ಸೋಲಿನ ಭೀತಿಯಲ್ಲಿ ಬಿಜೆಪಿ

0
248

✍️ ಅರಫಾ ಮಂಚಿ

ನಿರುದ್ಯೋಗ ಮತ್ತು ಬೆಲೆಯೇರಿಕೆಗೆ ತುರ್ತು ಪರಿಹಾರ ಬೇಕು ಎಂದು ರಾಹುಲ್ ಗಾಂಧಿ ಹೇಳುವಾಗ ಕಾಂಗ್ರೆಸ್ಸಿನ ಪ್ರಣಾಳಿಕೆ ಸ್ವಾತಂತ್ರ್ಯ ಪೂರ್ವದ ಮುಸ್ಲಿಂ ಲೀಗ್ ಪ್ರಣಾಳಿಕೆಯಾಗಿದೆ ಎಂದು ಮೋದಿ ಹೇಳುತ್ತಿದ್ದಾರೆ. ಇನ್ನು ಮುಂದೆ ರೈತ ಮಹಿಳೆಯರು ತಮ್ಮ ಹೊಲಗಳಲ್ಲಿ ಡ್ರೋನ್ ನಲ್ಲಿ ಹಾರಾಟ ನಡೆಸಲಿದ್ದಾರೆ ಎಂದೂ ಅವರು ಹೇಳಿದರು.

ಪ್ರಧಾನಿ ಭ್ರಾಮಕ ವಿಷಯಗಳನ್ನು ಹಂಚುತ್ತಿದ್ದಾರೆ. ರಾಹುಲ್ ಗಾಂಧಿ ವಾಸ್ತವ ವಿಷಯವನ್ನು ನೆನಪಿಸುತ್ತಿದ್ದಾರೆ. ಮೋದಿಗೂ ರಾಹುಲ್‌ಗೂ, ಬಿಜೆಪಿಗೂ ಪ್ರತಿಪಕ್ಷಕ್ಕೂ ಇರುವ ವ್ಯತ್ಯಾಸವಿದು. ಜನರನ್ನು ವಾಸ್ತವವಾದಿಯಾಗಿಸುವ ಕೆಲಸದಲ್ಲಿ ಮುಕ್ಕಾಲಂಶದಷ್ಟು ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿವೆ. ಬಿಜೆಪಿ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಜಾಪ್ರಭುತ್ವ ಚೇತರಿಸಿಕೊಳ್ಳಬಹುದಾದ ಒಂದು ಚಿಕ್ಕ ಎಳೆ ಇದು. ಅದು ಚೇತರಿಸಿದರೆ ದೇಶಕ್ಕೆ ಒಳ್ಳೆಯದು. ಪ್ರಜಾಪ್ರಭುತ್ವ ಸತ್ತರೆ ಸ್ವನಾಶವನ್ನು ಜನರೇ ಮೈ ಮೇಲೆಳೆದು ಕೊಂಡರು ಎಂದು ಹೇಳಬಹುದಾಗಿದೆ. ಈಗ ರಾಹುಲ್ ಗಾಂಧಿ ಮಾತ್ರವಲ್ಲ ಬಿಹಾರದಲ್ಲಿ ತೇಜಸ್ವಿ ಯಾದವ್ ಕೂಡ ನಿರುದ್ಯೋಗ, ಬೆಲೆಯೇರಿಕೆ ಬಗ್ಗೆ ಮಾತಾಡುತ್ತಾರೆ. ಇಲ್ಲಿ, ಒಂದು ದೇಶದ ಸಮಸ್ಯೆ, ಇನ್ನೊಂದು ಬರೇ ಕನಸ್ಸು.

ಈ ಚುನಾವಣೆ ತುಂಬ ಮಹತ್ವದ್ದು. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಿಸುವ ಚುನಾವಣೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಹೇಳಿದರು. ಹೌದು, ಈ ಪ್ರಣಾಳಿಕೆ ಜಾರಿಗೆ ಬಂದರೆ ಮೋದಿ ತಂದ ಒಂದೊಂದು ಕಾನೂನು, ನಿರ್ಧಾರಗಳು ಗಟಾರಕ್ಕೆ ಸೇರುವುದು ಖಚಿತವಾಗಿದೆ. ಬಹುಶಃ ಕಾಂಗ್ರೆಸ್ ಹೊರತಂದ ಚುನಾವಣಾ ಪ್ರಣಾಳಿಕೆ ಮೋದಿ ಸಹಿತ ಬಿಜೆಪಿಗೆ ಬಹುದೊಡ್ಡ ಹೊಡೆತವಾಗಿದೆ.

ನಿಜ, ರೈತ ಮಹಿಳೆಯರು ಡ್ರೋಣ್‌ನಲ್ಲಿ ಹಾರಾಟ ನಡೆಸಲಿದ್ದಾರೆ ಎಂಬುದಂತೂ ಸದ್ಯಕ್ಕೆ ಅದು ಭ್ರಾಮಕ ವಿಷಯವೇ ಆಗುತ್ತದೆ. ಬೆಲೆಯೇರಿಕೆ, ನಿರುದ್ಯೋಗ ಇದೆ ಎಂದರೆ ಅದು ಈಗಿನ ಸತ್ಯವೂ ಆಗಿದೆ. ಆದ್ದರಿಂದ ಹಿಂದೂ ಮುಸ್ಲಿಂ ಮಾಡುವುದಕ್ಕೆ ಜನ ಸ್ಪಂದಿಸಿಲ್ಲ. ಉದಾಹರಣೆಗೆ ದ ಹಿಂದೂನಲ್ಲಿ ಪ್ರಕಟವಾದ ಸಿಎಸ್‌ಡಿಎಸ್ ಸಮೀಕ್ಷೆ ನೋಡಿ. 50% ಜನರು ಬೆಲೆಯೇರಿಕೆ, ನಿರುದ್ಯೋಗ ದೊಡ್ಡ ವಿಷಯ ಎಂದಿದ್ದಾರೆ.

