ಸುಳ್ಳು ಪ್ರಕರಣದಲ್ಲಿ 21 ತಿಂಗಳು ಜೈಲಲ್ಲಿರಿಸಿದರು…

0
751

ಸನ್ಮಾರ್ಗ ವಾರ್ತೆ

ಯೋಗಿ ಸರಕಾರದಿಂದ ಬಂಧನಕ್ಕೀಡಾಗಿದ್ದ ವೆಲ್ಫೇರ್ ಪಾರ್ಟಿ ಮುಖಂಡ ಜಾವೇದ್ ಮುಹಮ್ಮದ್ ಸಂದರ್ಶನ

ಅಲಹಾಬಾದ್ ನಿವಾಸಿ ಜಾವೇದ್ ಮುಹಮ್ಮದ್ ವೆಲ್‌ಫೇರ್ ಪಾರ್ಟಿ ಫೆಡರಲ್ ವರ್ಕಿಂಗ್ ಕಮಿಟಿ ಸದಸ್ಯರಾಗಿದ್ದಾರೆ ಮತ್ತು ಜೆಎನ್‌ಯುನ ಮಾಜಿ ವಿದ್ಯಾರ್ಥಿ ಕೌನ್ಸಿಲರ್ ಅಫ್ರೀನ್ ಫಾತಿಮಾರ ತಂದೆಯೂ ಹೌದು. 2022 ಜೂನ್ 10ರಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ರ ಪೊಲೀಸರು ಅವರನ್ನು ಅನ್ಯಾಯವಾಗಿ ಬಂಧಿಸಿ, ಯಾವುದೇ ಮುನ್ನೆಚ್ಚರಿಕೆ ನೀಡದೆ ಮನೆಯನ್ನು ನೆಲಸಮಗೊಳಿಸಿದರು. ಬುಲ್ಡೋಜರ್ ರಾಜ್‌ನ ವಿರುದ್ಧ ಜಂಇಯತುಲ್ ಉಲೆಮಾ-ಎ-ಹಿಂದ್, ಎಪಿಸಿಆರ್, ಜಾವೇದ್ ಮುಹಮ್ಮದ್ ಮುಂತಾದವರ ಅರ್ಜಿಯನ್ನು ಪರಿಗಣಿಸಿ ನಿರ್ಣಾಯಕ ತೀರ್ಪು ನ್ಯಾಯಾಲಯದಿಂದ ಬಂದಿದೆ. 2024 ಮಾರ್ಚ್ 21ರಂದು ಅವರು ಸೆರೆಮನೆಯಿಂದ ಬಿಡುಗಡೆಯಾದರು. ಅವರೊಂದಿಗೆ ನಡೆಸಿದ ಸಂದರ್ಶನ.

ಪ್ರಶ್ನೆ: ಮುಸ್ಲಿಮ್ ಸಮುದಾಯದ ಮೇಲೆ ಉತ್ತರ ಪ್ರದೇಶ ಸರಕಾರದ ದೌರ್ಜನ್ಯದ ವಿರುದ್ಧ ನೀವು ಅಲಹಾಬಾದ್‌ನಲ್ಲಿ ಮಾಡಿರುವ ಚಟುವಟಿಕೆಗಳು ಏನು?

ಉತ್ತರ: ಬಹಳಷ್ಟು ಕೆಲಸವನ್ನು ಮಾಡಲಾಗಿದೆ. ಮುಸ್ಲಿಮ್ ಸಮುದಾಯಕ್ಕೆ ಮಾತ್ರವಲ್ಲ, ಇತರ ಅಲ್ಪಸಂಖ್ಯಾತ ವಿಭಾಗಗಳಿಗೂ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸಿದ್ದೇನೆ. ನನ್ನ ಮನೆಯ ಪಕ್ಕದ ದಲಿತ ಮಹಿಳೆ ಅತ್ಯಾಚಾರಕ್ಕೊಳಗಾಗಿ ಬಳಿಕ ಕೊಲ್ಲಲ್ಪಟ್ಟಿದ್ದರು. ಪ್ರಕರಣ ದಾಖಲಿಸಲು ಕೋರ್ಟ್ ನಲ್ಲಿ ಹಾಜರಾಗಲು ಸಾಧ್ಯವಿಲ್ಲದ ಆ ಕುಟುಂಬಕ್ಕಾಗಿ ಕೇಸ್ ವಹಿಸಿಕೊಂಡು ಆರೋಪಿಯನ್ನು ಶಿಕ್ಷೆಗೆ ಗುರಿಯಾಗಿಸಲು ಸಾಧ್ಯವಾಯಿತು.

