ಮರವೇರುವ ಮಕ್ಕಳೂ…ಕನ್ನಡದ ಮಾನವತಾವಾದಿ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣನೂ…

0
1547

ಇಸ್ಮತ್ ಫಜೀರ್


ನನ್ನ ಸಮಕಾಲೀನರು ಮತ್ತು ನನಗಿಂತ ಹಿಂದಿನ ತಲೆಮಾರಿನ ಮಕ್ಕಳೆಲ್ಲಾ ತಮ್ಮ ಬಾಲ್ಯದಲ್ಲಿ ಒಂದಲ್ಲಾ ಒಂದು ಬಾರಿ ಯಾರದ್ದೋ ಮಾವಿನ ಮರಕ್ಕೋ, ಬುಗರಿ ಮರಕ್ಕೋ, ನೆಲ್ಲಿಕಾಯಿ ಗಿಡಕ್ಕೋ ಕಲ್ಲು ಹೊಡೆದು ತಿಂದವರೇ…ನಾನೂ ಅಷ್ಟೇ.
ನಾನು ಎಳೆಯ ಹುಡುಗನಾಗಿದ್ದಾಗ ಮರವೇರುವುದರಲ್ಲಿ‌ ತುಸು ಹೆಚ್ಚೇ ಎನ್ನುವಷ್ಟು ನಿಸ್ಸೀಮನಾಗಿದ್ದೆ. ನಮಗೆ ಬೇಸಿಗೆ ರಜೆ ಸಿಕ್ಕಿತೆಂದರೆ ನನ್ನ ಮನೆಯ ಪಕ್ಕದ ಹಣ್ಣಿನ ಮರಗಳಿರುವವರಿಗೆಲ್ಲಾ ನಾನೊಂದು ತಲೆನೋವೇ ಆಗಿದ್ದೆ.
ಒಂದು ಘಟನೆ ಚುಟುಕಾಗಿ ಹೇಳುತ್ತೇನೆ.
ನನ್ನ ಮನೆ ಪಕ್ಕ ಒಂದು ದೊಡ್ಡ ಮಾವಿನ ಮರವಿತ್ತು. ಅದಕ್ಕೆ ಸಾಮಾನ್ಯವಾಗಿ ಯಾವ ಮಕ್ಕಳಿಗೂ ಏರಲು ಸಾಧ್ಯವಾಗುತ್ತಿರಲಿಲ್ಲ. ನಾನು ಏನಾದರೂ ಕಸರತ್ತು ಮಾಡಿ ಏರುತ್ತಿದ್ದೆ. ಅದರ ಮೇಲೆ ಕೂತು ಮನಸೋ ಇಚ್ಚೆ ಹಣ್ಣುಗಳನ್ನು ತಿಂದ ಬಳಿಕವೇ ಕೆಳಗಿಳಿಯುತ್ತಿದ್ದೆ. ಆ ಮಾವಿನ ಮರದ ಒಡತಿ ಓರ್ವ ಅಜ್ಜಿ. ಆಕೆ ನನಗೆ ಬಯ್ಯುತ್ತಿದ್ದ ಬೈಗುಳ ಅಷ್ಟಿಷ್ಟಲ್ಲ. ಆದರೆ ನನಗೆ ಅದ್ಯಾವುದೂ ನಾಟುತ್ತಿರಲಿಲ್ಲ. ಅವರೆಷ್ಟೇ ಬೈದರೂ ನಾನದನ್ನು ಕಿವಿಗೆ ಹಾಕಿಕೊಳ್ಳದೇ ಮರವೇರುತ್ತಲೂ ಇದ್ದೆ.
ಒಂದು ದಿನ ಆ ಅಜ್ಜಿ ನನ್ನ ಉಪಟಳ ತಾಳಲಾರದೆ ಮರದ ಕೆಳಗೆ ನಿಂತು ನನಗೆ ಕಲ್ಲೆಸೆಯತೊಡಗಿದರು. ಅಂದು ಕಲ್ಲೇಟಿಗೆ ಬೆದರಿ ಮರದಿಂದ ಜಿಗಿದು ತಪ್ಪಿಸಿದೆ.