ಕಳೆದ ಐದು ವರ್ಷದಲ್ಲಿ ಭ್ರಷ್ಟಾಚಾರ 55% ಹೆಚ್ಚಳವಾಗಿದೆ ಎಂದು ಜನರು ಹೇಳುತ್ತಾರೆ. ಇಲೆಕ್ಟ್ರಾಲ್ ಬಾಂಡ್ ಬಹಿರಂಗವಾದ ನಂತರ ಬಿಜೆಪಿ ಮಹಾ ಭ್ರಷ್ಟಾಚಾರಿ ಎಂದು ಗುರುತಿಸುವಂತಾಗಿದೆ.

ಬಿಜೆಪಿಯ ರಾಮಮಂದಿರವನ್ನು 8%, ಮತ್ತು ಹಿಂದುತ್ವ 2% ಜನ ಬೆಂಬಲಿಸಿದ್ದಾರೆ. ಹಾಗಿದ್ದರೆ 10% ಜನರಿಂದ ಮೋದಿ 400 ಸೀಟು ತರುವುದು ಹೇಗೆ? ಇದಕ್ಕೆ ಬಿಜೆಪಿ ಹೇಳುವ 17% ಅಭಿವೃದ್ಧಿ ಸೇರಿಸಿದರೂ 27% ಆಗುತ್ತದೆ. ಇದರಲ್ಲಿ ಬಿಜೆಪಿ ಅಭಿವೃದ್ಧಿ ವಿರೋಧಿ ಎನ್ನುವವರು ಸೇರುತ್ತಾರೆ. ಹೀಗಾದಾಗ 58% ಇಂಡಿಯ ಕೂಟಕ್ಕೆ ಹೋಗುತ್ತದೆ. ಹೀಗೂ ಬಿಜೆಪಿಗೆ ಗೆಲ್ಲುವ ಚಾನ್ಸು ಇಲ್ಲ. ಇನ್ನು, ಮೋದಿ ಮುಸ್ಲಿಂ ಲೀಗ್ ಪ್ರಣಾಳಿಕೆ ಎನ್ನುತ್ತಿರುವ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ನ್ಯಾಯ್ ಪತ್ರ್ ನತ್ತ ಬರೋಣ.

ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

ಜಮ್ಮು ಕಾಶ್ಮೀರದ 370ನೇ ವಿಧಿ ರದ್ದಪಡಿಸಿ ಲಡಾಕ್ ಅನ್ನು ವಿಭಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿ ಕಾಶ್ಮೀರಿ ಜನರ ಅಸ್ಮಿತೆಯನ್ನು ಕೆಣಕಿತ್ತು ಮೋದಿ ಸರಕಾರ.

ಈಗ ಕಾಂಗ್ರೆಸ್‌ನ ನ್ಯಾಯ್ ಪತ್ರ್ ವು ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನ ಮರು ಸಂಸ್ಥಾಪಿಸುವುದಾಗಿ ಹೇಳಿದೆ. 25 ವರ್ಷದ ಕೆಳಗಿನ ಎಲ್ಲ ಡಿಪ್ಲೊಮಾ ಪದವೀಧರರಿಗೆ, ಪದವೀಧರರಿಗೆ ಒಂದು ವರ್ಷದ ಅಪ್ರಿಂಟಿಸ್ ಶಿಪ್ ನೀಡುವುದು. ಹೊಸದಾದ ನಾಗರಿಕ ಹಕ್ಕು ಕಾನೂನು ತರುವುದು. ಸೇನಾ ಜವಾನ ನೇಮಕಾತಿಯ ಅಗ್ನಿಪಥ್ ನಿಲ್ಲಿಸುವುದು ಮತ್ತು ಹಿಂದಿನ ನೇಮಕಾತಿ ಪುನರಾರಂಭಿಸುವುದು, ಒಂದು ರಾಜ್ಯ ಒಂದು ಚುನಾವಣೆ ಎಂಬ ಮೋದಿಯ ಕನಸಿನ ಕೂಸನ್ನು ನಿಲ್ಲಿಸುವುದು ಜಾತಿ ಜನಗಣತಿ ಜಾರಿ ಮತ್ತು ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಶೇ. 50ರಷ್ಟು ಮಹಿಳೆಯರಿಗೆ ಮೀಸಲಿಡುವುದು ಇತ್ಯಾದಿಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ.

ಹೀಗೆ 25 ಗ್ಯಾರಂಟಿಗಳ ಚುನಾವಣಾ ಪ್ರಣಾಳಿಕೆ ಮಂಡಿಸಿದ್ದು ಮಾಜಿ ವಿತ್ತ ಸಚಿವ ಪಿ. ಚಿದಂಬರಂ. ಕಾಂಗ್ರೆಸ್ ಹೇಳಿದಂತೆ ನಡೆದುಕೊಳ್ಳುವ ಪಾರ್ಟಿ ಎಂದು ತೆಲಂಗಾಣ, ಕರ್ನಾಟಕ, ಹಿಮಾಚಲಗಳಲ್ಲಿ ಗ್ಯಾರಂಟಿಯನ್ನು ಜನರಿಗೆ ತಲುಪಿಸಿ ಈಗಾಗಲೇ ಜನರ ವಿಶ್ವಾಸ ಗಳಿಸಿಕೊಂಡಿದೆ, ಪ್ರಾಕ್ಟಿಕಲ್ ಆಗಿ ಕಾಂಗ್ರೆಸ್ಸನ್ನು ಒಪ್ಪಲು ಮತ್ತು ಮೋದಿ ಸರಕಾರವನ್ನು ತಿರಸ್ಕರಿಸಲು ಜನರಿಗೆ ಅಗತ್ಯವಿರುವುದನ್ನೆಲ್ಲ ಕಾಂಗ್ರೆಸ್ ಕೊಟ್ಟಿದೆ. ಸರಿಯಾಗಿ ಹೇಳುವುದಾದರೆ ಇತರೆಲ್ಲಕ್ಕಿಂತಲೂ ಕಾಂಗ್ರೆಸ್ಸಿನ ನ್ಯಾಯ ಪತ್ರ್ ದೊಡ್ಡ ಹೊಡೆತವಾಗಿದೆ. ಈ ಹೊಡೆತ ಸಹಿಸದೆ ಮೋದಿ ಅದನ್ನು ಮುಸ್ಲಿಂ ಲೀಗ್‌ಗೆ ಹೋಲಿಸಿದ್ದಾರೆ. ಆದರೆ ಕಾಂಗ್ರೆಸ್ ತಂದ ಪರಣಾಳಿಕೆ ಜನ ಹಿತದೃಷ್ಟಿಯಿಂದ ಕ್ರಾಂತಿಯಾಗಿದೆ. ಪ್ರತಿಪಕ್ಷಗಳು ಮೊದಲು ಮಾಡಬೇಕಾದುದು ಬಿಜೆಪಿ ಮತ್ತು ಮೋದಿ ಸರಕಾರವನ್ನು ಸೊಲಿಸುವ ಕೆಲಸವನ್ನು. ಇರಲಿ.

