ಮೇಲ್ಜಾತಿಯವರಿಂದ ರಸ್ತೆ ಬಂದ್​ : 20 ಅಡಿ ಸೇತುವೆ ಮೇಲಿಂದ ಮೃತದೇಹ ಇಳಿಸಿದ ದಲಿತರು

0
676

ಸನ್ಮಾರ್ಗ ವಾರ್ತೆ

ತಮಿಳುನಾಡು: ಇಡೀ ದೇಶವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆಯೊಂದು ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ. ಜಿಲ್ಲೆಯ ವನ್ನಿಯಾಂಬಡಿ ನಗರದ ನಾರಾಯಣಪುರಂ ಎಂಬ ಊರಿನಲ್ಲಿ ದಲಿತರಿಗೆ ಶವಸಂಸ್ಕಾರ ಮಾಡಲು ಮೇಲ್ಜಾತಿಯವರು ರಸ್ತೆ ಬಂದ್​ ಮಾಡಿದ ಪರಿಣಾಮವಾಗಿ, 20 ಅಡಿ ಎತ್ತರದ ಸೇತುವೆ ಮೇಲಿಂದ ಮೃತದೇಹವನ್ನ ಹಗ್ಗದ ಮೂಲಕ ಕೆಳಗಿಳಿಸುವ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡು ಹೋದ ಘಟನೆಯು ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಶನಿವಾರ ನಾರಾಯಣಪುರಂ ನಿವಾಸಿ 55 ವರ್ಷದ ಕುಪ್ಪನ್​ ಎಂಬುವವರು ಸಾವನ್ನಪ್ಪಿದರು. ಅವರ ಮೃತದೇಹವನ್ನು ಮೆರವಣಿಗೆ ಮೂಲಕ ಸ್ಮಶಾನಕ್ಕೆ ಕೊಂಡೊಯ್ಯಲಾಗುತ್ತಿತ್ತು. ಆದರೆ, ಸ್ಮಶಾನದ ಮುಂಭಾಗದಲ್ಲಿ ಮೇಲ್ಜಾತಿಯವರಿಗೆ ಸೇರಿದವರ ಸ್ಮಶಾನ ಇದೆ. ಹೀಗಾಗಿ ಈ ದಾರಿಯಲ್ಲಿ ನಾವು ದಲಿತರ ಹೆಣವನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಮೇಲ್ಜಾತಿಯವರು ಸ್ಮಶಾನದ ದಾರಿಯನ್ನು ಬಂದ್​ ಮಾಡಿದ್ದಾರೆ.

4 ವರ್ಷದ ಹಿಂದೆ ಅರ್ಸಲಂತಪುರಂ ಮತ್ತು ನಾರಾಯಣಪುರಂ ಊರುಗಳ ಮಧ್ಯೆ ನಿರ್ಮಿಸಲಾದ 20 ಅಡಿ ಎತ್ತರದ ಸೇತುವೆ ಮೇಲಿಂದ ಮೃತದೇಹವನ್ನು ಹಗ್ಗದ ಮೂಲಕ ಕೆಳಗಿಳಿಸಿ ಅನಂತರ ದಲಿತರಿಗೆ ಸೀಮಿತವಾಗಿರುವ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.ಇದೊಂದೇ ವಿಚಾರವಲ್ಲದೇ ಅನೇಕ ವಿಷಯಗಳಲ್ಲಿ ಇಲ್ಲಿನ ಮೇಲ್ಜಾತಿಯ ಗುಂಪು ದಲಿತರಿಗೆ ತೊಂದರೆ ನೀಡುತ್ತಲೇ ಇದೆ ಎಂದು ನಾರಾಯಣಪುರಂನ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ವೆಲ್ಲೂರು ಜಿಲ್ಲಾಧಿಕಾರಿ ಎ.ಶಣ್ಮುಗಂ ಸುಂದರಂ ಅವರನ್ನು ಪ್ರಶ್ನಿಸಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.