ಸಿಎಎ, ಎನ್‌ಆರ್‌ಸಿ, ತ್ರಿವಳಿ ತಲಾಕ್ ಕಾನೂನು ಬಾಹಿರತೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಪೌರತ್ವ ವಿರೋಧಿ ನಿಯಮದ ವಿರುದ್ಧ ಅಲಹಾಬಾದ್ ನಲ್ಲಿ ಎರಡು ತಿಂಗಳ ಕಾಲ ನಡೆದ ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದೆ.

ಹೈಕೋರ್ಟ್ ಸಮೀಪದ ಮಸೀದಿಯು 35 ವರ್ಷ ಹಳೆಯದಾಗಿತ್ತು. ಸ್ಥಳದ ಅಥವಾ ಕಟ್ಟಡದ ದಾಖಲೆಗಳು ಸರಿಯಾಗಿಲ್ಲವೆಂದು ಸುಳ್ಳು ಆರೋಪದಿಂದ ವಕೀಲರ ನೆರವಿನಿಂದ ಅನುಕೂಲಕರ ತೀರ್ಪನ್ನು ಪಡೆಯುತ್ತಾರೆ. ಪ್ರತಿವರ್ಷ ಡಿಸೆಂಬರ್ 6ರಂದು ಅಲಹಾಬಾದ್‌ನಲ್ಲಿರುವ ಮುಸ್ಲಿಮ್ ನಿಯೋಗವು ಬಾಬರಿ ಮಸೀದಿಗೆ ಸಂಬಂಧಿಸಿದಂತೆ ಅದರಲ್ಲಾದ ಅನ್ಯಾಯದ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಕಳುಹಿಸುತ್ತದೆ. ಅದರಲ್ಲೂ ವೈಯಕ್ತಿಕವಾಗಿ ಭಾಗವಹಿಸಲು ನನಗೆ ಸಾಧ್ಯವಾಗುತ್ತಿದೆ. ಪ್ರವಾದಿಯ(ಸ) ವಿರುದ್ಧ ದ್ವೇಷ ಭಾಷಣ ಮಾಡಿದ ನರಸಿಂಗಾನಂದ್‌ನ ವಿರುದ್ಧ ದೂರು ನೀಡಿದ್ದೆ. ಒಂದನೇ ಯೋಗಿ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿಯ ಕ್ರಿಮಿನಲ್ ಹಿನ್ನೆಲೆಯನ್ನು ಬಯಲುಗೊಳಿಸುವ 21 ಕ್ರಿಮಿನಲ್ ಕೇಸ್‌ಗಳನ್ನು ರಾಷ್ಟ್ರಪತಿಗೆ ಕಳುಹಿಸಲಾಗಿತ್ತು.

ಹೀಗೆ ಹಲವಾರು ಸಂದರ್ಭದಲ್ಲಿ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಗಿಯಾಗುವ ಅವಕಾಶ ದೊರೆತಿದೆ.

ಪ್ರಶ್ನೆ: ಅಲಹಾಬಾದ್‌ನ ಮುಸ್ಲಿಮರ ಸ್ಥಿತಿಗತಿಗಳು ಏನೆಲ್ಲ?