ಇನ್ನೊಂದು ಕಡೆ ಇಡಿ ಬಂಧನದಿಂದ ಹೊರ ಬಂದ ಸಂಜಯ್ ಸಿಂಗ್ ಮೋದಿಯ ಭ್ರಷ್ಟಾಚಾರದ ಕತೆಯನ್ನು ಓದಿದರು. ಮಹಾರಾಷ್ಟ್ರದ ಅಜಿತ್ ಪವಾರ್, ಛಗನ್ ಭುಜ್‌ಬಲ್, ಹಸನ್ ಮುಶ್ರಿಫ್, ಹಿಮಂತ್ ಬಿಶ್ವ ಶರ್ಮ ಸಹಿತ ದೊಡ್ಡ ಪಟ್ಟಿ ಓದಿದರು. ಮದ್ಯನೀತಿಯಲ್ಲಿ ಹಣ ವಹಿವಾಟು ನಡೆದಿಲ್ಲ. ಭ್ರಷ್ಟಾಚಾರ ಆಗಿಲ್ಲ. 2 ಜಿಯಂತೆ ಇದೊಂದು ಸುಳ್ಳು ಕತೆ ಎಂದು ಹೇಳಿದರು. ಮಣಿಪುರದಲ್ಲಿ ಮಹಿಳೆಯರ ಅತ್ಯಾಚಾರ ನಡೆಯಿತು. ನೂರಾರು ಮಂದಿಯ ಹತ್ಯೆ ನಡೆಯಿತು. ಮೋದಿ ಮಾತಾಡಲಿಲ್ಲ. ಹತ್ತು ವರ್ಷದ ತನ್ನ ಸಾಧನೆ ಏನೂಂತ ವಿವರಿಸುತ್ತಿಲ್ಲ. ಅಲ್ಲ ಮೋದಿ ಯಾವುದಕ್ಕೆ ಮಾತಾಡಿದ್ದಾರೆ? 2015ರಲ್ಲಿ ನಡೆದ ಅಕ್ಲಾಕ್ ಹತ್ಯೆಗೆ ಮಾತಾಡಿದ್ದಾರಾ? ರಾಜಸ್ತಾನ, ಹರಿಯಾಣ, ಸಹಿತ ಇಡೀ ದೇಶದಲ್ಲಿ ಮುಸ್ಲಿಮರನ್ನು ಗೋ ಸಾಗಾಟ ಅಂತ ಕೊಂದು ಹಾಕಿದಾಗ ಮಾತಾಡಿದ್ದಾರಾ? ಸ್ಟಾನ್ ಸ್ವಾಮಿ ಸಾವಿಗೆ ಮೋದಿಯ ಅಂತಃಕರಣ ಮಿಡಿಯಿತಾ? ಅವರು ಕಾಂಗ್ರೆಸ್, ಭ್ರಷ್ಟಾಚಾರ, ಮುಸ್ಲಿಂ ಲೀಗ್. ಹಿಂದೂ ಮುಸ್ಲಿಂ ಮಾತ್ರ ಮಾತಾಡ್ತಾರೆ. ಚೀನಾ ಗಲ್ವಾನ್‌ನಲ್ಲಿ ನಮ್ಮ ಭೂಮಿ ಆಕ್ರಮಿಸಿಕೊಂಡಿತು. ಕಾಂಗ್ರೆಸ್ ಕಚ್ಚತೀವ್ ದ್ವೀಪವನ್ನು ಶ್ರೀಲಂಕಕ್ಕೆ ಕೊಟ್ಟಿದೆ ಎಂದು ಅವರು ಹೇಳುತ್ತಾರೆ. ತನ್ನ ತಪ್ಪುಗಳ ಬಗ್ಗೆ ಒಂದಲ್ಲ ಒಂದು ದಿನ ದೇಶದ ಮುಂದೆ ಕ್ಷಮೆ ಯಾಚಿಸುವ ಕಾಲ ಬಂದೀತು. ರೈತಾಂದೋಲನದಲ್ಲಿ ಕೊನೆಗೆ ಇದೇ ಮೋದಿ ಕ್ಷಮೆ ಯಾಚಿಸಿದ್ದನ್ನು ದೇಶ ನೋಡಿದೆ.

ಇನ್ನೂ ಒಂದು ನೋಡಿ, ಕೇಜ್ರಿವಾಲ್ ಬಂಧನ ವಿರೋಧಿಸಿ ರಾಮ್ ಲೀಲಾ ಮೈದಾನದಲ್ಲಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯಲ್ಲಿ ಮೋದಿ ಸರಕಾರ ವೋಟಿಂಗ್ ಮೆಶಿನ್ ಮೂಲಕ ಗೆಲ್ಲುತ್ತಿದೆ ಎಂದು ರಾಹುಲ್ ಗಾಂಧಿ ನೇರ ಆರೋಪ ಮಾಡಿದರು. ಅಂದೇ ಕಾಕಾತಾಳಿಯವೆಂಬಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸು ಜಾರಿ ಮಾಡಿತು. ಹಲವು ಪ್ರಶ್ನೆ ಹಾಕಿತು.

