ಆಕೆ ಬಸ್ಸಿನ ಕಿಟಕಿಯಲ್ಲಿ ನಗುತ್ತಿದ್ದಳು, ಡ್ರೈವರ್ ನೋಡುತ್ತಿದ್ದ…

0
5330

ಏ. ಕೆ. ಕುಕ್ಕಿಲ

ಮಗಳನ್ನು ಕಾಲೇಜಿಗೆ ಸೇರಿಸಬೇಕೋ ಬೇಡವೋ ಎಂಬ ಪ್ರಶ್ನೆಯು ಒಂದು ವಾರದಿಂದ ಆತನೊಳಗೆ ಸಂಘರ್ಷವೊಂದನ್ನು ಹುಟ್ಟುಹಾಕಿತ್ತು. ಎಸೆಸ್ಸೆಲ್ಸಿಯಲ್ಲಿ ಮಗಳು ಪಡೆದಿರುವ ಅಂಕಗಳು ‘ಮಗಳನ್ನು ಕಾಲೇಜಿಗೆ ಸೇರಿಸು’ ಎಂದು ಒತ್ತಾಯಿಸುತ್ತಿದ್ದರೆ, ಕಾಲೇಜು ಪಟ್ಟಣದಲ್ಲಿರುವುದು ಮತ್ತು ಪ್ರಯಾಣಕ್ಕೆ ನಿತ್ಯ ಬಸ್ಸನ್ನೇ ಆಶ್ರಯಿಸಬೇಕಾಗಿರುವುದು ‘ಕಾಲೇಜಿಗೆ ಸೇರಿಸಬೇಡ’ ಎಂದು ಒತ್ತಡ ಹೇರುತ್ತಿದ್ದವು. ಅಲ್ಲದೇ, ಕಾಲೇಜಿನಲ್ಲಿ ಮತ್ತು ಬಸ್ಸಿನಲ್ಲಿ ಚಿಗುರುವ ಪ್ರೇಮ ಪ್ರಕರಣಗಳು, ಓಡಿ ಹೋಗಿ ಮದುವೆಯಾಗುವುದು, ಅತ್ಯಾಚಾರ… ಇತ್ಯಾದಿಗಳೂ ಮಗಳನ್ನು ಕಾಲೇಜಿಗೆ ಸೇರಿಸದಂತೆ ಆತನನ್ನು ತಡೆಯುತ್ತಿದ್ದುವು. ಕೊನೆಗೂ ಆತ ಒತ್ತಡವನ್ನು ಮೀರಿ ನಿರ್ಧಾರ ಕೈಗೊಂಡ. ಪತ್ನಿಯ ಬಯಕೆಯಂತೆ ಮಗಳನ್ನು ಕರೆದುಕೊಂಡು ಕಾಲೇಜ್ ಗೆಂದು ಬಸ್ಸು ಹತ್ತಿದ. ಮಗಳು ಡ್ರೈವರ್ ಹಿಂಬದಿಯ ಸೀಟಿನಲ್ಲಿ ಕಿಟಕಿ ಬದಿಯಲ್ಲಿ ಕುಳಿತಳು. ಹಳ್ಳಿಗಾಡಿನಿಂದ ಹೊರಟ ಬಸ್ಸು ಹಸುರು ಪ್ರಕ್ರತಿಯ ನಡುವೆ ದಾರಿ ಹುಡುಕಿಕೊಂಡು ಹೊರಟಿತು. ತಂಪು ತಂಪು ಗಾಳಿ. ಮಗಳು ತನ್ನ ಮುಖವನ್ನು ಕಿಟಕಿಗೊಡ್ಡಿದಳು. ಗಾಳಿ ಆಕೆಯ ಮುಖವನ್ನು ಮುದ್ದಿಸಿತು. ಮುಂಗುರುಳು ಹಾರಾಡಿತು. ಆಕೆ ಹಿತವಾಗಿ ನಕ್ಕಳು. ಆತ ಅಚಾನಕ್ಕಾಗಿ ಡ್ರೈವರ್ ಬದಿಯ ಪುಟ್ಟ ಕನ್ನಡಿಯನ್ನು ನೋಡಿದ. ಅನುಮಾನ ದ್ರಢವಾಯಿತು. ಡ್ರೈವರ್ ನೋಡುತ್ತಿದ್ದ. ಮಗಳು ನಗುತ್ತಿದ್ದಳು.

ಬಸ್ಸಿನಿಂದ ಇಳಿದವನೇ ಮರಳಿ ಊರಿಗೆ ಹೋಗುವ ಬಸ್ಸಿನೆಡೆಗೆ ಮಗಳ ಕೈಹಿಡಿದುಕೊಂಡು ಬಿರಬಿರನೆ ಹೆಜ್ಜೆಹಾಕಿದ. ಆಕೆ ಅರ್ಥವಾಗದೇ ಅಪ್ಪನನ್ನೇ ನೋಡುತ್ತಿದ್ದಳು. ಕಣ್ಣು ಹನಿಗೂಡುತ್ತಿದ್ದವು.