ಸರಕಾರಿ ಆಸ್ಪತ್ರೆಗೆ ಹೋಗಿ ಎಂದು ಕಾನೂನು ಮಾಡಿದರೆ ಸಾಕೆ ಮುಖ್ಯಮಂತ್ರಿಗಳೇ?

0
1140

ಅಬ್ದುಲ್ ಸಲಾಮ್ ಸಿ.ಎಚ್., ಉಳ್ಳಾಲ

ಕರ್ನಾಟಕ ಸರಕಾರ ಆಹಾರದ ಜತೆ ಆರೋಗ್ಯಕ್ಕೂ ಉತ್ತೇಜನ ನೀಡಬೇಕಾದ್ದು ಕರ್ತವ್ಯ . ಆದರೆ ಪ್ರಸಕ್ತ ಸಾಲಿನಲ್ಲಿ ಆರೋಗ್ಯಕ್ಕಾಗಿ ಕೆಲವು ಯೋಜನೆಗಳನ್ನು ತಂದರೂ ರೋಗಿಗಳು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇದೆ. ರೋಗಿಗಳ ಅನುಕೂಲಕ್ಕಾಗಿ ಜಾರಿಯಲ್ಲಿದ್ದ ವಾಜಪೇಯಿ ಯೋಜನೆ, ರಾಜೀವ್‍ಗಾಂಧಿ ಆರೋಗ್ಯ ಯೋಜನೆ, ಯಶಸ್ವಿನಿ ಮುಂತಾದ ಯೋಜನೆಗಳು ಈಗಿಲ್ಲ. ಇದನ್ನು ಸಿದ್ದು ಸರಕಾರ ಹಿಂಪಡೆದು ಆರೋಗ್ಯ ಕಾರ್ಡ್ ಜಾರಿಗೆ ತಂದಿದೆ. ಹಿಂದಿನಂತೆ ಪ್ರಸಕ್ತ ಕಾಲದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ಯೋಜನೆಯಡಿ ನೇರ ಚಿಕಿತ್ಸೆ ನೀಡುವಂತಿಲ್ಲ. ರೋಗಿಗಳಿಗೆ ಸರಕಾರದ ಯೋಜನೆಗಳು ಫಲಪ್ರದವಾಗಬೇಕಾದರೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಿ.ಎಂ.ನ ಲೆಟರ್ ಬೇಕು. ಡಿ.ಎಂ. ಲೆಟರ್ ಕೊಟ್ಟರೆ ಸರಕಾರದ ಯೋಜನೆಯಡಿ ಚಿಕಿತ್ಸೆ. ಇಲ್ಲದೇ ಇದ್ದರೆ ನಗದು ಪಾವತಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು.

ಈ ಬದಲಾವಣೆಗಳು ಯಾಕೆ ಬಂತು ಎಂಬ ಪ್ರಶ್ನೆ ಮೂಡದಿರದು. ರೋಗಿಗಳು ಸರಕಾರದ ಯೋಜನೆಯಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಚಿಕಿತ್ಸೆಯ ವೆಚ್ಚವನ್ನು ಸರಕಾರ ಭರಸಬೇಕಾಗುತ್ತದೆ. ರೋಗಿಗಳಿಗಾಗಿ ಸರಕಾರಿ ಆಸ್ಪತ್ರೆ ತೆರೆದಿದೆ. ಯೋಜನೆಯ ಲಾಭಾಂಶ ಪಡೆಯುವವರು ಸರಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿ. ಒಂದು ವೇಳೆ ಅಲ್ಲಿ ಅಂತಹ ಸೌಲಭ್ಯ ಇಲ್ಲ ಎಂದಾದರೆ ಡಿ.