ವೋಟಿಂಗ್ ಮೆಶಿನ್ನಿನ ವಿವಿ ಪ್ಯಾಟ್‌ನಿಂದ ಹೊರಬರುವ ಚೀಟಿಗಳು ಎಣಿಸುವಂತಿರಬೇಕು. ಅದನ್ನು ಮತದಾರರ ಕೈಗೆ ಸಿಗುವಂತೆ ಮಾಡಬೇಕು ಮತ್ತು ಮತದಾರರು ಚುನಾವಣಾ ಆಯೋಗ ಇಟ್ಟಿದ್ದ ಪೆಟ್ಟಿಗೆಗೆ ಹಾಕಬೇಕು ಎಂದು ನೋಟಿಸಿನಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ವೋಟಿಂಗ್ ಮೆಶಿನ್ ಮೂಲಕ ಬಿಜೆಪಿ ಗೆಲ್ಲುತ್ತಾ ಬಂದಿದೆ ಎಂಬುದು ಸತ್ಯವಾದರೆ ಇದು
ಬಿಜೆಪಿಗೆ ಆಘಾತಕಾರಿ ಸುದ್ದಿ ಆಗುತ್ತದೆ. ಸುಪ್ರೀಂಕೋರ್ಟಿನ ಪೂರ್ಣ ವಿಚಾರಣೆ ಹೊರಬಂದ ಮೇಲೆ ಏನಾಗುತ್ತೋ ನೋಡಬೇಕು. ಅಂತೂ 400 ಸೀಟು ಗೆಲ್ಲುವ ಕನಸ್ಸಿಗೆ ಇದಂತೂ ಕಂಟಕ. 5 ಕೋಟಿ ರೂಪಾಯಿ ವೆಚ್ಚದಲ್ಲಿ 24 ಲಕ್ಷ ಮೆಶಿನ್ನು ಖರೀದಿಸಿದ್ದೀರಿ ಅದರಲ್ಲಿ ಕೇವಲ 20 ಸಾವಿರ ವಿವಿಪ್ಯಾಟ್‌ನ ಎಣಿಕೆ ಮಾಡಬಹುದು ಎಂದು ಯಾಕೆ ಹೇಳುತ್ತಿರಿ? ಅದು ಆಗದು, ನೇರವಾಗಿ ಮತದಾರರು ಹಾಕಿದ ಮತ ಯಾರಿಗೆ ಹೋಗಿದೆ ಎಂದು ದಾಖಲೆಯ ಮೂಲಕ ತಿಳಿಯಬೇಕು. ಎಲ್ಲ ಮೆಶಿನ್ನಿಂದ ಚೀಟು ಹೊರಬರಬೇಕು. ಮತದಾರರ ಕೈಗೆ ಕೊಡಬೇಕು. ಇವಿಎಂ ಪ್ಯಾಟ್‌ನ ಕನ್ನಡಿ ಕಪ್ಪು ಯಾಕೆ ಇದೆ? ಅದರಲ್ಲಿ ಕೆಲವೊಮ್ಮೆ ಚಿತ್ರಗಳು ಸರಿಯಾಗಿ ಕಾಣಿಸುವುದಿಲ್ಲ. ಅದನ್ನು ಬಿಳಿ ಕನ್ನಡಿ ಮಾಡಿ ಪಾರದರ್ಶಕವಾಗಿ ಮತದಾರನಿಗೆ ತಾನು ಹಾಕಿದ ಮತ ಗೊತ್ತಾಗುವಂತಿರಬೇಕು. ಇವಿಪ್ಯಾಟ್‌ನ ಚೀಟಿ ಎಣಿಸಲು ಸಮಯ ಹಿಡಿಯುತ್ತದೆ ಎಂದು ಯಾಕೆ ಹೇಳುತ್ತೀರಿ. ಸಮಯಕ್ಕೂ ನಿಮಗೂ ಸಂಬಂಧ ಏನು? ಎಂಬಿತ್ಯಾದಿ ಪ್ರಶ್ನಾವಳಿಗಳ ನೋಟಿಸು ಇದು.

ದೇಶದ ಬಹುದೊಡ್ಡ ಚುನಾವಣೆ ಹೊಸ್ತಿಲಲ್ಲಿರುವಾಗ ಸುಪ್ರೀಂಕೋರ್ಟಿ ನಿಂದ ಸರಿಯಾದ ಸೂಚನೆ ಚುನಾವಣಾ ಆಯೋಗಕ್ಕೆ ಹೋಗಿದೆ. ಪಾರದರ್ಶಕ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಅನಿವಾರ್ಯವಾಗುವಂತಹ ಸೂಚನೆಗಳಿವು. ಇವಿಎಂ ಮೇಲೆ ಸುಪ್ರೀಂಕೋರ್ಟಿನ ವಕೀಲರು, ತಜ್ಞರು. ಬರಹಗಾರರು ಜನಸಾಮಾನ್ಯರು ತಕರಾರು ಎತ್ತುತ್ತಾ ಬಂದಿದ್ದಾರೆ. ಅವರಿಗೂ ನೋಟಿಸು ಕಳುಹಿಸಲು ಬಿಜೆಪಿ ಚುನಾವಣಾ ಆಯೋಗಕ್ಕೆ ಹೇಳಬಹುದು ಬಿಡಿ.

ವಿಷಯ ಬದಲಿಸೋಣ:
ಕೇರಳದ ಕೆಥೋಲಿಕ್ಕರು ಸಂಘ ಪರಿವಾರ ಪ್ರಚಾರ ತಂತ್ರದಲ್ಲಿ ಬಿದ್ದಿದ್ದಾರೆ. ಇಡುಕ್ಕಿಯಲ್ಲಿ ಝೀರೋ ಮಲಬಾರ್ ಸಭಾದವರು ವಿದ್ಯಾರ್ಥಿಗಳಿಗೆ ಕೇರಳ ಸ್ಟೋರಿ ಸಿನೆಮಾ ತೋರಿಸುವ ಏರ್ಪಾಟು ಮಾಡಿದ್ದು ವಿವಾದವಾಗಿದೆ. ಎಪ್ರಿಲ್ ಎಂಟರಂದು ಝಿರೋ ಮಲಬಾರಿನ ಈ ವಿಕ್ರಮವನ್ನು ಮಾಧ್ಯಮಗಳು ವರದಿ ಮಾಡಿದ್ದವು. ಕ್ರೈಸ್ತ ವಿದ್ಯಾರ್ಥಿಗಳಲ್ಲಿ ಲವ್‌ಜಿಹಾದ್ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರದರ್ಶನ ಏರ್ಪಡಿಸಿದ್ದೆಂದು ಅದು ಹೇಳಿದೆ.