ಉತ್ತರ: ಅಲಹಾಬಾದ್‌ನಲ್ಲಿ ಹೆಚ್ಚಾಗಿ ಸಾಮಾನ್ಯ ಮುಸ್ಲಿಮರು ವಾಸಿಸುತ್ತಿದ್ದಾರೆ. ಮುಸ್ಲಿಮ್ ಸಮಸ್ಯೆಗಳ ಕುರಿತು ಮಧ್ಯಸ್ಥಿಕೆ ವಹಿಸಲು ನಾಯಕತ್ವ ವಹಿಸುವಂತಹ ಕೆಲವೇ ವ್ಯಕ್ತಿಗಳಿದ್ದಾರೆ. ವಿವಿಧ ವಿಷಯಗಳಲ್ಲಿ ಕೇಂದ್ರೀಕರಿಸುವ ಹಲವು ಮುಸ್ಲಿಮ್ ಸಂಘಟನೆಗಳಿದ್ದರೂ ರಾಜಕೀಯ ಪ್ರಬುದ್ಧತೆ ತೋರಲು ಅವರು ಹಿಂದಿದ್ದಾರೆ. ಮುಸ್ಲಿಮ್ ಸಮುದಾಯವು ಹೆಚ್ಚಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಯನ್ನು ರಾಜಕೀಯವಾಗಿ ನೆಚ್ಚಿಕೊಂಡಿದೆ.

ಪ್ರಶ್ನೆ: ನಿಮ್ಮ ಮನೆಯನ್ನು ಕೆಡಹುವ ಕ್ರಿಯೆ ಹೇಗೆ ಆರಂಭವಾಯಿತು?

ಉತ್ತರ: ನೂಪುರ್ ಶರ್ಮ ಪ್ರವಾದಿ ನಿಂದನೆ ಮಾಡಿದಾಗ ಅದರ ವಿರುದ್ಧ ಮೊದಲು ಕಾನ್ಪುರದಲ್ಲೂ ನಂತರ ಅಲಹಾಬಾದ್ ನಲ್ಲೂ ಪ್ರತಿಭಟನೆಗಳು ನಡೆದವು. ಎರಡೂ ಸ್ಥಳಗಳಲ್ಲಿ ಹಿಂದೂ ಮುಸ್ಲಿಮರ ನಡುವೆ ಘರ್ಷಣೆ ನಡೆದಿತ್ತು. ಆದರೆ ಪೊಲೀಸರು ಮುಸ್ಲಿಮರ ಮೇಲೆ ಮಾತ್ರ ಲಾಠಿ ಚಾರ್ಜ್ ಮತ್ತು ಕೇಸು ದಾಖಲಿಸಿದರು. ಈ ಪ್ರತಿಭಟನೆಗಳಲ್ಲಿ ರಾಜಕೀಯ ಪಕ್ಷಗಳೋ ಮುಸ್ಲಿಮ್ ಸಂಘಟನೆಗಳೋ ಅವರ ನಾಯಕರೋ ಇರಲಿಲ್ಲ. ಶುಕ್ರವಾರ ಜುಮಾ ನಮಾಝಿನ ಬಳಿಕ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ 125ರಷ್ಟು ಮುಸ್ಲಿಮ್ ಯುವಕರನ್ನು ಬಂಧಿಸಲಾಗಿತ್ತು.

