Home ಅಂಕಣಗಳು ಆ ಪೊರಕೆಯನ್ನು ನೋಡಿದರೆ ಯಾರ ಕಣ್ಣೂ ಮಂಜಾಗಬಹುದು…
ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ಸುದೀರ್ಘ ಕಾಲ ಮಗುವನ್ನು ಉದರದಲ್ಲಿ ಹೊತ್ತು ನಡೆಯುವ ಅಮ್ಮ ಬಹಳಷ್ಟು ಸಂಕಟ, ನಿತ್ರಾಣದ ಮೇಲೆ ನಿತ್ರಾಣ ಅನುಭವಿಸುವಳು. ಪವಿತ್ರ ಕುರ್ಆನ್ ಕೂಡಾ ಅಮ್ಮ ಸಹಿಸುವ ಭಯಾನಕ ನೋವನ್ನು ಉಲ್ಲೇಖಿಸಿದೆ. ನಡೆದಾಡಲು ಅಮ್ಮ ಪಡುವ ಪಾಡು, ಕೂರಲು-ನಿಲ್ಲಲು ಮತ್ತು ತಿರುಗಿ ಮಲಗಲು ಪಡುವ ತ್ರಾಸದ ಜತೆಗೆ ನಿದ್ರಾಹೀನತೆ, ಸೊಂಟನೋವು, ವಾಕರಿಕೆ, ಎದೆಯುರಿಯೂ ಅಮ್ಮನ ಒಟ್ಟು ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತದೆ. ಆದರೂ ಅಮ್ಮ ಸಹಿಸುವಳು. ಅಂತೂ ಭಯಾನಕ ನೋವನುಭವಿಸಿ ಮಗುವನ್ನು ಹಡೆದಾಗ, ಮುದ್ದು ಮಗುವಿನ ಮುಖ ಕಂಡೊಡನೆ ಅದುವರೆಗೂ ಅನುಭವಿಸಿದ ಎಲ್ಲ ಭವಣೆಗಳನ್ನು ಕ್ಷಣ ಮಾತ್ರದಲ್ಲೇ ಮರೆತು ಸಂತಸದ ಗುಂಗಿನಲ್ಲಿ ತೇಲುವಳು. ಅತೀವ ಆನಂದದಿಂದ ಮಗುವಿನ ಆರೈಕೆಗೆ ತ್ವರೆ ಮಾಡಿ ಮೊಲೆ ಹಾಲುಣಿಸುವಳು. ತನ್ನ ಬೇಕುಬೇಡಗಳನ್ನೆಲ್ಲ ಕೇವಲ ಅಳುವಿನ ಚೀರಾಟದೊಂದಿಗೆ ಮಾತ್ರ ಸಮರ್ಪಿಸುವ ಮಗುವನ್ನು ಎದೆಗಪ್ಪಿ ಮುದ್ದಿಸಿ ಜೋಗುಳ ಹಾಡುವಳು. ಮಗುವಿನ ಆರೋಗ್ಯದ ಕಡೆ ಸದಾ ನಿಗಾ ವಹಿಸುವ ಆಕೆ, ಮಗು ಒಮ್ಮೆ ಕೆಮ್ಮಿದರೂ ಗಲಿಬಿಲಿಯಾಗುವಳು. ಸೀನಿದರೂ ಕಂಗಾಲಾಗುವಳು. ಮೈ ಬಿಸಿಯಾದರಂತೂ ಗಾಬರಿಯಿಂದ ವೈದ್ಯರಲ್ಲಿಗೆ ಎತ್ತಿಕೊಂಡು ಓಡುವಳು. ದೀರ್ಘ ಕಾಲ ಮಗುವಿನ ಆರೈಕೆ ಮತ್ತು ಸೇವೆಯಲ್ಲೇ ಸವೆದರೂ ಮಗುವನ್ನು ಕಾಣುತ್ತಲೇ ಎಲ್ಲವನ್ನು ಮರೆತು ಕಿಲಕಿಲ ನಗುವಳು. ಅಚ್ಚರಿಯೇನೆಂದರೆ,
ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಹಳ ನೋವು-ತ್ರಾಸಗಳನ್ನು ಅನುಭವಿಸಿಯೂ ಆಕೆ ಮಗುವಿನಿಂದ ಯಾವುದೇ ಪ್ರತಿಫಲ ಅಪೇಕ್ಷಿಸುವುದಿಲ್ಲ. ಈ ಮಗು ತನ್ನ ಮುಪ್ಪಿನಲ್ಲಿ ತನಗೆ ನೆರವಾಗಬಹುದೇ, ತನಗೆ ಆಸರೆ ನೀಡಿ ಆರೈಕೆ ಮಾಡಬಹುದೇ… ಒಂದೂ ಆಕೆಗೆ ತಿಳಿಯದು. ಅಂತಹ ಷರತ್ತಿನೊಂದಿಗೆ ಆಕೆ ಮಗುವಿನ ಲಾಲನೆಪಾಲನೆ ಮಾಡುವುದೂ ಅಲ್ಲ. ಆಕೆ ಶುದ್ಧ ಮನಸ್ಸಿನ ನಿಸ್ವಾರ್ಥಿ. ಮಗುವಿನ ಭವಿಷ್ಯ ಯಾವ ಹೆತ್ತವರಿಗೂ ತಿಳಿಯದು. ಆದರೂ ಪ್ರತಿ ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಎಲ್ಲ ಅಗತ್ಯ ಸವಲತ್ತುಗಳನ್ನು ಒದಗಿಸಿ ಕೊಡುವರು. ತಪ್ಪುಗಳನ್ನು ತಿದ್ದಿ ಸರಿಪಡಿಸುವರು. ತಂದೆಯವರಲ್ಲೂ ಹೇಳಲು ಅಂಜುವ ಹಲವು ಅಗತ್ಯಗಳನ್ನು ಮಕ್ಕಳು ಅಮ್ಮನನ್ನು ಶಿಫಾರಸುದಾರಳಾಗಿಸಿ ಸಮಸ್ಯೆಗೆ ಪರಿಹಾರ ಕಾಣುವುದಂತೂ ಸಹಜ. ತಾನು ಹಸಿದರೂ ಮಕ್ಕಳಿಗೆ ಉಣಿಸುವ ಮತ್ತು ತಾನು ಚಿಂದಿಯುಟ್ಟರೂ ಮಕ್ಕಳಿಗೆ ಹೊಸತನ್ನೇ ತೊಡಿಸುವ ಅಮ್ಮನಿಗೆ ಸರಿಸಾಟಿ ಯಾರೂ ಇಲ್ಲ. ಹೌದು, ಅಮ್ಮ ಮಹಾನಳು… ಯಾ ಅಲ್ಲಾಹ್! ನಿನ್ನ ಅಪಾರವಾದ ದಯೆ, ಕರುಣೆ ಮತ್ತು ಅನುಗ್ರಹವನ್ನು ಎಲ್ಲ ಅಮ್ಮಂದಿರ ಮೇಲೆ ಸದಾ ವರ್ಷಿಸು…
ಆದರೆ ಮಕ್ಕಳಿಗಾಗಿ ಅಪಾರ ತ್ಯಾಗ ಬಲಿದಾನಗಳನ್ನು ಸಹಿಸುವ ಅಮ್ಮನ ಋಣ ಸಂದಾಯ ಮಾಡಲು ನಮ್ಮಿಂದ ಸಾಧ್ಯವಾಗದೇನೋ ನಿಜ. ಆದರೆ ಎಷ್ಟರ ತನಕ ಆ ಅಮ್ಮನಿಗೆ ಕೃತಜ್ಞರಾಗಿರುತ್ತೇವೆ. ಅವರೊಂದಿಗೆ ಪ್ರೀತಿಯಿಂದ ಮಾತನಾಡುತ್ತೇವೆ. ವೃದ್ಧಾಪ್ಯ ಮತ್ತು ಅಸಹಾಯಕರಾಗಿರುವ ಅವರ ಆರೋಗ್ಯದ ಕಡೆಗೆ ಎಷ್ಟು ನಿಗಾ ವಹಿಸುತ್ತೇವೆ? ಜೀವನದ ಮುಸ್ಸಂಜೆಯಲ್ಲಿರುವ ಅವರ ಅಹವಾಲು ಆಲಿಸಲು ನಮಗೆ ಪುರುಸೊತ್ತಿದೆಯೇ? ಒಂದುವೇಳೆ,