ಒಂದು ಕ್ಯಾಥೊಲಿಕ್ ಸಭೆ ಸಿನೆಮಾ ಪ್ರದರ್ಶಿಸಿದ್ದು ವಿಶೇಷ. ಯಾಕೆಂದರೆ ಕ್ರೈಸ್ತರ ವಿರುದ್ಧ ಉತ್ತರ ಭಾರತದಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಸಂಘಿಗಳಿಂದ ದಾಳಿ ನಡೆಯುತ್ತಿದೆ. ಹೀಗಿರುವಾಗ ಮುಸ್ಲಿಮರಿಂದ ಮತಾಂತರವಾಗುತ್ತಿದೆ ಎಂದು ಕ್ರೈಸ್ತರು ಹೇಳತೊಡಗಿದ್ದಾರೆ ಎಂದರೆ ವಿಶೇಷವೇ ಅಲ್ಲದೆ ಇನ್ನೇನು? ಸಿನೆಮಾದಲ್ಲಿ 32,000 ಹೆಣ್ಣು ಮಕ್ಕಳು ಇಸ್ಲಾಮ್ ಸ್ವೀಕರಿಸಿದ್ದಾರೆ ಎಂದು ಸುಳ್ಳು ಹೇಳಿದ್ದೆಂದು ಅದರ ನಿರ್ದೇಶಕರೇ ತಿದ್ದುಪಡಿ ಮಾಡಿ ಮೂವರು ಹೆಣ್ಣು ಮಕ್ಕಳು ಮತಾಂತರವಾಗಿದ್ದು ಎಂದು ಹೇಳಿದ್ದಾರೆ. ಸಂಘೀ ಪ್ರಚಾರದಲ್ಲಿ ಭಾಗಿಯಾದರೆ ತಮ್ಮವರು ಸುರಕ್ಷಿತವಾಗಿರಬಹುದೆಂದು ಕ್ರೈಸ್ತರು ಯೋಚಿಸುತ್ತಿರಬಹುದು. ಆದರೆ ಅದು ಇತಿಹಾಸದ ಬಹುದೊಡ್ಡ ತಪ್ಪು ಆಗಿ ಒಂದಿಲ್ಲ ಒಂದು ದಿನ ಅವರಿಗೆ ಅನುಭವಕ್ಕೆ ಬರಬಹುದು.

ನಿಜಕ್ಕೂ ಕೇರಳ ಸ್ಟೋರಿ ಎಂಬ ಸುಳ್ಳನ್ನು ಪ್ರಚಾರ ಮಾಡಲಾಗುತ್ತಿದೆ ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದ್ದು ಇಲ್ಲಿ ನಮೂದಿಸಬೇಕಾದ ಇನ್ನೊಂದು ವಿಚಾರವಾಗಿದೆ.

ಈಗ ಮಾಲೆಗಾಂವ್ ಸ್ಫೋಟದ ಆರೋಪಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿಚಾರಣೆಗೆ ಹಾಜರಾಗದೆ ಕೋರ್ಟಿನ ಸಮಯ ವ್ಯರ್ಥವಾಗುವಂತೆ ಮಾಡಿದ್ದಕ್ಕೆ ಎನ್‌ಎಎ ಕೋರ್ಟು ಗರಂ ಆಗಿದೆ. ಆರೋಗ್ಯದ ಕಾರಣವೊಡ್ಡಿ ಅವರು ವಿಚಾರಣೆಯಿಂದ ತಪ್ಪಿಸಿಕೊಂಡೇ ಬರುತ್ತಿದ್ದಾರೆ. ಪ್ರಜ್ಞಾರ ಆರೋಗ್ಯ ಸ್ಥಿತಿಯನ್ನು ನೇರವಾಗಿ ತಪಾಸಿಸಬೇಕೆಂದು ಎನ್‌ಐಎ ತಂಡಕ್ಕೆ ವಿಶೇಷ ಎನ್‌ಐಎ ಕೋರ್ಟು ಆದೇಶಿಸಿದೆ.

ಮೋದಿ ಸರಕಾರದ ಒಂದೊಂದು ಹೆಜ್ಜೆಗಳು ಪ್ರಶ್ನಾರ್ಹಗೊಳ್ಳುತ್ತಿರುವುದು ಇತೀಚೆಗಿನ ವಿಶೇಷವಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ವಿಶ್ವಾಸ ಇರಿಸುವವರಿಗೆ ಸಮಾಧಾನ ತರುವ ವಿಚಾರವೂ ಹೌದು.

ನೋಡಿ, 2008 ಸೆಪ್ಟಂಬರ್ 29ಕ್ಕೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದ ಸ್ಫೋಟದಲ್ಲಿ ಆರು ಮಂದಿ ಕೊಲ್ಲಲ್ಪಟ್ಟಿದ್ದರು. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮಹಾರಾಷ್ಟ್ರ ಎಟಿಎಸ್ ತಂಡ ಪ್ರಜ್ಞಾ ಮತ್ತು ಆರು ಮಂದಿಯನ್ನು ಸ್ಫೋಟ ನಡೆಸಿದ ಆರೋಪದಲ್ಲಿ ಬಂದಿಸಿತ್ತು. ಇತರೆಲ್ಲ ಆರೋಪಿಗಳು ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಆದರೆ ಪ್ರಜ್ಞಾ ಆರೋಗ್ಯ ಮತ್ತಿತರ ಕಾರಣವೊಡ್ಡಿ ಕೋರ್ಟಿನಲ್ಲಿ ಹಾಜರಾಗುವುದರಿಂದ ತಪ್ಪಿಸಿಕೊಂಡೇ ಬಂದಿದ್ದಾರೆ. ಭೋಪಾಲದಲ್ಲಿ 2019ರಲ್ಲಿ ನಡೆದ ಚುನವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಮೂರುವರೆ ಲಕ್ಷಕ್ಕೂ ಹೆಚ್ಚು ಮತಗಳಿಂದ ಪ್ರಜ್ಞಾ ಸಿಂಗ್ ಠಾಕೂರ್ ಗೆದ್ದಿದ್ದರು.