ನಾನು ಆ ಮಸೀದಿಯ ನಮಾಝ್ ನಲ್ಲೋ ಅಥವಾ ರ‍್ಯಾಲಿಯಲ್ಲೋ ಭಾಗವಹಿಸಿರಲಿಲ್ಲ. ಅಂದು ಮಗ್ರಿಬ್‌ನ ಬಳಿಕ ನನ್ನ ಮನೆಗೆ ಎರಡು ಜೀಪುಗಳಲ್ಲಿ ಬಂದ ಪೊಲೀಸ್ ಅಧಿಕಾರಿಗಳು ಪ್ರತಿಭಟನೆಯ ವಿಷಯದಲ್ಲಿ ನಿಮ್ಮೊಡನೆ ಮಾತನಾಡಲಿಕ್ಕಿದೆಯೆಂದರು. ಬಟ್ಟೆ ಬದಲಿಸಿ ನಾನು ನನ್ನ ಸ್ಕೂಟಿಯಲ್ಲಿ ಪೊಲೀಸ್ ಚೌಕಿಗೆ ಹೋದೆ. ಅಲ್ಲಿಂದ ನನ್ನನ್ನು ಸಿವಿಲ್ ಲೈನ್‌ನ ಕ್ರೈಮ್ ಆಫೀಸಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಬಂಧಿತರಾಗಿದ್ದ 35 ಮಂದಿ ಇದ್ದರು. ಅದರಲ್ಲಿ ಹಲವರು ಕೆಲಸ ಮುಗಿಸಿ ಮನೆಗೆ ಮರಳಿ ಬರುವವರೆಗೆ ಸಾಮಾನು ಖರೀದಿಸಲು ಅಂಗಡಿಗೆ ಹೊರಟವರೋ ವಿದ್ಯಾರ್ಥಿಗಳೋ ಆಗಿದ್ದರು.

ಈ ಪ್ರತಿಭಟನೆಯ ಹಿಂದೆ ನಾನಿರುವುದೆಂದು ಸಾಧಿಸಲು ಪೊಲೀಸರ ಪ್ರಯತ್ನ ನಡೆಯುತ್ತಿತ್ತು. ನಾನು ಮುಸ್ಲಿಮರ ವಿಚಾರದಲ್ಲಿ ಮಧ್ಯಪ್ರವೇಶಿಸುವ ವ್ಯಕ್ತಿಯೆಂದು ಪೊಲೀಸರಿಗೆ ಮೊದಲೇ ತಿಳಿದಿತ್ತು. ಆದ್ದರಿಂದಲೇ ಆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ನನ್ನನ್ನು ಸಂಚು ನಡೆಸಿದವ ಮತ್ತು ಅದರ ಹಿಂದಿನ ಮಾಸ್ಟರ್ ಮೈಂಡ್ ಎಂದೂ ಚಿತ್ರಿಸಲಾಯಿತು. ಪ್ರವಾದಿಯ ವಿರುದ್ಧ ದ್ವೇಷ ಭಾಷಣ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟಿಸಬೇಕೆಂಬುದು ನನ್ನ ಅಭಿಪ್ರಾಯ. ಆದರೆ ಈಗ ಅವರು ಮಾಡಿರುವ ಆರೋಪ ಕಟ್ಟುಕತೆಯಾಗಿತ್ತು.

ಎರಡು ದಿನ ನನ್ನನ್ನು ಸ್ಟೇಷನ್‌ನಲ್ಲಿ ಹಿಡಿದಿಡಲಾಯಿತು. ನಾನು ಕಾಣೆಯಾಗಿ ದ್ದೇನೆಂದು ಹೇಳಿ ನನ್ನ ಸಣ್ಣ ಮಗಳು ಸುಮಯ್ಯ ಫಾತಿಮ ಮತ್ತು ಪತ್ನಿ ಪರ್ವೀನ್ ಫಾತಿಮಾಳನ್ನು ಪೊಲೀಸ್ ಚೌಕಿಗೆ ಕರೆತಂದು ಒಂಭತ್ತು ಗಂಟೆ ಕಾಲ ಕಸ್ಟಡಿಯಲ್ಲಿರಿಸಲಾಯಿತು. 11 ಗಂಟೆಗೆ ಬುಲ್ಡೋಝರ್ ಉಪಯೋಗಿಸಿ ಮನೆಯನ್ನು ನೆಲಸಮಗೊಳಿಸಲಾಯಿತು. ಇಲಾಖೆಯಿಂದ ಯಾವುದೇ ರೀತಿಯ ನೋಟೀಸ್ ನೀಡಿರಲಿಲ್ಲ. ಪರ್ವೀನ್ ಫಾತಿಮಾರಿಗೆ ಮಹಿಳಾ ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದರೂ ಅದು ವಾಸ್ತವವೆಂದು ಜೈಲಿನ ಟಿವಿಯಲ್ಲಿ ಮನೆ ಧ್ವಂಸದ ದೃಶ್ಯವನ್ನು ನೋಡಿದಾಗ ತಿಳಿಯಿತು.

ಆದರೆ ಅಧಿಕಾರಿಗಳು ನೋಟೀಸು ನೀಡಿದ್ದೇವೆ ಎಂದು ಸಮರ್ಥಿಸುತ್ತಾರೆ. ಆದರೆ ಪರ್ವೀನ್ ಫಾತಿಮಾರ ಹೆಸರಿನಲ್ಲಿರುವ ಮನೆಯ ಮೇಲೆ ಜಾವೇದ್ ಮುಹಮ್ಮದ್‌ರ ಹೆಸರಿನಲ್ಲಿ ಹಿಂದಿನ ರಾತ್ರಿ 11 ಗಂಟೆಗೆ ನೋಟೀಸು ಅಂಟಿಸಿದ್ದರು. ಕಾನೂನಿನ ಪ್ರಕಾರ ನೋಟೀಸುಗಳನ್ನು ಅಂಚೆ ಮೂಲಕ ಕಳುಹಿಸಬೇಕು. ಶನಿವಾರ ರಾತ್ರಿ ನನ್ನನ್ನು ಅಲಹಾಬಾದ್ ಜೈಲಿಗೆ ಒಯ್ಯಲಾಯಿತು. ಒಂಭತ್ತು ದಿನಗಳ ಬಳಿಕ ದೇವರಿಯಾ ಜೈಲಿಗೆ. ಸಾಮಾನ್ಯವಾಗಿ ಅಪರಾಧ ಹಿನ್ನಲೆಯುಳ್ಳವರನ್ನು ಹೀಗೆ ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗುತ್ತದೆ.

ಪ್ರಶ್ನೆ: 21 ತಿಂಗಳ ಜೈಲಿನ ಅನುಭವ ವಿವರಿಸಬಹುದೇ?

ಉತ್ತರ: ಜೈಲು ಅಧಿಕಾರಿಗಳು ಸೌಮ್ಯ ನಿಲುವನ್ನು ತೋರಿದರು. ಸಮಾಜವಾದಿ ಪಕ್ಷದ ನಾಯಕರು ನನ್ನನ್ನು ಭೇಟಿಯಾಗಿದ್ದರು. ಮನೆಮಂದಿಯೂ ಬರುತ್ತಿದ್ದರು. ನನಗೆ ಅಗತ್ಯವಾದ ಪುಸ್ತಕಗಳು, ಆಹಾರಗಳನ್ನು ಒಳಗೆ ತಲುಪಿಸುತ್ತಿದ್ದರು. ಈ ಸಂದರ್ಭದಲ್ಲಿ ಜೈಲು ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಸ್ಥಾಪಿಸಲು ಸಾಧ್ಯವಾಯಿತು.