ಮರುದಿನ ಪುನಃ ಮರವೇರಿದಾಗ ಅಜ್ಜಿ ಮತ್ತೆ ಕಲ್ಲೆಸೆಯತೊಡಗಿದರು.ನಾನು ಮನದಲ್ಲೇ. ನಿನಗೆ ಕಲಿಸುತ್ತೇನೆಂದು… ಮರದಲ್ಲಿನ ಕಾಯಿ ಮಾವುಗಳನ್ನು ಕಿತ್ತು ಅವರತ್ತ ಎಸೆಯತೊಡಗಿದೆ. ಹತ್ತಾರು ಕಾಯಿ ಮಾವುಗಳನ್ನು ಕಿತ್ತೆಸೆದುದರಿಂದ ಅಜ್ಜಿ ಸೋತೇ ಬಿಟ್ಟರು.ಇವ ನನ್ನ ಮರದ ಎಲ್ಲಾ ಮಾವುಗಳನ್ನು ಎಸೆದು ಖಾಲಿ ಮಾಡುತ್ತಾನೆಂದು ಬೆದರಿ ನನಗೆ ಹಿಡಿಶಾಪ ಹಾಕುತ್ತಾ ಅಲ್ಲಿಂದ ಹೊರಟುಹೋಗಿದ್ದರು. ಮುಂದೆ ನಾನು ಮರವೇರಿದರೆ ಬಯ್ಯುತ್ತಿದ್ದರಾದರೂ, ಮತ್ತೆ ಯಾವತ್ತೂ ನನಗೆ ಕಲ್ಲೆಸೆಯುವ ‌ಧೈರ್ಯ ತೋರಿರಲಿಲ್ಲ.
ಈ ಕತೆ ಇಲ್ಲಿ ಯಾಕೆ ಹೇಳಿದೆನೆಂದರೆ; ಇವತ್ತು ನಾನು ನನ್ನ ಗೆಳೆಯ ಉಮೇಶ್ಚಂದ್ರ ಅವರ ಜೊತೆ ಸಾಹಿತ್ಯದ ಕುರಿತು ಮಾತನಾಡುತ್ತಾ ಮಾತು ಕನ್ನಡದ ಪ್ರಸಿದ್ಧ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣರ‌ ಕತೆಗಳತ್ತ‌ ಹೊರಳಿತು.
ಬೆಸಗರಹಳ್ಳಿಯವರ ನಿಜ ಬದುಕಲ್ಲಿ ನಾನು ಬರೆದುದಕ್ಕೆ ತದ್ವಿರುದ್ಧವಾದ ಒಂದು ಕತೆ ಇದೆ.
ಬೆಸಗರಹಳ್ಳಿಯವರ ಮನೆಯ ಮುಂದೆ ಒಂದು ಬುಗರಿ ಮರ ಇತ್ತಂತೆ… ಶಾಲಾ ಹುಡುಗರೆಲ್ಲಾ ಶಾಲೆಗೆ ಹೋಗುವಾಗ, ಶಾಲೆಯಿಂದ ಹಿಂದಿರುಗುವಾಗೆಲ್ಲಾ‌ ಅವರ ಅಂಗಳದಲ್ಲಿದ್ದ ಬುಗರಿ ಮರವೇರಿ ಹಣ್ಣು ಕೀಳುತ್ತಿದ್ದರಂತೆ. ಬೆಸಗರಹಳ್ಳಿಯವರು ಮಕ್ಕಳಲ್ವಾ ತಿನ್ನಲಿ ಎಂದೇ ಬಿಡುತ್ತಿದ್ದರಂತೆ. ಆದರೆ ಎಲ್ಲಾದರೂ ಮಕ್ಕಳು ಬಿದ್ದು ಕೈ ಕಾಲು ಮುರಿದುಕೊಂಡರೆ ಎಂಬ ಭಯದಿಂದ ಆ ಮರದ ಸುತ್ತ ಮರಳು ಹಾಕಿಸಿಬಿಡುತ್ತಿದ್ದರಂತೆ.
ಎಂತಹ‌ ಅದ್ಭುತ ಮಾನವೀಯ ಮನಸ್ಸು ನೋಡಿ. ಬೆಸರಗರಹಳ್ಳಿಯವರು ಒಳ್ಳೆಯ ಕತೆಗಾರ ಮಾತ್ರವಲ್ಲ.ಅಪ್ಪಟ ಜೀವಪ್ರೇಮಿ ಎಂಬುವುದಕ್ಕೆ ಇದೊಂದು ಪುಟ್ಟ ಉದಾಹರಣೆ ಮಾತ್ರ..
ಅಂದಹಾಗೆ; ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ. ರವಿಕಾಂತೇಗೌಡರು, ಬೆಸಗರಹಳ್ಳಿಯವರ ಪುತ್ರ.