ಎಂ ಅವರ ಲೆಟರ್ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ ಎಂಬ ನಿರ್ಧಾರ ಸಿದ್ದು ಸರಕಾರ ತಳೆದಿತ್ತು. ಆದರೆ ಈ ನಿರ್ಧಾರದಿಂದ ತೊಂದರೆಗೊಳಗಾದ್ದು ರೋಗಿಗಳೇ ಹೊರತು ಸರಕಾರವಲ್ಲ. ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆ ಇರುವುದು ಬೆರಳೆಣಿಕೆಯಷ್ಟು ಮಾತ್ರ. ಇರುವ ಆಸ್ಪತ್ರೆಗಳಲ್ಲಿ ವ್ಯವಸ್ಥೆಗಳಿಲ್ಲ. ಅಲ್ಲದೇ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ವೆನ್ಲಾಕ್‍ಗೆ ಸಾಗಿಸಲು ಕಾಲಾವಕಾಶ ಇರುವುದಿಲ್ಲ. ಬಡ ರೋಗಿಯಾದರೂ ಖಾಸಗಿ ಆಸ್ಪತ್ರೆಯನ್ನೇ ತುರ್ತು ಚಿಕಿತ್ಸೆಗೆ ಆಶ್ರಯಿಸಬೇಕಾಗುತ್ತದೆ. ಒಂದು ವೇಳೆ ಸರಕಾರದ ಯೋಜನೆ ಸಿಗುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡು ವೆನ್ಲಾಕ್‍ಗೆ ತುರ್ತು ಚಿಕಿತ್ಸೆ ಸಿಗಬೇಕಾದ ರೋಗಿಯನ್ನು ಕೊಂಡೊಯ್ದರೆ ಅಲ್ಲಿ ಸರದಿಯಲ್ಲಿ ನಿಲ್ಲಬೇಕು. ಸರದಿಯಲ್ಲಿ ನಿಂತು ಅವಕಾಶ ಸಿಗುವ ತನಕ ಆ ರೋಗಿ ಬದುಕುಳಿಯುತ್ತದೆ ಎಂದು ಹೇಳಲು ಹೇಗೆ ಸಾಧ್ಯ. ಇಲ್ಲಿ ನಮಗೆ ಸರಕಾರದ ಯೋಜನೆ ಮುಖ್ಯವೋ ಅಥವಾ ರೋಗಿಯ ಆರೋಗ್ಯ ಮುಖ್ಯವೋ ಎಂಬುದು ಪ್ರಶ್ನೆ. ಆದರೂ

ಸರಕಾರ ಆರೋಗ್ಯ ಕಾರ್ಡ್ ಜಾರಿಗೊಳಿಸಿ ಆರೋಗ್ಯ ಕರ್ನಾಟಕದಡಿ ಬಡ ಕುಟುಂಬಕ್ಕೆ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಚಿಕಿತ್ಸೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬೇಕೆಂದೂ, ಸರಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳುವಂತೆ ಸೂಚಿಸಿ ನಿರ್ಧಾರ ತಳೆದಿರುವುದು ಸರಿಯೇ? ಈ ತೀರ್ಮಾನ ತೆಗೆದುಕೊಂಡ ಬಳಿಕ ಸರಕಾರ ಅದಕ್ಕೆ ಬೇಕಾದ ವ್ಯವಸ್ಥೆ ಮಾಡದಿರುವುದು ಸರಕಾರದ ವೈಫಲ್ಯತೆ ಏನು ಎಂಬುದು ಜನರಿಗೆ ಮನವರಿಕೆ ಆಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲಕರವಾಗಿ ವೈದ್ಯರನ್ನು , ಸಿಬ್ಬಂದಿಯನ್ನು, ಚಿಕಿತ್ಸೆಯ ಪರಿಕರವನ್ನು ಹೆಚ್ಚಿಸುವ ಗೋಜಿಗೆ ಸರಕಾರ ಹೋಗಿಲ್ಲ. ಸರಕಾರ ಈ ನಿರ್ಧಾರ ತಳೆಯುವ ಮೊದಲು ಎಷ್ಟು ವೈದ್ಯರು, ಸಿಬಂದಿಗಳು ಇದ್ದಾರೆಯೋ ಅಷ್ಟೇ ಸಿಬಂದಿಗಳು ಈಗಲೂ ಇರುವುದು. ಪರಿಕರಗಳು ಕೂಡಾ ಅಷ್ಟೇ. ಸರಕಾರಿ ಆಸ್ಪತ್ರೆಗೆ ಹೋಗಿ ಎನ್ನುವ ಮೊದಲು ಅಲ್ಲಿ ವ್ಯವಸ್ಥೆ ಹೇಗಿದೆ ಎನ್ನುವುದನ್ನೊಮ್ಮೆ ಸರಕಾರ ನೋಡಬೇಡವೇ? ಸರದಿಯಲ್ಲಿ ನಿಂತು ಚಿಕಿತ್ಸೆ ಪಡೆಯುವ ಕಾಲವಲ್ಲ ಇದು. ಪ್ರತಿಯೊಂದು ಚಿಕಿತ್ಸೆಗೆ ಡಿಎಂ ಅವರನ್ನು ಸಂಪರ್ಕಿಸಲು ಆಗದ ಸ್ಥಿತಿ ಕೂಡಾ ಇದೆ. ಬಡ ರೋಗಿಗೆ ತುರ್ತು ಚಿಕಿತ್ಸೆ ಸಿಗಲೇಬೇಕಾದ ಸಂದರ್ಭ ಆರೋಗ್ಯ ಕಾರ್ಡ್‍ಗೆ ಡಿಎಂನ್ನು ಹುಡುಕಿಕೊಂಡು ಹೇಗೆ ಹೋಗುವುದು ಹೇಳಿ. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಬೇರೆ, ಔಷಧಿಗಳ ದುರವಸ್ಥೆ ಬೇರೆ ಇದೆ. ಅನುಭವಸ್ಥ ವೈದ್ಯರ ಕೊರತೆ ಬೇರೆ ಇದೆ. ರೋಗಿಗಳನ್ನು ಸರದಿಯಲ್ಲಿ ನಿಲ್ಲಬಾರದು ಎಂಬ ಲೆಕ್ಕಾಚಾರ ಹಾಕಿ ತುರ್ತು ಚಿಕಿತ್ಸೆ ಒದಗಿಸುವ ಕಾರ್ಯವಂತೂ ಆಗುವುದೇ ಇಲ್ಲ ಬಿಡಿ. ಮತ್ತೆ ಆರೋಗ್ಯ ಕೆಟ್ಟರೆ ಸರಕಾರಿ ಆಸ್ಪತ್ರೆಗೆ ಹೋಗಿ ಎಂದರೆ ಅಲ್ಲಿ ಹೋಗಿ ಹೇಗೆ ಚಿಕಿತ್ಸೆ ಪಡೆಯುವುದು ಎಂಬುದನ್ನು ಒಮ್ಮೆ ಸರಕಾರವೇ ಹೇಳಲಿ.