ಜೈಲಿನಲ್ಲಿ ಪ್ರತಿದಿನವೂ ಅಸರ್ ನಮಾಝ್ ನ ಬಳಿಕ ಕುರ್‌ಆನ್ ದರ್ಸ್ ನಡೆಸುತ್ತಿದ್ದೆ. ಒಂದು ವ್ಯವಸ್ಥಿತವಾದ ಕುರ್‌ಆನ್ ಪಾರಾಯಣ ವ್ಯವಸ್ಥೆ ಆರಂಭಿಸಲು ಸಾಧ್ಯವಾಯಿತು. ಸುಬಹ್, ಮಗ್ರಿಬ್, ಇಶಾ ನಮಾಝನ್ನು ಸೆಲ್‌ನ ಒಳಗೆಯೂ ಉಳಿದ ನಮಾಝ್ ಜಮಾಅತ್ ಆಗಿ ನಿರ್ವಹಿಸಿದೆವು. ಶುಕ್ರವಾರಗಳಲ್ಲಿ ನಾನು ಜುಮಾ ಖುತ್ಬಾ ನಿರ್ವಹಿಸಿದ್ದೆ. ಉಪವಾಸ ಆಚರಿಸಲು ಜೈಲು ಅಧಿಕಾರಿಗಳು ವ್ಯವಸ್ಥೆ ಮಾಡಿಕೊಟ್ಟರು. ಬಹಳ ಬಡವರಾದ ಉಡಲು ಬಟ್ಟೆ ಇಲ್ಲದ ಜೈಲುವಾಸಿಗಳಿಗೆ ಅಗತ್ಯವಾದ ವಸ್ತ್ರಗಳು ಹಾಗೂ ಇತರ ಅತ್ಯಗತ್ಯ ವಸ್ತುಗಳನ್ನು ತಲುಪಿಸಲು ನನಗೆ ಸಾಧ್ಯವಾಯಿತು.

ಪ್ರಶ್ನೆ: ತಮ್ಮ ಮೇಲಿನ ಪ್ರಕರಣದ ಈಗಿನ ಪರಿಸ್ಥಿತಿ ಏನು?

ಉತ್ತರ: ಹಲವಾರು ಕೇಸುಗಳಲ್ಲಿ ಇನ್ನೂ ವಿಚಾರಣೆ ಬಾಕಿಯಿದೆ. ಅಲಹಾಬಾದ್ ಹೈಕೋರ್ಟ್ ನಲ್ಲಿ ಹಲವು ಕೇಸುಗಳ ವಿಚಾರಣೆ ನಡೆಸಲಾದರೂ ತೀರ್ಪು ಇನ್ನೂ ಬಂದಿಲ್ಲ. ಸೆಶನ್ ಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ. ಇದುವರೆಗೆ ಪೊಲೀಸರು ಚಾರ್ಜ್ ಶೀಟ್ ಸಮರ್ಪಿಸಿಲ್ಲ ಎಂಬುದು ಒಂದು ತಮಾಷೆಯ ಸಂಗತಿ. ನಾನು ಜೈಲಿನಿಂದ ಹೊರಬರಬಾರದೆಂಬ ಹಠ ಅಧಿಕಾರಿಗಳಿಗಿತ್ತು. ಅದಕ್ಕಾಗಿ ಧಾರಾಳ ಕೇಸುಗಳನ್ನು ನನ್ನ ಮೇಲೆ ಹೊರಿಸಲಾಯಿತು. ನ್ಯಾಶನಲ್ ಸೆಕ್ಯುರಿಟಿ ಆ್ಯಕ್ಟ್ ನಲ್ಲಿ ವಿಚಾರಣೆ ನಡೆಸಿದರೂ ತೀರ್ಪು ಬರಲಿಲ್ಲ. ಒಂದು ವರ್ಷ ಕಳೆಯುವಾಗ ಸಹಜವಾಗಿಯೇ ಕೊನೆಗೊಳ್ಳುವ ಕೇಸ್ ಆದ್ದರಿಂದ ಅದು ಹಾಗೆಯೇ ಕೊನೆಯಾಯಿತು.

ಪ್ರಶ್ನೆ: ಬುಲ್ಡೋಜರ್ ರಾಜ್‌ನ ವಿರುದ್ಧ ಅತ್ಯಂತ ಕೊನೆಯಲ್ಲಿ ಬಂದ ತೀರ್ಪಿನ ಕುರಿತು ಏನು ಹೇಳುವಿರಿ?