ಅವರು ಮರಣಹೊಂದಿದ್ದರೆ, ಅವರ ಕ್ಷಮಾಪಣೆಗಾಗಿ ಮತ್ತು ಪರಲೋಕ ವಿಜಯಕ್ಕಾಗಿ ಪ್ರಾರ್ಥಿಸಲು ನಮಗೆ ಸಾಧ್ಯವಾಗುತ್ತಿದೆಯೇ? ನಮ್ಮ ಬಾಲ್ಯಾವಸ್ಥೆಯಲ್ಲಿ ಆಸರೆ, ಪ್ರೀತಿ, ಮಮತೆಯ ಪ್ರೇಮ ಪ್ರಪಂಚವನ್ನೇ ಹರಿಸಿ, ಸರಿಯಾದ ಮಾರ್ಗದರ್ಶನ ನೀಡಿ ನಮ್ಮನ್ನು ಉಪಚರಿಸಿ ಹರಸಿದ ಹೆತ್ತವರಿಗೆ ಸರಿಸಾಟಿ ಈ ಜಗತ್ತಿನಲ್ಲಿ ಯಾರಿದ್ದಾರೆ ಹೇಳಿ? ಪವಿತ್ರ ಕುರ್ಆನ್ ಅವರೊಂದಿಗೆ ಉತ್ತಮವಾಗಿ ವ್ಯವಹರಿಸುವಂತೆ ಆದೇಶಿಸಿದೆ ಮತ್ತು ಅವರಿಗಾಗಿ ಪ್ರಾರ್ಥಿಸ ಬೇಕಾದ ಪ್ರಾರ್ಥನೆಯನ್ನೂ ಕಲಿಸಿದೆ. ತ್ಯಾಗದ ಪ್ರತಿರೂಪವಾದ ತಾಯಿಯು ನಿರಂತರ ಸಂಕಷ್ಟಗಳನ್ನು ಸಹಿಸುವುದನ್ನು ಪವಿತ್ರ ಕುರ್ಆನ್ ಬಹಳ ಪ್ರಭಾವಪೂರ್ಣ ಭಾವನಾತ್ಮಕ ಶೈಲಿಯಲ್ಲಿ ಚಿತ್ರಿಸಿದೆ. ಮಾತ್ರವಲ್ಲ, ಹೆತ್ತವರೊಂದಿಗಿನ ಸದ್ವರ್ಥನೆಯನ್ನು ಆರಾಧನೆಯೊಂದಿಗೆ ಜೋಡಿಸಿ, ಅವರಿಗೆ ಸದಾ ಕೃತಜ್ಞರಾಗಿರುವಂತೆ ತಾಕೀತು ನೀಡಿದೆ. ಆದರೆ,
ಇವೆಲ್ಲವನ್ನೂ ಮರೆತು ಹೆತ್ತವರನ್ನೇ ಕಡೆಗಣಿಸಿ, ಬಿಸಿರಕ್ತದ ಪುಂಡಪೋಕರಿಗಳೊಂದಿಗೆ ಸೇರಿ, ಸಾಮಾಜಿಕ ಕೆಡುಕುಗಳಲ್ಲಿ ಭಾಗಿಯಾಗಿ ಹೆತ್ತವರ ಇಝ್ಝತ್ ಹರಾಜಾಗಿಸುವ ಮತ್ತು ಹೆತ್ತವರ ಮೇಲೆ ಕೈಯೆತ್ತುವ ಶಪಿಸಲ್ಪಟ್ಟ ಮಕ್ಕಳೂ ಈ ಸಮಾಜದಲ್ಲಿದ್ದಾರೆಂಬುದು ದುಃಖ ಸತ್ಯ. ಆಗೊಮ್ಮೆ ಈಗೊಮ್ಮೆ ಹೊರಬರುವ ಕೆಲವು ಘಟನೆಗಳು ವೈರಲ್ ಆಗಿ, ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಪೊರಕೆ ಹಿಡಿದು ಅಮ್ಮನಿಗೆ ಹೊಡೆಯುವ ಮಗನ ಅಟ್ಟಹಾಸವನ್ನು ಕಾಣುತ್ತಲೇ ಕಣ್ಣುಗಳು ಮಂಜಾಗುತ್ತವೆ. ಅಲ್ಲೂ ಪಾಪ, ನೋವಿನಿಂದ ಅಮ್ಮ ಅಮ್ಮನನ್ನೇ ಕರೆಯುತ್ತಾಳೆ. ಹೌದು, ಅಮ್ಮ ಹೆಚ್ಚೆಚ್ಚು ನೆನಪಿಗೆ ಬರುತ್ತಾರೆ. ಅಮ್ಮಾ ನಮ್ಮನ್ನು ಕ್ಷಮಿಸು…