ವಾಜಪೇಯಿ ಯೋಜನೆ, ರಾಜೀವ್‍ಗಾಂಧಿ ಆರೋಗ್ಯ ಯೋಜನೆ, ಯಶಸ್ವಿನಿ ಮುಂತಾದ ಯೋಜನೆಗಳಿದ್ದ ಸಂದರ್ಭ ಬಡ ಕುಟುಂಬದವರಿಗೆ, ಬಿಪಿಎಲ್‍ದಾರರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸುಲಭದಲ್ಲಿ ಚಿಕಿತ್ಸೆ ಪಡೆಯಲು ಆಗುತ್ತಿತ್ತು. ಮೊದಲು ಚಿಕಿತ್ಸೆ ಬಳಿಕ ಯೋಜನೆಯ ಸದುಪಯೋಗ ಮಾಡಿಕೊಳ್ಳುವ ವ್ಯವಸ್ಥೆ ಆಗುತ್ತಿತ್ತು. ಬಹಳಷ್ಟು ರೋಗಿಗಳು ಈ ಯೋಜಗಳ ಸದುಪಯೋಗಪಡೆದುಕೊಂಡಿದ್ದಾರೆ. ಏನಿಲ್ಲದಿದ್ದರೂ ವಾಜಪೇಯಿ ಯೋಜನೆ ಇದೆಯಲ್ಲಾ ಎಂದು ಆಸ್ಪತ್ರೆಗೆ ದಾಖಲಾದ ಬಿಪಿಎಲ್ ಕುಟುಂಬಸ್ಥರು ನಿಟ್ಟುಸಿರು ಬಿಡುತ್ತಿದ್ದರು. ಇದಕ್ಕೆಲ್ಲ ಸಿದ್ದು ಸರಕಾರ ಬ್ರೇಕ್ ಹಾಕಿದೆ. ಏನಿದ್ದರೂ ನೀವು ಸರಕಾರಿ ಆಸ್ಪತ್ರೆಗೆ ಹೋಗಿ ಎಂದು ಘೋಷಣೆ ಮಾಡಿ ಬಿಟ್ಟಿದ್ದಾರೆ. ಅದು ಅವರ ಘೋಷಣೆಯೋ ಅಂದಿನ ಆರೋಗ್ಯ ಸಚಿವ ರಮೇಶ್‍ರವರ ಘೋಷಣೆಯೋ ಎಂದು ಗೊತ್ತಿಲ್ಲ. ಅಂತೂ ಈ ಒಂದು ತೀರ್ಮಾನ ಬಿಪಿಎಲ್‍ದಾರರು ಆರೋಗ್ಯಕ್ಕೆ ಸಂಬಂಧಿಸಿ ಸರಕಾರದಿಂದ ಪಡೆದುಕೊಳ್ಳುತ್ತಿದ್ದ ಸೇವೆಯನ್ನು ಬುಡಮೇಲು ಮಾಡಿಬಿಟ್ಟಿದೆ. ನಮಗೆ ಇದೇ ಯೋಜನೆ ಬೇಕು ಎನ್ನುವುದಿಲ್ಲ. ಸರಕಾರಿ ಆಸ್ಪತ್ರೆ ಕೂಡಾ ಆಗಬಹುದು. ಆದರೆ ಆಸ್ಪತ್ರೆಯ ವಿಸ್ತರಣೆ ಎಲ್ಲಡೆ ಆಗಲಿ, ಇರುವ ಆಸ್ಪತ್ರೆಗಳಲ್ಲಿ ಸಿಬಂದಿಗಳ, ವೈದ್ಯರ, ಪರಿಕರಗಳ ವಿಸ್ತರಣೆ ಆಗಬೇಕು. ಸುಲಭದಲ್ಲಿ ಜನರಿಗೆ ಚಿಕಿತ್ಸೆ ಸಿಗಬೇಕಕು. ವೈದ್ಯರನ್ನು ಕಾಯುವ ಜಾಯಮಾನ ರೋಗಿಗೆ ಸಿಗದಂತೆ ಸರಕಾರ ಮಾಡಬೇಕು. ಪ್ರತಿಯೊಂದು ರೋಗಕ್ಕೂ ಸೂಕ್ತ ಚಿಕಿತ್ಸೆ ನೀಡುವ ಪರಿಕರಗಳ ವ್ಯವಸ್ಥೆ ಸರಕಾರ ಮಾಡಬೇಕು. ಇವ್ಯಾವುದನ್ನು ಮಾಡದೇ ಕೇವಲ ಕಾನೂನು ಮಾತ್ರ ಮಾಡಿ ನೀವು ಸರಕಾರಿ ಆಸ್ಪತ್ರೆಗೆ ಹೋಗಿ ಅಂದರೆ ಅದಕ್ಕೇನು ಅರ್ಥವಿದೆ ಹೇಳಿ.