ಸುಪ್ರೀಂ ಕೋರ್ಟು ಇನ್ನೊಂದು ಮಹತ್ವದ ತೀರ್ಪಿನಲ್ಲಿ ಉತ್ತರಪ್ರದೇಶದ ಮದ್ರಸಾ ಬೋರ್ಡನ್ನು ಅಲಾಹಾಬಾದ್ ಹೈಕೋರ್ಟು ರದ್ದು ಪಡಿಸಿದ್ದಕ್ಕೆ ತಡೆಯಾಜ್ಞೆ ನೀಡಿದೆ. ಹೈಕೋರ್ಟು ತೀರ್ಪು ಹದಿನೇಳು ಲಕ್ಷ ವಿದ್ಯಾಥಿಗಳ ಭವಿಷ್ಯಕ್ಕೆ ಹಾನಿಕರವಾಗಿದೆ ಮತ್ತು ಕಾನೂನಿನ ವ್ಯವಸ್ಥೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಲೋಪ ಎಸಗಿದೆ ಎಂದು ಹೇಳಿದೆ.

ನ್ಯಾಯಾಧೀಶರು ಕಾನೂನನ್ನು ವಿಶ್ಲೇಷಿಸುವಾಗ ಎಡವುತ್ತಾರೆ ಎನ್ನುವುದಕ್ಕೆ ಆಲಾಹಾಬಾದ್‌ನ ಕೋರ್ಟು ತೀರ್ಪು ಒಂದು ಉದಾಹರಣೆಯಾಗಿದೆ. ಯೋಗಿ ಸರಕಾರದ ಅವಧಿಯಲ್ಲಿ ಕೋರ್ಟುಗಳಿಂದ ಇಂತಹ ಹಲವು ತೀರ್ಪುಗಳು ಹೊರ ಬಂದದ್ದಿದೆ. ಇನ್ನೊಂದು ಕಡೆ ಅದಕ್ಕೆ ಮದ್ರಸಾ ಶಿಕ್ಷಣ ಸಂಸ್ಥೆಗಳ ವಿರುದ್ಧ ಆಕ್ರೋಶವೂ ಇದೆ.. ಇತ್ತೀಚೆಗೆ ಇಸ್ಲಾಮೀ ಶಿಕ್ಷಣ ಸಂಸ್ಥೆಗಳ ಸಮೀಕ್ಷೆಗೆ ಯೋಗಿ ಸರಕಾರ ಆದೇಶಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಭೀಮಾ ಕೊರೆಂಗಾವ್ ಪ್ರಕರಣದಲ್ಲಿ ಮಾವೊಯಿಸ್ಟ್ ಗಳೆಂದು ಬಂಧಿಸಿದವರಲ್ಲಿ ಒಬ್ಬೊಬ್ಬರಿಗೆ ಸುಪ್ರಿಂ ಕೋರ್ಟಿನಿಂದ ಜಾಮೀನು ಸಿಗುತ್ತಿದೆ. 2015ರಲ್ಲಿ ನಾಗಪುರ ವಿಶ್ವ ವಿದ್ಯಾನಿಲಯದ ಮಾಜಿ ಪ್ರೊಫೆಸರ್ ಶೋಮಾ ಸೇನ್‌ರನ್ನು ಬಂಧಿಸಲಾಗಿತ್ತು. ಈಗ ಅವರಿಗೆ ಸುಪ್ರೀಂಕೋರ್ಟಿ ನಿಂದ ಜಾಮೀನು ದೊರಕಿದೆ. ಹಿರಿಯ ಪತ್ರಕರ್ತ ಗೌತಂ ನವ್ಲಾಕ್‌ರಿಗೆ ಬಾಂಬೆ ಹೈಕೋರ್ಟು ಇತ್ತೀಚೆಗೆ ಜಾಮೀನು ನೀಡಿದೆ. ದಿಲ್ಲಿ ವಿಶ್ವ ವಿದ್ಯಾನಿಲಯದ ಪ್ರೊಫೆಸರ್ ಸಾಯಿಬಾಬ ಅವರಿಗೂ ಸುಪ್ರೀಂಕೋರ್ಟು ಜಾಮೀನು ನೀಡಿದೆ. ವರ್ನಾನ್ ಗೋನ್ಸಾಲ್ವಿಸ್, ಆರುಣ್ ಫೆರೇರಿಗೂ ಸುಪ್ರೀಂಕೋರ್ಟು ಕಳೆದ ಆಗಸ್ಟಿನಲ್ಲಿ ಜಾಮೀನು ನೀಡಿತ್ತು. ಸೆಪ್ಟಂಬರಿನಲ್ಲಿ ಆಕ್ಟಿವಿಸ್ಟ್ ಮಹೇಶ್ ರಾವತ್‌ರಿಗೆ ಬಾಂಬೆ ಹೈಕೋರ್ಟು ಜಾಮೀನು ನೀಡಿದೆ. 20018ರಲ್ಲಿ ಭೀಮಾ ಕೊರೆಗಾಂವ್ ಯುದ್ಧದ 200ನೇ ವಾರ್ಷಿಕ ಆಚರಣೆಯ ವೇಳೆ ನಡೆದ ಆಹಿತಕರ ಘಟನೆಯಲ್ಲಿ ಬಂಧಿತರು ಗೂಢಾಲೋಚನೆ ನಡೆಸಿದ್ದಾರೆಂದೂ ನಗರ ನಕ್ಸಲರು, ಮೋದಿಯ ಹತ್ಯೆಗೆ ಸಂಚು ನಡೆಸಿದ್ದಾರೆ ಎಂದೂ 16 ಮಂದಿಯ ವಿರುದ್ಧ ಯುಎಪಿಎ ಹೇರಿ ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ವಯೋವೃದ್ಧ ಪಾದರ್ ಸ್ಟಾನ್ ಸ್ವಾಮಿ ಕಸ್ಟಡಿಯಲ್ಲಿಯೇ ಮೃತಪಟ್ಟಿದ್ದರು. ಇವೆಲ್ಲ ಇರುವಾಗ ಕ್ರೈಸ್ತರು ಕೇರಳ ಸ್ಟೋರಿ ಯಂತಹ ದ್ವೇಷಪ್ರಚಾರಕ್ಕೆ ಒತ್ತಾಸೆಯಾಗಿ ವರ್ತಿಸುತ್ತಿದ್ದಾರೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ. ಇರಲಿ