ನಿಮಗೂ ಗೊತ್ತು, ಎಲ್ಲೋ ವಾಟ್ಸಪ್-ಫೇಸ್ಬುಕ್ ಮೂಲಕ ಬೀದಿಯಲ್ಲಿ ಸಿಕ್ಕಿದ ಕಾಮುಕಿಗಾಗಿ ಹೆತ್ತವರ ಕಣ್ಣೀರು ಹೀರುವವರಿಲ್ಲವೇ? ಮನೆ ಸೇರಿದ ಪತ್ನಿಯ ಚಾಡಿ ಮಾತನ್ನಾಲಿಸಿ ಹೆತ್ತವರನ್ನೇ ಹೊರದಬ್ಬುವವರಿಲ್ಲವೇ? ಹೆತ್ತವರ ಸೇವೆ ಮಾಡಿ ದೇವನ ಸಂಪ್ರೀತಿ ಪಡೆಯುವ ಬದಲು ಅವರನ್ನು ವೃದ್ಧಾಶ್ರಮಕ್ಕೆ ಅಟ್ಟುವವರಿಲ್ಲವೇ? ಇಲ್ಲ, ಅಂತಹ ಶಪಿಸಲ್ಪಟ್ಟವರ ಪಟ್ಟಿಯಲ್ಲಿ ನಮ್ಮ ಹೆಸರಿರದಂತೆ ನಾವೆಲ್ಲ ಬಹಳ ಜಾಗರೂಕ ರಾಗಿರಬೇಕು. ಸಮಾಜ ನಮ್ಮನ್ನು ಗುರುತಿಸಿ ಕೊಳ್ಳುವಷ್ಟು ಎತ್ತರಕ್ಕೆ ಬೆಳೆಸಿದ ಅಪ್ಪ-ಅಮ್ಮನಿಗೆ ಸದಾ ಕೃತಜ್ಞರಾಗೋಣ! ಅವರಿಬ್ಬರೂ ಕುಟುಂಬದ ಕಣ್ಣುಗಳಿದ್ದಂತೆ. ನಿಜ,
ನಾವು ನಮ್ಮ ಪ್ರತಿಯೊಂದು ಕೆಲಸ-ವ್ಯವಹಾರಗಳ ಬಗ್ಗೆ ಹೆತ್ತವರಲ್ಲಿ ಪ್ರಸ್ತಾಪಿಸಬೇಕು. ಆ ಕುರಿತು ಅವರ ಅಭಿಪ್ರಾಯ-ಸಲಹೆಗಳನ್ನು ಸಾವಧಾನದಿಂದ ಆಲಿಸಬೇಕು. ಒಂದು ವೇಳೆ ಅವರ ಅಭಿಪ್ರಾಯ ವ್ಯತಿರಿಕ್ತವಾಗಿದ್ದರೆ ನಯವಿನಯದೊಂದಿಗೆ ಅದರ ಕೊರತೆ-ನಷ್ಟಗಳನ್ನು ತಿಳಿ ಹೇಳಿದರೆ ಅವರು ನಮ್ಮ ಅಭಿಪ್ರಾಯವನ್ನು ಖಂಡಿತ ಬಲಪಡಿಸುತ್ತಾರೆ ಮತ್ತು ನಮ್ಮನ್ನು ಹರಸುತ್ತಾರೆ ಕೂಡಾ. ಒಟ್ಟಿನಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಗಳಿಗೆ ನಿಮ್ಮ ಅಗತ್ಯ ಇನ್ನೂ ಇದೆ ಎಂಬಂತೆ ನಾವು ಅವರೊಂದಿಗೆ ಒಡನಾಡ ಬೇಕು. ಶೈಶವದಲ್ಲಿ ಯಾವ ರೀತಿ ನಮ್ಮನ್ನು ಉಪಚರಿಸಲಾಗುತ್ತಿತ್ತೋ ಅದಕ್ಕೂ ಹಲವು ಪಟ್ಟು ಹೆಚ್ಚು ಮುಪ್ಪಿನಲ್ಲಿರುವ ಹೆತ್ತವರನ್ನು ನೋಡಿಕೊಳ್ಳಲು ಮತ್ತು ಸೇವೆಗೈಯ್ಯಲು ನಮಗೆ ಸಾಧ್ಯವಾಗ ಬೇಕು.