ಉತ್ತರ: ಜಂಇಯ್ಯತುಲ್ ಉಲೆಮಾ ಹಿಂದ್ ಮತ್ತು ಎಪಿಸಿಆರ್ ಸೇರಿ ನೀಡಿದ ಅರ್ಜಿಗೆ ಬಂದ ತೀರ್ಪನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಯಾವುದೇ ಮಾರ್ಗನಿರ್ದೇಶವಿಲ್ಲದೆ ಮನೆ ಕೆಡವಿದರೆ ಸ್ವಂತ ಖರ್ಚಿನಲ್ಲಿ ಪುನರ್‌ನಿರ್ಮಿಸಿ ಕೊಡಬೇಕೆಂದು ಸುಪ್ರೀಮ್ ಕೋರ್ಟಿನ ತೀರ್ಪು ಹೇಳುತ್ತದೆ. ಅದು ಅನಧಿಕೃತ ನಿರ್ಮಾಣವೇ ಆಗಿದ್ದರೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೇ ವಿನಃ ಬುಲ್ಡೋಝರ್ ರಾಜ್ ಅಲ್ಲ ಎಂದು ಕೋರ್ಟ್ ಹೇಳಿದೆ. ನನಗೂ ನನ್ನ ಕುಟುಂಬಕ್ಕೂ ತಿಳಿಸದೆಯೇ ಮನೆ ನೆಲಸಮಗೊಳಿಸಿದ್ದಾರೆ. ಆದ್ದರಿಂದ ಈಗಿನ ತೀಪು ನನಗೆ ಉಪಕಾರವಾಗುವುದೆಂದು ಭಾವಿಸಿದ್ದೇನೆ. ಸುಪ್ರೀಮ್ ಕೋರ್ಟ್‌ಗೆ ನೀಡಿದ ಅಪೀಲ್‌ನ ಮೂಲಕ ನನಗೆ ನಷ್ಟ ಪರಿಹಾರ ದೊರೆಯುತ್ತದೆಂದು ನಂಬಿದ್ದೇನೆ.

ಪ್ರಶ್ನೆ: ಮನೆಯನ್ನು ಬುಲ್ಡೋಝರ್‌ನ ಮೂಲಕ ಕೆಡವಿದಾಗ ನಿಮ್ಮ ಮಾನಸಿಕ ಸ್ಥಿತಿ ಹೇಗಿತ್ತು? ಈಗ ಎಲ್ಲಿ ನೆಲೆಸಿದ್ದೀರಿ?

ಉತ್ತರ: ಅದೊಂದು ದೊಡ್ಡ ಭಾವನಾತ್ಮಕ ಸಂಘರ್ಷದ ಸಮಯವಾಗಿತ್ತು. ಆದರೂ ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ಕ್ರೌರ್ಯದ ಮುಂದೆ ಇದು ಏನೂ ಅಲ್ಲವಲ್ಲ! ಮನೆ ಕೆಡವಿದ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ವಿವಿಧ ಆಫರ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿದ್ದರೂ ಜೈಲಿನಿಂದ ಹೊರಬಂದ ಬಳಿಕ ಯಾರೂ ಸಂಪರ್ಕಿಸಿರಲಿಲ್ಲ. ಈ ನಡುವೆ ಜಾಮೀನು ಪಡೆದು ಮಗಳ ಮದುವೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ರಾಷ್ಟ್ರೀಯ ಕಾರ್ಯದರ್ಶಿ ಮಲಿಕ್ ಮುಹ್‌ತಸಿಮ್ ಖಾನ್ ಮತ್ತು ಇತರ ಮುಖಂಡರು ಮಾತನಾಡಿದ್ದರು. ನಂತರ ಸಾಮಾನ್ಯ ಜಾಮೀನು ದೊರೆತಾಗ ಜಮಾಅತೆ ಇಸ್ಲಾಮೀ ಅಮೀರ್‌ರ ಜೊತೆ ಮಾತುಕತೆ ನಡೆದಿತ್ತು. ಈಗ ಬಾಡಿಗೆ ಮನೆಯಲ್ಲಿದ್ದೇನೆ. ಅಲಹಾಬಾದ್‌ನ ಕರೇಲಿಯಲ್ಲಿ ಹೊಸ ಮನೆಗೆ ಮುಂಗಡ ನೀಡಲಾಗಿದೆ.