು ಮಂದಿ ಡೆಂಗ್ಯುಗೆ ತುತ್ತಾಗಿದ್ದು ಹಲವು ಮಂದಿ ಕೊನೆಯುಸಿರೆಳೆದರು ಎಂದು ಇಂಟರ್‍‌ನ್ಯಾಶನಲ್ ಕಮಿಟಿ ಆಫ್ ರೆಡ್ ಕ್ರಾಸ್ ವರದಿ ತಿಳಿಸಿದೆ. ಅರಬ್ ಜಗತ್ತಿನಲ್ಲಿ ಯುದ್ಧದಿಂದ ಬಡತನ, ಹಸಿವಿಗೆ ತುತ್ತಾದ ದೇಶ ಯೆಮನ್ ಆಗಿದ್ದು ಈ ಹಿಂದೆ ದೇಶವನ್ನು ಕಾಲರಾ, ಮಲೇರಿಯಾ ಬಳಲಿಸಿತ್ತು. ಈ ರೋಗಗಳಿಗೆ ತುತ್ತಾಗಿ ಹಲವಾರು ಮಂದಿ ಮೃತಪಟ್ಟಿದ್ದರು. ಈಗ ಅಲ್ಲಿ ಭಯಾನಕ ಪರಿಸ್ಥಿತಿ ಇದೆ ಎಂದು ರೆಡ್‍ಕ್ರಾಸ್ ಮುಖ್ಯಸ್ಥ ರಾಬರ್ಟ್ ಮರ್ದಿನಿ ಹೇಳಿದರು.

ಡೆಂಗ್ಯು,ಮಲೇರಿಯದಿಂದ ಯಮೆನ್‍ನ ಹೊದೈದ್‌ನಲ್ಲಿ ಐವತ್ತು ಮಂದಿ ನವೆಂಬರ್‌ನಲ್ಲಿ ಮೃತಪಟ್ಟಿದ್ದಾರೆ. 2000 ಮಂದಿ ಡೆಂಗ್ಯು, ಮೂವರು ಸಾವಿರದಷ್ಟು ಮಂದಿ ಮಲೇರಿಯಕ್ಕೆ ತುತ್ತಾಗಿದ್ದಾರೆ. ಯುದ್ಧದಿಂದ ಮತ್ತು ಕನಿಷ್ಠ ಚಿಕಿತ್ಸಾ ಸೌಲಭ್ಯಗಳಿಂದ ಸಾಂಕ್ರಾಮಿಕ ರೋಗ ತೀವ್ರವಾಗಿ ಹಬ್ಬುತ್ತಿದ್ದು ನಿಯಂತ್ರಣ ತುಂಬ ಕಷ್ಟಕರವಾಗಿದೆ ಎಂದು ರೆಡ್‍ ಕ್ರಾಸ್ ತಿಳಿಸಿದೆ.