ವಿಷಯಕ್ಕೆ ಬರೋಣ:
ಮೋದಿಯವರ ಚುನಾವಣ ತಲ್ಲಣ ಅವರ ಪ್ರಚಾರ ತಂತ್ರದಲ್ಲಿ ಕಂಡು ಬರುತ್ತಿದೆ. 400 ಸೀಟು ಗೆಲ್ಲುವ, ಮೂರನೇ ಬಾರಿಗೆ ಪ್ರಧಾನಿ ಆಗುವ ಅದಮ್ಯತೆ ಅವರಿಂದೇನೇನೋ ಹೇಳಿಸುತ್ತಿದೆ. ಬಹುಶಃ ರಾಹುಲ್ ಗಾಂಧಿ ಯವರ ನೇರ ದಾಳಿ ಮೋದಿಯವರನ್ನು ಒಟ್ಟು ಬಿಜೆಪಿಯನ್ನೇ ಕಂಗೆಡಿಸಿದೆ.

ಆರೆಸ್ಸೆಸ್ ಬಿಜೆಪಿಯ ಆಂತರಿಕ ಸರ್ವೇಗಳಲ್ಲಿ 200 ಸೀಟಿಗಿಂತ ಹೆಚ್ಚು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಹೇಳಲಾಗುತ್ತಿದೆ. ಹರ್ಯಾಣ, ಮಹಾರಾಷ್ಟ್ರದಲ್ಲಿ ಕೆಲವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಅದರಂತೆ ಇತ್ತೀಚೆಗೆ ಸೀವೋಟರ್ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ಮತ ಪ್ರಮಾಣ ಶೇ. 7ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಉತ್ತರ ಭಾರತದಲ್ಲಿಯೂ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಇನ್ನೊಂದು ಕಡೆ ಸಮೀಕ್ಷೆಗಳು ಹೇಳುತ್ತಿವೆ. ತಮಿಳ್ನಾಡಿಗೆ ಹೋಗಿ ಇತ್ತೀಚೆಗೆ ಡಿಎಂಕೆಯನ್ನು ಮೋದಿ ಮಹಾ ಭ್ರಷ್ಟಾಚಾರಿಗಳ ಪಕ್ಷ ಎಂದರು. ಅದಕ್ಕೆ ಉತ್ತರವಾಗಿ ಡಿಎಂಕೆ ಮೋದಿಯ ಇಲೆಕ್ಟ್ರಾಲ್ ಬಾಂಡಿನ ಕತೆಯನ್ನು ಬಿರುಸಿನಿಂದ ಪ್ರಚಾರ ಮಾಡುತ್ತಿದೆ. ಜಿಪೇ ಎಂಬ ಪೋಸ್ಟರ್ ಬಿಡುಗಡೆ ಮಾಡಿ ಮೋದಿ ಸ್ವಯಂ ಸ್ಕ್ಯಾನ್ ಮಾಡಿ ಭ್ರಷ್ಟಾಚಾರವನ್ನು ನೋಡಿ ಕೊಳ್ಳಲಿ ಎನ್ನುವುದು ಡಿಎಂಕೆಯ ಮಾತು. ತಮಿಳರು ಮೋದಿಗೆ ಈ ಸಲವೂ ಒಂದು ಸೀಟು ಕೊಡಲಾರರು.

ಯಾಕೆಂದರೆ ಬಿಜೆಪಿ ಮೈತ್ರಿಯನ್ನು ಅಣ್ಣಾಡಿ ಎಂಕೆ ಕಡಿದುಕೊಂಡಿದೆ. ಕಮಲ ಹಾಸನ್ ತಮಿಳ್ನಾಡಿನಲ್ಲಿ ಇಂಡಿಯ ಕೂಟದ ಸ್ಟಾರ್ ಪ್ರಚಾರಕ ಕೂಡ ಆಗಿದ್ದಾರೆ. ಅವರ ಪಾರ್ಟಿ ಇಂಡಿಯ ಕೂಟದ ಸಖ್ಯದಲ್ಲಿದೆ. ತಮಿಳ್ನಾಡಿನಲ್ಲಿ 38 ಸೀಟುಗಳಲ್ಲಿ ಒಂದನ್ನೂ ಬಿಜೆಪಿಗೆ ಹೆಕ್ಕಲು ಸಾಧ್ಯವಾಗುವುದು ಸಾಧ್ಯವಿಲ್ಲದ ಮಾತು. ಕರ್ನಾಟಕದ ಇತ್ತೀಚೆಗಿನ ಸಮೀಕ್ಷೆಯಲ್ಲಿ ಕಾಂಗ್ರೆಸ್ಸಿಗೆ ಮತ ಪ್ರಮಾಣ 50% ಏರಿಕೆಯಾಗಿದ್ದು ಬಹಿರಂಗವಾಗಿತ್ತು. ಬಿಜೆಪಿಯದ್ದು 27%, ಅದರ ಸಖ್ಯ ಪಾರ್ಟಿ ಜೆಡಿಎಸ್‌ಗೆ 13% ಆಗಿದೆ. ಒಟ್ಟು ನಲ್ವತ್ತು ಪರ್ಸೆಂಟ್ ಬಿಜೆಪಿ ಸಖ್ಯಕ್ಕೆ ಸಿಗುತ್ತದೆ. ಜೆಡಿಎಸ್ ಲೋಕ ಸಭಾ ಚುನಾವಣೆಯಲ್ಲಿ 1 ಸೀಟು ಗೆಲ್ಲುವುದು 7 ಸೀಟು ಬಿಜೆಪಿ ಕಾಂಗ್ರೆಸ್ 20 ಸೀಟು ಗೆಲ್ಲುತ್ತದೆ ಎಂದು ಹೇಳುತ್ತಿದೆ.

ಇನ್ನೊಂದು ಕಡೆ ಸಮೀಕ್ಷೆಯೊಂದು ತೆಲಂಗಾಣದಲ್ಲಿ ಬಿಜೆಪಿ ಒಂದೇ ಸೀಟು ಗೆಲ್ಲುತ್ತದೆ ಎಂದು ಹೇಳಿದೆ. ಈ ಹಿಂದೆ ನಾಲ್ಕು ಸೀಟುಗಳು ಅದಕ್ಕಿತ್ತು. ಚಂದ್ರಶೇಖರ್ ರಾವ್ ಅವರ ಬಿಆರ್ ಎಸ್‌ಗೆ 9 ಸೀಟು ಇತ್ತು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಅದು 2 ಸೀಟು ಗೆಲ್ಲುತ್ತದೆ. ಸಮೀಕ್ಷೆ ಪ್ರಕಾರ, ತೆಲಂಗಾಣದ ಒಟ್ಟು ಹದಿನೇಳು ಸೀಟುಗಳಲ್ಲಿ ಕಾಂಗ್ರೆಸ್ 14 ಸೀಟುಗಳನ್ನು ಗೆಲ್ಲುತ್ತದೆ. ಇಲ್ಲಿಯೂ ಕಾಂಗ್ರೆಸ್‌ನ ಮತ ಪ್ರಮಾಣ ಶೇ. 50ರ ಹತ್ತಿರ ಹತ್ತಿರ ಇದೆ. ಹೀಗಾದರೆ ಮೋದಿಯ ದಕ್ಷಿಣ ಭಾರತದ ಎಂ.ಪಿ. ಸೀಟು ಗೆಲ್ಲುವ ಕನಸ್ಸು ಮೂಲೆಗೆ ಸೇರಿದಂತೆ. ಆಂಧ್ರಪ್ರದೇಶದಲ್ಲಿ ಶರ್ಮಿಳಾ ರೆಡ್ಡಿ ರಾಜ್ಯ ಅಧ್ಯಕ್ಷೆಯಾದ ಬಳಿಕ ಅಲ್ಲಿಯೂ ಕಾಂಗ್ರೆಸ್‌ನಲ್ಲಿ ನಿರೀಕ್ಷೆ ಹೆಚ್ಚಿದೆ. ಮಹಾ ರಾಷ್ಟ್ರದಲ್ಲಿಯೂ ಇಂಡಿಯಾ ಕೂಟ ಬಲ ವೃದ್ಧಿಸಲಿದೆ.

ಜನರು ಸ್ಪಷ್ಟವಾಗಿ ಇವತ್ತು ಮೋದಿ ಹೇಳುವ ರಾಮಮಂದಿರ ಸಹಿತ ಯಾವ ವಿಷಯಕ್ಕೂ ಕಿವಿ ಕೊಟ್ಟು ಕೇಳುತ್ತಿಲ್ಲ. ಹರ್ಯಾಣ, ಉತ್ತರ ಪ್ರದೇಶ ಗುಜರಾತ್‌ಗಳಲ್ಲಿ ಬಿಜೆಪಿ ವಿರೋಧವನ್ನು ಎದುರಿಸುತ್ತಿದೆ. ಕೆಲವು ಠಾಕೂರ್ ಗಳಿಗೆ ಉತ್ತರ ಪ್ರದೇಶದಲ್ಲಿ ಟಿಕೆಟು ಕಟ್ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದ್ದು ಅವರು ಬಿಜೆಪಿಯನ್ನು ಬಿಟ್ಟು ಸಮಾಜವಾದಿ ಪಾರ್ಟಿಗೆ ಉತ್ತರ ಪ್ರದೇಶದಲ್ಲಿ ವೋಟು ಕೊಡಲು ನಿರ್ಧರಿಸಿದ್ದಾರೆ. ಗುಜರಾತಿನಲ್ಲಿ ಬಿಜೆಪಿ ಸಚಿವ ಪುರುಷೋತ್ತಮ ರೂಪಲ ಅವರು ಠಾಕೂರ್ ಮಹಿಳೆಯರನ್ನು ಅಪಮಾನಿಸಿದ್ದಾರೆಂದು ಠಾಕೂರ್ ಗಳು ಆಕ್ರೋಶಿತರಾಗಿದ್ದಾರೆ.

ಒಟ್ಟಿನಲ್ಲಿ ಈ ಸಲ ಬಿಜೆಪಿಯ ಅದೃಷ್ಟ ಕೈಕೊಟ್ಟಂತೆ. ಹೀಗಾಗಿ ಇಡಿಯನ್ನು ಓಡಿಸಿ ಕೇಜ್ರಿವಾಲ್, ಹೇಮಂತ್ ಸೊರೆನ್ ಅವರಂತಹ ವಿಪಕ್ಷದವರನ್ನು ಜೈಲಿಗೆ ಹಾಕಿ ಸಾಧಿಸುವುದಕ್ಕೇನಿದೆ? ಮತ್ತು ಪ್ರತಿಪಕ್ಷ ಪಾರ್ಟಿಗಳನ್ನು ಹೋಳು ಮಾಡಿಸಿ ಏನು ಪ್ರಯೋಜನ ಸಿಕ್ಕಲಿಕ್ಕಿದೆ. ಜನರಿಗೆ ಅಚ್ಚಾ ದಿನ್ ಬಂದಿಲ್ಲ. ಮೋದಿ ಬರೇ ಪಬ್ಲಿಸಿಟಿ ಸ್ಟಂಟ್ ಮಾಡುತ್ತಾರೆ ಎಂದು ಜನ ಹೇಳತೊಡಗಿದ್ದಾರೆ.

ಲೋಕಸಭೆಗೆ ಚುನಾವಣೆ ಘೋಷಣೆಯಾದ ನಂತರ ಮೋದಿ ಸರಕಾರಕ್ಕೆ ದಿನಗಳು ಚೆನ್ನಾಗಿಲ್ಲ ಎಂಬುದು ಬಹಿರಂಗವಾಗುತ್ತಿದೆ. ಮೋದಿ ಆಡಳಿತ ಹೊಡೆತಗಳ ಹೊಡೆತಗಳು ಮೇಲೆ ತಿನ್ನುತ್ತಿದೆ. ವಿಪಕ್ಷಗಳ ಭ್ರಷ್ಟಾಚಾರದ ಕತೆ ಹೇಳಿ ಚುನಾವಣೆ ಪ್ರಚಾರ ಮಾಡುತ್ತಿರುವ ಮೋದಿಯನ್ನು ಜನ ನಂಬುವುದು ಕಷ್ಟ.

LEAVE A REPLY

Please enter your comment!
Please enter your name here